

ಬೆಂಗಳೂರು: ಮುಸ್ಲಿಂ ಪ್ರೇಮಿಯೊಂದಿಗೆ ವಾಸಿಸುತ್ತಿದ್ದ ತನ್ನ 21 ವರ್ಷದ ಮಗಳಿಗೆ ಕಡ್ಡಾಯವಾಗಿ ಮಾನಸಿಕ ಆರೋಗ್ಯ ತಪಾಸಣೆ ಕೋರಿ ಸಿಖ್ ಮಹಿಳೆಯೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ಮತ್ತು ಕೆ. ಮನ್ಮಧ ರಾವ್ ಅವರ ರಜಾ ಪೀಠವು, ತನ್ನ ಪ್ರೇಮಿಯೊಂದಿಗೆ ಸ್ವಇಚ್ಛೆಯಿಂದ ವಾಸಿಸುತ್ತಿದ್ದೇನೆ ಎಂದು ನಿಸ್ಸಂದಿಗ್ಧವಾಗಿ ಹೇಳಿದ ಯುವತಿಯ ಇಚ್ಛೆಗೆ ವಿರುದ್ಧವಾಗಿ ಮಾನಸಿಕ ಪರೀಕ್ಷೆಗೆ ಆದೇಶಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
"ನೀವು ಕೇಳಿದ ಮಾತ್ರಕ್ಕೆ ಯಾರಾದರೂ ಪರೀಕ್ಷೆಗೆ ಏಕೆ ಒಳಗಾಗಬೇಕು? ನೀವು ಮಾನಸಿಕ ಆರೋಗ್ಯ ಕಾಯ್ದೆಯ ಅಡಿಯಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು ಮತ್ತು ಆ ವಿಧಾನವನ್ನು ಅನುಸರಿಸಬಹುದು". ಆದರೆ ಬಲವಂತದ ಪರೀಕ್ಷೆ ಸ್ವೀಕಾರಾರ್ಹವಲ್ಲ ಎಂದು ಪೀಠವು ಸ್ಪಷ್ಟಪಡಿಸಿರುವುದಾಗಿ ಬಾರ್ ಆಂಡ್ ಬೆಂಚ್ ವರದಿ ಮಾಡಿದೆ.
ಅರ್ಜಿದಾರರ ಮನವಿಯಂತೆ ಯುವತಿಯ ಮಾನಸಿಕ ಸ್ಥಿತಿಗತಿಯ ಮೌಲ್ಯಮಾಪನಕ್ಕೆ ಆದೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ವಿಚಾರಣೆ ವೇಳೆ ಯುವತಿ, ‘ನನ್ನ ಮೇಲೆ ಪೋಷಕರು ಒತ್ತಡ ಹೇರಿದ್ದರು. ಅದರಂತೆ ನಾನು ಪ್ರಿಯತಮನ ವಿರುದ್ಧ ಅತ್ಯಾಚಾರ ಹಾಗೂ ಮತಾಂತರ ಆರೋಪಗಳನ್ನು ಮಾಡಿ ಪತ್ರ ಬರೆದಿದ್ದೆ. ತಂದೆ–ತಾಯಿ ನನ್ನನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ(RSS)ಕೆಲ ಸದಸ್ಯರನ್ನು ಭೇಟಿ ಮಾಡಿಸಿ ಆ ಪತ್ರ ಬರೆಯಿಸಿದ್ದರು. ಆ ಪತ್ರದಲ್ಲಿರುವ ಯಾವುದೇ ಆರೋಪವೂ ಸತ್ಯವಲ್ಲ. ನಾನು ಮತಾಂತರವಾಗಿಲ್ಲ. ನನ್ನ ಮೇಲೆ ಅತ್ಯಾಚಾರವೂ ಆಗಿಲ್ಲ. ಬೆದರಿಕೆ ಹಾಕಿ ಪತ್ರ ಬರೆಯುವಂತೆ ಮಾಡಿದ್ದರು’ ಎಂದು ಹೇಳಿಕೆ ನೀಡಿದ್ದಾಳೆ.
Advertisement