ಸಮಸ್ಯೆ ಆಲಿಸಲು ಬಂದ ಮಹಿಳಾ ಆಯೋಗ ಅಧ್ಯಕ್ಷೆ ಡಾ ನಾಗಲಕ್ಷ್ಮಿ ಚೌಧರಿ: ತೀವ್ರ ಆಕ್ರೋಶ ಹೊರಹಾಕಿದ ಆಶಾ ಕಾರ್ಯಕರ್ತೆಯರು

ತಿಂಗಳಿಗೆ 15,000 ನಿಶ್ಚಿತ ಮಾಸಿಕ ಗೌರವಧನ ನಿಗದಿ, ಒತ್ತಾಯದ ಕೆಲಸ ಕೈಬಿಡುವುದು, ಬಾಕಿ ಇರುವ ಪ್ರೋತ್ಸಾಹಧನ ಬಿಡುಗಡೆ ಹಾಗೂ ನಿವೃತ್ತಿ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಹೋರಾಟ ನಡೆಯುತ್ತಿದೆ.
Dr Nagalakshmi Chaudhary in freedom park
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನಾ ಸ್ಥಳಕ್ಕೆ ಬಂದ ಡಾ ನಾಗಲಕ್ಷ್ಮಿ ಚೌಧರಿ
Updated on: 

ಬೆಂಗಳೂರು: ತಮ್ಮ ದೀರ್ಘಕಾಲದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಶಾ ಕಾರ್ಯಕರ್ತೆಯರ ಸಂಘ ಹಮ್ಮಿಕೊಂಡಿರುವ ರಾಜ್ಯಮಟ್ಟದ ಅಹೋರಾತ್ರಿ ಅನಿರ್ದಿಷ್ಟಾವಧಿ ಹೋರಾಟ ಇಂದು ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆ ಸ್ಥಳಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ನಿನ್ನೆ ಭೇಟಿ ನೀಡಿದ ವೇಳೆ ಆಶಾ ಕಾರ್ಯಕರ್ತೆಯರು ತಮ್ಮ ಅಳಲನ್ನು ತೋಡಿಕೊಂಡ ಸಮಯದಲ್ಲಿ ಪರಸ್ಪರ ಮಾತಿನ ಚಕಮಕಿ ಏರ್ಪಟ್ಟ ಪ್ರಸಂಗ ನಡೆಯಿತು.

ತಿಂಗಳಿಗೆ 15,000 ರೂ. ನಿಶ್ಚಿತ ಮಾಸಿಕ ಗೌರವಧನ ನಿಗದಿ, ಒತ್ತಾಯದ ಕೆಲಸ ಕೈಬಿಡುವುದು, ಬಾಕಿ ಇರುವ ಪ್ರೋತ್ಸಾಹಧನ ಬಿಡುಗಡೆ ಹಾಗೂ ನಿವೃತ್ತಿ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಈ ಅನಿರ್ದಿಷ್ಟಾವಧಿ ಹೋರಾಟ ನಡೆಯುತ್ತಿದ್ದು, ನಿನ್ನೆ ಮುಖ್ಯಮಂತ್ರಿಗಳೊಂದಿಗೆ ನಡೆದ ಸಂಧಾನ ಸಭೆ ವಿಫಲವಾದ ಕಾರಣ ಇಂದೂ ಹೋರಾಟ ಮುಂದುವರಿಸಿದ್ದಾರೆ.

Dr Nagalakshmi Chaudhary in freedom park
ಸಂಧಾನ ಸಭೆ ವಿಫಲ: ಆಶಾ ಕಾರ್ಯಕರ್ತೆಯರ ಬಗ್ಗೆ ಸರ್ಕಾರಕ್ಕೆ ಸಹಾನುಭೂತಿ ಇದೆ, ಹೋರಾಟ ಕೈಬಿಡುವಂತೆ ಸಿಎಂ ಶಿವಕುಮಾರ್ ಮನವಿ! Video

ಆಕ್ರೋಶ ಮತ್ತು ಘೋಷಣೆ

ಪ್ರತಿಭಟನೆಯ ಮೂರನೇ ದಿನವಾದ ನಿನ್ನೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಕಾರ್ಯಕರ್ತೆಯರನ್ನು ಉದ್ದೇಶಿಸಿ ಮಾತನಾಡಲು ಮುಂದಾದಾಗ, ನೂರಾರು ಕಾರ್ಯಕರ್ತೆಯರು ಘೋಷಣೆಗಳನ್ನು ಕೂಗಿ ತಮ್ಮ ತೀವ್ರ ಆಕ್ರೋಶವನ್ನು ಹೊರಹಾಕಿದರು.

