ಪಂಚಾಯ್ತಿ ನಿಮ್ಮಪ್ಪಂದು ಅಂದುಕೊಂಡಿದ್ದೀಯಾ? ವಸೂಲಿಗೆ ಇಳಿದಿದ್ದೀರಾ, ಹಿಂದೆ ರಾಕ್ಷಸರಾಗಿದ್ರಾ? PDOಗೆ ಉಪಲೋಕಾಯುಕ್ತರ ತರಾಟೆ!

ಪಿಡಿಒ ಇಲ್ಲಿಗೆ ರಾಜನಂತೆ ಆಗಿದ್ದಾನೆ. ನೆಪ ಹೇಳಿದರೆ ಕಪಾಳಕ್ಕೆ ಹೊಡೆಯುತ್ತೇನೆ. ಕಲಬುರಗಿ, ರಾಯಚೂರಿಗೆ ಹೋಗುತ್ತೀಯಾ. ಪಂಚಾಯಿತಿ ನಿಮ್ಮ ಅಪ್ಪಂದು ಅಂದುಕೊಂಡಿದ್ದೀಯಾ? ಎಂದು ಗುಡುಗಿದರು.
Deputy Lokayukta b veerappa
ಉಪಲೋಕಾಯುಕ್ತ ಬಿ.ವೀರಪ್ಪ
Updated on: 

ಕೋಲಾರ: ಕೋಲಾರ ತಾಲ್ಲೂಕಿನ ನರಸಾಪುರ ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರ, ರಾಜಕಾಲುವೆ ಒತ್ತುವರಿ ಮತ್ತು ಕೆರೆಗೆ ಕೊಳಚೆ ನೀರು ಹರಿಯುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ ಉಪಲೋಕಾಯುಕ್ತ ಬಿ.ವೀರಪ್ಪ ಅವರು ಪಿಡಿಒ ಮುನಿರಾಜುರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಗ್ರಾಪಂ ಕಚೇರಿಗೆ ಭೇಟಿ ನೀಡಿದ ವೀರಪ್ಪ ಅವರು ಮೊದಲು ಹಾಜರಾತಿ ಪುಸ್ತಕ ಪರಿಶೀಲಿಸಿದರು. ಹಲವರು ಸಹಿ ಹಾಕದೇ ಇರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು. ನಂತರ ಪಿಡಿಒ ಮುನಿರಾಜು ಅವರ ಮೊಬೈಲ್ ಪಡೆದು ಹಣದ ವಹಿವಾಟನ್ನು ಪರಿಶೀಲಿಸಿದರು. ಪಿಡಿಒ ಹಾಗೂ ಅವರ ಪತ್ನಿಯ ಬ್ಯಾಂಕ್ ಸ್ಟೇಟ್‌ಮೆಂಟ್ ಕಳಿಸುವಂತೆ ಖಡಕ್ ಸೂಚನೆ ನೀಡಿದರು.

ಪಂಚಾಯಿತಿ ಕಟ್ಟಡದಲ್ಲಿ ಲೋಕಾಯುಕ್ತ ಮೊಬೈಲ್ ನಂಬರ್ ಫಲಕ ಯಾಕೆ ಹಾಕಿಸಿಲ್ಲ ಎಂದು ಪ್ರಶ್ನಿಸಿದ ವೀರಪ್ಪ, ಜನರಿಗೆ ಸಮಸ್ಯೆಯಾದರೆ ಯಾರ ಬಳಿ ಹೇಳಿಕೊಳ್ಳಬೇಕು? ಪಿಡಿಒ ಇಲ್ಲಿಗೆ ರಾಜನಂತೆ ಆಗಿದ್ದಾನೆ. ನೆಪ ಹೇಳಿದರೆ ಕಪಾಳಕ್ಕೆ ಹೊಡೆಯುತ್ತೇನೆ. ಕಲಬುರಗಿ, ರಾಯಚೂರಿಗೆ ಹೋಗುತ್ತೀಯಾ. ಪಂಚಾಯಿತಿ ನಿಮ್ಮ ಅಪ್ಪಂದು ಅಂದುಕೊಂಡಿದ್ದೀಯಾ? ಎಂದು ಗುಡುಗಿದರು. ಅವರ ಆಕ್ರೋಶಕ್ಕೆ ಅಧಿಕಾರಿಗಳು ತತ್ತರಿಸಿದರು.

