ಆಧುನಿಕತೆ ಭರಾಟೆಯಲ್ಲಿ ನಿಧಾನವಾಗಿ ಮರೆಯಾಗುತ್ತಿರುವ ಬೆಂಗಳೂರಿನ ಐತಿಹಾಸಿಕ ಕಟ್ಟಡಗಳು!

ಇತ್ತೀಚೆಗೆ ನೆಲಸಮಗೊಂಡಿರುವ ಕಟ್ಟಡಗಳ ಪಟ್ಟಿಗೆ ಮೈಸೂರು ಬ್ಯಾಂಕ್ ವೃತ್ತದ ಸಮೀಪ, ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ (ICHR) ಕಟ್ಟಡವೂ ಸೇರ್ಪಡೆಯಾಗಿದೆ.
Plaza film theatre
ಪ್ಲಾಜಾ ಚಿತ್ರಮಂದಿರ
Updated on: 

ಬೆಂಗಳೂರು: ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಮೀಸಲಾದ ಸಮಿತಿ ಇಲ್ಲದಿರುವುದು ಬೆಂಗಳೂರು ನಗರದ ಪಾರಂಪರಿಕ ಕಟ್ಟಡಗಳಿಗೆ ಅಪಾಯ ತಂದೊಡ್ಡಿದ್ದು, ಹಲವು ಕಟ್ಟಡಗಳ ನೆಲಸಮಕ್ಕೂ ಕಾರಣವಾಗುತ್ತಿದೆ.

ಇತ್ತೀಚೆಗೆ ನೆಲಸಮಗೊಂಡಿರುವ ಕಟ್ಟಡಗಳ ಪಟ್ಟಿಗೆ ಮೈಸೂರು ಬ್ಯಾಂಕ್ ವೃತ್ತದ ಸಮೀಪ, ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ (ICHR) ಕಟ್ಟಡವೂ ಸೇರ್ಪಡೆಯಾಗಿದೆ. ವಿಶ್ವವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗವು ನೀಡಿದ ವರದಿಯ ಆಧಾರದ ಮೇಲೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಈ ಕಟ್ಟಡವನ್ನು ನೆಲಸಮಗೊಳಿಸಿದೆ.

ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲ ಸಚಿವ ನವೀನ್ ಜೋಸೆಫ್, "ಇದು ಘೋಷಿತ ಪಾರಂಪರಿಕ ಕಟ್ಟಡವಾಗಿರಲಿಲ್ಲ. ಕಟ್ಟಡವನ್ನು ನವೀಕರಿಸಲು ಸಾಧ್ಯವಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಹಿಂದಿನ ಬೆಂಗಳೂರು ವಿಶ್ವವಿದ್ಯಾಲಯವೂ ಇದರ ಪಾರಂಪರಿಕ ಸ್ಥಾನಮಾನದ ಬಗ್ಗೆ ಯಾವುದೇ ದಾಖಲೆಗಳನ್ನು ಹಂಚಿಕೊಂಡಿರಲಿಲ್ಲ. ಈಗ ಆ ಸ್ಥಳದಲ್ಲಿ ಎತ್ತರದ ಕಟ್ಟಡ ನಿರ್ಮಿಸಲು ಪ್ರಸ್ತಾಪಿಸಲಾಗಿದೆ" ಎಂದು ಹೇಳಿದರು.

