ಹಂಪಿಯ ಸುಗ್ರೀವ ಗುಹೆ ಬಳಿ ಶವ ಪತ್ತೆ: ಸೂಕ್ಷ್ಮ ಸ್ಥಳಗಳಲ್ಲಿ CCTV ಅಳವಡಿಸಲು ಕಾರ್ಯಕರ್ತರ ಆಗ್ರಹ

ಇತ್ತೀಚೆಗೆ ಸುಗ್ರೀವ ಗುಹೆಯ ಬಳಿ ಗುರುತು ಪತ್ತೆಯಾಗದ ಮಹಿಳೆಯೊಬ್ಬರ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾಗಿದ್ದು, ಇದು ನಿಧಿ ಶೋಧನೆಯ ಪ್ರಯತ್ನಕ್ಕೆ ಸಂಬಂಧಿಸಿರಬಹುದೇ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ.
ಹಂಪಿಯ ಕಲ್ಲಿನ ರಥ
ಹಂಪಿಯ ಕಲ್ಲಿನ ರಥ
Updated on: 

ಹೊಸಪೇಟೆ: ಐತಿಹಾಸಿಕ ಹಂಪಿ ಪರಂಪರೆಯ ತಾಣದಲ್ಲಿ, ವಿಶೇಷವಾಗಿ ಸುಗ್ರೀವ ಗುಹೆಯ ಸುತ್ತಮುತ್ತ, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಸಾಮಾಜಿಕ ಕಾರ್ಯಕರ್ತರು ಮತ್ತು ವಿವಿಧ ಸಂಘಟನೆಗಳು ಅಧಿಕಾರಿಗಳನ್ನು ಒತ್ತಾಯಿಸಿವೆ.

ಇತ್ತೀಚೆಗೆ ಸುಗ್ರೀವ ಗುಹೆಯ ಬಳಿ ಗುರುತು ಪತ್ತೆಯಾಗದ ಮಹಿಳೆಯೊಬ್ಬರ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾಗಿದ್ದು, ಇದು ನಿಧಿ ಶೋಧನೆಯ ಪ್ರಯತ್ನಕ್ಕೆ ಸಂಬಂಧಿಸಿರಬಹುದೇ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ.

ಸುಗ್ರೀವ ಗುಹೆಯ ಬಳಿ ಟ್ರೆಕ್ಕಿಂಗ್ (ಪಾದಯಾತ್ರೆ) ಮಾಡುತ್ತಿದ್ದ ಇಬ್ಬರು ವಿದೇಶಿ ಪ್ರವಾಸಿಗರಿಗೆ ಮಹಿಳೆಯ ಮೃತದೇಹ ಸಿಕ್ಕ ನಂತರ, ಸಿಸಿಟಿವಿ ಬೇಡಿಕೆ ತೀವ್ರಗೊಂಡಿದೆ. ಈ ಘಟನೆಯು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಂಪಿಯಲ್ಲಿ ಪ್ರವಾಸಿಗರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಗಂಭೀರ ಕಳವಳಗಳನ್ನು ಉಂಟುಮಾಡಿದೆ; ಅಲ್ಲದೆ, ಇಲ್ಲಿನ ನಿರ್ಜನ ಪ್ರದೇಶಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದೆ.

ಹಂಪಿಯಲ್ಲಿರುವ ಗುಹೆಗಳು, ಏಕಾಂತದಲ್ಲಿರುವ ಸ್ಮಾರಕಗಳು ಮತ್ತು ಪ್ರವಾಸಿಗರು ಸಾಮಾನ್ಯವಾಗಿ ಸಂಚರಿಸುವ ಮಾರ್ಗಗಳಿಂದ ದೂರವಿರುವ ಹಲವು ಸ್ಥಳಗಳಲ್ಲಿ ಸೂಕ್ತ ನಿಗಾ ವ್ಯವಸ್ಥೆ ಇಲ್ಲದಿರುವುದು ಆತಂಕಕಾರಿ ಎಂದು ಕಾರ್ಯಕರ್ತರು ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹೇಳಿದ್ದಾರೆ.

ಹಂಪಿಯ ಕಲ್ಲಿನ ರಥ
ಹಂಪಿ: ಸುಗ್ರೀವ ಗುಹೆ ಬಳಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ; ನಿಧಿ ಶೋಧ, ಮಾಟ-ಮಂತ್ರ ಶಂಕೆ..!

ಸೂಕ್ಷ್ಮ ಸ್ಥಳಗಳನ್ನು ಗುರುತಿಸಿ, ಅಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ಇಡಬೇಕೆಂದು ಅವರು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಕತ್ತಲೆಯಯಲ್ಲಿ ದುಷ್ಕರ್ಮಿಗಳು ಇಂತಹ ನಿರ್ಜನ ಸ್ಥಳಗಳನ್ನು ನಿಧಿ ಶೋಧನೆಯಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರಬಹುದು ಎಂದು ಕಾರ್ಯಕರ್ತರು ಶಂಕಿಸಿದ್ದಾರೆ. ಮಹಿಳೆಯ ಸಾವಿಗೂ ನಿಧಿ ಶೋಧನೆಗೂ ಸಂಬಂಧವಿರುವ ಬಗ್ಗೆ ಇನ್ನೂ ಯಾವುದೇ ಖಚಿತ ಸಾಕ್ಷ್ಯಗಳು ಸಿಕ್ಕಿಲ್ಲ. ಪೊಲೀಸರು ಈ ಘಟನೆಗೆ ಸಂಬಂಧಿಸಿದ ಸನ್ನಿವೇಶಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ರಾತ್ರಿ ವೇಳೆ ಗಸ್ತು ಹೆಚ್ಚಿಸಬೇಕು, ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು ಮತ್ತು ನಿರ್ಬಂಧಿತ ಹಾಗೂ ನಿರ್ಜನ ಪ್ರದೇಶಗಳಿಗೆ ಪ್ರವೇಶಿಸುವವರ ಮೇಲೆ ಕಠಿಣ ನಿಗಾ ವಹಿಸಬೇಕೆಂದೂ ಅವರು ಒತ್ತಾಯಿಸಿದ್ದಾರೆ. ಟ್ರೆಕ್ಕಿಂಗ್ ಮಾರ್ಗಗಳಲ್ಲಿ ಸಂಚರಿಸುವ ವಿದೇಶಿ ಪ್ರವಾಸಿಗರು ಯಾವುದೇ ಭದ್ರತಾ ಅಪಾಯಗಳಿಗೆ ಸಿಲುಕದಂತೆ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X