

ಬೆಂಗಳೂರು: ಇಂದಿರಾನಗರದ 12ನೇ ಮುಖ್ಯ ರಸ್ತೆಯಲ್ಲಿರುವ ಫುಟ್‌ಪಾತ್‌ಗಳ (ಪಾದಚಾರಿ ಮಾರ್ಗಗಳ) ದುಸ್ಥಿತಿಯನ್ನು ತೋರಿಸುವ ವೀಡಿಯೊವೊಂದನ್ನು ಕೆನಡಾದ ನಿವಾಸಿ ಕೇಲೆಬ್ ಫ್ರೀಸೆನ್ ಅವರು ತಮ್ಮ 'ಎಕ್ಸ್' (X) ನಲ್ಲಿ ಅಪ್‌ಲೋಡ್ ಮಾಡಿದ್ದರು.
ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, 'ಗ್ರೇಟರ್ ಬೆಂಗಳೂರು ಅಥಾರಿಟಿ' (GBA) ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿತು.
ಫ್ರೀಸೆನ್ ಅವರು ಗುರುತಿಸಿದ್ದ ಫುಟ್‌ಪಾತ್‌ನ ಬಹುತೇಕ ಹಾನಿಗೊಳಗಾದ ಭಾಗಗಳನ್ನು GBA ಸಿಬ್ಬಂದಿ ದುರಸ್ತಿಪಡಿಸಿದರು. ಕೈಗೊಂಡ ಕೆಲಸದ ಕುರಿತಾದ ಪ್ರತಿಕ್ರಿಯೆ ವೀಡಿಯೊವನ್ನು ಸಾರ್ವಜನಿಕವಾಗಿ ಹಂಚಿಕೊಂಡರು.
ಬೆಂಗಳೂರು ದೇಶದ ಪ್ರಮುಖ ತಂತ್ರಜ್ಞಾನ ಕೇಂದ್ರಗಳಲ್ಲಿ ಒಂದಾಗಿದ್ದು, ಅನೇಕ ಸ್ಟಾರ್ಟಪ್‌ಗಳು ಮತ್ತು ವೆಂಚರ್ ಕ್ಯಾಪಿಟಲ್ ಸಂಸ್ಥೆಗಳು ಇಲ್ಲಿವೆ. ಆದರೂ ಇಲ್ಲಿ ಇಂತಹ ಫುಟ್‌ಪಾತ್‌ಗಳಿವೆ, ಬೇರೆ ಯಾವುದೇ ದೇಶದಲ್ಲಿ ಇಂತಹ ಫುಟ್‌ಪಾತ್ ಸ್ವೀಕಾರಾರ್ಹವಲ್ಲ ಎಂದು ಅವರು ವೀಡಿಯೊದಲ್ಲಿ ಹೇಳಿದ್ದರು. ರಸ್ತೆಯಲ್ಲಿ ನಡೆಯುತ್ತಲೇ, ಮುರಿದ ಅಥವಾ ಬಳಸಲು ಸಾಧ್ಯವಾಗದ ಫುಟ್‌ಪಾತ್ ಭಾಗಗಳನ್ನು ತೋರಿಸುತ್ತಾ, ಅವುಗಳ ದುಸ್ಥಿತಿಯನ್ನು "ಶೋಚನೀಯ" ಎಂದು ಅವರು ಬಣ್ಣಿಸಿದ್ದರು.
ಹಾನಿಯಿಂದ ಉಂಟಾದ ಇತರ ವಿವಿಧ ಸಮಸ್ಯೆಗಳನ್ನೂ ಫ್ರೀಸೆನ್ ಎತ್ತಿ ತೋರಿಸಿದ್ದರು. ಉದಾಹರಣೆಗೆ, ಕ್ಷುದ್ರಗ್ರಹವೊಂದು ಅಪ್ಪಳಿಸಿದಾಗ ಉಂಟಾಗುವ ಕುಳಿಯಂತಿರುವ ಒಂದು ಭಾಗವನ್ನು ಅವರು ಉಲ್ಲೇಖಿಸಿದ್ದರು. ಅಲ್ಲಿ ಜನರು ಅದನ್ನು ತಾತ್ಕಾಲಿಕ ಕಸದ ತೊಟ್ಟಿಯಂತೆ ಬಳಸುತ್ತಾ ಕಸವನ್ನು ಎಸೆದಿರುವುದನ್ನು ಅವರು ವಿಡಿಯೋದಲ್ಲಿ ತೋರಿಸಿದ್ದರು.
ಈ ರಸ್ತೆ ಭಾಗದ ಸ್ಥಿತಿಯನ್ನು ಫ್ರೀಸೆನ್ "ಅಧಿಕಾರಶಾಹಿಯ ಅಸಮರ್ಥತೆ"ಯ ಫಲಿತಾಂಶ ಎಂದು ಜರಿದಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ GBA ಆ ಭಾಗದ ದುರಸ್ತಿಗೂ ಮುಂಚಿನ ಮತ್ತು ನಂತರದ ದೃಶ್ಯಗಳನ್ನು ಒಳಗೊಂಡ ವೀಡಿಯೊವನ್ನು ಪೋಸ್ಟ್ ಮಾಡಿತು, ಇದರಲ್ಲಿ ಹಲವಾರು GBA ಸಿಬ್ಬಂದಿ ಕಾಣಿಸಿಕೊಂಡು ಆ ಭಾಗವನ್ನು "ಸರಿಪಡಿಸಲಾಗಿದೆ" ಎಂದು ತಿಳಿಸಿದರು.
ಭಾನುವಾರದಂದು, ಫ್ರೀಸೆನ್ GBAಯ ಕೆಲಸವನ್ನು ಶ್ಲಾಘಿಸುತ್ತಾ ಮತ್ತೊಂದು ವೀಡಿಯೊವನ್ನು ಅಪ್‌ಲೋಡ್ ಮಾಡಿದರು. ಆದರೆ, 2027ರ ಆರಂಭದಲ್ಲಿ GBAಯಿಂದ 12ನೇ ಮುಖ್ಯ ರಸ್ತೆಯ ಸಂಪೂರ್ಣ ನವೀಕರಣ ನಡೆಯುವವರೆಗೂ ಈ ದುರಸ್ತಿ ಕಾರ್ಯಗಳು ಕೇವಲ ತಾತ್ಕಾಲಿಕವಾಗಿರುತ್ತವೆ ಎಂದು ಅವರು ಇದರಲ್ಲಿ ಉಲ್ಲೇಖಿಸಿದರು.