

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದೊಳಗೆ ಸ್ಕೂಟರ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕಾಡಾನೆಯನ್ನು ಕಲ್ಲು ಹೊಡೆದು ಕೆಣಕುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಅವರಲ್ಲಿ ಒಬ್ಬ ವ್ಯಕ್ತಿ ಆನೆಯ ಸಮೀಪ ಕಲ್ಲು ಎಸೆದು, ಆನೆ ತಮ್ಮತ್ತ ಬರುತ್ತಿರುವಂತೆ ಕಂಡಾಗ ಅಲ್ಲಿಂದ ಓಡಿ ಹೋಗುತ್ತಾರೆ.
ಅನೇಕರು ಈ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಸ್ತೆಯ ಬದಿಯಲ್ಲಿ ನಿಂತಿದ್ದ ಆನೆಯನ್ನು ಗಮನಿಸಿದ ಇಬ್ಬರು ವ್ಯಕ್ತಿಗಳು ಸ್ಕೂಟರ್ ನಿಲ್ಲಿಸುವ ದೃಶ್ಯ ವಿಡಿಯೋದಲ್ಲಿದೆ.
ವಿಡಿಯೋದಲ್ಲಿ ಹಿಂಬದಿ ಸವಾರ ಸ್ಕೂಟರ್‌ನಿಂದ ಇಳಿದು, ಆನೆಯತ್ತ ಗಮನವಿಟ್ಟುಕೊಂಡೇ ರಸ್ತೆಯ ಬದಿಗೆ ನಡೆದು ಹೋಗುತ್ತಾನೆ. ಬಳಿಕ ಕಲ್ಲೊಂದನ್ನು ಎತ್ತಿಕೊಂಡು ಆನೆಯಿಂದ ಕೆಲವೇ ಇಂಚುಗಳಷ್ಟು ದೂರದಲ್ಲಿ ಎಸೆಯುತ್ತಾನೆ. ಆನೆ ತನ್ನನ್ನು ಬೆನ್ನಟ್ಟಬಹುದು ಎಂಬುದು ಅರಿವಾದಂತೆ ನಗುತ್ತಾ ಸ್ಕೂಟರ್‌ನತ್ತ ಓಡಿ ಬರುತ್ತಾನೆ.
ಈ ಘಟನೆಯನ್ನು ನೋಡುತ್ತಾ ಸ್ಕೂಟರ್ ಚಾಲಕನೂ ನಗುತ್ತಿರುವುದು ಕಂಡುಬಂದಿದೆ. ಬಳಿಕ ಸ್ಕೂಟರ್ ಏರುತ್ತಾನೆ. ಇಬ್ಬರೂ ನಗುತ್ತಲೇ ಅಲ್ಲಿಂದ ತೆರಳುತ್ತಾರೆ.
ಅಭಯಾರಣ್ಯಗಳು ಕಾಡುಪ್ರಾಣಿಗಳ ವಾಸಸ್ಥಾನ, ಅಲ್ಲಿ ಕಾಡುಪ್ರಾಣಿಗಳು ತಮ್ಮ ಮನಸೋ ಇಚ್ಛೆ ವಾಸಿಸುತ್ತಿರುತ್ತವೆ. ಕಾಡುಪ್ರಾಣಿಗಳನ್ನು ಮನರಂಜನೆಯ ವಸ್ತುಗಳಂತೆ ಪರಿಗಣಿಸಬಾರದು ಎಂಬ ನಿಯಮವೇ ಅರಣ್ಯ ಕಾಯ್ದೆಯಲ್ಲಿ ಇರುತ್ತದೆ. ಇಬ್ಬರೂ ಉದ್ದೇಶಪೂರ್ವಕವಾಗಿ ಆನೆಯನ್ನು ಕೆಣಕಿ ಪ್ರಚೋದಿಸಿದ್ದಾರೆ. ಇಂತಹ ವರ್ತನೆಯಿಂದ ಅವರಷ್ಟೇ ಅಲ್ಲದೆ, ಇತರ ಪ್ರಯಾಣಿಕರ ಜೀವಕ್ಕೂ ಅಪಾಯ ಉಂಟಾಗಬಹುದು.
ಆನೆಗಳಿಗೆ ನಿರಂತರವಾಗಿ ಕಿರುಕುಳ ನೀಡುವುದರಿಂದ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗಬಹುದು, ಪ್ರವಾಸಿಗರು ವಾಹನದೊಳಗೇ ಇರಬೇಕು, ಪ್ರಾಣಿಗಳಿಗೆ ತೊಂದರೆ ನೀಡಲು ವಾಹನ ನಿಲ್ಲಿಸಬಾರದು ಮತ್ತು ವನ್ಯಜೀವಿಗಳು ಯಾವುದೇ ಅಡಚಣೆಯಿಲ್ಲದೆ ಸಂಚರಿಸಲು ಅವಕಾಶ ಮಾಡಿಕೊಡಬೇಕು ಎಂದು ಅರಣ್ಯ ಇಲಾಖೆ ಕೂಡ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಲೇ ಇರುತ್ತದೆ.
ಕ್ರಮ ಕೈಗೊಳ್ಳುವಂತೆ ಸಚಿವರ ಆದೇಶ
ಈ ವಿಡಿಯೋಗೆ ಅರಣ್ಯ, ಪರಿಸರ ಮತ್ತು ಪರಿಸರ ವಿಜ್ಞಾನ ಸಚಿವ ರಾಮಲಿಂಗಾ ರೆಡ್ಡಿ ಅವರೂ ಪ್ರತಿಕ್ರಿಯಿಸಿದ್ದು, ಅರಣ್ಯದೊಳಗೆ ಆನೆಯ ಮೇಲೆ ಕಲ್ಲು ತೂರಿದ ಈ ‘ನಾಚಿಕೆಗೇಡಿನ ಕೃತ್ಯ’ವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವೀಡಿಯೊವನ್ನು ನಾನು ವೈಯಕ್ತಿಕವಾಗಿ ವೀಕ್ಷಿಸಿದ್ದೇನೆ. ಸದರಿ ವೀಡಿಯೊದಲ್ಲಿ ನಾಗರಹೊಳೆ ಅರಣ್ಯ ವ್ಯಾಪ್ತಿಯ ರಸ್ತೆ ಬದಿಯಲ್ಲಿದ್ದ ಆನೆಯ ಮೇಲೆ KA 09 HY 0257 ನೋಂದಣಿ ಸಂಖ್ಯೆಯ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಕಲ್ಲುಗಳನ್ನು ತೂರಿ, ವನ್ಯಜೀವಿಗಳ ಮೇಲೆ ಕ್ರೌರ್ಯ ಎಸಗಿರುವುದು ಅತ್ಯಂತ ಕಳವಳಕಾರಿ ಮತ್ತು ಖಂಡನೀಯ ವಿಷಯವಾಗಿದೆ.
ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕೂಡಲೇ ವೀಡಿಯೊದಲ್ಲಿರುವ ದ್ವಿಚಕ್ರ ವಾಹನವನ್ನು (KA 09 HY 0257) ಹಾಗೂ ಕೃತ್ಯವೆಸಗಿದ ವ್ಯಕ್ತಿಗಳನ್ನು ಪತ್ತೆ ಹಚ್ಚಿ, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ (Wildlife Protection Act) ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆದೇಶ ನೀಡಿದ್ದಾರೆ.