ಇಷ್ಟು ದಿನ ಮನಸ್ಸಿನಲ್ಲೇ ಅದುಮಿಟ್ಟುಕೊಂಡಿದ್ದ ನೋವು ಕಟ್ಟೆಯೊಡೆದು ಅನೇಕ ಕಾರ್ಯಕರ್ತೆಯರು ಭಾವುಕರಾಗಿ ಕಣ್ಣೀರು ಹಾಕಿದರು. ತಮ್ಮ ಮನೆ, ಕುಟುಂಬವನ್ನು ಬಿಟ್ಟು, ಕೊರೆಯುವ ಚಳಿಯಲ್ಲಿ ಬೀದಿಯಲ್ಲಿ ಉಳಿದು ಹಗಲು-ರಾತ್ರಿ ಹೋರಾಟ ಮಾಡಬೇಕಾದ ತಮ್ಮ ದಯನೀಯ ಸ್ಥಿತಿಯನ್ನು ಅವರು ಅಧ್ಯಕ್ಷರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟರು.

ಅಧಿಕಾರಿಗಳಿಗೆ ತರಾಟೆ

ಕಾರ್ಯಕರ್ತೆಯರ ಸಮಸ್ಯೆಗಳನ್ನು ಆಲಿಸಿದ ಬಳಿಕ ನಾಗಲಕ್ಷ್ಮಿ ಚೌಧರಿ, ಎರಡು ವರ್ಷಗಳಿಂದ ನೀಡಿದ್ದ ಭರವಸೆಗಳು ಏಕೆ ಈಡೇರಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

"ಕೇವಲ ಭರವಸೆ ಬೇಡ, ಸ್ಪಷ್ಟ ನಿರ್ಧಾರ ಬೇಕು" ಸರ್ಕಾರಕ್ಕೆ ಎಚ್ಚರಿಕೆ

ಈ ಬಾರಿಯ ಹೋರಾಟದಲ್ಲಿ ಆಶಾ ಕಾರ್ಯಕರ್ತೆಯರು ಅತ್ಯಂತ ದೃಢವಾದ ನಿಲುವನ್ನು ತಳೆದಿದ್ದಾರೆ. ಹಿಂದಿನಂತೆ ಸರ್ಕಾರದಿಂದ ಸಿಗುವ ಕೇವಲ ಭರವಸೆಗಳಿಗೆ ತಾವು ತೃಪ್ತರಾಗುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸುವ ಕುರಿತು ಸರ್ಕಾರವು ಕೇವಲ ಮಾತಿನ ಭರವಸೆ ನೀಡದೆ, ಅಧಿಕೃತವಾಗಿ ಮತ್ತು ಸ್ಪಷ್ಟವಾದ ನಿರ್ಧಾರವನ್ನು ಪ್ರಕಟಿಸಬೇಕು ಎಂಬುದು ಅವರ ಕಠಿಣ ಆಗ್ರಹವಾಗಿದೆ.

ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊ ರೆಯುವವರೆಗೂ ಈ ಅಹೋರಾತ್ರಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಆಶಾ ಕಾರ್ಯಕರ್ತೆಯರು ಎಚ್ಚರಿಕೆ ನೀಡಿದ್ದಾರೆ. ಬೇಡಿಕೆ ಈಡೇರುವವರೆಗೂ ಫ್ರೀಡಂ ಪಾರ್ಕ್ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿರುವುದರಿಂದ, ಹೋರಾಟ ಇಂದು ನಾಲ್ಕನೇ ದಿನ ತೀವ್ರವಾಗಿ ಮುಂದುವರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X