ಸುಳ್ಳಿಗೆ ಹಾಸನಾಂಬೆ ತಕ್ಕ ಉತ್ತರ ನೀಡುತ್ತಾಳೆ: HDK ವಿರುದ್ಧ ಸಿಎಂ ಡಿಕೆ ಶಿವಕುಮಾರ್ ಪರೋಕ್ಷ ಟಾಂಗ್!

ರಾಜ್ಯದ ಜನರು ನಮ್ಮ ಸರಕಾರಕ್ಕೆ 136 ಸ್ಥಾನಗಳ ಬಲ ನೀಡಿದ್ದಾರೆ. ಹಾಸನದಲ್ಲಿ ಮಾತ್ರ ಒಂದು ಸ್ಥಾನ ಗೆದ್ದಿದ್ದೇವೆ. ಮುಂದಿನ ದಿನಗಳಲ್ಲಿ....
ಸುಳ್ಳಿಗೆ ಹಾಸನಾಂಬೆ ತಕ್ಕ ಉತ್ತರ ನೀಡುತ್ತಾಳೆ: HDK ವಿರುದ್ಧ ಸಿಎಂ ಡಿಕೆ ಶಿವಕುಮಾರ್ ಪರೋಕ್ಷ ಟಾಂಗ್!
Updated on: 

"ಕೆಲವರಿಗೆ ಸುಳ್ಳೇ ಮನೆದೇವರಾಗಿದೆ. ಅವರು ಹೇಳುವ ಸುಳ್ಳುಗಳಿಗೆ ತಾಯಿ ಹಾಸನಾಂಬೆ ತಕ್ಕ ಉತ್ತರ ನೀಡುತ್ತಾಳೆ. ಯಾರಿಗೆ ಏನು ಶಕ್ತಿ ನೀಡಬೇಕು, ಯಾರಿಗೆ ಏನು ಶಿಕ್ಷೆ ನೀಡಬೇಕು ಎಂಬುದನ್ನು ಆ ತಾಯಿ ನೋಡಿಕೊಳ್ಳುತ್ತಾಳೆ. ಯಾರೂ ಅನಗತ್ಯವಾಗಿ ಚಿಂತೆಗೀಡಾಗದೆ ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಹೋಗಬೇಕು" ಎಂದು ಸಿಎಂ‌ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಹಾಸನದ ನಗರಸಭೆ ಪಾರ್ಕಿಂಗ್ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಹಾಗೂ ಹಾಸನಾಂಬ ಕ್ರೀಡೋತ್ಸವಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಇದಕ್ಕೂ ಮೊದಲು ಹಾಸನಾಂಭ ದೇವಾಲಯದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

"ಹಾಸನಾಂಬೆ ಸನ್ನಿಧಿಯಲ್ಲಿ ನಿಂತು ಜಿಲ್ಲೆಯ ಜನರಲ್ಲಿ ಮನವಿ ಮಾಡುತ್ತಿದ್ದೇನೆ. ಹಾಸನದ ಏಳು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಬೆಂಬಲ ನೀಡಿ, ನಮಗೆ ಇನ್ನಷ್ಟು ಶಕ್ತಿ ತುಂಬಿ. ಇಡೀ ದೇಶವೇ ಕರ್ನಾಟಕದ ಆಡಳಿತವನ್ನು ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುತ್ತೇನೆ. ಪ್ರಜಾಸೇವೆಯ ಮೂಲಕ ಜನರ ಸೇವೆ ಮಾಡಲು ನಾವು ಬದ್ಧರಾಗಿದ್ದೇವೆ" ಎಂದರು.

"ರಾಜ್ಯದ ಜನರು ನಮ್ಮ ಸರಕಾರಕ್ಕೆ 136 ಸ್ಥಾನಗಳ ಬಲ ನೀಡಿದ್ದಾರೆ. ಹಾಸನದಲ್ಲಿ ಮಾತ್ರ ಒಂದು ಸ್ಥಾನ ಗೆದ್ದಿದ್ದೇವೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಜನರು ಇನ್ನಷ್ಟು ಶಕ್ತಿ ತುಂಬಬೇಕು. ಹಾಸನದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷಕ್ಕೆ ಬೆಂಬಲ ನೀಡಬೇಕು" ಎಂದರು.

