ಇಂದು ಬೆಂಗಳೂರು, ಮೈಸೂರಿಗೆ ಪ್ರಧಾನಿ ಮೋದಿ ಭೇಟಿ; 15,600 ಕೋಟಿ ರೂ ಯೋಜನೆಗಳಿಗೆ ಚಾಲನೆ

ಕರ್ನಾಟಕದಲ್ಲಿ ವಿವಿಧ ಯೋಜನೆಗೆ ಹಣಕಾಸು ಒದಗಿಸುವ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ರಾಜಕೀಯ ವಾಕ್ಸಮರ ನಡೆಯುತ್ತಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೇನು ಕೆಲವೇ ಕ್ಷಣಗಳಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
PM Narendra Modi
ಪ್ರಧಾನ ಮಂತ್ರಿ ನರೇಂದ್ರ ಮೋದಿ
Updated on: 

ಬೆಂಗಳೂರು: ಕರ್ನಾಟಕದಲ್ಲಿ ವಿವಿಧ ಯೋಜನೆಗೆ ಹಣಕಾಸು ಒದಗಿಸುವ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ರಾಜಕೀಯ ವಾಕ್ಸಮರ ನಡೆಯುತ್ತಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೇನು ಕೆಲವೇ ಕ್ಷಣಗಳಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಲೈನ್‌ಗೆ ಚಾಲನೆ ನೀಡಲು ಸಜ್ಜಾಗಿದ್ದಾರೆ. ಯೋಜನೆಯ ಒಟ್ಟು ವೆಚ್ಚದಲ್ಲಿ ರಾಜ್ಯ ಸರ್ಕಾರ ಶೇ.84ರಷ್ಟು ಹಾಗೂ ಕೇಂದ್ರ ಸರ್ಕಾರ ಶೇ.16ರಷ್ಟು ಭರಿಸುತ್ತಿದೆ ಎಂದು ಕಾಂಗ್ರೆಸ್ ನೇತೃತ್ವದ ಸರ್ಕಾರ ಹೇಳಿಕೊಂಡಿದೆ. ಆದರೆ, ಈ ಅಂಕಿಅಂಶಗಳನ್ನು ಬಿಜೆಪಿ ಪ್ರಶ್ನಿಸಿದ್ದು, ಕೇಂದ್ರದ ಪಾಲು ಶೇ.54ರಷ್ಟಿದೆ ಎಂದು ಸಂಸದ ತೇಜಸ್ವಿ ಸೂರ್ಯ ಪ್ರತಿಪಾದಿಸಿದ್ದಾರೆ.

ಹಣಕಾಸು ಹಂಚಿಕೆ ವಿಚಾರದ ವಿವಾದದ ಬೆನ್ನಲ್ಲೇ, ಕಾರ್ಯಕ್ರಮದಲ್ಲಿ ತಮಗೆ ಮಾತನಾಡಲು ನಿಗದಿಪಡಿಸಿದ್ದ ಅವಕಾಶವನ್ನು ಕೈಬಿಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ಮುನ್ನ ಎರಡೂ ಪಕ್ಷಗಳ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.

ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಬೆಂಗಳೂರಿನಲ್ಲಿ ಸಿದ್ಧತೆ

ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆ ಹಾಗೂ ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡುತ್ತಿದ್ದು, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಪ್ರಧಾನಿ ಮೋದಿ ಅವರು ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸುವುದರ ಜತೆಗೆ, ಎಸ್-ವ್ಯಾಸ ವಿಶ್ವವಿದ್ಯಾಲಯದಲ್ಲಿ ಲೇಖಕ ಎಚ್.ವಿ. ಶೇಷಾದ್ರಿ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿಯೂ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದ ಕುರಿತು ಮಾತನಾಡಿದ ವ್ಯಾಸ ಸೊಸೈಟಿಯ ಅಧ್ಯಕ್ಷ ಎಚ್.ಆರ್. ನಾಗೇಂದ್ರ, ಪ್ರಶಾಂತಿ ಕುಟೀರದಲ್ಲಿ 50 ವರ್ಷಗಳ ಸೇವೆಯನ್ನು ಸ್ಮರಿಸುವ ಸುವರ್ಣ ಮಹೋತ್ಸವ ಇದಾಗಿದೆ. ಯೋಗ ಕ್ಷೇತ್ರದಲ್ಲಿನ ಸಂಶೋಧನೆಗೆ ಸಂಸ್ಥೆ ನೀಡಿರುವ ಕೊಡುಗೆಯನ್ನು ಅವರು ವಿವರಿಸಿದರು.

ಪ್ರಶಾಂತಿ ಕುಟೀರದಲ್ಲಿ 50 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಆಚರಿಸುತ್ತಿದ್ದೇವೆ. ಸಂಶೋಧನಾ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ನಮ್ಮ ಸಂಸ್ಥೆ ಗುರುತಿಸಿಕೊಂಡಿದೆ. ಯೋಗದ ಉನ್ನತ ಆಯಾಮಗಳನ್ನು, ಅಂದರೆ ಸಮಾಧಿ ಸ್ಥಿತಿಯನ್ನು ಅಧ್ಯಯನ ಮಾಡಲು 'ಋತಂಭರ' ಎಂಬ ಅತ್ಯಂತ ವಿಶಿಷ್ಟ ಸಂಶೋಧನಾ ಪ್ರಯೋಗಾಲಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಾವು ಮುಂದುವರಿಯುತ್ತಿದ್ದೇವೆ ಎಂದು ನಾಗೇಂದ್ರ ಅವರು ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದರು.

ಪ್ರಧಾನಿ ಭೇಟಿಯ ಈ ವಿಶೇಷ ಸಂದರ್ಭದಲ್ಲಿ ತಿರುವನಂತಪುರಂ ಕ್ಯಾಂಪಸ್‌ಗೂ ಚಾಲನೆ ನೀಡಲಾಗುವುದು ಎಂದು ಅವರು ಘೋಷಿಸಿದರು.

ಪ್ರಧಾನಿಯವರು ಆಗಮಿಸುತ್ತಿರುವ ಈ ವಿಶೇಷ ಸಂದರ್ಭದಲ್ಲಿ ನಮ್ಮ ತಿರುವನಂತಪುರಂ ಕ್ಯಾಂಪಸ್‌ನ್ನೂ ಆರಂಭಿಸಲಿದ್ದೇವೆ ಎಂದು ಹೇಳಿದರು.

ಜಗತ್ತಿನಾದ್ಯಂತ ಸಂಸ್ಥೆಯ ಬೋಧಕ ವರ್ಗ, ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ನೀಡಿರುವ ಕೊಡುಗೆಗಳನ್ನು ನಾಗೇಂದ್ರ ಸ್ಮರಿಸಿದರು. ಕಾರ್ಯಕ್ರಮದಲ್ಲಿ ಆನ್‌ಲೈನ್ ಮೂಲಕ ಭಾಗವಹಿಸುವಂತೆ ಸಾರ್ವಜನಿಕರಿಗೆ ಆಹ್ವಾನ ನೀಡಿದರು.

ಈ ಶುಭ ಸಂದರ್ಭದಲ್ಲಿ ಜಗತ್ತಿನಾದ್ಯಂತ ನಮ್ಮ ಬೋಧಕ ವರ್ಗ, ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ನೀಡಿರುವ ಮಹತ್ವದ ಕೊಡುಗೆಗಳನ್ನು ಸ್ಮರಿಸುತ್ತೇವೆ. ನೀವೆಲ್ಲರೂ ಆನ್‌ಲೈನ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನಿಸುತ್ತೇವೆ ಎಂದರು.

ಇದೇ ವೇಳೆ, ಎಚ್.ವಿ. ಶೇಷಾದ್ರಿ ಅವರ ಜನ್ಮಶತಮಾನೋತ್ಸವದ ಸ್ಮರಣಾರ್ಥ 1,000 ಅತ್ಯಾಧುನಿಕ ಕೃತಕ ಅಂಗಗಳನ್ನು ಉಚಿತವಾಗಿ ವಿತರಿಸುವುದಾಗಿ ಎಸ್-ವ್ಯಾಸದ ಅಂತಾರಾಷ್ಟ್ರೀಯ ವ್ಯವಹಾರಗಳ ಮುಖ್ಯ ಸಲಹೆಗಾರ ಪ್ರೇಮ್ ಭಂಡಾರಿ ಘೋಷಿಸಿದರು.

ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ಎಸ್-ವ್ಯಾಸ ಸಂಸ್ಥೆಯ ಸಂಸ್ಥಾಪಕ ಪದ್ಮಭೂಷಣ ಡಿ.ಆರ್. ಮೆಹ್ತಾ ಅವರೊಂದಿಗೆ ಚರ್ಚಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು, ಯೋಗದ ಜಾಗತಿಕ ವ್ಯಾಪ್ತಿಯ ಬಗ್ಗೆಯೂ ಅವರು ಸಂತಸ ವ್ಯಕ್ತಪಡಿಸಿದರು.

ಇಂದು 100ಕ್ಕೂ ಹೆಚ್ಚು ದೇಶಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ ಎಂಬುದು ಅತ್ಯಂತ ಸಂತೋಷದ ವಿಚಾರ ಎಂದು ಹೇಳಿದರು. ಎಸ್-ವ್ಯಾಸ ಸಂಸ್ಥೆಯ ವಿದೇಶಿ ವಿಸ್ತರಣೆಗೆ ತಾವು ಪ್ರಯತ್ನಿಸುತ್ತಿರುವುದಾಗಿಯೂ ತಿಳಿಸಿದರು.

ಗುರುಗಳ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಶೀಘ್ರದಲ್ಲೇ ನ್ಯೂಯಾರ್ಕ್‌ನಲ್ಲಿ ಎಸ್-ವ್ಯಾಸ ಕೇಂದ್ರವನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X