

ಬೆಂಗಳೂರು: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಉಸ್ತುವಾರಿ ಕಾರ್ಯದರ್ಶಿಯಾಗಿದ್ದ ಡಾ. ಶರತ್ ಚಂದ್ರ ಸೇರಿದಂತೆ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಹಲವರ ಹೆಸರುಗಳು ಎಸ್‌ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಕರಡು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷರೂ ಆಗಿರುವ ಡಾ. ಶರತ್ ಚಂದ್ರ ಅವರು ಹೆಬ್ಬಾಳದ ಚೋಳನಗರದ ಅಮರಜ್ಯೋತಿ ಲೇಔಟ್ ನಿವಾಸಿಯಾಗಿದ್ದಾರೆ. 2002ರ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದ್ದರೂ, ಇದೀಗ ಕರಡು ಪಟ್ಟಿಯಲ್ಲಿ ತಮ್ಮ ಹೆಸರಿನ ಎದುರು ‘ನೋ ಮ್ಯಾಪಿಂಗ್’ ಎಂದು ನಮೂದಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
2002ರ ಮತದಾರರ ಪಟ್ಟಿಯನ್ನು ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಂಡಿದ್ದೇನೆ. ಅದರಲ್ಲಿ ನನ್ನ ಹೆಸರು ಸ್ಪಷ್ಟವಾಗಿ ಇದೆ. ಕ್ಷೇತ್ರ, ಬೂತ್ ಸಂಖ್ಯೆ, ಭಾಗ ಸಂಖ್ಯೆ ಹಾಗೂ ಕ್ರಮಸಂಖ್ಯೆ ಸೇರಿದಂತೆ ಅಗತ್ಯವಿರುವ ಎಲ್ಲ ವಿವರಗಳನ್ನು ನೀಡಿದ್ದೇನೆ. ಆದರೂ ಕರಡು ಪಟ್ಟಿಯಲ್ಲಿ ‘ನೋ ಮ್ಯಾಪಿಂಗ್’ ಎಂದು ತೋರಿಸಲಾಗುತ್ತಿದೆ ಎಂದು ಎಪ್ಪತ್ತರ ಹರೆಯದ ಡಾ. ಶರತ್ ಚಂದ್ರ ಹೇಳಿದ್ದಾರೆ.
ಈ ಸಮಸ್ಯೆ ತಮ್ಮೊಬ್ಬರದ್ದಲ್ಲ. ತಮ್ಮ ಪ್ರದೇಶದ ಹಲವು ನಿವಾಸಿಗಳೂ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮತದಾರರಾಗಿ ತಮ್ಮ ಅರ್ಹತೆಯನ್ನು ಸಾಬೀತುಪಡಿಸಲು ಸೂಚಿಸಲಾಗಿರುವ 11 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸುವಂತೆ ಅವರಿಗೆ ನೋಟಿಸ್ ನೀಡಲಾಗಿದೆ.
ತಪ್ಪು ಮಾಹಿತಿ ನೀಡಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ನೋಟಿಸ್‌ನಲ್ಲಿ ಎಚ್ಚರಿಸಿರುವುದು ಆತಂಕಕಾರಿ. ಒಬ್ಬ ಮತದಾರ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರೆ, ಅಸ್ತಿತ್ವದಲ್ಲಿರುವ ಮತದಾರರೊಬ್ಬರನ್ನು ‘ಇಲ್ಲದ ವ್ಯಕ್ತಿ’ ಎಂದು ತೋರಿಸಿ ತಪ್ಪು ಮಾಹಿತಿ ನೀಡಿರುವ ಹಾಗೂ ಕಿರುಕುಳ ನೀಡಿರುವ ಅಧಿಕಾರಿಯನ್ನೂ ಹೊಣೆಗಾರರನ್ನಾಗಿ ಮಾಡಬಾರದೇ? ಎಂದು ಅವರು ಪ್ರಶ್ನಿಸಿದ್ದಾರೆ.
ಅವರ ಪತ್ನಿ ಹಾಗೂ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಮಾಜಿ ನಿರ್ದೇಶಕಿ ಡಾ. ಪ್ರೇಮಲತಾ ಅವರಿಗೂ ಇದೇ ಸಮಸ್ಯೆ ಎದುರಾಗಿದೆ. 2002ರಿಂದ ನಾನು ಮತ ಚಲಾಯಿಸುತ್ತಿದ್ದೇನೆ. ಎಸ್‌ಐಆರ್ ಅರ್ಜಿಯನ್ನು ಭರ್ತಿ ಮಾಡಿದ್ದೇನೆ. ಆದರೆ ಹೊಸ ಕರಡು ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲ ಎಂದು ಅವರು ಹೇಳಿದ್ದಾರೆ.
