ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾರಿ ಅಕ್ರಮ ಆರೋಪ: CEC ಜ್ಞಾನೇಶ್ ಕುಮಾರ್ ವಜಾಕ್ಕೆ ಕಾಂಗ್ರೆಸ್ ಪಟ್ಟು, ದೇಶಾದ್ಯಂತ ಹೋರಾಟಕ್ಕೆ ಮುಂದು..!

ದೇಶಾದ್ಯಂತ ಸುಮಾರು 13.3 ಕೋಟಿ ಮತದಾರರ ಹೆಸರುಗಳನ್ನು ಕಾನೂನುಬಾಹಿರವಾಗಿ ಕೈಬಿಡುವ ಮೂಲಕ ಚುನಾವಣಾ ಆಯೋಗವು "ಮತ ಕಳ್ಳತನ" ಮಾಡಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡಿವೆ.
Congress (Representative Image)
ಪ್ರಾತಿನಿಧಿಕ ಚಿತ್ರ
Updated on: 

ಬೆಂಗಳೂರು: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನೇತೃತ್ವದ ಇಂಡಿಯಾ (INDIA) ಮೈತ್ರಿಕೂಟ, ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ತನ್ನ ಹೋರಾಟವನ್ನು ತೀವ್ರಗೊಳಿಸಿದೆ.

ದೇಶಾದ್ಯಂತ ಸುಮಾರು 13.3 ಕೋಟಿ ಮತದಾರರ ಹೆಸರುಗಳನ್ನು ಕಾನೂನುಬಾಹಿರವಾಗಿ ಕೈಬಿಡುವ ಮೂಲಕ ಚುನಾವಣಾ ಆಯೋಗವು "ಮತ ಕಳ್ಳತನ" ಮಾಡಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡಿವೆ.

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (AICC) ವೀಕ್ಷಕ ಪಲ್ಲಂ ರಾಜು ಮಾತನಾಡಿ, ಪಕ್ಷದ ಹೋರಾಟವು ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಮಾತ್ರ ಸೀಮಿತವಾಗಿಲ್ಲ. ಚುನಾವಣಾ ಅಕ್ರಮಗಳು, ವಿದ್ಯುನ್ಮಾನ ಮತಯಂತ್ರಗಳು (EVM) ಮತ್ತು ವಿವಿಪ್ಯಾಟ್‌ಗಳ (VVPAT) ವಿಚಾರಗಳನ್ನೂ ಒಳಗೊಂಡಿದೆ ಎಂದು ಹೇಳಿದರು.

SIR ಪ್ರಕ್ರಿಯೆಯಡಿ 13 ಕೋಟಿಗೂ ಹೆಚ್ಚು ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಮೃತಪಟ್ಟವರು ಮತ್ತು ಸ್ಥಳಾಂತರಗೊಂಡ ಮತದಾರರ ಹೆಸರುಗಳನ್ನು ತೆಗೆದುಹಾಕುವುದು ಚುನಾವಣಾ ಆಯೋಗದ ಕರ್ತವ್ಯ. ಆದರೆ, ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಏಕೆ ಇಲ್ಲ ಎಂದು ಪ್ರಶ್ನಿಸಿದರು.

ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಕಾರಣಗಳೇನು, ಅದಕ್ಕೆ ಸಂಬಂಧಿಸಿದ ಸೂಚನೆಗಳೇನು ಮತ್ತು ಮತದಾರರು ಮೇಲ್ಮನವಿ ಸಲ್ಲಿಸಲು ಇರುವ ವ್ಯವಸ್ಥೆ ಯಾವುದು ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಕರ್ನಾಟಕದ ಮತದಾರರ ಪಟ್ಟಿಯಿಂದ ಸೂಕ್ತ ಕಾರಣಗಳಿಲ್ಲದೆ ಸುಮಾರು 60,000ರಿಂದ 70,000 ಹೆಸರುಗಳನ್ನು ಸಾಫ್ಟ್‌ವೇರ್ ಮೂಲಕ ತೆಗೆದುಹಾಕಲಾಗಿದೆ. ಅರ್ಹ ಮತದಾರರ ಹೆಸರನ್ನು ಸಾಫ್ಟ್‌ವೇರ್ ಮೂಲಕ ತೆಗೆದುಹಾಕಿದರೆ ಅದಕ್ಕೆ ಯಾರು ಹೊಣೆ? ಆ ಹೆಸರನ್ನು ಮತ್ತೆ ಸೇರಿಸುವವರು ಯಾರು?” ಎಂದು ಪ್ರಶ್ನಿಸಿದರು.

