

ಮೈಸೂರು: ರಾಜ್ಯಾದ್ಯಂತ ತೀವ್ರ ಆಕ್ಷೇಪಕ್ಕೆ ಗುರಿಯಾಗಿರುವ ರವಿ ಹಂಜ್ ಅವರ ವಿವಾದಿತ ʻಬಸವ ಮಂಟಪʼ (Basava Mantapa Book) ಪುಸ್ತಕದ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಮಹಾತ್ಮರು ಹಾಗೂ ಧಾರ್ಮಿಕ ನಂಬಿಕೆಗಳಿಗೆ ಅವಮಾನ ಮಾಡುವವರ ವಿರುದ್ಧ ಕಠಿಣ ಕಾನೂನು ರೂಪಿಸಬೇಕು, ರವಿ ಹಂಜ್ ಗೆ ಕಲಿಸುವ ಪಾಠ ಅವಿವೇಕಿಗಳಿಗೆ ಎಚ್ಚರಿಕೆಯ ಗಂಟೆಯಾಗಿರಬೇಕು ಎಂದು ಆಗ್ರಹಿಸಿದ್ದಾರೆ.
ಲೇಖಕ ರವಿ ಹಂಜ್ ತಮ್ಮ ಕೀಳು ಪ್ರಚಾರಕ್ಕಾಗಿ ಮಹಾತ್ಮರನ್ನು ಕೆಟ್ಟದಾಗಿ ಟೀಕಿಸುವ ಕೆಲಸ ಮಾಡಿದ್ದಾರೆ. 2007ರಲ್ಲೂ ಬಸವಣ್ಣನವರ ಹುಟ್ಟಿನ ಮೂಲವನ್ನು ಪ್ರಶ್ನಿಸಿ ಅವಮಾನಿಸಲಾಗಿತ್ತು. ಬಸವಣ್ಣನವರು ಎಲ್ಲಾ ಜಾತಿಗಳಿಗೂ ಆದರ್ಶವಾಗಿದ್ದಾರೆ. ಬಸವ ತತ್ವವನ್ನು ಅಳಡಿಸಿಕೊಂಡ ಮಠಗಳಿಂದ ಶಿಕ್ಷಣ, ಅನ್ನ ದಾಸೋಹ ನಡೆಯುತ್ತಿದ್ದು, ಈ ಮಠಗಳಿಂದ ಕಲ್ಯಾಣ ಕರ್ನಾಟಕದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಉಳಿದಿದೆ. ಇಂದು ಸರ್ಕಾರಕ್ಕೂ ಸವಾಲು ಹಾಕುವ ರೀತಿಯಲ್ಲಿ ಮಠಗಳು ಸಾಮಾಜಿಕ ಸೇವೆಯಲ್ಲಿ ತೊಡಗಿವೆ ಎಂದು ಹೇಳಿದರು.
ಮಹಾತ್ಮರ ಬಗ್ಗೆ ಕೀಳಾಗಿ ಮಾತನಾಡುವ ಹಾಗೂ ಬರೆಯುವವರ ವಿರುದ್ಧ ಕಾನೂನು ಕ್ರಮ ಬಿಗಿಯಾಗಬೇಕು. ನಮ್ಮ ದೇವಾನುದೇವತೆಗಳನ್ನು ಅವಮಾನಿಸುವುದು ಕೆಲವರಿಗೆ ಅಭ್ಯಾಸವಾಗಿದೆ. ಮೈಸೂರಿನಲ್ಲಿ ಕೆಲವರು ರಾಕ್ಷಸನನ್ನು ದೈವ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ, ರವಿ ಹಂಜ್ ಗೆ ಕಲಿಸುವ ಪಾಠ ಅವಿವೇಕಿಗಳಿಗೆ ಎಚ್ಚರಿಕೆಯ ಗಂಟೆಯಾಗಿರಬೇಕು ಎಂದು ಆಗ್ರಹಿಸಿದ್ದಾರೆ.