ಸರಿಯಾಗಿ ಕೆಲಸ ಮಾಡಿಲ್ಲ ಅಂದ್ರೆ ಒಂದೇ ಗಂಟೆಯಲ್ಲಿ ಎತ್ತಂಗಡಿ: ನೂತನ ಕಮಿಷನರೇಟ್‌ಗಳಿಗೆ ಸಿಎಂ ಡಿಕೆಶಿ ವಾರ್ನಿಂಗ್‌!

ಸರಿಯಾಗಿ ಕೆಲಸ ಮಾಡಲಿಲ್ಲ ಅಂದ್ರೆ ಒಂದೇ ಗಂಟೆಯೊಳಗೆ ಎತ್ತಂಗಡಿ ಮಾಡುತ್ತೇವೆ ಎಂದು ನೂತನವಾಗಿ ಆಯ್ಕೆಯಾಗಿರುವ ಐವರು ಕಮಿಷನರೇಟ್‌ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್ಚರಿಕೆ ನೀಡಿದರು.
CM DK Shivakumar
ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಸಿಎಂ ಡಿಕೆ ಶಿವಕುಮಾರ್
Updated on: 

ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬೆಂಗಳೂರು ನಗರ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸುವ ಮೂಲಕ ನಗರದ ಕಾನೂನು ಸುವ್ಯವಸ್ಥೆ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಮಹತ್ವದ ಚರ್ಚೆ ನಡೆಸಿದರು.

ಈ ವೇಳೆ ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇಶ್ವರ, ಸಚಿವರಾದ ಪ್ರಿಯಾಂಕ್‌ ಖರ್ಗೆ, ಕೃಷ್ಣ ಬೈರೇಗೌಡ, ಭೈರತಿ ಸುರೇಶ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ನೂತನ ಮುಖ್ಯ ಪೊಲೀಸ್ ಆಯುಕ್ತರಾದ ಆರ್. ಹಿತೇಂದ್ರ, ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರಾದ ಡಾ. ಎಂ.ಎ. ಸಲೀಂ ಸೇರಿದಂತೆ ಹಲವು ಹಿರಿಯ ಪೊಲೀಸ್‌ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ, ಸರಿಯಾಗಿ ಕೆಲಸ ಮಾಡಲಿಲ್ಲ ಅಂದ್ರೆ ಒಂದೇ ಗಂಟೆಯೊಳಗೆ ಎತ್ತಂಗಡಿ ಮಾಡುತ್ತೇವೆ ಎಂದು ನೂತನವಾಗಿ ಆಯ್ಕೆಯಾಗಿರುವ ಐವರು ಕಮಿಷನರೇಟ್‌ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜನರಿಗೆ ಪೊಲೀಸ್‌ ಅಂದ್ರೆ ಭಕ್ತಿನೂ, ಗೌರವವೂ ಇರಬೇಕು, ಭಯನೂ ಇರಬೇಕು. ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಅನ್ನೋ ಕಾರಣಕ್ಕೆ 5 ಕಮಿಷನರೇಟ್‌ ಹುದ್ದೆಗಳನ್ನ ಮಾಡಿದ್ದೇವೆ. ನೀವು ಯಾವ ರೀತಿ ನಡೆದುಕೊಳ್ಳಬೇಕು ಅನ್ನೋ ಮಾರ್ಗದರ್ಶನ ನೀಡಿದ್ದೇವೆ. ಆರ್ಥಿಕ ಅಪರಾಧ, ಟ್ರಾಫಿಕ್‌, ಕ್ರೈಂ, ದ್ವೇಷ ಭಾಷಣ ಯಾವುದೇ ಇರಬಹುದು, ಸಂಪೂರ್ಣವಾಗಿ ನಿಯಂತ್ರಣ ಮಾಡಬೇಕು. ನಾಗರಿಕ ರಕ್ಷಣೆಯೊಂದಿಗೆ ಅಪರಾಧಗಳು ನಿಯಂತ್ರಣ ಆಗಬೇಕು ಎಂದು ಸಲಹೆ ನೀಡಿದರು.

