ಬೆಂಗಳೂರು ಟರ್ಫ್ ಕ್ಲಬ್‌ಗೆ 4 ಎಕರೆ ಜಮೀನು ಗುತ್ತಿಗೆ; 20 ಸಾವಿರ ಕೋಟಿ ರೂ.ವೆಚ್ಚದ ರಸ್ತೆ ಕಾಮಗಾರಿಗೆ ಸಚಿವ ಸಂಪುಟ ಅಸ್ತು!

ಬೆಂಗಳೂರಿನ ಸುತ್ತಮುತ್ತ 10 ಪ್ಯಾಕೇಜ್‌ಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು, 3,409.02 ಕೋಟಿ ರೂಪಾಯಿಗಳ ಪರಿಷ್ಕೃತ ಅಂದಾಜು ಮೊತ್ತಕ್ಕೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
Chief Minister DK Shivakumar
ಮುಖ್ಯಮಂತ್ರಿ ಡಿಕೆ ಶಿವಕುಮಾರ್
Updated on: 

ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್‌ಗೆ(BTC) ಸರ್ಕಾರಿ ಜಮೀನನ್ನು ಗುತ್ತಿಗೆ ನೀಡುವ ಸಂಬಂಧ, ಕೇವಲ ನಾಲ್ಕು ಎಕರೆ ಜಮೀನನ್ನು ಮಾತ್ರ 30 ವರ್ಷಗಳ ಅವಧಿಗೆ ನೀಡಲು ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. ಉಳಿದ ಜಮೀನನ್ನು ಸರ್ಕಾರವು ಅಭಿವೃದ್ಧಿ ಕಾರ್ಯಗಳಿಗಾಗಿ ವಾಪಸ್ ಪಡೆಯಲಿದೆ.

ಪ್ರಸ್ತುತ ಇದ್ದ ಗುತ್ತಿಗೆ ಒಪ್ಪಂದದ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ, ಟರ್ಫ್ ಕ್ಲಬ್ 30 ವರ್ಷಗಳ ದೀರ್ಘಾವಧಿಯ ಗುತ್ತಿಗೆಯನ್ನು ಕೋರಿತ್ತು. ಆದರೆ, ಸಂಪೂರ್ಣ ಜಮೀನನ್ನು ಗುತ್ತಿಗೆಗೆ ನೀಡುವ ಬದಲು, ಉಳಿದ ಜಮೀನನ್ನು ಸರ್ಕಾರ ತನ್ನ ಅಭಿವೃದ್ಧಿ ಕಾರ್ಯಗಳಿಗಾಗಿ ಇಟ್ಟುಕೊಳ್ಳಲು ನಿರ್ಧರಿಸಿದೆ.

ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್(RDPR) ಸಚಿವ ಈಶ್ವರ್ ಖಂಡ್ರೆ ಅವರು, ಸರ್ಕಾರವು ಕೇವಲ ನಾಲ್ಕು ಎಕರೆ ಜಮೀನನ್ನು ಮಾತ್ರ ಗುತ್ತಿಗೆಗೆ ನೀಡಲು ನಿರ್ಧರಿಸಿದ್ದು, ಉಳಿದ ಜಮೀನನ್ನು ವಾಪಸ್ ಪಡೆದು ಸರ್ಕಾರವೇ ಅಭಿವೃದ್ಧಿಪಡಿಸಲಿದೆ ಎಂದು ತಿಳಿಸಿದರು.

Chief Minister DK Shivakumar
ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್‌: ತುಟ್ಟಿಭತ್ಯೆ ಶೇ. 18ಕ್ಕೆ ಹೆಚ್ಚಿಸಿ ಆದೇಶ

ಟರ್ಫ್ ಕ್ಲಬ್ ಅನ್ನು ಕುಣಿಗಲ್‌ಗೆ ಸ್ಥಳಾಂತರಿಸುವ ವಿಷಯದ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಕ್ಲಬ್ ಸ್ಥಳಾಂತರಕ್ಕೆ ಹೆಚ್ಚಿನ ಸಮಯ ಕೋರಿದ್ದು, ಈ ಕುರಿತು ಸರ್ಕಾರವು ವಿಸ್ತೃತ ವರದಿಯನ್ನು ಪಡೆಯಲಿದೆ ಎಂದು ಸಚಿವರು ಹೇಳಿದರು.

ಮತ್ತೊಂದು ಪ್ರಮುಖ ನಿರ್ಧಾರದಲ್ಲಿ, ಸಚಿವ ಸಂಪುಟವು ಲೋಕೋಪಯೋಗಿ ಇಲಾಖೆಯ(PWD) ವಿವಿಧ ಯೋಜನೆಗಳ ಅಡಿಯಲ್ಲಿ 20,000 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡಿದೆ. ಇದರಲ್ಲಿ ರಾಜ್ಯ ಹೆದ್ದಾರಿಗಳು, ಪ್ರಮುಖ ಜಿಲ್ಲಾ ರಸ್ತೆಗಳು, ಸೇತುವೆಗಳು ಮತ್ತು ಕರ್ನಾಟಕದಾದ್ಯಂತ ಇರುವ ಇತರ ಮೂಲಸೌಕರ್ಯಗಳ ಅಭಿವೃದ್ಧಿ ಒಳಗೊಂಡಿದೆ.

ಈ ಯೋಜನೆಗಳಲ್ಲಿ 'ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ'ಯ (State Highway Development Project) 5ನೇ ಹಂತದ (Stage V), 2ನೇ ಘಟ್ಟದ ​​(Phase II) ಅಡಿಯಲ್ಲಿ 1,897 ಕಿ.ಮೀ ರಸ್ತೆಗಳ ಅಭಿವೃದ್ಧಿ ಸೇರಿದೆ.

ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆಗಳು, ಸೇತುವೆಗಳು ಮತ್ತು ಕಟ್ಟಡಗಳ ಅಭಿವೃದ್ಧಿಗಾಗಿ ಹೆಚ್ಚುವರಿಯಾಗಿ 6,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಅಲ್ಲದೆ, ಇನ್ನೂ 3,000 ಕೋಟಿ ರೂ.ಗಳನ್ನು ಹೆಚ್ಚುವರಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ವ್ಯಯಿಸಲಾಗುವುದು ಎಂದರು.

ಜಿಲ್ಲಾ ಕೇಂದ್ರಗಳು, ತಾಲೂಕು ಕೇಂದ್ರಗಳು ಮತ್ತು ನೆರೆಯ ತಾಲೂಕುಗಳನ್ನು ಸಂಪರ್ಕಿಸುವ ಸುಮಾರು 3,986 ಕಿ.ಮೀ ರಸ್ತೆಗಳನ್ನು ಅಭಿವೃದ್ಧಿಪಡಿಸಲು 6,000 ಕೋಟಿ ರೂ. ವೆಚ್ಚದ ಹೊಸ ಕಾರ್ಯಕ್ರಮಕ್ಕೂ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರ ಜೊತೆಗೆ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (KRDCL) ಮೂಲಕ ಬೆಂಗಳೂರಿನ ಸುತ್ತಮುತ್ತ 10 ಪ್ಯಾಕೇಜ್‌ಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು, 3,409.02 ಕೋಟಿ ರೂಪಾಯಿಗಳ ಪರಿಷ್ಕೃತ ಅಂದಾಜು ಮೊತ್ತಕ್ಕೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಈ ಯೋಜನೆಯು ಬೆಂಗಳೂರು ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ, ಅಲ್ಲಿನ ರಸ್ತೆ ಜಾಲವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

ಸಚಿವ ಸಂಪುಟದ ಇತರ ಪ್ರಮುಖ ನಿರ್ಧಾರಗಳು

  • ಇತರ ಪ್ರಮುಖ ನಿರ್ಧಾರಗಳ ಪೈಕಿ, ಶಿವಮೊಗ್ಗದಲ್ಲಿ ಹಳೆಯ ತುಂಗಾ ಸೇತುವೆಯನ್ನು 40 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ನಿರ್ಮಾಣ.

  • ಭದ್ರಾವತಿಯಲ್ಲಿ ಸಿದ್ದಾರೂಢ ನಗರವನ್ನು ಕೆಎಸ್‌ಆರ್‌ಟಿಸಿ (KSRTC) ಬಸ್ ನಿಲ್ದಾಣದೊಂದಿಗೆ ಸಂಪರ್ಕಿಸುವ ಹೊಸ ಸೇತುವೆಯನ್ನು 42 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಸಂಪುಟ ಒಪ್ಪಿಗೆ

  • ಕಲಬುರಗಿ ಜಿಲ್ಲೆಯ ಕಣ್ಣೂರಿನ ಬೆಣ್ಣೆತೊರಾ ನದಿಗೆ ಅಡ್ಡಲಾಗಿ ಸೇತುವೆ ಮತ್ತು ಎತ್ತರಿಸಿದ ಸಂಪರ್ಕ ರಸ್ತೆಯನ್ನು 21 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

  • ಬರಗಾಲದ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಅಗತ್ಯವನ್ನು ಪರಿಗಣಿಸಿ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರಿಯಲ್ಲಿರುವ ಹಲವಾರು ಕೆರೆಗಳನ್ನು ತುಂಬಿಸಲು 35 ಕೋಟಿ ರೂಪಾಯಿ ವೆಚ್ಚದ ಏತ ನೀರಾವರಿ ಯೋಜನೆಗೂ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

  • ಚಳ್ಳಕೆರೆಯಲ್ಲಿ 35.04 ಕೋಟಿ ರೂಪಾಯಿ ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಹಾಗೂ ಹಾಸನ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಹೆಚ್ಚುವರಿ ನ್ಯಾಯಾಲಯ ಮತ್ತು ಕೌಟುಂಬಿಕ ನ್ಯಾಯಾಲಯದ ಕಟ್ಟಡಗಳ ನಿರ್ಮಾಣಕ್ಕಾಗಿ 12.40 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲು ಸಂಪುಟ ಅನುಮೋದನೆ ನೀಡಿದೆ.

  • ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನವು ಡಿಸೆಂಬರ್ 2 ರಿಂದ 11 ರವರೆಗೆ ನಡೆಸಲು ನಿರ್ಧಾರ

  • ಸನ್ನತಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, 2026ಕ್ಕೆ ಸಚಿವ ಸಂಪುಟದ ಅನುಮೋದನೆ

  • ಮಲ್ಪೆ ಮೀನುಗಾರಿಕಾ ಬಂದರು: ಪಿಪಿಪಿ-ಡಿಬಿಎಫ್‌ಒಟಿ (PPP-DBFOT) ಮಾದರಿಯಡಿ, 1,800 ಚದರ ಮೀಟರ್ ವಿಸ್ತೀರ್ಣದಲ್ಲಿ ಬಹು-ಹಂತದ (multi-level) ಪಾರ್ಕಿಂಗ್ ಸೌಲಭ್ಯ ನಿರ್ಮಿಸಲು ಅನುಮೋದನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X