

ಬೆಂಗಳೂರು: ಬೆಂಕಿ ಅವಘಡ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ನೆರವು ಒದಗಿಸುವ ಉದ್ದೇಶದಿಂದ ರಾಜ್ಯದ ಎಲ್ಲ ತಾಲೂಕುಗಳು ಹಾಗೂ ಪ್ರಮುಖ ಹೋಬಳಿಗಳಲ್ಲಿ ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತಿದೆ.
ಬನ್ನೇರುಘಟ್ಟ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯಲ್ಲಿ ನಡೆದ 2ನೇ ಅಖಿಲ ಭಾರತ ಅಗ್ನಿಶಾಮಕ ಸೇವೆಗಳ ಕ್ರೀಡಾಕೂಟ-2026ಕ್ಕೆ ಚಾಲನೆ ನೀಡಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿದರು.
ಈ ವೇಳೆ ಅಗತ್ಯ ಮೂಲಸೌಕರ್ಯ, ಸೌಲಭ್ಯಗಳು ಮತ್ತು ಆರ್ಥಿಕ ನೆರವು ಒದಗಿಸುವ ಮೂಲಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯನ್ನು ಬಲಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ದೇಶದ ಪ್ರತಿಯೊಂದು ತಾಲೂಕಿನಲ್ಲೂ ಅಗ್ನಿಶಾಮಕ ಠಾಣೆ ಸ್ಥಾಪಿಸಬೇಕೆಂಬ ಕೇಂದ್ರ ಸರ್ಕಾರದ ಆಶಯಕ್ಕೆ ಅನುಗುಣವಾಗಿ ರಾಜ್ಯದಲ್ಲಿಯೂ ಈ ವಿಸ್ತರಣಾ ಯೋಜನೆ ರೂಪಿಸಲಾಗುತ್ತಿದೆ. ಇದರಿಂದ ತುರ್ತು ಸಂದರ್ಭಗಳಲ್ಲಿ ಸ್ಪಂದಿಸುವ ವೇಗ ಹೆಚ್ಚಲಿದ್ದು, ಸಂಕಷ್ಟದಲ್ಲಿರುವ ಜನರನ್ನು ಅಗ್ನಿಶಾಮಕ ಸಿಬ್ಬಂದಿ ಶೀಘ್ರವಾಗಿ ತಲುಪಲು ಸಾಧ್ಯವಾಗಲಿದೆ ಎಂದು ತಿಳಿಸಿದರು.