

ಬೆಂಗಳೂರು: ದೀಪಾವಳಿ ಎಂದರೆ ಕತ್ತಲೆಯನ್ನು ಓಡಿಸಿ ಬೆಳಕನ್ನು ತರುವ ಬೆಳಕಿನ ಹಬ್ಬ. ಈ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವುದೇ ರಂಗುರಂಗಿನ ಪಟಾಕಿಗಳು. ದೀಪಾವಳಿಯ ದಿನಗಳಲ್ಲಿ ರಾತ್ರಿ ಹೊತ್ತು ಆಕಾಶದಲ್ಲಿ ಚಿಮ್ಮುವ ಬಣ್ಣ ಬಣ್ಣದ ಪಟಾಕಿಗಳ ಚಿತ್ತಾರ ಮತ್ತು ನೆಲದ ಮೇಲೆ ಮಿನುಗುವ ಪಟಾಕಿಗಳ ಸದ್ದು ಹಬ್ಬದ ಸಡಗರಕ್ಕೆ ವಿಶೇಷ ಮೆರುಗು ನೀಡುತ್ತದೆ. ಹಾಗಾಗಿ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾತ್ರಿ 8:00 ಗಂಟೆಯಿಂದ 10:00 ಗಂಟೆಯವರೆಗೆ ಕೇವಲ 2 ಗಂಟೆ ಮಾತ್ರ ಪಟಾಕಿ ಸಿಡಿಸಲು ರಾಜ್ಯಸರ್ಕಾರ ಅವಕಾಶ ನೀಡಿದೆ. ಅಕಸ್ಮಾತ್, ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಹಸಿರು ಪಟಾಕಿಗಳಷ್ಟೇ ಕಡ್ಡಾಯ..
ವಿಧಾನಸೌಧದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಚಿವರು ಮಾಲಿನ್ಯ ನಿಯಂತ್ರಣ ಮತ್ತು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ, ದೀಪಾವಳಿ ಹಬ್ಬದ ದಿನಗಳಲ್ಲಿ ರಾತ್ರಿ 8:00 ರಿಂದ 10:00 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಅನುಮತಿ ಇರುತ್ತದೆ. ಉಳಿದ ಸಮಯದಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದ ಸಚಿವ ರಾಮಲಿಂಗಾರೆಡ್ಡಿ, "ಸುಪ್ರೀಂ ಕೋರ್ಟ್ ಆದೇಶದಂತೆ ಪರಿಸರಕ್ಕೆ ಹಾನಿಯಾಗದಂತೆ ಮಾರುಕಟ್ಟೆಯಲ್ಲಿ ಕೇವಲ ಪರಿಸರ ಸ್ನೇಹಿ 'ಹಸಿರು ಪಟಾಕಿ'ಗಳನ್ನು ಮಾತ್ರ ಮಾರಾಟ ಮಾಡಲು ಮತ್ತು ಬಳಸಲು ಅನುಮತಿ ನೀಡಲಾಗಿದೆ. ನಿಷೇಧಿತ ರಾಸಾಯನಿಕಯುಕ್ತ ಹಾಗೂ ಅಧಿಕ ಶಬ್ದದ ಪಟಾಕಿಗಳನ್ನು ಮಾರಾಟ ಮಾಡುವ ಮಳಿಗೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.
ಮುಂದುವರೆದು, ರಾಸಾಯನಿಕಯುಕ್ತ, ಹೆಚ್ಚು ಶಬ್ದ ಹಾಗೂ ಹೊಗೆ ಹೊರಸೂಸುವ ಪಟಾಕಿಗಳು ಅಥವಾ 'ಲಡಿ' (ಸರಪಳಿ ಪಟಾಕಿ) ಮಾರಾಟ ಮಾಡುವುದು ಕಂಡುಬಂದರೆ ತಕ್ಷಣವೇ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದ ಸಚಿವರು, ಪಟಾಕಿ ಮಾರಾಟ ಮಳಿಗೆಗಳಲ್ಲಿ ಸುರಕ್ಷತಾ ನಿಯಮಗಳ ಪಾಲನೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ. ಅಲ್ಲದೆ, ಹಬ್ಬದ ಮುಂಚಿನ ಮತ್ತು ನಂತರದ ದಿನಗಳಲ್ಲಿ ವಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯದ ಮಟ್ಟವನ್ನು ಅಳೆಯಲು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.