ಮೆಟ್ರೊ ಪಿಂಕ್ ಲೈನ್‌, ದೇಶದ ಅತಿದೊಡ್ಡ ಸುರಂಗ LPG ಸಂಗ್ರಹಣಾ ಘಟಕ: ಕರ್ನಾಟಕದಲ್ಲಿ 15,600 ಕೋಟಿ ರೂ. ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ನಾಳೆ ಮಧ್ಯಾಹ್ನ ಸುಮಾರು 1.15ಕ್ಕೆ ಪ್ರಧಾನಿ ಮೋದಿ ಅವರು ಬೆಂಗಳೂರಿನ ಮೆಟ್ರೋ ಪಿಂಕ್ ಲೈನ್‌ನ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಸುಮಾರು 3,470 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಮಾರ್ಗವನ್ನು ಅಭಿವೃದ್ಧಿಪಡಿಸಲಾಗಿದೆ.
PM Modi visit to Karnataka
ಮಂಗಳೂರಿನಲ್ಲಿ ನೂತನ ಭೂಗತ ಎಲ್‌ಪಿಜಿ ಸಂಗ್ರಹಣಾ ಘಟಕ
Updated on: 

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ನವೆಂಬರ್ 13 ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ನಗರ ಸಾರಿಗೆ, ವಿದ್ಯುತ್ ಪ್ರಸರಣ, ನವೀಕರಿಸಬಹುದಾದ ಇಂಧನ, ಪೆಟ್ರೋಲಿಯಂ ಮೂಲಸೌಕರ್ಯ, ತ್ಯಾಜ್ಯ ನಿರ್ವಹಣೆ ಹಾಗೂ ರೈಲ್ವೆ ಸೇರಿದಂತೆ ವಿವಿಧ ಕ್ಷೇತ್ರಗಳ ಒಟ್ಟು 15,600 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಹಾಗೂ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪ್ರಧಾನಿಯವರು ಮೊದಲು ಬೆಂಗಳೂರಿಗೆ ಭೇಟಿ ನೀಡಲಿದ್ದು, ಬಳಿಕ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮೈಸೂರಿಗೆ ತೆರಳಲಿದ್ದಾರೆ.

ನಾಳೆ ಮಧ್ಯಾಹ್ನ ಸುಮಾರು 1.15ಕ್ಕೆ ಪ್ರಧಾನಿ ಮೋದಿ ಅವರು ಬೆಂಗಳೂರಿನ ಮೆಟ್ರೋ ಪಿಂಕ್ ಲೈನ್‌ನ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಸುಮಾರು 3,470 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಮಾರ್ಗವನ್ನು ಅಭಿವೃದ್ಧಿಪಡಿಸಲಾಗಿದೆ.

PM Modi visit to Karnataka
ನಮ್ಮ ಮೆಟ್ರೋ Pink Line ಉದ್ಘಾಟನೆ: ನವೆಂಬರ್ 13ಕ್ಕೆ ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ; ಇಲ್ಲಿದೆ ಸಂಪೂರ್ಣ ವಿವರ!

7.5 ಕಿ.ಮೀ. ಉದ್ದದ ಎಲಿವೇಟೆಡ್ ಮಾರ್ಗದ ಉದ್ಘಾಟನೆಯೊಂದಿಗೆ ಬೆಂಗಳೂರಿನ ಕಾರ್ಯಾಚರಣೆಯಲ್ಲಿರುವ ಮೆಟ್ರೋ ಜಾಲದ ಉದ್ದ 96.1 ಕಿ.ಮೀ.ಯಿಂದ 103.6 ಕಿ.ಮೀ.ಗೆ ವಿಸ್ತರಣೆಯಾಗಲಿದೆ. ಈ ಮಾರ್ಗದಲ್ಲಿ ಐಐಎಂ ಬೆಂಗಳೂರು ಸೇರಿದಂತೆ ಐದು ನಿಲ್ದಾಣಗಳಿವೆ.

ಉದ್ಘಾಟನೆಯ ಭಾಗವಾಗಿ ಪ್ರಧಾನಿ ಮೋದಿ ಅವರು ತಾವರೆಕೆರೆ ನಿಲ್ದಾಣದಿಂದ ಐಐಎಂ ಬೆಂಗಳೂರು ನಿಲ್ದಾಣದವರೆಗೆ ಮೆಟ್ರೋದಲ್ಲಿ ಪ್ರಯಾಣಿಸಲಿದ್ದಾರೆ.

ರೈಲ್ವೆ ಸಂಪರ್ಕ ವ್ಯವಸ್ಥೆಗೂ ಮಹತ್ವದ ಉತ್ತೇಜನ ದೊರೆಯಲಿದ್ದು, ಮಧ್ಯಾಹ್ನ ಸುಮಾರು 2 ಗಂಟೆಗೆ ಪ್ರಧಾನಿ ಮೋದಿ ಅವರು ಯಶವಂತಪುರ-ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.

