ಸಿದ್ದರಾಮಯ್ಯ ವಿರುದ್ಧದ 'ಸ್ಟಿಂಗ್ ಆಪರೇಷನ್' ಪ್ರಕರಣ: ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ವಿಚಾರಣೆ!

ಈ ಸ್ಟಿಂಗ್ ಆಪರೇಷನ್‌ನಲ್ಲಿ ಆಳ್ವ ಅವರ ಪಾತ್ರವಿರಬಹುದು ಎಂಬ ಶಂಕೆಯ ಹಿನ್ನೆಲೆಯಲ್ಲಿ ಶನಿವಾರ ಸೆಂಟ್ರಲ್ ಕ್ರೈಮ್ ಬ್ರಾಂಚ್ (CCB) ಮುಂದೆ ಅವರು ಹಾಜರಾಗಿದ್ದರು ಎಂದು ಮೂಲಗಳು ಹೇಳಿವೆ.
Kripa Alva, Siddaramaiah
ಕೃಪಾ ಆಳ್ವ, ಸಿದ್ದರಾಮಯ್ಯ
Updated on: 

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆದಿರುವ 'ಸ್ಟಿಂಗ್ ಆಪರೇಷನ್' ಪ್ರಕರಣಕ್ಕೆ ಸಂಬಂಧಿಸಿದಂತೆ, ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಅವರನ್ನು ನಗರದ ಸಿಸಿಬಿ (CCB) ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ಸೋಮವಾರ ತಿಳಿಸಿವೆ.

ಈ ಸ್ಟಿಂಗ್ ಆಪರೇಷನ್‌ನಲ್ಲಿ ಆಳ್ವ ಅವರ ಪಾತ್ರವಿರಬಹುದು ಎಂಬ ಶಂಕೆಯ ಹಿನ್ನೆಲೆಯಲ್ಲಿ ಶನಿವಾರ ಸೆಂಟ್ರಲ್ ಕ್ರೈಮ್ ಬ್ರಾಂಚ್ (CCB) ಮುಂದೆ ಅವರು ಹಾಜರಾಗಿದ್ದರು ಎಂದು ಮೂಲಗಳು ಹೇಳಿವೆ. ತನಿಖೆಯ ಭಾಗವಾಗಿ ಈ ಹಿಂದೆಯೂ ಅವರನ್ನು ಹಲವು ಬಾರಿ ವಿಚಾರಣೆ ನಡೆಸಲಾಗಿತ್ತು.

ಶನಿವಾರ ತನಿಖಾ ಅಧಿಕಾರಿಗಳ ಮುಂದೆ ಹಾಜರಾದ ಕೃಪಾ ಆಳ್ವ ಅವರ ವಿಚಾರಣೆ ನಡೆದಿದ್ದು, ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಈ ಸ್ಟಿಂಗ್ ಆಪರೇಷನ್ ಹಿಂದೆ ಕೃಪಾ ಆಳ್ವ ಅವರ ಕೈವಾಡವಿದೆ ಎಂದು ಸಿದ್ದರಾಮಯ್ಯ ಕೂಡ ಆರೋಪಿಸಿದ್ದರು.

ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (2015 ರಿಂದ 2018 ರವರೆಗೆ) ಕೃಪಾ ಆಳ್ವ 'ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ'ದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನವರಾಗಿದ್ದು, ಕಾಂಗ್ರೆಸ್ ಪಕ್ಷದ ವಕ್ತಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಪತಿ ಅಮರ್ ಆಳ್ವ ಪ್ರಮುಖ ಸಮಾಜ ಸೇವಕರಾಗಿ, ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು ಮತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿದ್ದರು. 1992 ರಲ್ಲಿ ನಡೆದ ಗ್ಯಾಂಗ್‌ವಾರ್ ಒಂದರಲ್ಲಿ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಪತಿಯ ಮರಣದ ನಂತರ ಕೃಪಾ ಆಳ್ವ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದ್ದರು.