ನಗರಾಭಿವೃದ್ಧಿ ಇಲಾಖೆ (UDD) ಅಧಿಕಾರಿಗಳು ಮತ್ತು ತಜ್ಞರು, ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಮೀಸಲಾದ ಸಮಿತಿ ರಚಿಸುವ ದೀರ್ಘಕಾಲದ ಬೇಡಿಕೆಯನ್ನು ಸರ್ಕಾರ ಬಾಕಿ ಉಳಿಸಿಕೊಳ್ಳದಿದ್ದರೆ ಈ ಕಟ್ಟಡವನ್ನು ಸಂರಕ್ಷಿಸಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ನಗರದ ವೇಗದ ಬೆಳವಣಿಗೆಗೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಸರ್ಕಾರ ಸಮಿತಿ ರಚನೆಗೆ ಆಸಕ್ತಿ ತೋರುತ್ತಿಲ್ಲ. ಕಟ್ಟಡವೊಂದನ್ನು ಪಾರಂಪರಿಕ ಕಟ್ಟಡವೆಂದು ಘೋಷಿಸಿದರೆ, ರಸ್ತೆ ವಿಸ್ತರಣೆ ಕಾಮಗಾರಿಯನ್ನು ಏಕಾಏಕಿ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಪಾರಂಪರಿಕ ತಾಣಗಳಿಗಿಂತ ಬಹುಮಹಡಿ ಕಟ್ಟಡಗಳು ಹೆಚ್ಚು ಲಾಭದಾಯಕವಾಗಿವೆ ಎಂದು ಸರ್ಕಾರದೊಂದಿಗೆ ಕೆಲಸ ಮಾಡುತ್ತಿರುವ ತಜ್ಞರೊಬ್ಬರು ಹೇಳಿದರು.

ಪ್ರಸಿದ್ಧ ಇತಿಹಾಸಕಾರ ಮತ್ತು ತಜ್ಞ ಅರುಣ್ ಪ್ರಸಾದ್ ಅವರು ಕಳೆದ 20 ವರ್ಷಗಳಲ್ಲಿ ನಗರವು 20-30 ಪಾರಂಪರಿಕ ಕಟ್ಟಡಗಳನ್ನು ಕಳೆದುಕೊಂಡಿದೆ. ಇದರಲ್ಲಿ ಕೆರೆಗಳು ಮತ್ತು ಉದ್ಯಾನವನಗಳ ನಷ್ಟ ಸೇರಿಲ್ಲ. ಆದರೆ, ಇವುಗಳನ್ನು ಪಾರಂಪರಿಕ ಕಟ್ಟಡಗಳೆಂದು ಘೋಷಿಸದಿರುವುದು ಅಥವಾ ಸಂರಕ್ಷಿಸದಿರುವುದರಿಂದ ನಿಖರವಾದ ಸಂಖ್ಯೆಯನ್ನು ಹೇಳುವುದು ಕಷ್ಟ ಎನ್ನುತ್ತಾರೆ.

ಈ ಹಿಂದೆ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿದ್ದ ಬೆಂಗಳೂರು ನಗರ ಕಲಾ ಆಯೋಗವೂ ಕಳೆದ 20 ವರ್ಷಗಳಲ್ಲಿ ನಿಷ್ಕ್ರಿಯಗೊಂಡಿದೆ ಎನ್ನುತ್ತಾರೆ.

Plaza film theatre
ಬೆಂಗಳೂರು: 15 ವರ್ಷಗಳ ಬಳಿಕ ಜಕ್ಕೂರು ರೈಲ್ವೆ ಮೇಲ್ಸೇತುವೆ ಸಾರ್ವಜನಿಕ ಬಳಕೆಗೆ ಇಂದು ಮುಕ್ತ

ನಗರದ ಪಾರಂಪರಿಕ ತಾಣಗಳನ್ನು ರಕ್ಷಿಸಲು ಮತ್ತು ನಗರದ ಸೌಂದರ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲು 1976ರಲ್ಲಿ ಈ ಆಯೋಗವನ್ನು ರಚಿಸಲಾಗಿತ್ತು. 2002ರಲ್ಲಿ ಅದನ್ನು ವಿಸರ್ಜಿಸಲಾಯಿತು. ಪಾರಂಪರಿಕ ಸಮಿತಿ ರಚನೆ ವಿಳಂಬವಾಗುತ್ತಿರುವುದು ಈಗಿರುವ ಕಟ್ಟಡಗಳಿಗೂ ಅಪಾಯ ತಂದೊಡ್ಡುತ್ತಿದೆ ಎಂದು ರಾಜ್ಯ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿ ಹೇಳುತ್ತಾರೆ.

