

ಬೆಂಗಳೂರು: ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಅವರ ಪದಗ್ರಹಣಕ್ಕೆ ವೇದಿಕೆ ಸಜ್ಜಾಗುತ್ತಿದೆ. ಇಂದು ಸಂಜೆ ನಡೆಯುವ ಸಿಎಲ್ ಪಿ ಮೀಟಿಂಗ್ ನಲ್ಲಿ ದಿನಾಂಕ ನಿರ್ಧಾರವಾಗಲಿದೆ.
ಡಿ ಕೆ ಶಿವಕುಮಾರ್ ಗೆ ತಮ್ಮ ಊರು ರಾಮನಗರ, ಚನ್ನಪಟ್ಟಣದಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಬೆಂಗಳೂರು ದಕ್ಷಿಣ ಎಂದು ಈಗ ಕರೆಯಲ್ಪಡುವ ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಚಿಕ್ಕಸಾದೇನಹಳ್ಳಿ ಗ್ರಾಮದ ಈಶ್ವರಪ್ಪ ಎಂಬ ಕಟ್ಟಾ ಕಾಂಗ್ರೆಸ್ ಅಭಿಮಾನಿ, ತಮ್ಮ ನೆಚ್ಚಿನ ನಾಯಕ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂದು ಕಳೆದ ಮೂರು ವರ್ಷಗಳಿಂದ ವಿಶಿಷ್ಟ ಹರಕೆಯೊಂದನ್ನು ಹೊತ್ತಿದ್ದರು.
‘ಡಿಕೆಶಿ ರಾಜ್ಯದ ಮುಖ್ಯಮಂತ್ರಿಯಾಗುವವರೆಗೂ ನಾನು ತಲೆಗೂದಲು ಹಾಗೂ ಗಡ್ಡವನ್ನು ಕತ್ತರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿಕೊಂಡಿದ್ದ ಈಶ್ವರಪ್ಪ ಇದೀಗ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ಗೆ ಹೋಗಿ ಪವಿತ್ರ ತ್ರಿವೇಣಿ ಸಂಗಮದಲ್ಲಿ ಡಿಕೆ ಶಿವಕುಮಾರ್ ಅವರ ಭಾವಚಿತ್ರವನ್ನು ಕೈಯಲ್ಲಿ ಹಿಡಿದು ಸ್ನಾನ ಮಾಡಿದ್ದಾರೆ. ಅವರು ಶೀಘ್ರದಲ್ಲೇ ಕರುನಾಡಿನ ಸಿಎಂ ಆಗಲಿ ಎಂದು ವಿಶೇಷ ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಗಡ್ಡ ಮತ್ತು ದಟ್ಟವಾದ ತಲೆಗೂದಲು ಬಿಟ್ಟು ತಪಸ್ವಿಯಂತೆ ತಿರುಗುತ್ತಿದ್ದ ಈಶ್ವರಪ್ಪ ಅವರ ಸುದೀರ್ಘ ಪ್ರಾರ್ಥನೆಗೆ ಕೊನೆಗೂ ದೇವರು ಕಣ್ಣುಬಿಟ್ಟಿದ್ದಾರೆ ಎಂದು ಖುಷಿಯಾಗಿದ್ದಾರೆ. ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ತಕ್ಷಣವೇ ಬೆಂಗಳೂರಿಗೆ ಬಂದು ಅವರನ್ನು ಖುದ್ದಾಗಿ ಭೇಟಿಯಾಗಿ ಅಭಿನಂದನೆ ಸಲ್ಲಿಸಲು ಈಶ್ವರಪ್ಪ ನಿರ್ಧರಿಸಿದ್ದಾರೆ. ಅದಾದ ಬಳಿಕ ನೇರವಾಗಿ ಮಂತ್ರಾಲಯ ಪುಣ್ಯಕ್ಷೇತ್ರಕ್ಕೆ ತೆರಳಿ ಶ್ರೀ ಗುರು ರಾಯರ ಸನ್ನಿಧಿಯಲ್ಲಿ ತಮ್ಮ ತಲೆಗೂದಲು ಹಾಗೂ ಗಡ್ಡವನ್ನು ಒಪ್ಪಿಸಿ ಹರಕೆ ತೀರಿಸುವುದಾಗಿ ಹೇಳಿದ್ದಾರೆ.
Advertisement