ನವೆಂಬರ್ 5ರಿಂದ ಬಸ್ ದರ ಹೆಚ್ಚಳ: ಸಾರಿಗೆ ಸಚಿವ ಭೈರತಿ ಸುರೇಶ್; Video

ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ದರ ಪರಿಷ್ಕರಣೆ ಕುರಿತು ಚರ್ಚಿಸಲಾಗಿದ್ದು, ಅಂತಿಮ ನಿರ್ಧಾರ ಕೈಗೊಳ್ಳುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಾರಿಗೆ ಇಲಾಖೆಗೆ ವಹಿಸಲಾಗಿದೆ ಎಂದು ಸುರೇಶ್ ಹೇಳಿದ್ದಾರೆ.
Byrathi Suresh
ಭೈರತಿ ಸುರೇಶ್
Updated on: 

ಹಾಲು ಮತ್ತು ಮೊಸರಿನ ಬೆಲೆ ಏರಿಕೆ ಮಾಡಿದ ಕೆಲವೇ ದಿನಗಳಲ್ಲಿ, ರಾಜ್ಯ ಸರ್ಕಾರ ಇದೇ ನವೆಂಬರ್ 5ರಿಂದ ಸರ್ಕಾರಿ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಹೆಚ್ಚಿಸಲು ಮುಂದಾಗಿದೆ. ದರ ಪರಿಷ್ಕರಣೆ ಜಾರಿಯಾಗುವುದು ಖಚಿತ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. ನಾಳೆ ನಡೆಯುವ ಸಭೆಯ ಬಳಿಕ ದರ ಏರಿಕೆಯ ನಿಖರ ಪ್ರಮಾಣವನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ದರ ಪರಿಷ್ಕರಣೆ ಕುರಿತು ಚರ್ಚಿಸಲಾಗಿದ್ದು, ಅಂತಿಮ ನಿರ್ಧಾರ ಕೈಗೊಳ್ಳುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಾರಿಗೆ ಇಲಾಖೆಗೆ ವಹಿಸಲಾಗಿದೆ ಎಂದು ಸುರೇಶ್ ಹೇಳಿದ್ದಾರೆ.

ಪರಿಷ್ಕೃತ ದರ ರಚನೆಯನ್ನು ನಿರ್ಧರಿಸಲು ನಾಳೆ ಸಾರಿಗೆ ಇಲಾಖೆಯು ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದೆ. ಮರುದಿನದಿಂದಲೇ ಹೊಸ ದರಗಳು ಜಾರಿಗೆ ಬರಲಿವೆ.

ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚ ಮತ್ತು ಸಾರಿಗೆ ವಲಯದ ಆರ್ಥಿಕ ಸಂಕಷ್ಟದಿಂದಾಗಿ ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ ಎಂದು ತಿಳಿಸಿದರು.

ದರ ಏರಿಕೆ ಅನಿವಾರ್ಯ

ಕೇಂದ್ರ ಸರ್ಕಾರ ಡೀಸೆಲ್ ಬೆಲೆಯನ್ನು ನಾಲ್ಕು ಬಾರಿ ಹೆಚ್ಚಿಸಿರುವುದರಿಂದ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಮೇಲೆ ವಾರ್ಷಿಕ ಹೆಚ್ಚುವರಿಯಾಗಿ 2,000 ಕೋಟಿ ರೂಪಾಯಿ ಹೊರೆ ಬಿದ್ದಿದೆ. ಇದರಿಂದ ನಿಗಮಗಳ ಒಟ್ಟು ನಷ್ಟ 9,000 ಕೋಟಿ ರೂಪಾಯಿಗೆ ತಲುಪಿದೆ ಎಂದು ಸಚಿವರು ಹೇಳಿದರು.

ದರ ಏರಿಕೆ ಮಾಡದೆ ನಮಗೆ ಬೇರೆ ದಾರಿಯಿಲ್ಲ. ಸಾರಿಗೆ ನಿಗಮಗಳನ್ನು ಆರ್ಥಿಕವಾಗಿ ಪುನಶ್ಚೇತನಗೊಳಿಸಲು ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಸುರೇಶ್ ಹೇಳಿದರು.

ನಿವೃತ್ತ ಐಎಎಸ್ ಅಧಿಕಾರಿ ಅತುಲ್ ಕುಮಾರ್ ತಿವಾರಿ ನೇತೃತ್ವದ ಸಾರ್ವಜನಿಕ ಸಾರಿಗೆ ಪ್ರಯಾಣ ದರ ನಿಯಂತ್ರಣ ಸಮಿತಿಯು (ಪಿಟಿಎಫ್‌ಆರ್‌ಸಿ), ಮೂರು ಸಾರಿಗೆ ನಿಗಮಗಳ ಪ್ರಯಾಣ ದರವನ್ನು ಶೇ.25ರಷ್ಟು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ದರವನ್ನು ಶೇ.40ರಷ್ಟು ಹೆಚ್ಚಿಸುವಂತೆ ಶಿಫಾರಸು ಮಾಡಿದೆ.

Byrathi Suresh
ಹಾಲಿನ ದರ ಏರಿಕೆ ಬೆನ್ನಲ್ಲೇ ಮೊಸರಿನ ದರವನ್ನೂ ಪರಿಷ್ಕರಿಸಿದ ಕೆಎಂಎಫ್; ಪ್ರತಿ ಲೀಟರ್‌ಗೆ 14 ರೂ ಹೆಚ್ಚಳ..!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X