ಇದೇ ಪ್ರದೇಶದ ಮತ್ತೊಬ್ಬ ನಿವಾಸಿ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಡಾ. ಎಸ್.ವಿ. ಹೆಗ್ಡೆ ಅವರು ಕಳೆದ 35 ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದನ್ನು ಕಂಡು ಆಶ್ಚರ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ನನ್ನ ಹೆಸರನ್ನೇ ಪಟ್ಟಿಯಿಂದ ಕೈಬಿಟ್ಟಿರುವುದು ಆಶ್ಚರ್ಯ ತಂದಿದೆ. ನನ್ನ ಹಲವು ನೆರೆಹೊರೆಯವರ ಹೆಸರುಗಳೂ ಪಟ್ಟಿಯಲ್ಲಿ ಇಲ್ಲ ಎಂದು ಅವರು ಹೇಳಿದರು.
ಪರಿಶೀಲನೆ ವೇಳೆ ಬೂತ್ ವಿವರಗಳನ್ನು ನೀಡಲು ಸಾಧ್ಯವಾಗದಿರುವುದೇ ಹೆಸರುಗಳು ನಾಪತ್ತೆಯಾಗಲು ಕಾರಣವಾಗಿರಬಹುದು ಎಂದು ಅವರು ಶಂಕಿಸಿದ್ದಾರೆ. 23 ವರ್ಷಗಳ ಹಿಂದಿನ ಬೂತ್ ಸಂಖ್ಯೆಯನ್ನು ಯಾರು ನೆನಪಿಟ್ಟುಕೊಳ್ಳುತ್ತಾರೆ? ಈ ವಿಚಾರವನ್ನು ಬಿಎಲ್‌ಒ ಗಮನಕ್ಕೆ ತಂದಿದ್ದೇನೆ ಎಂದು ಅವರು ಹೇಳಿದರು.
ಈ ಪ್ರದೇಶದ ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಕ್ಷೇತ್ರ ಬದಲಾವಣೆಗಳ ಇತಿಹಾಸವೂ ಗೊಂದಲಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದರು. ನಮ್ಮ ಕ್ಷೇತ್ರ ಮೊದಲು ಹೆಬ್ಬಾಳವಾಗಿತ್ತು. ನಂತರ ಯಲಹಂಕಕ್ಕೆ ಬದಲಾಯಿತು. ಈಗ ಮತ್ತೆ ಹೆಬ್ಬಾಳಕ್ಕೆ ಬಂದಿದೆ ಎಂದರು.
ನನಗೆ ಯಾವಾಗಲೂ ನನ್ನ ಅತ್ಯಂತ ಮಹತ್ವದ ಹಕ್ಕು ಎಂದರೆ ಮತ ಚಲಾಯಿಸುವ ಹಕ್ಕು ಎಂದು ಹೇಳುತ್ತಿದ್ದೆ. ಈಗ ಆ ಹಕ್ಕನ್ನೇ ಕಸಿದುಕೊಂಡಿದ್ದಾರೆ ಎಂದು ಡಾ.ಶರತ್ ಚಂದ್ರ ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮ ಯುವಕಾಲದ ಘಟನೆಯೊಂದನ್ನು ನೆನಪಿಸಿಕೊಂಡ ಅವರು, ಆಗ ಮೈಸೂರಿನಲ್ಲಿ ಮತದಾರರಾಗಿ ನೋಂದಣಿಯಾಗಿದ್ದಾಗ ತಮ್ಮ ಹೆಸರಿನಲ್ಲಿ ಬೇರೊಬ್ಬರು ಮತ ಚಲಾಯಿಸಲು ಪ್ರಯತ್ನಿಸಿರುವುದು ಪತ್ತೆಯಾಗಿತ್ತು ಎಂದು ಹೇಳಿದರು. ನಾನು ‘ಚಾಲೆಂಜ್ ವೋಟ್’ ಚಲಾಯಿಸಿದ್ದೆ. ಆ ದಿನಗಳಲ್ಲಿ ಯಾರಾದರೂ ನಿಮ್ಮ ಪರವಾಗಿ ನಕಲಿ ಮತ ಚಲಾಯಿಸಿರುವುದು ಕಂಡುಬಂದರೆ ‘ಚಾಲೆಂಜ್ ವೋಟ್’ ಚಲಾಯಿಸಲು ಅವಕಾಶವಿತ್ತು ಎಂದು ಅವರು ನೆನಪಿಸಿಕೊಂಡರು.
