ಎಪಿಎಂಸಿಯಲ್ಲಿ ಬಾಲ ಕಾರ್ಮಿಕ ಪದ್ದತಿ ತಕ್ಷಣ ನಿಲ್ಲಿಸದಿದ್ದರೇ ಬಂಧನ: ಸಿಎಂ ಡಿಕೆ ಶಿವಕುಮಾರ್

ಎಪಿಎಂಸಿ ಮಾರುಕಟ್ಟೆ ರೈತರು ಹಾಗೂ ವ್ಯಾಪಾರಸ್ಥರ ನಡುವಿನ ಕೊಂಡಿ. ಬೇರೆ ಯಾವುದೇ ಮಾರುಕಟ್ಟೆಗಿಂತಲೂ ಬೆಂಗಳೂರಿನ ಮಾರುಕಟ್ಟೆಯ ಬಗ್ಗೆ ರೈತರು ಸಂತುಷ್ಟರಾಗಿದ್ದಾರೆ.
ಎಪಿಎಂಸಿ ಮಾರುಕಟ್ಟೆಯಲ್ಲಿ ಸಿಎಂ
ಎಪಿಎಂಸಿ ಮಾರುಕಟ್ಟೆಯಲ್ಲಿ ಸಿಎಂ
Updated on

ಬೆಂಗಳೂರು: ಯಶವಂತಪುರ ಎಪಿಎಂಸಿಯಲ್ಲಿ ಬಾಲ ಕಾರ್ಮಿಕ ಪದ್ದತಿಯನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ಸೂಚಿಸಲಾಗಿದೆ. ಬಾಲಕಾರ್ಮಿಕರಿಂದ ದುಡಿಸುತ್ತಿರುವವರನ್ನು ತಕ್ಷಣವೇ ಬಂಧಿಸಿ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಹಾಗೂ ಪೊಲೀಸರಿಗೆ ಸೂಚನೆ ನೀಡಿದ್ದೇನೆ" ಎಂದು ಸಿಎಂ ಡಿ. ಕೆ. ಶಿವಕುಮಾರ್ ತಿಳಿಸಿದರು.

ಯಶವಂತಪುರ ಎಪಿಎಂಸಿಗೆ ಮಂಗಳವಾರ ದಿಢೀರ್ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಸಣ್ಣ ಮಕ್ಕಳಿಂದ ಕೆಲಸ ಮಾಡಿಸುವುದನ್ನು ತಕ್ಷಣದಿಂದಲೇ ನಿಲ್ಲಿಸಬೇಕು. ರಾಜ್ಯದ ಇತರೆ ಎಪಿಎಂಸಿಗಳಿಗೆ ಸಚಿವರುಗಳು ಭೇಟಿ ನೀಡಿ ಸಮಸ್ಯೆ ಹಾಗೂ ದೂರುಗಳನ್ನು ಸರಿಪಡಿಸಲು ಸೂಚಿಸಲಾಗುವುದು" ಎಂದು ಹೇಳಿದರು.

ಎಪಿಎಂಸಿ ಮಾರುಕಟ್ಟೆ ರೈತರು ಹಾಗೂ ವ್ಯಾಪಾರಸ್ಥರ ನಡುವಿನ ಕೊಂಡಿ. ಬೇರೆ ಯಾವುದೇ ಮಾರುಕಟ್ಟೆಗಿಂತಲೂ ಬೆಂಗಳೂರಿನ ಮಾರುಕಟ್ಟೆಯ ಬಗ್ಗೆ ರೈತರು ಸಂತುಷ್ಟರಾಗಿದ್ದಾರೆ. ಮಧ್ಯಪ್ರದೇಶದ ಇಂದೋರ್ ಸೇರಿದಂತೆ ದೇಶದ ವಿವಿಧ ಮಾರುಕಟ್ಟೆಗಳಿಂದ ಈರುಳ್ಳಿ, ಆಲೂಗಡ್ಡೆ ಮುಂತಾದ ಕೃಷಿ ಉತ್ಪನ್ನಗಳು ಇಲ್ಲಿಗೆ ಬರುತ್ತಿದ್ದು ಇಲ್ಲಿನ ಉತ್ಪನ್ನಗಳಿಗೂ ಬೇರೆ ಉತ್ಪನ್ನಗಳಿಗೂ ಗುಣಮಟ್ಟದಲ್ಲಿ ಹಾಗೂ ರುಚಿಯಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಹಲವು ಉತ್ಪನ್ನಗಳು ಮೂರು ತಿಂಗಳವರೆಗೆ ಹಾಳಾಗದೆ ಉಳಿದರೆ, ಇನ್ನು ಕೆಲವು ಒಂದು ತಿಂಗಳು ಉಳಿಯುವುದಿಲ್ಲ" ಎಂದರು.

"ಉತ್ತರ ಭಾರತದ ಕೆಲವು ಮಾದರಿಯ ಆಲೂಗಡ್ಡೆ ಸಿಹಿಯಾಗಿದ್ದರೆ ಕೆಲವು ಸಾಮಾನ್ಯವಾಗಿವೆ. ಇಲ್ಲಿಂದ ತಮಿಳುನಾಡು, ಕೇರಳ ಸೇರಿದಂತೆ ದೆಹಲಿಗೂ ಹೋಗುತ್ತದೆ" ಎಂದರು.

ಎಪಿಎಂಸಿ ಮಾರುಕಟ್ಟೆಯಲ್ಲಿ ಸಿಎಂ
ಯಶವಂತಪುರ APMCಗೆ ಸಿಎಂ ದಿಢೀರ್ ಭೇಟಿ: ರೈತರ ಅಹವಾಲು ಆಲಿಸಿದ ಡಿಕೆ ಶಿವಕುಮಾರ್, Video

ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದು, ದಲ್ಲಾಳಿ, ವರ್ತಕರು ಪಡೆಯುತ್ತಿರುವ ಕಮಿಷನ್ ಬಗ್ಗೆ ಪರಿಶೀಲನೆ ಮಾಡಲಾಗುವುದು" ಎಂದು ತಿಳಿಸಿದರು.

ರೈತರ ಕಷ್ಟಗಳನ್ನು ಅರಿಯುವುದು ನನ್ನ ಕರ್ತವ್ಯ

"ಎಪಿಎಂಸಿಯಲ್ಲಿ ಕೂಲಿ ಕಾರ್ಮಿಕರು, ರೈತರು, ವ್ಯಾಪಾರಿಗಳ ಜೊತೆ ನಡೆಸಿದ ಚರ್ಚೆ ವೇಳೆ ಹಲವು ಸಲಹೆಗಳನ್ನು ನೀಡಿದ್ದಾರೆ. ಜೊತೆಗೆ ದೂರುಗಳೂ ಇವೆ. ರಾಜ್ಯದ ಮುಖ್ಯಸ್ಥನಾಗಿ ಇಲ್ಲಿನ ಸಮಸ್ಯೆಗಳು ಹಾಗೂ ರೈತರ ಕಷ್ಟ ತಿಳಿದುಕೊಳ್ಳುವುದು ನನ್ನ ಕರ್ತವ್ಯವಾಗಿದೆ" ಎಂದರು.

ಎಪಿಎಂಸಿ ಮಾರುಕಟ್ಟೆಗಳು ಸಂಪೂರ್ಣ ನಂಬಿಕೆಯನ್ನು ಆಧರಿಸಿ ನಡೆಯುತ್ತಿವೆ, ಇಲ್ಲಿನ ವ್ಯಾಪಾರವು ಸಂಪೂರ್ಣವಾಗಿ ನಂಬಿಕೆಯ ಮೇಲೆ ಆಧರಿಸಿದ್ದು. ಉತ್ತರ ಭಾರತದಿಂದಲೂ ಕೂಡ ಕೃಷಿ ಉತ್ಪನ್ನಗಳನ್ನು ನಂಬಿಕೆ ಆಧಾರದ ಮೇಲೆಯೇ ಕಳುಹಿಸಲಾಗುತ್ತಿದೆ‌. ಆರ್ ಟಿಜಿಎಸ್ ಮೂಲಕ ಹಣ ಪಾವತಿಯಾಗುತ್ತಿದೆ.

ಬೀದಿಬದಿ ವ್ಯಾಪಾರಿಗಳು ಇಲ್ಲಿಂದಲೇ ತರಕಾರಿ ಹಣ್ಣುಗಳನ್ನು ಕೊಂಡುಕೊಳ್ಳುತ್ತಿದ್ದು, 1-2 ರೂ. ಲಾಭ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ" ಎಂದರು.

ಎಪಿಎಂಸಿ ಮಾರುಕಟ್ಟೆಯಲ್ಲಿ ಸಿಎಂ
'ಬರದ ಸಂಕಷ್ಟದಲ್ಲಿರುವ ರೈತರೊಂದಿಗೆ ಸರ್ಕಾರವಿದೆ': ಸಿಎಂ ಡಿ.ಕೆ ಶಿವಕುಮಾರ್ ಭರವಸೆ!