"ಅಧಿಕಾರ ಸಿಕ್ಕಿರುವುದು ಜನರ ಸೇವೆ ಮಾಡಲು. ಜನರ ಬದುಕಿನಲ್ಲಿ ನೆಮ್ಮದಿ ಮೂಡಿಸುವುದೇ ನಮ್ಮ ಸರಕಾರದ ಗುರಿ. ಐದು ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸದೆ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಜನರ ಆಶೀರ್ವಾದದಿಂದ ಇನ್ನಷ್ಟು ಉತ್ತಮ ಆಡಳಿತ ನೀಡಲು ಬದ್ಧರಾಗಿದ್ದೇವೆ ಎಂದರು.

ನಾನು, ನನ್ನದು ಎನ್ನುವುದು ಅಧರ್ಮ

ಸುಳ್ಳಿಗೆ ಹಾಸನಾಂಬೆ ತಕ್ಕ ಉತ್ತರ ನೀಡುತ್ತಾಳೆ: HDK ವಿರುದ್ಧ ಸಿಎಂ ಡಿಕೆ ಶಿವಕುಮಾರ್ ಪರೋಕ್ಷ ಟಾಂಗ್!
ಸಿಎಂ ಶಿವಕುಮಾರ್ ಹಾಸನಾಂಬೆ ದರ್ಶನ ಪಡೆಯುತ್ತಿರುವ ವಿಡಿಯೋಗೆ ಆಕ್ರೋಶಿತ ಭಕ್ತರಿಂದ ಚಪ್ಪಲಿ ಎಸೆತ, Video!

ಹಾಸನಾಂಬೆ ಕ್ಷೇತ್ರ ಅಭಿವೃದ್ಧಿಗೆ 20 ಕೋಟಿ ಅನುದಾನ

"ಹಾಸನಾಂಬೆ ದೇವಸ್ಥಾನಕ್ಕೆ ಪ್ರತಿವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಅವರ ಅನುಕೂಲಕ್ಕಾಗಿ ಮೂಲಸೌಕರ್ಯ ಕಲ್ಪಿಸುವ ಅಗತ್ಯವಿದೆ. ದೇವಸ್ಥಾನದ ಸುತ್ತಮುತ್ತ ಜಾಗದ ಕೊರತೆಯಿದ್ದು, ಭಕ್ತರ ಪ್ರವೇಶಕ್ಕೆ ಅನುಕೂಲವಾಗುವಂತೆ ರಾಜಗೋಪುರ ನಿರ್ಮಾಣ ಮಾಡಬೇಕೆಂಬ ಬೇಡಿಕೆಯೂ ಇದೆ. ಈ ಹಿನ್ನೆಲೆಯಲ್ಲಿ ಸಮಗ್ರ ಅಭಿವೃದ್ಧಿಗೆ 20 ಕೋಟಿ ರೂಪಾಯಿ ಅನುದಾನ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ" ಎಂದು ತಿಳಿಸಿದರು.

"ದೇವಸ್ಥಾನಕ್ಕೆ ಹಿಂದೆ ಸುಮಾರು ಏಳು ಎಕರೆ ಜಾಗವಿತ್ತು. ಈಗ ಸುತ್ತಮುತ್ತ ಕಟ್ಟಡಗಳು ನಿರ್ಮಾಣವಾಗಿವೆ. ಭಕ್ತರಿಗೆ ಅನುಕೂಲ ಕಲ್ಪಿಸಲು ಅಗತ್ಯ ಜಾಗದ ಲಭ್ಯತೆ ಪರಿಶೀಲಿಸಬೇಕಿದೆ. ಕಟ್ಟಡ ಮಾಲೀಕರನ್ನು ಕರೆದು ಮಾತನಾಡಿ, ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಚರ್ಚಿಸಲಾಗುವುದು. 2013ರ ಭೂಸ್ವಾಧೀನ ಕಾಯ್ದೆಯಡಿ ಪರಿಹಾರ ನೀಡುವ ವಿಚಾರವನ್ನೂ ಪರಿಶೀಲಿಸಬೇಕಿದೆ. ಯಾರಿಗೂ ತೊಂದರೆ ಕೊಡದೆ ಭಕ್ತರಿಗೆ ಅನುಕೂಲ ಮಾಡಿಕೊಡುವುದು ನಮ್ಮ ಉದ್ದೇಶ" ಎಂದರು.