ಸಮಿತಿ ಅಸ್ತಿತ್ವದಲ್ಲಿದ್ದಿದ್ದರೆ, ಕುಮಾರಕೃಪಾ ಬಂಗಲೆ (ಈಗ ಗಂಗಾ ಎಂದು ಹೆಸರಿಸಲಾಗಿದೆ), ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸ, ಪ್ಲಾಜಾ ಥಿಯೇಟರ್, ಶಾಸಕರ ಕ್ಲಬ್, ವಿಕ್ಟೋರಿಯಾ ಹೋಟೆಲ್, ಒಪೆರಾ ಹೌಸ್, ಮಾಣಿಕ್ಯವೇಲು ಮ್ಯಾನ್ಷನ್ (ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್) ಮತ್ತು ರೋರಿಚ್ ಎಸ್ಟೇಟ್‌ನಂತಹ ಕಟ್ಟಡಗಳಲ್ಲಿ ನವೀಕರಣ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿರುತ್ತಿರಲಿಲ್ಲ.

ಪುರಾತತ್ವ ಇಲಾಖೆಯು 1961ರ ಕಾಯ್ದೆಯಡಿ ತನ್ನ ಇಲಾಖೆಯಲ್ಲಿ ಘೋಷಿಸಲ್ಪಟ್ಟಿರುವ ಸ್ಮಾರಕಗಳು ಮತ್ತು ಪಾರಂಪರಿಕ ತಾಣಗಳನ್ನು ಸಂರಕ್ಷಿಸುತ್ತದೆ. ಪಾರಂಪರಿಕ ಸಮಿತಿಗಳು ನಗರ ಪಾಲಿಕೆಗಳು ಅಥವಾ ಜಿಲ್ಲಾಡಳಿತದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಪುರಾತತ್ವ ಇಲಾಖೆಯು ಅವುಗಳಿಗೆ ಹೆಚ್ಚುವರಿ ಸಲಹೆಗಳನ್ನು ನೀಡುತ್ತದೆ ಎನ್ನುತ್ತಾರೆ.

Plaza film theatre
ವಾರ್ಡ್ ಒನ್ ಅಭಿಯಾನಕ್ಕೆ ವೇಗ: ಬೆಂಗಳೂರು ಸ್ವಚ್ಛತೆಗೆ ಹೈಟೆಕ್ ಸ್ಪರ್ಶ; ಜೆಟ್ಟಿಂಗ್ ಯಂತ್ರಗಳ ಬಳಕೆ..!

ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ (KTPA) ಅಡಿಯಲ್ಲಿ ಜಿಲ್ಲಾ ಪಾರಂಪರಿಕ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಬೆಂಗಳೂರಿನ ವಿಚಾರದಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ. ಏಕೆಂದರೆ KTPA ಕಾಯ್ದೆಯ ವ್ಯಾಪ್ತಿಯಿಂದ ಬೆಂಗಳೂರು ಹೊರಗಿದೆ. ಪಾರಂಪರಿಕ ಸಮಿತಿ ರಚಿಸುವ ಪ್ರಸ್ತಾವನೆ ಈ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)ದ ಬಳಿ ಇತ್ತು. 500 ತಾಣಗಳನ್ನು ಗುರುತಿಸಿ, ಬಿಡಿಎ ಮಾಸ್ಟರ್ ಪ್ಲಾನ್ 2031ರಲ್ಲಿ ಸೇರಿಸಲಾಗಿತ್ತು.

