

ಮೈಸೂರು: ಯೂಟ್ಯೂಬರ್ ಮಧು ಗೌಡ ಅವರ ಪತಿ ನಿಖಿಲ್ ವಿರುದ್ಧ ಹಿಟ್ ಆ್ಯಂಡ್ ರನ್ ಆರೋಪ ಕೇಳಿಬಂದಿದ್ದು, ಮೈಸೂರಿನಲ್ಲಿ ಬೈಕ್ ಸವಾರನಿಗೆ ಕಾರಿನಿಂದ ಡಿಕ್ಕಿ ಹೊಡೆದು, ಗಾಯಾಳುವಿನ ನೆರವಿಗೆ ಧಾವಿಸದೆ ಸ್ಥಳದಿಂದ ತೆರಳಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇದರ ಬೆನ್ನಲ್ಲೇ ಪ್ರಕರಣದ ಆಡಿಯೋ ಹಾಗೂ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟೀಕೆಗಳು ವ್ಯಕ್ತವಾಗುತ್ತಿವೆ.
ಹೀಗಾಗಿ ಆರೋಪ ಕುರಿತು ಪ್ರತಿಕ್ರಿಯಿಸಿರುವ ನಿಖಿಲ್, ಅಪಘಾತ ನಡೆದಿರುವುದು ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.ಮೈಸೂರಿನ ವಿ.ವಿ.ಪುರಂ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ನಿಖಿಲ್ ಅವರ ಕಾರು ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸಂಧಾನಕ್ಕೆ ಯತ್ನ ಆರೋಪ
ಅಪಘಾತದ ಬಳಿಕ ನಿಖಿಲ್ ಸಂತ್ರಸ್ತರ ವ್ಯಕ್ತಿಯನ್ನು ಸಂಪರ್ಕಿಸಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಮೊದಲು ಪ್ರಕರಣವನ್ನು ಸಂಧಾನದ ಮೂಲಕ ಬಗೆಹರಿಸಲು ಪ್ರಯತ್ನಿಸಿದ್ದಾರೆಂಬ ಮಾತುಗಳು ಕೇಳಿ ಬಂದಿದೆ.
ಈ ಕುರಿತ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆಡಿಯೋದಲ್ಲಿ ಮಾತನಾಡುವ ವ್ಯಕ್ತಿಯೊಬ್ಬರು ನಿಖಿಲ್ ಅವರನ್ನು ಪೊಲೀಸ್ ಠಾಣೆಗೆ ಬರುವಂತೆ ಒತ್ತಾಯಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ನಿಖಿಲ್, ಪೊಲೀಸರನ್ನು ಮಧ್ಯೆ ತರಬೇಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಗಾಯಾಳು ಮತ್ತು ಅವರ ಕುಟುಂಬದವರನ್ನು ಕರೆದುಕೊಂಡು ಬಂದು ಮಾತನಾಡುವಂತೆ ಸೂಚಿಸಿರುವ ಧ್ವನಿಯೂ ಆಡಿಯೋದಲ್ಲಿದೆ.
ಮತ್ತೊಂದು ಆಡಿಯೋದಲ್ಲಿ ಮೊದಲು ಪೊಲೀಸ್ ಠಾಣೆಗೆ ಬಂದು, ಬಳಿಕ ಪ್ರಕರಣ ದಾಖಲಿಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸೋಣ ಎಂದು ವ್ಯಕ್ತಿಯೊಬ್ಬರು ಹೇಳಿರುವುದು ಕೇಳಿಬರುತ್ತದೆ. ಇದಕ್ಕೆ ಪ್ರತಿಕ್ರಿಯಿಸಿರುವ ನಿಖಿಲ್, ಕಾರನ್ನು ತಮ್ಮ ಬಾಮೈದ ತೆಗೆದುಕೊಂಡು ಹೋಗಿದ್ದಾನೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಅಪಘಾತದ ಬಗ್ಗೆ ನಿಖಿಲ್ ಸ್ಪಷ್ಟನೆ
ಏತನ್ಮಧ್ಯೆ ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ನಿಖಿಲ್, ನನಗೆ ಡಿಕ್ಕಿ ಹೊಡೆದಿರುವುದು ಗಮನಕ್ಕೆ ಬಂದಿರಲಿಲ್ಲ. ಅಪಘಾತದ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲ. ನಾನು ಅಪಘಾತ ಮಾಡಿ ಸುಮ್ಮನೆ ಓಡಿಹೋಗುವ ವ್ಯಕ್ತಿಯಲ್ಲ. ಚಾರ್ಜರ್ ಬೇಕೆಂದು ಅದೇ ರಸ್ತೆಯಲ್ಲಿ ವಾಪಸ್ ಹೋಗುತ್ತಿದ್ದಾಗ ಅಪಘಾತವನ್ನು ನೋಡಿದವರು ತಿಳಿಸಿದ ಬಳಿಕವಷ್ಟೇ ವಿಷಯ ಗೊತ್ತಾಯಿತು ಎಂದು ಹೇಳಿದ್ದಾರೆ.
ಬೈಕ್ ಸವಾರನಿಗೆ ಗಂಭೀರ ಗಾಯ
ಡಿಕ್ಕಿಯ ರಭಸಕ್ಕೆ ಅಭಿಷೇಕ್ ಅವರ ಕೈ ಮತ್ತು ಕಾಲಿಗೆ ಗಾಯಗಳಾಗಿದ್ದು, ಮೂಳೆ ಮುರಿತವಾಗಿದೆ ಎಂದು ತಿಳಿದುಬಂದಿದೆ.
ಅಭಿಷೇಕ್ ತಮ್ಮ ಮಗುವಿನ ನಾಮಕರಣ ಕಾರ್ಯಕ್ರಮದ ಸಿದ್ಧತೆಯಲ್ಲಿದ್ದರು ಎನ್ನಲಾಗಿದ್ದು, ಅಪಘಾತದ ಬಳಿಕ ಕಾರು ನಿಲ್ಲಿಸದೆ, ಗಾಯಾಳುವಿನ ಆರೋಗ್ಯ ವಿಚಾರಿಸದೆ ನಿಖಿಲ್ ಸ್ಥಳದಿಂದ ತೆರಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕಾರನ್ನು ವಶಕ್ಕೆ ಪಡೆದ ಪೊಲೀಸರು
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಅಪಘಾತಕ್ಕೆ ಬಳಸಲಾಗಿದೆ ಎನ್ನಲಾದ ನಿಖಿಲ್ ಅವರ ಕಾರನ್ನು ವಶಕ್ಕೆ ಪಡೆದಿದ್ದಾರೆ. ಸಿಸಿಟಿವಿ ದೃಶ್ಯಗಳು ಹಾಗೂ ವೈರಲ್ ಆಗಿರುವ ಆಡಿಯೋಗಳ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.