ಈ ರೈಲು ಸೇವೆಯು ಈಗಾಗಲೇ ಅಸ್ತಿತ್ವದಲ್ಲಿರುವ ಮಂಗಳೂರು-ಮಡಗಾಂವ್ ಮಾರ್ಗವನ್ನು ಬೆಂಗಳೂರಿನವರೆಗೆ ವಿಸ್ತರಿಸಲಿದ್ದು, ರಾಜ್ಯ ರಾಜಧಾನಿಯನ್ನು ಕರಾವಳಿ ಕರ್ನಾಟಕ ಮತ್ತು ಗೋವಾ ರಾಜ್ಯಗಳೊಂದಿಗೆ ಸಂಪರ್ಕಿಸಲಿದೆ.

ನವೆಂಬರ್ 15ರಿಂದ ಎರಡೂ ದಿಕ್ಕುಗಳಲ್ಲಿ ರೈಲಿನ ನಿಯಮಿತ ಸಂಚಾರ ಆರಂಭವಾಗಲಿದೆ. ವಾರದಲ್ಲಿ ಆರು ದಿನ ಸಂಚರಿಸಲಿರುವ ಈ ರೈಲಿಗೆ ಹಾಸನ, ಸಕಲೇಶಪುರ, ಉಡುಪಿ ಮತ್ತು ಕಾರವಾರ ಸೇರಿದಂತೆ 12 ಮಧ್ಯಂತರ ನಿಲ್ದಾಣಗಳಿರಲಿವೆ.

ನಾಳೆಯ ಕಾರ್ಯಕ್ರಮಗಳಲ್ಲಿ ಇಂಧನ ಮೂಲಸೌಕರ್ಯ ಯೋಜನೆಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಕೊಪ್ಪಳ ಮತ್ತು ಗದಗ ಜಿಲ್ಲೆಗಳ ನವೀಕರಿಸಬಹುದಾದ ಇಂಧನ ವಲಯಗಳಿಗಾಗಿ 4,450 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ವಿದ್ಯುತ್ ಪ್ರಸರಣ ಯೋಜನೆಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಈ ಯೋಜನೆಗಳಿಂದ ಸುಮಾರು 2 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನವನ್ನು ಗ್ರಿಡ್‌ಗೆ ಪೂರೈಸಲು ಸಾಧ್ಯವಾಗಲಿದೆ.

ಇದಲ್ಲದೆ, ದಾವಣಗೆರೆ ಮತ್ತು ಬಳ್ಳಾರಿಯಲ್ಲಿ 4,550 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಹೆಚ್ಚುವರಿ ವಿದ್ಯುತ್ ಪ್ರಸರಣ ಯೋಜನೆಗಳು ಕರ್ನಾಟಕದ ನವೀಕರಿಸಬಹುದಾದ ಇಂಧನ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಲಿವೆ.

ಮಂಗಳೂರಿನಲ್ಲಿ 850 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗಿರುವ ಭಾರತದ ಅತಿದೊಡ್ಡ ಭೂಗತ ಎಲ್‌ಪಿಜಿ ಸಂಗ್ರಹಣಾ ಗುಹೆಯನ್ನು (LPG Storage Cavern) ಪ್ರಧಾನಿ ಮೋದಿ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಘಟಕವು 80,000 ಮೆಟ್ರಿಕ್ ಟನ್ ಸಂಗ್ರಹ ಸಾಮರ್ಥ್ಯ ಹೊಂದಿದೆ.

ಈ ಘಟಕದಲ್ಲಿ ನವ ಮಂಗಳೂರು ಬಂದರಿನಿಂದ ಮುಖ್ಯ ಟರ್ಮಿನಲ್‌ವರೆಗೆ ಸಂಪರ್ಕ ಕಲ್ಪಿಸುವ 9.4 ಕಿ.ಮೀ. ಉದ್ದದ ಪೈಪ್‌ಲೈನ್ ಕೂಡ ಸೇರಿದೆ.

ಇದಲ್ಲದೆ, ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಪುನರಾಭಿವೃದ್ಧಿಪಡಿಸಲಾದ ನಾಲ್ಕು ರೈಲು ನಿಲ್ದಾಣಗಳನ್ನು ಹಾಗೂ ಕಾಸ್ಮಾಸ್-ಮೈಸೂರು ತಾರಾಲಯವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಈ ಯೋಜನೆಗಳು ರೈಲ್ವೆ ಮೂಲಸೌಕರ್ಯ ಮತ್ತು ಖಗೋಳ ವಿಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಪ್ರಗತಿಗೆ ಸಾಕ್ಷಿಯಾಗಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X