ಮುಂದಿನ ವರ್ಷದಿಂದ ದ್ವಿಭಾಷಾ ಮಾಧ್ಯಮ ಜಾರಿ: KPS ಸ್ಕೂಲ್​ಗಳಿಗೆ ಉಚಿತ ಬಸ್ ಸೌಲಭ್ಯ; ಸಚಿವ ಮಧು ಬಂಗಾರಪ್ಪ

ಅನೇಕರು ನೆರೆಯ ಹಳ್ಳಿಗಳಿಂದ ಶಾಲೆಗೆ ಬರುತ್ತಿದ್ದು, ಬಸ್ ಸೌಲಭ್ಯವಿಲ್ಲದ ಕಾರಣ ಸಮಯಕ್ಕೆ ಸರಿಯಾಗಿ ಶಾಲೆ ತಲುಪಲು ತೊಂದರೆ ಅನುಭವಿಸುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಸಚಿವರ ಗಮನಕ್ಕೆ ತಂದರು.
Madhu Bangarappa
ಮಧು ಬಂಗಾರಪ್ಪ
Updated on: 

ಶಿವಮೊಗ್ಗ: ಮುಂದಿನ ಶೈಕ್ಷಣಿಕ ವರ್ಷದ ಆರಂಭದೊಂದಿಗೆ, ಅಂದರೆ ಮುಂದಿನ ವರ್ಷದ ಜೂನ್‌ನಿಂದ ರಾಜ್ಯದಾದ್ಯಂತ ಇರುವ ಎಲ್ಲಾ 'ಕರ್ನಾಟಕ ಪಬ್ಲಿಕ್ ಶಾಲೆ'ಗಳಿಗೆ (KPS) ಬಸ್ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.

ಸಿರಾ ತಾಲೂಕಿನ ಚಿಕ್ಕನಹಳ್ಳಿಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಗೆ ಸೋಮವಾರ ಭೇಟಿ ನೀಡಿ, ಅಲ್ಲಿನ ಶೈಕ್ಷಣಿಕ ಚಟುವಟಿಕೆಗಳು ಮತ್ತು ಮೂಲಸೌಕರ್ಯಗಳನ್ನು ಪರಿಶೀಲಿಸಿದ ನಂತರ ಅವರು ಈ ವಿಷಯ ತಿಳಿಸಿದರು.

ಅನೇಕರು ನೆರೆಯ ಹಳ್ಳಿಗಳಿಂದ ಶಾಲೆಗೆ ಬರುತ್ತಿದ್ದು, ಬಸ್ ಸೌಲಭ್ಯವಿಲ್ಲದ ಕಾರಣ ಸಮಯಕ್ಕೆ ಸರಿಯಾಗಿ ಶಾಲೆ ತಲುಪಲು ತೊಂದರೆ ಅನುಭವಿಸುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರವು ಬಸ್ ಸೇವೆಯನ್ನು ಒದಗಿಸಲಿದೆ ಎಂದು ಭರವಸೆ ನೀಡಿದರು.

ಕರ್ನಾಟಕ ಪಬ್ಲಿಕ್ ಶಾಲೆಗಳ (ಕೆಪಿಎಸ್) ಅಭಿವೃದ್ಧಿ ಮತ್ತು ಉನ್ನತೀಕರಣಕ್ಕಾಗಿ ರಾಜ್ಯ ಸರ್ಕಾರವು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು, ಪ್ರಾದೇಶಿಕ ಅಭಿವೃದ್ಧಿ ಮಂಡಳಿಗಳು, ಕಾರ್ಪೊರೇಟ್ ಸಂಸ್ಥೆಗಳು ಹಾಗೂ ತನ್ನದೇ ಬಜೆಟ್ ಮೂಲಕ ಬೃಹತ್ ಅನುದಾನವನ್ನು ಕ್ರೋಢೀಕರಿಸುತ್ತಿದೆ. ಈ ಯೋಜನೆಗೆ ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) 2,500 ಕೋಟಿ ರೂ ನೀಡಲಿದ್ದು, ಸರ್ಕಾರ ಪ್ರತಿ ಶಾಲೆಗೆ ಸರಾಸರಿ 2 ರಿಂದ 4 ಕೋಟಿ ರೂ ವೆಚ್ಚ ಮಾಡಲಿದೆ ಎಂದರು.

Madhu Bangarappa
ಮಕ್ಕಳಲ್ಲಿ ಕೆಟ್ಟ ವಿಚಾರಗಳನ್ನು ಬಿತ್ತುವುದೇ BJP ನಾಯಕರ ಚಾಳಿ; ಹರೀಶ್ ಪೂಂಜಾಗೆ ಕನಿಷ್ಠ ಜ್ಞಾನ ಇಲ್ಲವೇ? ಕಾನೂನು ಕ್ರಮಕ್ಕೆ ಮಧು ಬಂಗಾರಪ್ಪ ಸೂಚನೆ; Video

ಕೆಪಿಎಸ್ ಶಾಲೆಗಳ ವಿಸ್ತರಣೆ ಮತ್ತು ಉನ್ನತೀಕರಣಕ್ಕೆ ಈಗಾಗಲೇ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದ್ದು, ಈ ಮಹತ್ವಾಕಾಂಕ್ಷಿ ಕಾರ್ಯಕ್ರಮದ ಉದ್ಘಾಟನೆಗೆ ಮುಖ್ಯಮಂತ್ರಿಗಳು ಆಗಮಿಸಬೇಕೆಂಬ ಆಸೆ ಮತ್ತು ವಿಶ್ವಾಸವಿದೆ. ಈ ಶಾಲೆಗಳಲ್ಲಿ ಸುಸಜ್ಜಿತ ಕಟ್ಟಡಗಳು, ಸ್ಮಾರ್ಟ್ ಕ್ಲಾಸ್‌ಗಳು, ವಿಜ್ಞಾನ ಮತ್ತು ಕಂಪ್ಯೂಟರ್ ಪ್ರಯೋಗಾಲಯಗಳು, ಗ್ರಂಥಾಲಯ, ಶುದ್ಧ ಕುಡಿಯುವ ನೀರು ಹಾಗೂ ಉತ್ತಮ ಶೌಚಾಲಯದ ವ್ಯವಸ್ಥೆ ಇರಲಿದೆ.

ಅಲ್ಲದೆ, ಮುಂಬರುವ ಜೂನ್ ತಿಂಗಳಿನಿಂದ ರಾಜ್ಯದ ಎಲ್ಲಾ 1,600 ಕೆಪಿಎಸ್ ಶಾಲೆಗಳ ಮಕ್ಕಳ ಸಾರಿಗೆ ವ್ಯವಸ್ಥೆಗಾಗಿ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದರು. ಇದೇ ವೇಳೆ, ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಸಿಇಟಿ ಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X