ನರಸಾಪುರದಲ್ಲಿ ರಾಜಕಾಲುವೆ ಮೇಲೆ ಸೊಸೈಟಿ ಕಟ್ಟಡದ ಕಾಂಪೌಂಡ್ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ವೀರಪ್ಪ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮೊದಲು ಪಿಡಿಒ ಮುನಿರಾಜು ವಿರುದ್ಧ ಹರಿಹಾಯ್ದ ಅವರು, ಒತ್ತುವರಿ ಕಣ್ಣಿಗೆ ಕಾಣಿಸುವುದಿಲ್ಲವೇ? ಹಣ ಪಡೆದು ಜೀವನ ನಡೆಸುವುದಷ್ಟೇ ನಿನ್ನ ಕೆಲಸನಾ? ಎಂದು ಪ್ರಶ್ನಿಸಿದರು. ನಂತರ ಸಣ್ಣ ನೀರಾವರಿ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಮೇಲೂ ಮುಗಿಬಿದ್ದರು. ರೈತ ನಾಯಕ ಸಿ.ಬೈರೇಗೌಡ ಸಹಕಾರ ಭವನದ ಹಿಂಭಾಗದಲ್ಲಿರುವ ಪಶು ಇಲಾಖೆ ಆಸ್ಪತ್ರೆಗೆ ಹೋಗಲೂ ಸರಿಯಾಗಿ ಜಾಗವಿಲ್ಲ ಎಂದು ಗ್ರಾಮಸ್ಥರು ದೂರಿದರು.

ನರಸಾಪುರ ಕೆರೆಯಲ್ಲಿ ಬೆಳೆದಿರುವ ಜೊಂಡನ್ನು ತೆರವುಗೊಳಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ವೀರಪ್ಪ ಸೂಚನೆ ನೀಡಿದರು. ಈ ವೇಳೆ ನರಸಾಪುರ ಸೇರಿದಂತೆ ವಿವಿಧ 6 ಕಡೆಯಿಂದ ತ್ಯಾಜ್ಯ ನೀರು ಕೆರೆಗೆ ಹರಿದು ಬರುತ್ತಿರುವ ಬಗ್ಗೆ ಅಧಿಕಾರಿಗಳು ಗಮನಕ್ಕೆ ತಂದರು. ಇದರಿಂದಲೇ ಜೊಂಡು ಬೆಳೆದಿದೆ ಎಂದರು. ಕೆರೆ ಸ್ವಚ್ಛ ಮಾಡಲು ಕನಿಷ್ಠ ಎರಡು ತಿಂಗಳು ಬೇಕು ಎಂದರು. ಆಗ ವೀರಪ್ಪ, "ಯಾವುದೇ ಕಾರಣಕ್ಕೂ ಕೊಳಚೆ ನೀರನ್ನು ಕೆರೆಗೆ ಹರಿಸಬಾರದು. ಪಂಚಾಯಿತಿ ಮಟ್ಟದಲ್ಲಿ ಹಿಂಗುಗುಂಡಿ ಮಾಡಿಕೊಳ್ಳಬೇಕು" ಎಂದು ಖಡಕ್ ಸೂಚನೆ ನೀಡಿದರು.

Deputy Lokayukta b veerappa
ಬಾಲಕಿಯರ ಕ್ರೀಡಾ ವಸತಿ ನಿಲಯದಲ್ಲಿನ ಅವ್ಯವಸ್ಥೆ ಕಂಡು ಉಪಲೋಕಾಯುಕ್ತ ಗರಂ; ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶ

ಇದಕ್ಕೂ ಮೊದಲು ಉಪಲೋಕಾಯುಕ್ತರು ಲಕ್ಷ್ಮಿಸಾಗರ ಕೆರೆಗೆ ತೆರಳಿ ಕೆ.ಸಿ.ವ್ಯಾಲಿ ನೀರಿನ ಸ್ಥಿತಿಗತಿ ಪರಿಶೀಲಿಸಿದರು. ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸುವ ಉದ್ದೇಶದಿಂದ ಕೆ.ಸಿ.ವ್ಯಾಲಿ ಹರಿದು ಹೋಗಿರುವ ಗ್ರಾಮಗಳಲ್ಲಿನ ಹಾಲು, ಕೊಳವೆಬಾವಿ ನೀರು, ತರಕಾರಿ ಮಾದರಿ ಪಡೆದು ಕಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X