

ಬೆಂಗಳೂರು: ಅಂಗನವಾಡಿ ಕಾರ್ಯಕರ್ತರನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳಾಗಿ (ಬಿಎಲ್‌ಒ) ನಿಯೋಜಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಕೇಂದ್ರ ಚುನಾವಣಾ ಆಯೋಗ (ಇಸಿಐ)ಕ್ಕೆ ಗುರುವಾರ ನೋಟಿಸ್ ಜಾರಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠವು ದಾವಣಗೆರೆಯ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ರಾಜ್ಯ ಸಮಿತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿ, ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
ಅರ್ಜಿದಾರರ ಪರ ವಕೀಲ ಉಮಾಪತಿ ಎಸ್. ವಾದ ಮಂಡಿಸಿ, ಅಂಗನವಾಡಿ ಕಾರ್ಯಕರ್ತರನ್ನು ಬಿಎಲ್‌ಒಗಳಾಗಿ ನೇಮಕ ಮಾಡಿರುವುದರಿಂದ ಹಲವು ಗಂಭೀರ ಪರಿಣಾಮಗಳು ಉಂಟಾಗುತ್ತಿವೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಮೊದಲನೆಯದಾಗಿ, ಮಹಿಳೆಯರು ಮತ್ತು ಮಕ್ಕಳಿಗೆ ಒದಗಿಸಲಾಗುತ್ತಿರುವ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು (ಐಸಿಡಿಎಸ್) ಹಾಗೂ ಬಾಲ್ಯದ ಆರೈಕೆ ಮತ್ತು ಅಭಿವೃದ್ಧಿ ಸೇವೆಗಳ ವಿತರಣೆಗೆ ಇದರಿಂದ ಅಡಚಣೆಯಾಗುತ್ತಿದೆ ಎಂದು ವಾದಿಸಿದರು.
ಎರಡನೆಯದಾಗಿ, ಈಗಾಗಲೇ ಕಲ್ಯಾಣ ಕಾರ್ಯಕ್ರಮಗಳ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತರ ಮೇಲೆ ಹೆಚ್ಚುವರಿ ಚುನಾವಣಾ ಕರ್ತವ್ಯಗಳನ್ನು ಹೊರಿಸಲಾಗುತ್ತಿದೆ ಎಂದು ತಿಳಿಸಿದರು.
ಮೂರನೆಯದಾಗಿ, ಬಿಎಲ್‌ಒಗಳ ಕರ್ತವ್ಯಗಳು ಈಗ ಕೇವಲ ಸಾಮಾನ್ಯ ಕಚೇರಿ ಕೆಲಸಗಳಿಗೆ ಸೀಮಿತವಾಗಿಲ್ಲ. ಮನೆ-ಮನೆಗೆ ತೆರಳಿ ಮತದಾರರ ವಿವರಗಳ ಪರಿಶೀಲನೆ, ಗಣತಿ ಸೇರಿದಂತೆ ಸೂಕ್ಷ್ಮ ಸ್ವರೂಪದ ಕ್ಷೇತ್ರ ಕಾರ್ಯಗಳನ್ನು ಅವರು ನಿರ್ವಹಿಸಬೇಕಾಗುತ್ತಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.