

ಕನ್ನಡ ರಾಜ್ಯೋತ್ಸವದ ಅಂಗವಾಗಿ ಎಚ್‌ಎಂಟಿ ಲಿಮಿಟೆಡ್ ‘ಎಚ್‌ಎಂಟಿ ಕನ್ನಡಿಗ’ ಹೆಸರಿನ ನಾಲ್ಕು ಹೊಸ ಸರಣಿಯ ಕೈಗಡಿಯಾರಗಳನ್ನು ಬಿಡುಗಡೆ ಮಾಡಲಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಕೈಗಡಿಯಾರಗಳ ಬೆಲೆ 3,500 ರೂಪಾಯಿಯಿಂದ 4,500 ರೂಪಾಯಿಗಳವರೆಗೆ ಇರಲಿದೆ. ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ವಿಶೇಷವಾಗಿ ಪ್ರತಿಬಿಂಬಿಸುವ ಉದ್ದೇಶದಿಂದ ಈ ಹೊಸ ಸರಣಿಯ ವಾಚ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಶೀಘ್ರದಲ್ಲೇ ಎಚ್‌ಎಂಟಿಯ ಎಲ್ಲ ವಾಚ್ ಶೋರೂಂಗಳಲ್ಲಿ ಇವು ಲಭ್ಯವಾಗಲಿವೆ ಎಂದು ತಿಳಿಸಿದರು.
ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಹೆಚ್ಎಂಟಿ ಮೈದಾನದಲ್ಲಿ ಇಂದು ಭಾನುವಾರ ಸಂಜೆ 6.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಹೊಸ ವಾಚ್ ಸರಣಿಗಳನ್ನು ಅನಾವರಣಗೊಳಿಸಲಾಗುತ್ತದೆ. ಕಾರ್ಯಕ್ರಮದ ಅಂಗವಾಗಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸಂಗೀತ ಸಂಜೆ ಕೂಡ ಆಯೋಜಿಸಲಾಗಿದೆ.
ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೈಗೆಟುಕುವ ಬೆಲೆಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಅತ್ಯುತ್ತಮ ಕೈಗಡಿಯಾರಗಳನ್ನು ಎಚ್‌ಎಂಟಿ ಪರಿಚಯಿಸುತ್ತಿದೆ ಎಂದು ಹೇಳಿದರು.
ದೇಶೀಯ ವಾಚ್ ಬ್ರ್ಯಾಂಡ್ ಆಗಿರುವ ಎಚ್‌ಎಂಟಿಯ ಪರಂಪರೆಯನ್ನು ಸ್ಮರಿಸುವುದರ ಜೊತೆಗೆ ಕನ್ನಡದ ಅಸ್ಮಿತೆ ಮತ್ತು ಸಂಸ್ಕೃತಿಯನ್ನು ಗೌರವಿಸುವ ಉದ್ದೇಶದಿಂದ ಈ ಹೊಸ ಸರಣಿಯನ್ನು ಪರಿಚಯಿಸಲಾಗುತ್ತಿದೆ ಎಂದು ತಿಳಿದುಬಂದಿದೆ.