ಈ ಮೂವರು ನಿವಾಸಿಗಳ ಅನುಭವಗಳು ಹಳೆಯ ಮತದಾರರ ಪಟ್ಟಿಗಳೊಂದಿಗೆ ಚುನಾವಣಾ ದತ್ತಾಂಶವನ್ನು ಹೇಗೆ ಹೊಂದಾಣಿಕೆ ಮಾಡಲಾಗುತ್ತಿದೆ ಎಂಬ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಕರಡು ಮತದಾರರ ಪಟ್ಟಿಯ ಎರಡನೇ ಹಂತದ ಭಾಗವಾಗಿ ನೊಟೀಸ್ ಜಾರಿ ಹಾಗೂ ವಿಚಾರಣೆ ಪ್ರಕ್ರಿಯೆ ಮುಂದುವರಿದಿದೆ. ಆದರೆ, ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (CEO) ಕಚೇರಿಯ ಪ್ರಕಾರ ಇನ್ನೂ 36,49,373 ನೋಟಿಸ್‌ಗಳನ್ನು ಜನರಿಗೆ ತಲುಪಿಸಬೇಕಿದೆ.
ಹಾಸನ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಕ್ರಮವಾಗಿ ಶೇ.1.25 ಮತ್ತು ಶೇ.1.70ರಷ್ಟು ನೋಟಿಸ್‌ಗಳನ್ನು ಮಾತ್ರ ವಿತರಿಸಲಾಗಿದ್ದು, ಈ ಜಿಲ್ಲೆಗಳು ಅತ್ಯಂತ ಕಡಿಮೆ ಪ್ರಮಾಣದ ನೊಟೀಸ್ ವಿತರಣೆಯನ್ನು ದಾಖಲಿಸಿವೆ. ಬೆಂಗಳೂರೂ ಈ ಪಟ್ಟಿಯಲ್ಲಿ ಕೆಳಭಾಗದಲ್ಲಿದೆ.
ಬಿಬಿಎಂಪಿ ಕೇಂದ್ರ ಜಿಲ್ಲೆಯಲ್ಲಿ 31,159 ನೋಟಿಸ್‌ಗಳನ್ನು ವಿತರಿಸಲಾಗಿದ್ದು, ಇದು ಶೇ.7.26ರಷ್ಟಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.4.89ರಷ್ಟು (46,271 ನೋಟಿಸ್), ಬಿಬಿಎಂಪಿ ದಕ್ಷಿಣ ಜಿಲ್ಲೆಯಲ್ಲಿ ಶೇ.4.05 ಹಾಗೂ ಬಿಬಿಎಂಪಿ ಉತ್ತರ ಜಿಲ್ಲೆಯಲ್ಲಿ ಶೇ.13.15ರಷ್ಟು ನೋಟಿಸ್‌ಗಳನ್ನು ವಿತರಿಸಲಾಗಿದೆ.
ದತ್ತಾಂಶದ ಪ್ರಕಾರ, ‘ಅಸಂಗತತೆ/ತಾರ್ಕಿಕ ವ್ಯತ್ಯಾಸ’ ಮತ್ತು ‘ನೋ ಮ್ಯಾಪಿಂಗ್’ ವಿಭಾಗಗಳಡಿ ಒಟ್ಟು 43,81,143 ಮತದಾರರನ್ನು ನೋಟಿಸ್ ಜಾರಿಗಾಗಿ ಗುರುತಿಸಲಾಗಿದೆ. ಈ ಪೈಕಿ ಈವರೆಗೆ 7,31,770 ನೋಟಿಸ್‌ಗಳನ್ನು ಜಾರಿ ಮಾಡಲಾಗಿದೆ.
ಬೆಂಗಳೂರಿನ ಬಿಬಿಎಂಪಿ ಕೇಂದ್ರ ಜಿಲ್ಲೆಯಲ್ಲಿ 4,29,310 ಮಂದಿಗೆ, ಬೆಂಗಳೂರು ನಗರದಲ್ಲಿ 9,45,720 ಮಂದಿಗೆ, ಬಿಬಿಎಂಪಿ ಉತ್ತರದಲ್ಲಿ 6,13,266 ಮಂದಿಗೆ ಹಾಗೂ ಬಿಬಿಎಂಪಿ ದಕ್ಷಿಣದಲ್ಲಿ 4,18,043 ಮಂದಿಗೆ ನೋಟಿಸ್‌ಗಳನ್ನು ಜಾರಿ ಮಾಡಲಾಗಿದೆ.
ಚುನಾವಣಾ ನೋಂದಣಿ ಅಧಿಕಾರಿಗಳು (ಇಆರ್‌ಒ) ಮತ್ತು ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳು (ಎಇಆರ್‌ಒ) ನಡೆಸುವ ವಿಚಾರಣೆಗಳು ಅಕ್ಟೋಬರ್ 12ರವರೆಗೆ ಮುಂದುವರಿಯಲಿವೆ.