

ಬೆಂಗಳೂರು: ಆಶಾ ಕಾರ್ಯಕರ್ತೆಯರ ಗೌರವ ಧನ ಕೇಂದ್ರ ಸರ್ಕಾರ ಹೆಚ್ಚಳ ಮಾಡಬೇಕು ಎಂದು ಆರೋಗ್ಯ ಸಚಿವ ಯು ಟಿ ಖಾದರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಆಶಾ ಕಾರ್ಯಕರ್ತೆಯರು ನೇರವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುತ್ತಾರೆ. ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಅಡಿಯಲ್ಲಿ ಕೇಂದ್ರ ಸರ್ಕಾರ ನೇಮಕ ಮಾಡಿರುವುದು.
2014ರಲ್ಲಿ ನಾನು ಸಚಿವ ಆಗಿದ್ದಾಗ ಕೇಂದ್ರ ಸರ್ಕಾರ ಎಷ್ಟು ಜಾಸ್ತಿ ಮಾಡುತ್ತದೆಯೋ ಅಷ್ಟು ರಾಜ್ಯ ಮಾಡಬೇಕು ಎಂದು ಕಾನೂನು ತಂದಿದ್ದೆವು. ಕೇಂದ್ರ ಎಷ್ಟು ಜಾಸ್ತಿ ಮಾಡುತ್ತದೋ ನಾವು ಅಷ್ಟೇ ಮಾಡಬೇಕು. ಕಾನೂನು ಮಾಡಿದ್ರೂ ಕೇಂದ್ರ ಸರ್ಕಾರ ಜಾಸ್ತಿ ಅನುದಾನ ಕೊಡಲಿಲ್ಲ. ಆದರೂ ರಾಜ್ಯ ಸರ್ಕಾರ 5 ಸಾವಿರ ರೂಪಾಯಿ ಕೊಡುತ್ತಿದೆ. ಕೇಂದ್ರ ಸರ್ಕಾರ 2 ಸಾವಿರ ರೂ. ಕೊಡುತ್ತಿದೆ. ಇನ್ಸೆಂಟೀವ್ 1 ಸಾವಿರ ರೂ. ಸಿಕ್ತಿದೆ ಎಂದು ಕೇಂದ್ರ ಸರ್ಕಾರ ವಿರುದ್ಧ ಆರೋಪಿಸಿದರು.
ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಮಾಡಬೇಕು. ನಾನು ಹಿಂದೆ ಸಚಿವ ಆಗಿದ್ದಾಗ ಕೇಂದ್ರದ ಸಚಿವರಿಗೆ ಜಾಸ್ತಿ ಮಾಡಲು ಒತ್ತಾಯ ಮಾಡಿದ್ದೆ. ಪ್ರೊತ್ಸಾಹ ಧನ ಜಾಸ್ತಿ ಕೊಡಬೇಕು ಅಂತ ಒತ್ತಾಯ ಮಾಡಿದ್ವಿ. ಅದಕ್ಕೆ ಕೇಂದ್ರ ಒಪ್ಪಿದೆ. ಕೇಂದ್ರದ ಜೊತೆ ನಾವು ಚರ್ಚೆ ಮಾಡ್ತೀವಿ. ರಾಜ್ಯ ಸರ್ಕಾರ, ಸಿಎಂ ಆಶಾ ಕಾರ್ಯಕರ್ತೆಯರ ಜೊತೆ ಇದ್ದಾರೆ. ಕೇಂದ್ರ ಸರ್ಕಾರದ ಜೊತೆ ಮಾತಾಡ್ತೀವಿ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಅವರಿಗೆ ಸಹಕಾರ ಮಾಡುತ್ತೇವೆ ಎಂದರು.