

ಬೆಂಗಳೂರು: ಮೂಲಸೌಕರ್ಯ ಹಾಗೂ ಉಪಯುಕ್ತತಾ ಕಾಮಗಾರಿಗಳಿಗೆ ಉದ್ಯಾನವನದ ಶೇ.5ರಷ್ಟು ಭೂಮಿಯನ್ನು ಬಳಸಲು ಅವಕಾಶ ನೀಡುವ ವಿವಾದಾತ್ಮಕ ಮಸೂದೆಯನ್ನು ಹಿಂಪಡೆದ ಬೆನ್ನಲ್ಲೇ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಬದಲಾವಣೆಗೆ ಮುಂದಾಗಿದೆ. ಪ್ರಸ್ತಾವಿತ ಸುರಂಗ ರಸ್ತೆ ಇನ್ನು ಮುಂದೆ ಲಾಲ್‌ಬಾಗ್ ಮೂಲಕ ಹಾದುಹೋಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಸುರಂಗ ರಸ್ತೆ ಯೋಜನೆಗೆ ಲಾಲ್‌ಬಾಗ್‌ನ ಭೂಮಿಯನ್ನು ಬಳಸುವುದಿಲ್ಲ. ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಆದರೆ ಅಂತಿಮ ನಿರ್ಧಾರ ಇನ್ನೂ ಕೈಗೊಂಡಿಲ್ಲ” ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ.
ಸರ್ಕಾರವು ನಿಮ್ಹಾನ್ಸ್‌ನ ಭೂಮಿಯ ಒಂದು ಭಾಗ, ವಿಲ್ಸನ್ ಗಾರ್ಡನ್ ಸಮೀಪದ ಸ್ಮಶಾನದ ಜಾಗ ಅಥವಾ ಲಾಲ್‌ಬಾಗ್ ರಸ್ತೆಯ ಮೂಲಕ ಸುರಂಗ ನಿರ್ಮಿಸುವ ಸಾಧ್ಯತೆಗಳನ್ನೂ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ 24ರಂದು ಕರ್ನಾಟಕ ಸರ್ಕಾರ ಉದ್ಯಾನವನಗಳ (ಸಂರಕ್ಷಣೆ) (ತಿದ್ದುಪಡಿ) ಮಸೂದೆ-2026 ಅನ್ನು ವಿಧಾನಸಭೆಯಲ್ಲಿ ತರಾತುರಿಯಲ್ಲಿ ಅಂಗೀಕರಿಸಿತ್ತು. ಆದರೆ, ನಾಗರಿಕರು, ತಜ್ಞರು ಹಾಗೂ ಪರಿಸರ ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 4ರಂದು ಸಚಿವ ಸಂಪುಟ ಮಸೂದೆಯನ್ನು ಹಿಂಪಡೆಯಿತು. ಸಾರ್ವಜನಿಕರಿಂದ ಸಲಹೆಗಳನ್ನು ಪಡೆದು, ಅಗತ್ಯ ತಿದ್ದುಪಡಿಗಳೊಂದಿಗೆ ಮಸೂದೆಯನ್ನು ಮತ್ತೆ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದರು.
ಲಾಲ್‌ಬಾಗ್‌ನ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಹಾಗೂ ಸುಮಾರು 350 ಕೋಟಿ ವರ್ಷಗಳಷ್ಟು ಹಳೆಯದಾದ ಧಾರವಾಡ ಶಿಲಾರಚನೆಯ ಭಾಗವಾಗಿರುವ ಲಾಲ್‌ಬಾಗ್ ಬಂಡೆಯ ಕೆಳಗೆ ಸುರಂಗ ನಿರ್ಮಿಸುವ ಪ್ರಸ್ತಾವನೆ ಮಸೂದೆ ಕುರಿತು ಆತಂಕಕ್ಕೆ ಕಾರಣವಾಗಿತ್ತು.
ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ನಿರ್ಮಿಸಲು ಉದ್ದೇಶಿಸಿರುವ 17.5 ಕಿ.ಮೀ. ಸುರಂಗ ರಸ್ತೆಗೆ ಈ ಭೂಮಿಯನ್ನು ಬಳಸಿಕೊಳ್ಳುವ ಉದ್ದೇಶವಿತ್ತು. ರಾಜ್ಯ ಸರ್ಕಾರದ ಪ್ರಕಾರ ಯೋಜನೆಯ ಅಂದಾಜು ವೆಚ್ಚ ರೂ.17,782 ಕೋಟಿ. ಯೋಜನೆ ಅನುಷ್ಠಾನಗೊಳಿಸಲು ಅದಾನಿ ಸಮೂಹವು ಅತಿ ಕಡಿಮೆ ಮೊತ್ತದ ಬಿಡ್ ಸಲ್ಲಿಸಿದೆ.
ಬೆಂಗಳೂರಿಗೆ ಸುರಂಗ ರಸ್ತೆ ಅಗತ್ಯವಿಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರು ಸೇರಿದಂತೆ ಸಂಚಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬದಲಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು, ವಿಶೇಷವಾಗಿ ಮೆಟ್ರೋ ಸಂಪರ್ಕವನ್ನು ವಿಸ್ತರಿಸುವುದು ಹಾಗೂ ಉಪನಗರ ರೈಲು ಯೋಜನೆಯನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.