ಪತಿಯ ನಿಧನದ ನಂತರ, ಚಿಕ್ಕ ಮಗಳೊಂದಿಗೆ ಒಂಟಿಯಾದ ಅವರು 'ಅಮರ್ ಆಳ್ವ ಚಾರಿಟಬಲ್ ಟ್ರಸ್ಟ್' ಅನ್ನು ಸ್ಥಾಪಿಸಿದರು. ಲಯನ್ಸ್ ಕ್ಲಬ್‌ನಂತಹ ಸಮಾಜ ಸೇವಾ ಸಂಸ್ಥೆಗಳಲ್ಲಿ ತೊಡಗಿಸಿಕೊಂಡರು. ಕ್ರಮೇಣ ಕಾಂಗ್ರೆಸ್ ಪಕ್ಷದ ಮೂಲಕ ಸಕ್ರಿಯ ರಾಜಕೀಯಕ್ಕೆ ಬಂದರು. ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ (KPCC) ವಕ್ತಾರರಾಗಿ ಮತ್ತು ರಾಜ್ಯ ಪ್ರಚಾರ ಸಮಿತಿಯ ಸಂಯೋಜಕ ಹುದ್ದೆ ಸೇರಿದಂತೆ ವಿವಿಧ ಸಂಘಟನೆಯ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸೇರಿದಂತೆ ವಿವಿಧ ಕ್ಷೇತ್ರಗಳಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅವರು ಪಕ್ಷದ ಟಿಕೆಟ್ ಕೋರಿದ್ದರು, ಆದರೆ ಇದುವರೆಗೂ ಅವರಿಗೆ ಟಿಕೆಟ್ ಸಿಕ್ಕಿಲ್ಲ.

ಕಳೆದ ವಾರ ಸಿದ್ದರಾಮಯ್ಯ ವಿರುದ್ಧದ'ಸ್ಟಿಂಗ್ ಆಪರೇಷನ್' ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ ಆರೋಪದ ಮೇಲೆ, ದೆಹಲಿ ಮೂಲದ ರಿತೇಶ್ ಪಾಂಡೆ ಎಂಬಾತನನ್ನು ಸಿಸಿಬಿ (CCB) ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ನಡೆದ ಮೊದಲ ಬಂಧನ ಇದಾಗಿದ್ದು, ನಂತರ ಜಾಮೀನಿನ ಆಧಾರದ ಮೇಲೆ ಆತನನ್ನು ಬಿಡುಗಡೆ ಮಾಡಲಾಗಿದೆ.

ಆರಂಭದಲ್ಲಿ ಪೊಲೀಸರು ಜೆಡಿ(ಎಸ್) ಪಕ್ಷದ ಸಾಮಾಜಿಕ ಜಾಲತಾಣ ತಂಡದ ಇಬ್ಬರು ಸದಸ್ಯರನ್ನು ವಶಕ್ಕೆ ಪಡೆದಿದ್ದರು. ಇದರಿಂದ ಆಕ್ರೋಶಗೊಂಡ ಜೆಡಿ(ಎಸ್) ನಾಯಕ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, "ಈ ಸ್ಟಿಂಗ್ ಆಪರೇಷನ್‌ನ ಹಿಂದಿರುವ ಪ್ರಭಾವಿಗಳ ಸೂಚನೆಯ ಮೇರೆಗೆ, ನಿಜವಾದ ಅಪರಾಧಿಗಳನ್ನು ರಕ್ಷಿಸಲು ಪೊಲೀಸರು ಅಮಾಯಕರನ್ನು ವಶಕ್ಕೆ ಪಡೆದಿದ್ದಾರೆ" ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಮತ್ತು ಅವರ ಪಕ್ಷದ ಕಾರ್ಯಕರ್ತರು ಇಲ್ಲಿನ ಪೊಲೀಸ್ ಪ್ರಧಾನ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದರು.