Congress (Representative Image)
ಅಕ್ಟೋಬರ್ 30 ರಂದು ದೆಹಲಿಯಲ್ಲಿ ಅಣಕು ಸಂಸತ್ ಅಧಿವೇಶನ; ಸಿಇಸಿ ಜ್ಞಾನೇಶ್ ಕುಮಾರ್ ಮಹಾಭಿಯೋಗ: INDIA bloc

ಇದೇ ವೇಳೆ 2025ರ ಫೆಬ್ರವರಿಯಲ್ಲಿ ರಾಹುಲ್ ಗಾಂಧಿ ಅವರು ಮಹಾರಾಷ್ಟ್ರದ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಮಾಡಿದ್ದ ಆರೋಪಗಳನ್ನು ಪಲ್ಲಂ ರಾಜು ಅವರು ಸ್ಮರಿಸಿದರು.

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ನಡುವಿನ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 39 ಲಕ್ಷ ಮತದಾರರ ಹೆಸರುಗಳನ್ನು ಹೊಸದಾಗಿ ಸೇರಿಸಲಾಗಿತ್ತು. ಇದಕ್ಕೂ ಹಿಂದಿನ ಐದು ವರ್ಷಗಳಲ್ಲಿ 32 ಲಕ್ಷ ಹೆಸರುಗಳನ್ನು ಮಾತ್ರ ಸೇರಿಸಲಾಗಿತ್ತು ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಅಲ್ಲದೆ, ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳ ಕುರಿತು ಅವರು ಪ್ರಶ್ನೆಗಳನ್ನು ಎತ್ತಿದ್ದರು ಎಂದು ತಿಳಿಸಿದರು.

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು, ವಿಶೇಷವಾಗಿ ನಮೂನೆ-6ಕ್ಕೆ ಸಂಬಂಧಿಸಿದ ಆಕ್ಷೇಪಣೆಗಳ ವಿಚಾರದಲ್ಲಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಪಶ್ಚಿಮ ಬಂಗಾಳದಲ್ಲಿ ಸುಮಾರು 90 ಲಕ್ಷ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದ್ದು, ಅವುಗಳಲ್ಲಿ ಸುಮಾರು 60 ಲಕ್ಷ ಹೆಸರುಗಳ ವಿರುದ್ಧ ಆಕ್ಷೇಪಣೆ ಸಲ್ಲಿಸಲಾಗಿತ್ತು. ಸುಮಾರು 27 ಲಕ್ಷ ಹೆಸರುಗಳನ್ನು ಮರುಸೇರ್ಪಡೆ ಮಾಡಲಾಗಿದ್ದು, 38 ಲಕ್ಷ ಹೆಸರುಗಳ ಕುರಿತ ಪ್ರಕ್ರಿಯೆ ಇನ್ನೂ ಬಾಕಿ ಇದೆ ಎಂದು ಹೇಳಿದರು.

ಈ ಪ್ರಶ್ನೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಮತದಾರರ ಹೆಸರುಗಳನ್ನು ತೆಗೆದುಹಾಕಲು ನಮೂನೆ-7 ಅನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ದೂರಿದರು.

ಈ ಪ್ರಕ್ರಿಯೆ ಮೊದಲು ಜಾರ್ಖಂಡ್‌ನಲ್ಲಿ ಆರಂಭವಾಗಿ, ನಂತರ ಬಿಹಾರ ಮತ್ತು ಪಶ್ಚಿಮ ಬಂಗಾಳಕ್ಕೆ ವಿಸ್ತರಿಸಿತು. ಕರ್ನಾಟಕದಲ್ಲಿ ಸುಮಾರು ಒಂದು ಕೋಟಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಆರೋಪಿಸಿದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ, ಕಳೆದ ಎರಡು ವರ್ಷಗಳಲ್ಲಿ ನಡೆದ ಚುನಾವಣೆಗಳನ್ನು ರದ್ದುಗೊಳಿಸುವುದು ಮತ್ತು ಮತದಾರರ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಸಾರ್ವಜನಿಕ ಪರಿಶೀಲನೆಗೆ ಒಳಪಡಿಸುವುದು ಕಾಂಗ್ರೆಸ್‌ನ ಪ್ರಮುಖ ಬೇಡಿಕೆಗಳಾಗಿವೆ. ನಮೂನೆ-6 ಪ್ರಕ್ರಿಯೆಯನ್ನು ಸರಳಗೊಳಿಸಿರುವುದಕ್ಕೆ ಕಾಂಗ್ರೆಸ್ ನಡೆಸಿದ ಹೋರಾಟವೇ ಕಾರಣ ಎಂದು ಪ್ರತಿಪಾದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com