

ಕೊಪ್ಪಳ: ಬಿಜೆಪಿಯವರಿಗೆ ವೋಟು ಹಾಕಿದ್ರೆ 5 ಗ್ಯಾರಂಟಿ ಯೋಜನೆಗಳು ಬಂದ್ ಆಗುತ್ತೆ ಅಂತ ಸಚಿವ ಶಿವರಾಜ್ ತಂಗಡಗಿ ಶುಕ್ರವಾರ ಬಹಿರಂಗ ಸಭೆಯಲ್ಲೇ ಹೇಳಿಕೆ ನೀಡಿದ್ದಾರೆ.
ಕಾರಟಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ಮತ ಹಾಕಿದರೆ ಗೃಹಲಕ್ಷ್ಮಿಯರಿಗೆ 2,000 ಬಂದ್, ಅನ್ನಭಾಗ್ಯ ಬಂದ್, ಉಚಿತ ಬಸ್ ಕಾರ್ಯಕ್ರಮ ಸ್ತ್ರೀಶಕ್ತಿ, ಯುವನಿಧಿಯೂ ಬಂದ್ ಆಗಲಿದೆ. 100ಕ್ಕೆ 100ರಷ್ಟು ಬಂದ್ ಆಗಲಿದೆ ಅಂತ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿಯವರು ಅದಾನಿ, ಅಂಭಾನಿಗೆ ಸಾಲ ಮನ್ನಾ ಮಾಡ್ತಾರೆ. ಸಾಮಾನ್ಯ ಜನರಿಗೆ ಯಾಕೆ ಮಾಡಲ್ಲ. ರೈತರಿಗೆ ಯಾಕೆ ಮಾಡಲ್ಲ, ರೈತರ ಬಗ್ಗೆ ಕಾಳಜಿ ಇದ್ರೆ ಸಾಲ ಮನ್ನಾ ಮಾಡಲಿ. ನಾನು ವೋಟಿಗಾಗಿ ಹೇಳಲ್ಲ, ನಾವು ಹೇಳಿದಂತೆ, ಗ್ಯಾರಂಟಿ ಕೊಟ್ಟಿದ್ದೇವೆ ಎಂದಿದ್ದಾರೆ.
ಬಿಜೆಪಿಯವರು ಹೆಂಗ್ ಗ್ಯಾರಂಟಿ ಯೋಜನೆ ಕೊಡ್ತಾರೆ ಅಂತಿದ್ದರು ಈಗ ಎಲ್ಲಾ ಯೋಜನೆ ಕೊಟ್ಟಿದ್ದೀವಿ. ಅವರು ಬಸ್ ಕೊಡೋಕೆ ಆಗಲ್ಲ. ಆದರೆ ನಾವು ಬಸ್ ಕೊಟ್ಟಿದ್ದೇವೆ. ನಿಮ್ಮ ಕೈಗೆ ಸ್ಟೇರಿಂಗ್ ಮಾತ್ರ ಕೊಟ್ಟಿಲ್ಲ. ಸಚಿವನಾದ ಮೇಲೆ ಯಾರ ಕೈಗೂ ಸಿಗೋದಿಲ್ಲ ಅಂತಾರೆ. ಆದರೆ ಸಚಿವನಾದ ನಂತರ ವಾರದಲ್ಲಿ 2-3 ದಿನ ಕ್ಷೇತ್ರದಲ್ಲಿ ಇರ್ತೇನೆ ಎಂದು ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಆಗುತ್ತಿಲ್ಲ ಎಂದು ಬಿಜೆಪಿಯವರು ಬೊಬ್ಬೆ ಹಾಕುತ್ತಿದ್ದಾರೆ. ಹಾಗಾದರೆ ಅವರು ಅಧಿಕಾರಕ್ಕೆ ಬಂದ್ರೆ ಗ್ಯಾರಂಟಿ ಮುಂದುವರೆಸುತ್ತೇವೆ ಅಂತ ಹೇಳಲಿ. ತಾಕತ್ ಇದೆಯಾ ಬಿಜೆಪಿಯವರಿಗೆ ಎಂದು ವಾಗ್ದಾಳಿ ನಡೆಸಿದ್ದಾರೆ.