ಆದರೆ ಮಾಸ್ಟರ್ ಪ್ಲಾನ್ ನ್ನು ಕೈಬಿಡಲಾಯಿತು. ಬಳಿಕ ಸುಮಾರು 39 ಕಟ್ಟಡಗಳನ್ನು ಸಂರಕ್ಷಿಸಲು ಪಾರಂಪರಿಕ ಸಮಿತಿ ರಚಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೂಚಿಸಲಾಗಿತ್ತು. ಆದರೆ, ಸರ್ಕಾರ ಈ ಪ್ರಸ್ತಾವನೆಯನ್ನು ತಡೆಹಿಡಿಯಿತು. ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಪಾರಂಪರಿಕ ಸಮಿತಿ ರಚನೆಗೆ ಹೊಸ ಪ್ರಸ್ತಾವನೆಯನ್ನು ಮತ್ತೆ ಸಲ್ಲಿಸಿದೆ" ಎಂದು ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಭಾರತೀಯ ರಾಷ್ಟ್ರೀಯ ಕಲಾ ಮತ್ತು ಸಾಂಸ್ಕೃತಿಕ ಪರಂಪರೆ ಟ್ರಸ್ಟ್ (INTACH)ನ ಬೆಂಗಳೂರು ಘಟಕದ ಸಂಚಾಲಕಿ ಮೀರಾ ಅಯ್ಯರ್, ಆಧುನಿಕ ನಗರವಾಗಿರುವುದರಿಂದ ತನ್ನ ಪಾರಂಪರಿಕ ಕಟ್ಟಡಗಳನ್ನು ಕೈಬಿಡಬೇಕೆಂದೇನಿಲ್ಲ ಎಂದು ಹೇಳಿದರು.

ಈ ಕಟ್ಟಡಗಳು ಹೇಳಲು ತಮ್ಮದೇ ಆದ ಕಥೆಗಳನ್ನು ಹೊಂದಿವೆ. ನ್ಯೂಯಾರ್ಕ್ ಮತ್ತು ಲಂಡನ್‌ನಂತಹ ನಗರಗಳಲ್ಲಿ ಆಧುನಿಕ ಕಟ್ಟಡಗಳ ಜೊತೆಗೆ 38,000ಕ್ಕೂ ಹೆಚ್ಚು ಸಂರಕ್ಷಿತ ಪಾರಂಪರಿಕ ಕಟ್ಟಡಗಳಿವೆ. ಮುಂಬೈ ಕೂಡ ಇದೇ ಮಾದರಿಯನ್ನು ಅನುಸರಿಸುತ್ತಿದೆ ಎಂದು ಹೇಳಿದರು.

ಪಾರಂಪರಿಕ ಕಟ್ಟಡಗಳನ್ನು ಗುರುತಿಸಿ ಘೋಷಿಸುವ ವಿಚಾರದಲ್ಲಿ ಅವುಗಳ ವಯಸ್ಸು ಮಾತ್ರ ಮಾನದಂಡವಲ್ಲ. ವಿಧಾನಸೌಧದ ವಿಚಾರದಲ್ಲಿ ಕಂಡುಬರುವಂತೆ ವಾಸ್ತುಶಿಲ್ಪದ ಮಹತ್ವ ಮತ್ತು ಸಾಂಕೇತಿಕ ಮೌಲ್ಯವೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮೀರಾ ಹೇಳಿದರು.

ಆ ಕಟ್ಟಡಕ್ಕೆ ಭೇಟಿ ನೀಡಿದ ವ್ಯಕ್ತಿಗಳು, ಅಲ್ಲಿ ವಾಸಿಸಿದ್ದವರು, ಆ ಸ್ಥಳದಲ್ಲಿ ನಡೆದ ಘಟನೆಗಳು ಹಾಗೂ ವರ್ಷಗಳ ಕಾಲ ಆ ಕಟ್ಟಡ ವಹಿಸಿರುವ ಪಾತ್ರದ ಆಧಾರದ ಮೇಲೂ ಪಾರಂಪರಿಕ ಸ್ಥಾನಮಾನ ಘೋಷಿಸಲಾಗುತ್ತದೆ. ಬೆಂಗಳೂರಿನಲ್ಲಿ ಸುಮಾರು 100 ಸರ್ಕಾರಿ ಕಟ್ಟಡಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಪಾರಂಪರಿಕ ಕಟ್ಟಡಗಳೆಂದು ಘೋಷಿಸಬಹುದಾಗಿದೆ. ಖಾಸಗಿ ಮತ್ತು ರಕ್ಷಣಾ ಇಲಾಖೆಯ ಒಡೆತನದಲ್ಲಿರುವ ಅನೇಕ ಕಟ್ಟಡಗಳೂ ಇವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X