

ಬೆಂಗಳೂರು: ಕಳೆದ ಆಗಸ್ಟ್ ತಿಂಗಳಲ್ಲಿ ಮೈಸೂರಿನಲ್ಲಿ ವಿವೇಕ ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವೇದಿಕೆಯಲ್ಲಿ ಕಾರ್ಯಕ್ರಮ ಮುಗಿದ ನಂತರ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಕೈಹಿಡಿದು ಮೂಲೆಗೆ ಕರೆದುಕೊಂಡು ಹೋಗಿ ಉಭಯ ನಾಯಕರು ಮಾತುಕತೆ ನಡೆಸಿದ್ದರು. ಅದು ಅಂದು ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು.
ರಾಜ್ಯದಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ಆಡಳಿತವಿರುವ ಮುಖ್ಯಮಂತ್ರಿ ಬಳಿ ಪ್ರಧಾನ ಮಂತ್ರಿಗಳು ಏನು ಹೇಳಿದರು ಎಂಬ ಕುತೂಹಲ ಮಾಧ್ಯಮದವರಲ್ಲಿ ಮತ್ತು ವಿಡಿಯೊ ನೋಡಿದ ಜನಸಾಮಾನ್ಯರಲ್ಲಿ ಮನೆಮಾಡಿತ್ತು.
ಅದೇ ರೀತಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ತೀವ್ರ ವಾಗ್ದಾಳಿ ನಡೆಸುವ ಉದ್ಯಮಿ ಗೌತಮ್ ಅದಾನಿ ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದು ಸಹ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಈ ಬಗ್ಗೆ ಇತ್ತೀಚೆಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಆಡಳಿತದಲ್ಲಿ 100 ದಿನಗಳನ್ನು ಪೂರ್ಣಗೊಳಿಸಿರುವ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದ ಸಂದರ್ಭದಲ್ಲಿ ಪ್ರಮುಖ ವಾಹಿನಿಯ ಖ್ಯಾತ ಪತ್ರಕರ್ತರೊಬ್ಬರಿಂದ ಪ್ರಶ್ನೆ ತೂರಿಬಂತು.
ಅದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ನಾನು ಈ ರಾಜ್ಯದ ಮುಖ್ಯಮಂತ್ರಿ, ಗೌತಮ್ ಅದಾನಿ ನನಗೆ ಹಲವು ