BDA ನಿವೇಶನ ಮಾಲೀಕರಿಗೆ ಸಿಹಿಸುದ್ದಿ: ಮಾರ್ಗಸೂಚಿ ದರದಲ್ಲಿ ಶೇ.50 ರಿಯಾಯಿತಿ ಘೋಷಣೆ; 1 ಲಕ್ಷ ಮಂದಿಗೆ ಲಾಭ..!

2008ಕ್ಕೂ ಮೊದಲು ಬಿಡಿಎ ಜಮೀನುಗಳಲ್ಲಿ ನಿವೇಶನ ಖರೀದಿಸಿ ಮನೆ ನಿರ್ಮಿಸಿಕೊಂಡಿರುವ ಮಾಲೀಕರಿಗೆ ಅನುಕೂಲ ಕಲ್ಪಿಸಲು ಹಿಂದಿನ ಸರ್ಕಾರ ಸಕ್ರಮಗೊಳಿಸುವ ನಿಯಮಗಳನ್ನು ರೂಪಿಸಿತ್ತು. 2021ರಲ್ಲಿ ಈ ಸಂಬಂಧ ನಿಯಮಾವಳಿಗಳನ್ನೂ ಜಾರಿಗೊಳಿಸಲಾಗಿತ್ತು.
CM DK Shivakumar
ಡಿಕೆ.ಶಿವಕುಮಾರ್.
Updated on: 

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಿವೇಶನಗಳಿಗೆ ಸಂಬಂಧಿಸಿದಂತೆ ನೋಂದಣಿಯಾಗದ ದಾಖಲೆಗಳನ್ನು ಹೊಂದಿರುವ ಸುಮಾರು 1 ಲಕ್ಷ ಮಾಲೀಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ.

ಇಂತಹ ನಿವೇಶನಗಳನ್ನು ಸಕ್ರಮಗೊಳಿಸಿಕೊಳ್ಳಲು ಮಾರ್ಗಸೂಚಿ ಮೌಲ್ಯದಲ್ಲಿ ಶೇ.50ರಷ್ಟು ರಿಯಾಯಿತಿ ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಘೋಷಿಸಿದ್ದಾರೆ.

ಬಿಡಿಎ ಸ್ಥಾಪನೆಯಾಗಿ 50 ವರ್ಷ ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರವು ನಾಗರಿಕರಿಗೆ ಅನುಕೂಲವಾಗುವ ನಾಲ್ಕು ಪ್ರಮುಖ ಉಪಕ್ರಮಗಳನ್ನು ಜಾರಿಗೆ ತರುತ್ತಿದೆ ಎಂದು ಹೇಳಿದ್ದಾರೆ..

2008ಕ್ಕೂ ಮೊದಲು ಬಿಡಿಎ ಜಮೀನುಗಳಲ್ಲಿ ನಿವೇಶನ ಖರೀದಿಸಿ ಮನೆ ನಿರ್ಮಿಸಿಕೊಂಡಿರುವ ಮಾಲೀಕರಿಗೆ ಅನುಕೂಲ ಕಲ್ಪಿಸಲು ಹಿಂದಿನ ಸರ್ಕಾರ ಸಕ್ರಮಗೊಳಿಸುವ ನಿಯಮಗಳನ್ನು ರೂಪಿಸಿತ್ತು. 2021ರಲ್ಲಿ ಈ ಸಂಬಂಧ ನಿಯಮಾವಳಿಗಳನ್ನೂ ಜಾರಿಗೊಳಿಸಲಾಗಿತ್ತು. ಆದರೆ, ಈ ಯೋಜನೆಯಡಿ ಕೇವಲ 600 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿದ್ದವು.