"ಹಾಸನಾಂಬೆ ವಿಶೇಷ ದರ್ಶನ ಹಾಗೂ ಲಡ್ಡು ಮಾರಾಟದಿಂದ ಸುಮಾರು 25 ಕೋಟಿ ರೂಪಾಯಿ ಆದಾಯ ಬಂದಿರುವ ಕುರಿತು ಕೇಳಿದ ಪ್ರಶ್ನೆಗೆ, "ಎಲ್ಲ ಹಣವನ್ನೂ ಇಲ್ಲಿನ ಅಭಿವೃದ್ಧಿಗೆ ಹಾಕೋಣ. ಕಳೆದ ವರ್ಷ ಉಪಮುಖ್ಯಮಂತ್ರಿಯಾಗಿ ಬಂದಿದ್ದೆ. ಈಗ ಮುಖ್ಯಮಂತ್ರಿ ಎಂಬುದಕ್ಕಿಂತ ಮುಖ್ಯವಾಗಿ ಒಬ್ಬ ಭಕ್ತನಾಗಿ ಬಂದಿದ್ದೇನೆ. ಸುಮಾರು ಎಂಟು ವರ್ಷಗಳಿಂದ ಕುಟುಂಬ ಸಮೇತ ಹಾಸನಾಂಬೆ ದರ್ಶನಕ್ಕೆ ಬರುತ್ತಿದ್ದೇನೆ. ಈ ದೇವಿಯಲ್ಲಿ ವಿಶೇಷವಾದ ಆಕರ್ಷಣೆಯ ಶಕ್ತಿ ಇದೆ," ಎಂದರು.

ಹಾಸನ ಜಿಲ್ಲಾಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.

"ಜಿಲ್ಲಾಧಿಕಾರಿಯವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಎಲ್ಲರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗದಿದ್ದಾಗ ಅವರ ಮೇಲೆ ಒತ್ತಡ ಬರುತ್ತದೆ. ಆಡಳಿತದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾನು ಗಮನಿಸುತ್ತಿದ್ದೇನೆ. ಜನರೂ ಗಮನಿಸುತ್ತಿದ್ದಾರೆ. ಯಾರ ಬಗ್ಗೆಯೂ ಚಿಂತಿಸದೆ ನ್ಯಾಯ, ನೀತಿ ಮತ್ತು ಧರ್ಮದ ಹಾದಿಯಲ್ಲಿ ಆಡಳಿತ ನಡೆಸುತ್ತೇವೆ" ಎಂದರು.

"ಸಂಸದ ಶ್ರೇಯಸ್ ಪಟೇಲ್ ಅವರು ಸಂಸತ್‌ನಲ್ಲಿ ರಾಜ್ಯದ ಜನರ ಪರವಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲೂ ಜನರಿಗಾಗಿ ಶ್ರಮಿಸುತ್ತಿದ್ದಾರೆ. ಅವರೊಂದಿಗೆ ಸಚಿವ ಶಿವಲಿಂಗೇಗೌಡರು ಹಾಗೂ ಎಲ್ಲಾ ಕಾಂಗ್ರೆಸ್‌ ಮುಖಂಡರಿಗೆ ಜನರ ಆಶೀರ್ವಾದವಿರಲಿ" ಎಂದು ಪ್ರಾರ್ಥಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X