GBA ಚುನಾವಣೆ: ಚುನಾವಣೆ ನಡೆಸುವ ಗಡುವು ವಿಸ್ತರಿಸಿದ ಸುಪ್ರೀಂ ಕೋರ್ಟ್

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೊಯ್ಮಲ್ಯ ಬಗ್ಚಿ ಮತ್ತು ವಿಪುಲ್ ಎಂ ಪಂಚೋಲಿ ಅವರಿದ್ದ ಪೀಠವು, ಕರ್ನಾಟಕ ಸರ್ಕಾರ ಪರ ಹಿರಿಯ ವಕೀಲ ಎ ಎಂ ಸಿಂಗ್ವಿ ಅವರ ವಾದ ಆಲಿಸಿದ ಬಳಿಕ, ಜೂನ್ 30ರ ಹಿಂದಿನ ಗಡುವನ್ನು ಆಗಸ್ಟ್ 31, 2026ರವರೆಗೆ ವಿಸ್ತರಿಸಿತು.
The Supreme Court of India and (R) the logo of the Greater Bengaluru Authority
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಸುಪ್ರೀಂ ಕೋರ್ಟ್ ಅವಧಿ ವಿಸ್ತರಣೆ
Updated on

ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ (SEC) ಬೆಂಗಳೂರಿನ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಪೂರ್ಣಗೊಳಿಸಲು ಅಂತಿಮ ಅವಕಾಶವಾಗಿ ಆಗಸ್ಟ್ 31ರವರೆಗೆ ಹೆಚ್ಚುವರಿ ಕಾಲಾವಕಾಶ ನೀಡಿ ಸುಪ್ರೀಂ ಕೋರ್ಟ್ ಇಂದು ಬುಧವಾರ ಆದೇಶ ಹೊರಡಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೊಯ್ಮಲ್ಯ ಬಗ್ಚಿ ಮತ್ತು ವಿಪುಲ್ ಎಂ ಪಂಚೋಲಿ ಅವರಿದ್ದ ಪೀಠವು, ಕರ್ನಾಟಕ ಸರ್ಕಾರ ಪರ ಹಿರಿಯ ವಕೀಲ ಎ ಎಂ ಸಿಂಗ್ವಿ ಅವರ ವಾದ ಆಲಿಸಿದ ಬಳಿಕ, ಜೂನ್ 30ರ ಹಿಂದಿನ ಗಡುವನ್ನು ಆಗಸ್ಟ್ 31, 2026ರವರೆಗೆ ವಿಸ್ತರಿಸಿತು.

ಜನಗಣತಿ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR), ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಂತಹ ಕಾರ್ಯಗಳಲ್ಲಿ ರಾಜ್ಯದ ಸಿಬ್ಬಂದಿ ನಿರತರಾಗಿರುವ ಕಾರಣ, ಇನ್ನೂ ಮೂರು ತಿಂಗಳ ಹೆಚ್ಚುವರಿ ಸಮಯ ನೀಡುವಂತೆ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ ಎರಡೂ ಮನವಿ ಸಲ್ಲಿಸಿದ್ದವು. ಈ ಹಿನ್ನೆಲೆಯಲ್ಲಿ, ಜೂನ್ 30ರೊಳಗೆ ಚುನಾವಣೆ ಪೂರ್ಣಗೊಳಿಸುವಂತೆ ನೀಡಿದ್ದ ಸುಪ್ರೀಂ ಕೋರ್ಟ್‌ನ ಜನವರಿ 12ರ ಆದೇಶದಲ್ಲಿ ತಿದ್ದುಪಡಿ ಮಾಡುವಂತೆ ಕೋರಲಾಗಿತ್ತು.

The Supreme Court of India and (R) the logo of the Greater Bengaluru Authority
ಜೂನ್ ಅಂತ್ಯದೊಳಗೆ ಪಂಚಾಯತ್, ಸ್ಥಳೀಯ ಸಂಸ್ಥೆ ಚುನಾವಣೆ: ಸಿದ್ದರಾಮಯ್ಯ

ಸರ್ಕಾರ ಪರ ಹಿರಿಯ ವಕೀಲ ಎ ಎಂ ಸಿಂಗ್ವಿ ಅವರು, SIR ಪ್ರಕ್ರಿಯೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸಿಬ್ಬಂದಿಯನ್ನು ನಿಯೋಜಿಸುವಲ್ಲಿ ತೊಂದರೆ ಎದುರಾಗುತ್ತಿದೆ ಎಂದು ವಾದಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹಿರಿಯ ವಕೀಲ ಕೆ ಪರಮೇಶ್ವರ, ಹಿಂದಿನ ಬಾರಿ ಅವಧಿ ವಿಸ್ತರಣೆ ನೀಡಿದಾಗ ಜೂನ್ 30, 2026ರೊಳಗೆ ಚುನಾವಣೆ ನಡೆಸುವುದಾಗಿ ಭರವಸೆ ನೀಡಲಾಗಿತ್ತು ಎಂದು ತಿಳಿಸಿದರು.