ಈ ಹಿನ್ನೆಲೆಯಲ್ಲಿ ನೋಂದಣಿಯಾಗದ ದಾಖಲೆಗಳನ್ನು ಹೊಂದಿರುವ ನಿವೇಶನ ಮಾಲೀಕರಿಗೆ ಅನುಕೂಲ ಮಾಡಿಕೊಡಲು ಪ್ರಸ್ತುತ ಸರ್ಕಾರ ನಿಯಮ 38(ಡಿ)ಯನ್ನು ಜಾರಿಗೆ ತಂದಿದೆ. ಇದಕ್ಕೆ ವಿಧಾನಸಭೆಯಲ್ಲೂ ಅನುಮೋದನೆ ದೊರೆತಿದೆ.

ಹಿಂದಿನ ಸರ್ಕಾರ ನಿಗದಿಪಡಿಸಿದ್ದ ಮಾರ್ಗಸೂಚಿ ಮೌಲ್ಯದಲ್ಲಿ ಶೇ.50ರಷ್ಟು ರಿಯಾಯಿತಿ ಪಡೆದು ನಿವೇಶನಗಳನ್ನು ಸಕ್ರಮಗೊಳಿಸಿಕೊಳ್ಳಲು ಇದರಿಂದ ಅವಕಾಶ ಸಿಗಲಿದೆ ಎಂದು ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲು ಡಿಸೆಂಬರ್ 17 ಕೊನೆಯ ದಿನವಾಗಿದೆ. ಗಡುವು ಮುಗಿದ ಎರಡು ತಿಂಗಳೊಳಗೆ ಎಲ್ಲಾ ಅರ್ಜಿಗಳ ವಿಲೇವಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು. 10-07-2008ಕ್ಕೂ ಮೊದಲು ಅಂದರೆ 12 ವರ್ಷಕ್ಕಿಂತ ಹಳೆಯದಾದ ಬಿಡಿಎ ಜಮೀನುಗಳಲ್ಲಿನ ಮನೆಗಳನ್ನು ಸಕ್ರಮಗೊಳಿಸಲು ಸರ್ಕಾರ ಈಗಾಗಲೇ ಅಧಿಸೂಚನೆ ಹೊರಡಿಸಿದೆ ಎಂದರು.

ಇಂತಹ ನಿವೇಶನಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳ ಕುರಿತು ಮತ್ತೊಂದು ಅಧಿಸೂಚನೆ ಹೊರಡಿಸಿ, ಮಾಲೀಕರಲ್ಲಿ ಜಾಗೃತಿ ಮೂಡಿಸಲಾಗುವುದು. ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ನಿವೇಶನಗಳನ್ನು ನೋಂದಣಿ ಮಾಡಿಸಿಕೊಳ್ಳುವಂತೆ ತಿಳಿಸಲಾಗುವುದು ಎಂದು ಹೇಳಿದರು.

CM DK Shivakumar
Watch | ಬಿಡದಿ: ₹4.91 ಕೋಟಿ ಮೌಲ್ಯದ ನಕಲಿ ಔಷಧ ವಶ; ದುಬೈನಲ್ಲಿ ಕಿಂಗ್‌ಪಿನ್?

ನ್ಯಾಯಾಲಯಗಳೂ ಈ ಸಂಬಂಧ ಆದೇಶಗಳನ್ನು ನೀಡಿವೆ. ಸರ್ಕಾರ ತನ್ನ ಜಮೀನನ್ನು ವಶಕ್ಕೆ ಪಡೆಯುವ ಅವಕಾಶವಿದ್ದರೂ, 2008ಕ್ಕೂ ಮೊದಲು ಜಮೀನು ಸ್ವಾಧೀನ ಪ್ರಕ್ರಿಯೆಗೂ ಮುನ್ನ ನಿವೇಶನ ಖರೀದಿಸಿ ಮನೆ ನಿರ್ಮಿಸಿಕೊಂಡವರಿಗೆ ಕಾನೂನುಬದ್ಧ ದಾಖಲೆ ಪಡೆಯಲು ಸರ್ಕಾರ ಅವಕಾಶ ಕಲ್ಪಿಸುತ್ತಿದೆ ಎಂದು ತಿಳಿಸಿದರು.

