

ಬೆಂಗಳೂರು: ಅರ್ಹ ಎಲ್ಲ ನಾಗರಿಕರಿಗೂ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ತಲುಪಿಸುವ ಉದ್ದೇಶದಿಂದ ಬೆಂಗಳೂರು ನಗರ ಜಿಲ್ಲೆಯ 85 ಗ್ರಾಮ ಪಂಚಾಯಿತಿಗಳಲ್ಲಿ ಅಕ್ಟೋಬರ್ 28ರಿಂದ ಡಿಸೆಂಬರ್ 31ರವರೆಗೆ 'ಆರ್ಥಿಕ ಸೇರ್ಪಡೆ ಸಮಗ್ರ ವ್ಯಾಪ್ತಿ ಅಭಿಯಾನ' (Financial Inclusion Saturation Campaign) ಹಮ್ಮಿಕೊಳ್ಳಲಾಗಿದೆ.
ಲೀಡ್ ಬ್ಯಾಂಕ್ ಕಚೇರಿಯು, ಗ್ರಾಮ ಪಂಚಾಯಿತಿಗಳು, ಬ್ಯಾಂಕ್‌ಗಳು ಹಾಗೂ ಇತರ ಸಂಬಂಧಪಟ್ಟ ಸಂಸ್ಥೆಗಳ ಸಹಯೋಗದಲ್ಲಿ ಈ ಅಭಿಯಾನವನ್ನು ಸಂಯೋಜಿಸುತ್ತಿದೆ. ಪ್ರಧಾನ ಮಂತ್ರಿ ಜನಧನ್ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆಗಳಡಿ ಅರ್ಹ ಫಲಾನುಭವಿಗಳನ್ನು ನೋಂದಾಯಿಸುವುದಕ್ಕೆ ಅಭಿಯಾನದಲ್ಲಿ ಆದ್ಯತೆ ನೀಡಲಾಗಿದೆ.
ಇದರೊಂದಿಗೆ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ಜೋಡಣೆ, ಇ-ಕೆವೈಸಿ ಮತ್ತು ಮರು-ಕೆವೈಸಿ ಪ್ರಕ್ರಿಯೆ, ಸೆಂಟ್ರಲ್ ಕೆವೈಸಿ ಗುರುತಿನ ಸಂಖ್ಯೆ ವಿತರಣೆ, ಅರ್ಹರಿಗೆ ಬ್ಯಾಂಕ್ ಖಾತೆ ತೆರೆಯುವುದು, ಆರ್ಥಿಕ ಸಾಕ್ಷರತಾ ಕಾರ್ಯಕ್ರಮಗಳು ಹಾಗೂ ಕುಂದುಕೊರತೆಗಳ ಪರಿಹಾರ ಕ್ರಮಗಳನ್ನೂ ಕೈಗೊಳ್ಳಲಾಗುತ್ತದೆ.
ವಿಮಾ, ಪಿಂಚಣಿ, ಸಾಮಾಜಿಕ ಭದ್ರತಾ ಯೋಜನೆಗಳು ಮತ್ತು ಕೃಷಿ ಸಾಲ ಸೌಲಭ್ಯಗಳ ಕುರಿತು ಜನರಲ್ಲಿ ಅರಿವು ಮೂಡಿಸುವುದು ಈ ಉಪಕ್ರಮದ ಮತ್ತೊಂದು ಉದ್ದೇಶವಾಗಿದೆ. ವಿಶೇಷವಾಗಿ, ಈ ಸೌಲಭ್ಯಗಳಿಗೆ ಅರ್ಹರಾಗಿದ್ದರೂ ಇನ್ನೂ ಅವುಗಳ ಪ್ರಯೋಜನ ಪಡೆಯದ ಫಲಾನುಭವಿಗಳನ್ನು ತಲುಪಲು ಆದ್ಯತೆ ನೀಡಲಾಗಿದೆ.
ಅಗತ್ಯ ದಾಖಲೆಗಳೊಂದಿಗೆ ಸಮೀಪದ ಬ್ಯಾಂಕ್ ಶಾಖೆಗಳಿಗೆ ಅಥವಾ ನಿಗದಿಪಡಿಸಿದ ಶಿಬಿರಗಳಿಗೆ ಭೇಟಿ ನೀಡಿ, ತಮ್ಮ ಅರ್ಹತೆಯನ್ನು ಪರಿಶೀಲಿಸಿಕೊಂಡು ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಾರ್ವಜನಿಕರಲ್ಲಿ ಲೀಡ್ ಜಿಲ್ಲಾ ವ್ಯವಸ್ಥಾಪಕ ವಿಠಲ ಗೌಡ ಬಿ ಮನವಿ ಮಾಡಿದ್ದಾರೆ.