ʻನ್ಯೂಯಾರ್ಕ್ ಟೈಮ್ಸ್ʼ ವರದಿಯಂತೆ ಬೆಂಗಳೂರು ಈಗ ಗ್ಲೋಬಲ್ ಸಿಟಿ. ಮುಂಬೈ, ವಿಶಾಖಪಟ್ಟಣ ನಗರಗಳಲ್ಲಿ ಸಮುದ್ರ ಇದ್ದರೂ ಜನ ಬೆಂಗಳೂರು ಕಡೆ ನೋಡ್ತಾರೆ. ನಮಗೆ, ನಮ್ಮ ಸರ್ಕಾರಕ್ಕೆ ಒಳ್ಳೆ ಹೆಸರು ತನ್ನಿ ಎಂದು ಸಲಹೆ ನೀಡಿದರು. ಈಗ ಹೊಸದಾಗಿ ಬಂದಿದ್ದೇನೆ. 1 ವರ್ಷ ಯಾರೂ ನಮ್ಮನ್ನು ಏನೂ ಮಾಡಲು ಆಗಲ್ಲ ಅಂತಾ ನೀವೇನಾದ್ರೂ ತಿಳಿದುಕೊಂಡದ್ದರೆ ಅದು ಭ್ರಮೆ. ಸರಿಯಾಗಿ ಕೆಲಸ ಮಾಡಲಿಲ್ಲ ಅಂದ್ರೆ ಒಂದೇ ಗಂಟೆಯೊಳಗೆ ಚೇಂಜ್ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.

ಕೆಲವು ಪೊಲೀಸ್ ಇನ್ಸ್‌ಪೆಕ್ಟರ್‌ ಬರೀ ವ್ಯವಹಾರ ಮಾಡ್ಕೊಂಡು ಕೂತಿದ್ದಾರೆ. ಅವರ ಕುಟುಂಬ ಸದಸ್ಯರ ಹೆಸರಲ್ಲಿ ಎಕರೆಗಟ್ಟಲೆ ಜಮೀನು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಬೇನಾಮಿ ಆಸ್ತಿ ಮಾಡೋದೇ ಅವರ ಕೆಲಸ ಆಗಿದೆ. ನನ್ನತ್ರ ಪ್ರತಿಯೊಂದು ವಿವರ ಇದೆ ಎಂದು ತಿಳಿಸಿದರು.

CM DK Shivakumar
ಇಲಾಖೆಯಲ್ಲಿ ಶಿಸ್ತು ಉಲ್ಲಂಘನೆಗೆ ಅವಕಾಶವಿಲ್ಲ; ಭ್ರಷ್ಟಾಚಾರ, ರೌಡಿಗಳ ಜೊತೆ ನಂಟು ಕಂಡುಬಂದರೆ ಕಠಿಣ ಕ್ರಮ: ಪೊಲೀಸರಿಗೆ ನೂತನ ಆಯುಕ್ತ ಎಚ್ಚರಿಕೆ..!

ನಿಮಗೆ ಅವಕಾಶ ಕೊಟ್ಟಿದ್ದೇವೆ. ಯಾವುದೇ ಒತ್ತಡಕ್ಕೆ ಮಣಿದು ನಿಮಗೇ ಈ ಜವಾಬ್ದಾರಿ ಕೊಟ್ಟಿಲ್ಲ. ಉತ್ತಮವಾಗಿ ಕೆಲಸ ಮಾಡಿ, ಸೈಬರ್ ಕ್ರೈಂ, ಆನ್ಲೈನ್ ಕ್ರೈಂ, ಡ್ರಗ್ ಮಾಫಿಯಾ ಪರಿಣಾಮಕಾರಿಯಾಗಿ ತಡೆಯಬೇಕು. ಪೊಲೀಸ್ ಸ್ಟೇಷನ್ ರಿಯಲ್ ಎಸ್ಟೇಟ್ ವ್ಯವಹಾರ ಕೇಂದ್ರ ಆಗಬಾರದು ನನಗೆ ಮತ್ತು ನಮ್ಮ ಸರಕಾರಕ್ಕೆ ಗೌರವ ಬರುವ ರೀತಿಯಲ್ಲಿ ಕೆಲಸ ಮಾಡಿ, ಟೀಂ ಬೆಂಗಳೂರಾಗಿ ಕೆಲಸ ಮಾಡಬೇಕು. ಈಗ 5 ಪೊಲೀಸ್ ಕಮಿಷನರೇಟ್ ಮಾಡಿದ್ದೇವೆ. ನಿಮಗೇ ನಿಮ್ಮನ್ನು ಪ್ರೂವ್ ಮಾಡಲು ಉತ್ತಮ ಅವಕಾಶ. ನನಗೆ ಪರ್ಫಾರ್ಮೆನ್ಸ್, ಗವರ್ನನ್ಸ್, ಅಕೌಂಟೆಂಬಿಲಿಟಿ ಬೇಕು ಎಂದು ಖಡಕ್ಕಾಗಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X