ರೈತರು ಹಾಗೂ ವ್ಯಾಪಾರಿಗಳಿಗೆ ನ್ಯಾಯ ದೊರಕಿಸುವುದು ಸರ್ಕಾರದ ಆದ್ಯತೆ

ಮಾರುಕಟ್ಟೆ ಸ್ಥಳಾಂತರದ ಬಗ್ಗೆ ಪರಿಶೀಲಿಸಲಾಗುವುದು. ರೈತರು, ವ್ಯಾಪಾರಿಗಳಿಗೆ, ಕೆಲಸ ಮಾಡುವವರಿಗೆ ನ್ಯಾಯ ದೊರಕಿಸುವುದು ಸರ್ಕಾರದ ಆದ್ಯತೆ" ಎಂದರು.

ಎಪಿಎಂಸಿ ವ್ಯವಸ್ಥೆಗಳನ್ನು ಗಮನಿಸಿದ್ದೇನೆ

“ಯಶವಂತಪುರ ಎಪಿಎಂಸಿಗೆ ಬರುವ ರೈತರು , ಮಧ್ಯವರ್ತಿಗಳು, ವರ್ತಕರು ಹಾಗೂ ಇಲ್ಲಿ ಕೂಲಿಕಾರರಾಗಿ ಕೆಲಸ ಮಾಡುತ್ತಿರುವ ಮಹಿಳೆಯರೊಂದಿಗೂ ಮಾತನಾಡಿದ್ದೇನೆ. ಇಲ್ಲಿಯೇ ಉಪಹಾರ ಸೇವಿಸಿ, ಇಲ್ಲಿನ ಶೌಚಾಲಯ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿದ್ದೇನೆ. ಬಿಜಾಪುರ, ಗುಲ್ಬರ್ಗ ಸೇರಿದಂತೆ ಹಲವು ಎಪಿಎಂಸಿ ಮಾರುಕಟ್ಟೆ ಗಳಲ್ಲಿ ಆಗುತ್ತಿರುವ ಅನ್ಯಾಯಗಳನ್ನು ಆಲಿಸಿದ್ದೇನೆ. ರೈತರು ತಾವು ಬೆಳೆದ ಬೆಳೆಗಳನ್ನು ಯಾವ ಕಾರಣಕ್ಕಾಗಿ ಬೆಂಗಳೂರಿನ ಎಪಿಎಂಸಿ ಮಾರುಕಟ್ಟೆ ಗೆ ತಂದು ಮಾರುತ್ತಿದ್ದಾರೆ ಎಂದು ಅರಿತಿದ್ದೇನೆ. ರೈತರು ನೀಡುತ್ತಿರುವ ಕಮೀಷನ್ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದೇನೆ” ಎಂದರು.

ರಾಜ್ಯದ ಸಚಿವರು ಎಪಿಎಂಸಿಗಳಿಗೆ ಭೇಟಿ ನೀಡಿ ನ್ಯಾಯ ಒದಗಿಸಬೇಕು

ರಾಜ್ಯದ ಎಲ್ಲಾ ಎಪಿಎಂಸಿ ಮಾರುಕಟ್ಟೆಗಳಿಗೆ ಸಚಿವರು ಭೇಟಿ ನೀಡಿ ಪರಿಶೀಲಿಸಿ, ರೈತರಿಗೆ ಹಾಗೂ ವರ್ತಕರಿಗೆ ನ್ಯಾಯ ಒದಗಿಸಬೇಕು. ಎಪಿಎಂಸಿ ಯವರಿಗೆ ಈ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ರೈತರಿಗೆ ಹಾಗೂ ವರ್ತಕರಿಗೆ ನ್ಯಾಯ ಒದಗಿಸಲು ನನ್ನದೇ ರೂಪುರೇಷೆಗಳಿವೆ" ಎಂದರು.

ಎಪಿಎಂಸಿ ಮಾರುಕಟ್ಟೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಪಾರ್ಕಿಂಗ್ ವ್ಯವಸ್ಥೆಗೆ ಕರೆಯಲಾಗಿದ್ದ ಟೆಂಡರ್ ಗೆ ಯಾರೂ ಅರ್ಜಿ ಸಲ್ಲಿಸಿಲ್ಲವೆಂದು ತಿಳಿದುಬಂದಿದೆ. ಈ ಬಗ್ಗೆ ಕ್ರಮ ವಹಿಸಲಾಗುವುದು" ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com