ನೋಂದಣಿಯಾಗದ ದಾಖಲೆಗಳನ್ನು ಹೊಂದಿರುವ ಈ ಮಾಲೀಕರಿಗೆ ತಮ್ಮ ನಿವೇಶನಗಳನ್ನು ಮಾರಾಟ ಮಾಡಲು ಅಥವಾ ಯಾವುದೇ ರೀತಿಯ ವಹಿವಾಟು ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರದ ಈ ಕ್ರಮದಿಂದ ಅವರಿಗೆ ಅನುಕೂಲವಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಬಿಡಿಎ ಸುಧಾರಣೆಯ ಭಾಗವಾಗಿ ಮತ್ತಷ್ಟು ಹೊಸ ಉಪಕ್ರಮಗಳನ್ನು ಘೋಷಿಸಲಾಯಿತು. ಬಿಡಿಎ ಈಗಾಗಲೇ ಹಂಚಿಕೆ ಮಾಡಿರುವ ನಿವೇಶನಗಳ ಹಿಂಭಾಗ ಅಥವಾ ಪಕ್ಕದಲ್ಲಿರುವ, ಪ್ರಾಧಿಕಾರಕ್ಕೆ ಸೇರಿದ 600 ಚದರ ಅಡಿ ವಿಸ್ತೀರ್ಣದ ಸಣ್ಣ ಜಮೀನಿನ ತುಂಡುಗಳನ್ನು ಹಂಚಿಕೆ ಮಾಡಲು ಅರ್ಜಿ ಆಧಾರಿತ ವ್ಯವಸ್ಥೆ ಜಾರಿಗೆ ತರಲಾಗುವುದು. ಇಂತಹ ಹೆಚ್ಚುವರಿ ಜಮೀನು ಪಡೆಯಲು ಅರ್ಹರಾಗಿರುವವರು ತಮ್ಮ ನಿವೇಶನದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ಇದಲ್ಲದೆ, ಗುತ್ತಿಗೆ ಅವಧಿ ಮುಗಿದಿದ್ದರೂ ಇದುವರೆಗೆ ಪೂರ್ಣ ಪ್ರಮಾಣದ ಮಾರಾಟ ಪತ್ರ ನೋಂದಣಿ ಮಾಡಿಸಿಕೊಳ್ಳದ ಸುಮಾರು 20 ಸಾವಿರ ಹಂಚಿಕೆದಾರರಿಗೆ ಅನುಕೂಲ ಕಲ್ಪಿಸಲು 'ಪೂರ್ಣ ಪ್ರಮಾಣದ ಮಾರಾಟ ಪತ್ರ ನೋಂದಣಿ ಮೇಳ' ಆಯೋಜಿಸಲಾಗುವುದು ಎಂದು ಘೋಷಿಸಿದರು. ಈ ಯೋಜನೆಗೂ ಅರ್ಜಿ ಸಲ್ಲಿಸಲು ಡಿಸೆಂಬರ್ 17 ಕೊನೆಯ ದಿನವಾಗಿದೆ. ಅರ್ಹ ಹಂಚಿಕೆದಾರರು ತಮ್ಮ ನಿವೇಶನದ ದಾಖಲೆಗಳೊಂದಿಗೆ ಅಷ್ಟರೊಳಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.

ಪ್ರೋತ್ಸಾಹಕ ನಿವೇಶನಗಳ ಹಂಚಿಕೆ

ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕಾಗಿ ಸ್ವಯಂಪ್ರೇರಿತವಾಗಿ ತಮ್ಮ ಜಮೀನುಗಳನ್ನು ಬಿಡಿಎಗೆ ಬಿಟ್ಟುಕೊಟ್ಟು, ನಗದು ಪರಿಹಾರ ಪಡೆದಿರುವ ಭೂಮಾಲೀಕರಿಗೆ ವಿಶೇಷ ಪ್ರೋತ್ಸಾಹಕ ಯೋಜನೆಯಡಿ ವಸತಿ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ಬಿಡಿಎ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X