

ಚಿಕ್ಕಮಗಳೂರು: ಕಾಡಾನೆಗಳ ಸ್ಥಳಾಂತರ ಕುರಿತಂತೆ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಿ ರಾಜಿನಾಮೆ ಪತ್ರ ಪ್ರದರ್ಶಿಸಿದ್ದು ನನಗೆ ಸರ್ಕಾರ ಮುಖ್ಯ ಅಲ್ಲ, ಜನ ಮುಖ್ಯ ಎಂದು ಹೇಳಿದ್ದಾರೆ.
ಹಾಸನದಲ್ಲಿ ಕಾಡಾನೆಗಳ ದಾಳಿಗಳ ಬಳಿಕ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಆನೆಗಳ ಸ್ಥಳಾಂತರಕ್ಕೆ ಸರ್ಕಾರ ಮುಂದಾಗಿತ್ತು. ಹಾಸನದಿಂದ ಭದ್ರಾಕ್ಕೆ ಸ್ಥಳಾಂತರ ಮಾಡುವುದಕ್ಕೆ ಇದೀಗ ಚಿಕ್ಕಮಗಳೂರು ಜಿಲ್ಲೆಯ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಸನದಲ್ಲಿ ಇಬ್ಬರ ಸಾವನ್ನಪ್ಪಿದ ಬಳಿಕ ಹಾಸನ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರು, ಕಾಡಾನೆಗಳನ್ನು ಭದ್ರಾಕ್ಕೆ ಓಡಿಸಲು ಕಾರ್ಯಚರಣೆ ನಡೆಸುವುದಾಗಿ ಹೇಳಿದ್ದರು. ಇದಕ್ಕೆ ಕಾಂಗ್ರೆಸ್ ನಾಯಕರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ನವೆಂಬರ್ 25ಕ್ಕೆ ಅರಣ್ಯ ಸಚಿವರ ನೇತೃತ್ವದಲ್ಲಿ ಸಭೆ ನಡೆಯಬೇಕಿತ್ತು.
ಆದರೆ ಸಭೆಗೂ ಮುನ್ನವೇ ಯಾವುದೇ ಮಾಹಿತಿ ನೀಡದೆ ಕಾಡಾನೆ ಓಡಿಸಿದ್ದಾರೆ. ACCF ನೇತೃತ್ವದಲ್ಲಿ ಕಾರ್ಯಚರಣೆ ಮಾಡಲಾಗಿದೆ. ಯಾವುದೇ ಸಮ್ಮತಿ ಇಲ್ಲದೆ ಕಾರ್ಯಚರಣೆ ಮಾಡಿದ್ದಾರೆ ಎಂದರದು. ರಾಜೀನಾಮೆ ಪತ್ರ ಸಿದ್ದವಿದೆ. ನಾನು ರಾಜೀನಾಮೆ ನೀಡಲು ಸಿದ್ದ. ಈ ಕಾರ್ಯಚರಣೆ ನಿಲ್ಲಿಸಬೇಕು, ಇಲ್ಲವೇ ರಾಜೀನಾಮೆ ನೀಡುತ್ತೇನೆ. ಚಿಕ್ಕಮಗಳೂರು ಜನರ ಜೀವಕ್ಕೆ ಬೆಲೆ ಇಲ್ವಾ? ನನಗೆ ಜನ ಮುಖ್ಯ, ಸರ್ಕಾರವಲ್ಲ. ಭದ್ರಗೆ ಆನೆಗಳನ್ನು ಓಡಿಸಿದರೇ ನಾಳೆ ಬೆಳಗ್ಗೆ ರಾಜೀನಾಮೆ ನೀಡುವುದಾಗಿ ಪತ್ರವನ್ನು ಪ್ರದರ್ಶಿಸಿ ಎಚ್ಚರಿಕೆ ನೀಡಿದರು.