ಮನರೇಗಾ ಯೋಜನೆಯ ₹13.57 ಲಕ್ಷ ಗುಳುಂ; ಕೆಲಸ ಮಾಡದೆ ಸರ್ಕಾರಿ ಹಣ ಲೂಟಿ, ಇಬ್ಬರು ಆರೋಪಿಗಳಿಗೆ ಜೈಲು ಶಿಕ್ಷೆ!

ಸುರಪುರ ತಾಲೂಕಿನ ಹೇಮನೂರು ಗ್ರಾಮ ಪಂಚಾಯಿತಿಯಲ್ಲಿ ಮನರೇಗಾ ಯೋಜನೆಯಡಿ ಹಣಕಾಸಿನ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿತ್ತು. ಯಾವುದೇ ಕಾಮಗಾರಿ ನಡೆಸದೆ ಹಣ ದುರುಪಯೋಗಪಡಿಸಿಕೊಳ್ಳಲಾಗಿತ್ತು.
Yadgir Court
ಯಾದಗಿರಿ ಕೋರ್ಟ್
Updated on: 

ಯಾದಗಿರಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA) ಅಡಿಯಲ್ಲಿ ₹13.57 ಲಕ್ಷ ಸರ್ಕಾರಿ ಹಣ ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೆ, ಇಬ್ಬರಿಗೂ ದಂಡವನ್ನೂ ವಿಧಿಸಿ ನವೆಂಬರ್ 13ರಂದು ತೀರ್ಪು ಪ್ರಕಟಿಸಿದೆ.

ಈ ಕುರಿತು ರಾಷ್ಟ್ರೀಯ ಸುದ್ದಿವಾಹಿನಿ ವರದಿ ಮಾಡಿದ್ದು, ಯಾದಗಿರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಅವರು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ವಾದ-ಪ್ರತಿವಾದ ಆಲಿಸಿದ ಬಳಿಕ ಈ ತೀರ್ಪು ನೀಡಿದ್ದಾರೆ.

ಪ್ರಕರಣದ ಎರಡನೇ ಆರೋಪಿಯಾಗಿರುವ ಸುರಪುರ ತಾಲೂಕಿನ ಹೇಮನೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ದೇವನಗೌಡ ನಿಡಗುಂದಿ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ ₹20 ಸಾವಿರ ದಂಡ ವಿಧಿಸಲಾಗಿದೆ. ಮೂರನೇ ಆರೋಪಿ ಹೇಮನೂರು ಗ್ರಾಮದ ಸಿದ್ದಪ್ಪ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ₹2 ಸಾವಿರ ದಂಡ ವಿಧಿಸಲಾಗಿದೆ.

Yadgir Court
3 ಮನವಿ ಪತ್ರ ಸಲ್ಲಿಸಿದರೂ ಕೇಂದ್ರದಿಂದ ಪ್ರತಿಕ್ರಿಯೆಯಿಲ್ಲ; ರೈತರ ಸಂಕಷ್ಟದಲ್ಲಿ ರಾಜಕೀಯ ಬೇಡ: ಜಿ. ಪರಮೇಶ್ವರ್

ಕೆಲಸ ಮಾಡದೆ ಹಣ ದುರುಪಯೋಗ

ಸುರಪುರ ತಾಲೂಕಿನ ಹೇಮನೂರು ಗ್ರಾಮ ಪಂಚಾಯಿತಿಯಲ್ಲಿ ಮನರೇಗಾ ಯೋಜನೆಯಡಿ ಹಣಕಾಸಿನ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿತ್ತು. ಯಾವುದೇ ಕಾಮಗಾರಿ ನಡೆಸದೆ ಹಣ ದುರುಪಯೋಗಪಡಿಸಿಕೊಳ್ಳಲಾಗಿತ್ತು. ಅಲ್ಲದೆ, ಕಾಮಗಾರಿಗಳಿಗೆ ಸಂಬಂಧಿಸಿದ ಕಡ್ಡಾಯ ದಾಖಲೆಗಳಾದ ಹಾಜರಾತಿ ಪುಸ್ತಕ (ಮಸ್ಟರ್ ರೋಲ್), ಅಳತೆ ಪುಸ್ತಕ ಮತ್ತು ನಗದು ಪುಸ್ತಕಗಳನ್ನು ನಿರ್ವಹಿಸಿರಲಿಲ್ಲ ಎಂಬ ಆರೋಪವಿತ್ತು.

ಈ ಸಂಬಂಧ ಲೋಕಾಯುಕ್ತ ಪೊಲೀಸರು 2013ರ ಜನವರಿ 1ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಪ್ರಕರಣದ ಮೊದಲ ಆರೋಪಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮನಪ್ಪ ಕೊಂಗಂಡಿಕರ್ ಹಾಗೂ ನಾಲ್ಕನೇ ಆರೋಪಿ ರಾಜಾ ರಾಮಪ್ಪ ನಾಯಕ ವಿಚಾರಣೆ ನಡೆಯುತ್ತಿರುವಾಗಲೇ ಮೃತಪಟ್ಟಿದ್ದಾರೆ.

ಕರ್ನಾಟಕ ಲೋಕಾಯುಕ್ತ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವಿಶ್ವನಾಥ್ ಉಬಾಳೆ ವಾದ ಮಂಡಿಸಿದ್ದರು. ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಲೋಕಾಯುಕ್ತ ಪೊಲೀಸರು ಸಹಕರಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X