Kripa Alva, Siddaramaiah
ಸ್ಟಿಂಗ್ ಆಪರೇಷನ್ ವಿವಾದ: ನಮ್ಮ ಸಮಸ್ಯೆ ನಾವೇ ಬಗೆಹರಿಸಿಕೊಳ್ಳುತ್ತೇವೆ, ಹೈಕಮಾಂಡ್ ಮಧ್ಯಪ್ರವೇಶ ಅಗತ್ಯವಿಲ್ಲ; DCM ಪರಮೇಶ್ವರ್ ಸ್ಪಷ್ಟನೆ

ಕಳೆದ ತಿಂಗಳ ಕೊನೆಯಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಗಂಭೀರ ಆರೋಪಗಳನ್ನು ಒಳಗೊಂಡ ಎರಡು ವೀಡಿಯೊಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಈ ಬಗ್ಗೆ ವರದಿ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವ ತಡೆಯಾಜ್ಞೆಯನ್ನು ಸಿದ್ದರಾಮಯ್ಯ ಅವರು ಪಡೆದುಕೊಂಡಿದ್ದರು. ಅಲ್ಲದೆ, ಈ ಬಗ್ಗೆ ತನಿಖೆ ನಡೆಸುವಂತೆ ಕೋರಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಸಿದ್ದರಾಮಯ್ಯ ಅವರ ಪುತ್ರ ಹಾಗೂ ರಾಜ್ಯ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಇತ್ತೀಚೆಗೆ ಆರೋಪವೊಂದನ್ನು ಮಾಡಿದ್ದು, ತಮ್ಮ ತಂದೆಯ ವರ್ಚಸ್ಸನ್ನು ಹಾಳುಮಾಡುವ ಉದ್ದೇಶದಿಂದ ನಡೆಸಲಾದ ಈ ಸ್ಟಿಂಗ್ ಆಪರೇಷನ್‌ನ ಹಿಂದೆ ಕಾಂಗ್ರೆಸ್ ಪಕ್ಷದವರೇ ಇದ್ದಾರೆ ಎಂದು ಹೇಳಿದ್ದರು. ಈ ಸ್ಟಿಂಗ್ ಆಪರೇಷನ್‌ಗೆ ಸಂಬಂಧಿಸಿದ ವೀಡಿಯೊದಲ್ಲಿ, ಚುನಾವಣೆಯಲ್ಲಿ ಸ್ಪರ್ಧಿಸಲು ಪುತ್ತೂರು ಕ್ಷೇತ್ರದಿಂದ ಪಕ್ಷದ ಟಿಕೆಟ್ ಬಯಸಿದ್ದ ಕಾಂಗ್ರೆಸ್ ಪಕ್ಷದ ಮಹಿಳೆಯೊಬ್ಬರು ಹಾಗೂ ಮಾಧ್ಯಮ ಸಂಸ್ಥೆಯೊಂದರ ಮುಖ್ಯಸ್ಥರು ಭಾಗಿಯಾಗಿರುವುದು ಕಂಡುಬರುತ್ತದೆ ಎಂದು ಯತೀಂದ್ರ ಹೇಳಿದ್ದರು.

ಇದೇ ವೇಳೆ, ತಮ್ಮ ವಿರುದ್ಧ ನಡೆದಿದೆ ಎನ್ನಲಾದ ಕ್ರಿಮಿನಲ್ ಪಿತೂರಿಯ ಬಗ್ಗೆ ದೂರು ನೀಡಿರುವ ಸಿದ್ದರಾಮಯ್ಯ ಅವರು, ಪ್ರಸ್ತುತ ನಡೆಯುತ್ತಿರುವ ತನಿಖೆಯ ಮೇಲೆ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಈ ಸ್ಟಿಂಗ್ ಆಪರೇಷನ್‌ನ ಹಿಂದಿರುವವರು ಯಾರು ಎಂಬುದು ಶೀಘ್ರದಲ್ಲೇ ಬಯಲಾಗಲಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com