ಜನವರಿ 12ರಂದು ಸುಪ್ರೀಂ ಕೋರ್ಟ್, ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಜೂನ್ 30, 2026ರೊಳಗೆ ಪೂರ್ಣಗೊಳಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಹಳೆಯ ನಗರ ಪಾಲಿಕೆಯಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅವಧಿ 2020ರ ಸೆಪ್ಟೆಂಬರ್ 10ರಂದು ಕೊನೆಗೊಂಡಿತ್ತು. ಆದರೆ, ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ ಎರಡೂ ಪ್ರತ್ಯೇಕ ಅರ್ಜಿಗಳ ಮೂಲಕ ಸೆಪ್ಟೆಂಬರ್ 30, 2026ರವರೆಗೆ ಸಮಯ ವಿಸ್ತರಣೆ ಕೋರಿದ್ದವು.

ತಮ್ಮ ಅರ್ಜಿಯಲ್ಲಿ ರಾಜ್ಯ ಚುನಾವಣಾ ಆಯೋಗ, ಈ ನ್ಯಾಯಾಲಯದ ನಿರ್ದೇಶನದಂತೆ ಚುನಾವಣೆಗಳನ್ನು ಪೂರ್ಣಗೊಳಿಸಲು ನಾವು ಸಕ್ರಿಯ ಕ್ರಮಗಳನ್ನು ಕೈಗೊಂಡಿದ್ದೇವೆ. ಆದರೆ, ಕೇಂದ್ರ ಸರ್ಕಾರ ಜನಗಣತಿಗೆ ಆದೇಶಿಸಿರುವುದು ಹಾಗೂ SIR ಪ್ರಕ್ರಿಯೆ ನಡೆಯುತ್ತಿರುವುದರಿಂದ, ಚುನಾವಣಾ ಕಾರ್ಯಕ್ಕೆ ಸಹಕರಿಸಬೇಕಾದ ಅಧಿಕಾರಿಗಳ ಸಮಯ ಮತ್ತು ಸಂಪನ್ಮೂಲಗಳು ಸಂಪೂರ್ಣವಾಗಿ ಅದರಲ್ಲಿ ತೊಡಗಿಕೊಂಡಿವೆ. ಹೀಗಾಗಿ ಚುನಾವಣೆ ನಡೆಸುವಲ್ಲಿ ವಿಳಂಬವಾಗಿದ್ದು, ಹೆಚ್ಚುವರಿ ಕಾಲಾವಕಾಶದ ಬೇಡಿಕೆ ನ್ಯಾಯಸಮ್ಮತವಾಗಿದೆ ಎಂದು ಹೇಳಿದೆ.

ರಾಜ್ಯ ಸರ್ಕಾರದ ಸಹಕಾರದೊಂದಿಗೆ ಚುನಾವಣೆಗಳನ್ನು ನಡೆಸಲು ಸಾಧ್ಯವೆಂದು ರಾಜ್ಯ ಚುನಾವಣಾ ಆಯೋಗ (SEC) ತಿಳಿಸಿದೆ. ಆದರೆ, ಜನಗಣತಿ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮೊದಲಾದ ಕಾರ್ಯಗಳಿಗೆ ರಾಜ್ಯ ಸರ್ಕಾರ ತನ್ನ ಸಿಬ್ಬಂದಿಯನ್ನು ನಿಯೋಜಿಸಿರುವ ಕಾರಣ, ಅಗತ್ಯ ಮಾನವ ಸಂಪನ್ಮೂಲ ಮತ್ತು ತಾತ್ವಿಕ ವ್ಯವಸ್ಥೆಗಳು ಲಭ್ಯವಾಗದ ಸಾಧ್ಯತೆ ಇದೆ ಎಂದು ಆಯೋಗ ಹೇಳಿದೆ.

ತಮ್ಮ ಅರ್ಜಿಯಲ್ಲಿ ರಾಜ್ಯ ಸರ್ಕಾರ, ಈ ಅವಧಿ ವಿಸ್ತರಣೆಯನ್ನು ನಾವು ಯಾವುದೇ ಆರ್ಥಿಕ ಸಂಕಷ್ಟದ ಕಾರಣದಿಂದ ಕೇಳುತ್ತಿಲ್ಲ. ಚುನಾವಣಾ ಪ್ರಕ್ರಿಯೆಗೆ ಬೇಕಾದಷ್ಟು ನಿಧಿಯನ್ನು ಈಗಾಗಲೇ ಮೀಸಲಿಟ್ಟು ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಇದಲ್ಲದೆ, ಅಂತಿಮ ವಾರ್ಡ್ ಮೀಸಲಾತಿ ಅಧಿಸೂಚನೆ ಪ್ರಕಟಿಸುವುದನ್ನು ಒಳಗೊಂಡಂತೆ ತನ್ನ ಎಲ್ಲಾ ಜವಾಬ್ದಾರಿಗಳನ್ನು ಚುನಾವಣಾ ಪ್ರಕ್ರಿಯೆಗೆ ಯಾವುದೇ ಅಡ್ಡಿಯಿಲ್ಲದೆ ಪೂರ್ಣಗೊಳಿಸಿದ್ದೇವೆ ಎಂದು ಸರ್ಕಾರ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com