ದಕ್ಷಿಣ ಕನ್ನಡದಲ್ಲಿ ಆಟೋ ದರ ಪರಿಷ್ಕರಣೆ; ಸೆ.1ರಿಂದಲೇ ಹೊಸ ದರ ಜಾರಿ, ಕನಿಷ್ಠ ದರ 40 ರೂ. ನಿಗದಿ..!

ಹೊಸ ದರದಂತೆ, ಮೊದಲ 1.5 ಕಿ.ಮೀ.ಗೆ ರೂ.40 ಪಾವತಿಸಬೇಕು. ಈ ದರದಲ್ಲಿ ಗರಿಷ್ಠ ಮೂವರು ಪ್ರಯಾಣಿಕರು ಪ್ರಯಾಣಿಸಬಹುದು. 1.5 ಕಿ.ಮೀ. ನಂತರ ಪ್ರತಿ ಹೆಚ್ಚುವರಿ ಕಿಲೋಮೀಟರ್‌ಗೆ ರೂ.20 ದರ ನಿಗದಿಪಡಿಸಲಾಗಿದೆ.
File photo
ಸಂಗ್ರಹ ಚಿತ್ರ
Updated on

ಮಂಗಳೂರು: ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋ ರಿಕ್ಷಾ ಪ್ರಯಾಣ ದರಗಳನ್ನು ಪರಿಷ್ಕರಿಸಲಾಗಿದ್ದು, ಸೆಪ್ಟೆಂಬರ್ 1ರಿಂದಲೇ ಹೊಸ ದರಗಳು ಜಾರಿಗೆ ಬಂದಿವೆ.

ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (RTA) ಮೊದಲ 1.5 ಕಿಲೋಮೀಟರ್‌ಗೆ ಕನಿಷ್ಠ ದರವನ್ನು ರೂ.40 ಎಂದು ನಿಗದಿಪಡಿಸಿದೆ.

ಉಪ ಆಯುಕ್ತ ದರ್ಶನ್ ಎಚ್‌ವಿ ಅಧ್ಯಕ್ಷತೆಯಲ್ಲಿ ನಡೆದ ದಕ್ಷಿಣ ಕನ್ನಡ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಪರಿಷ್ಕೃತ ದರಗಳಿಗೆ ಅನುಮೋದನೆ ನೀಡಲಾಗಿದೆ. ಜಿಲ್ಲೆಯಾದ್ಯಂತ ಆಟೋ ರಿಕ್ಷಾ ಸೇವೆಗಳಿಗೆ ಈ ಹೊಸ ದರ ವ್ಯವಸ್ಥೆ ಅನ್ವಯವಾಗಲಿದೆ.

ಹೊಸ ದರದಂತೆ, ಮೊದಲ 1.5 ಕಿ.ಮೀ.ಗೆ ರೂ.40 ಪಾವತಿಸಬೇಕು. ಈ ದರದಲ್ಲಿ ಗರಿಷ್ಠ ಮೂವರು ಪ್ರಯಾಣಿಕರು ಪ್ರಯಾಣಿಸಬಹುದು. 1.5 ಕಿ.ಮೀ. ನಂತರ ಪ್ರತಿ ಹೆಚ್ಚುವರಿ ಕಿಲೋಮೀಟರ್‌ಗೆ ರೂ.20 ದರ ನಿಗದಿಪಡಿಸಲಾಗಿದೆ.

ಇದೇ ವೇಳೆ ಕಾಯುವಿಕೆ ಶುಲ್ಕದಲ್ಲೂ ಬದಲಾವಣೆ ಮಾಡಲಾಗಿದ್ದು, ಮೊದಲ 10 ನಿಮಿಷ ಉಚಿತವಾಗಿರಲಿದೆ. ನಂತರ ಪ್ರತಿ ಹೆಚ್ಚುವರಿ 15 ನಿಮಿಷಗಳಿಗೆ ರೂ.5 ಶುಲ್ಕ ವಿಧಿಸಲಾಗುತ್ತದೆ.

File photo
ನಮ್ಮ ಮೆಟ್ರೋ ದರ ವಿವಾದ ತಾರಕಕ್ಕೆ: BMRCL ಲೆಕ್ಕಾಚಾರಕ್ಕೆ ಪ್ರಯಾಣಿಕರ ಅಸಮಾಧಾನ; ಶುಲ್ಕ ಪರಿಷ್ಕರಣೆಗೆ ಒತ್ತಾಯ

ಸಾಮಾನು ಸಾಗಣೆಗೆ ಹೊಸ ನಿಯಮ

ಹೊಸ ದರ ವ್ಯವಸ್ಥೆಯಡಿ ಸಾಮಾನು ಸಾಗಣೆಗೆ ಸಂಬಂಧಿಸಿದ ಶುಲ್ಕವನ್ನೂ ನಿಗದಿಪಡಿಸಲಾಗಿದೆ. ಒಬ್ಬ ಪ್ರಯಾಣಿಕ ಮಾತ್ರ ಪ್ರಯಾಣಿಸುವ ಸಂದರ್ಭದಲ್ಲಿ 20 ಕೆ.ಜಿ.ವರೆಗೆ ಸಾಮಾನು ಸಾಗಿಸಲು ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ.

20 ಕೆ.ಜಿ.ಗಿಂತ ಹೆಚ್ಚಿನ ಸಾಮಾನುಗಳಿಗೆ ಪ್ರತಿ ಹೆಚ್ಚುವರಿ 20 ಕೆ.ಜಿ. ಅಥವಾ ಅದರ ಭಾಗಕ್ಕೆ ರೂ.5 ಶುಲ್ಕ ವಿಧಿಸಲಾಗುತ್ತದೆ.

ರಾತ್ರಿ 10 ಗಂಟೆಯಿಂದ ಬೆಳಗಿನ 5 ಗಂಟೆಯವರೆಗೆ ರಾತ್ರಿ ಶುಲ್ಕ ಅನ್ವಯವಾಗಲಿದೆ. ಈ ಅವಧಿಯಲ್ಲಿ ಮೀಟರ್‌ನ ಸಾಮಾನ್ಯ ದರಕ್ಕಿಂತ 1.5 ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ.

ಪರಿಷ್ಕೃತ ದರಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆಟೋ ರಿಕ್ಷಾ ಪ್ರಯಾಣಿಕರು ಹಾಗೂ ಚಾಲಕರಿಗೆ ಏಕರೂಪದ ದರ ವ್ಯವಸ್ಥೆ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com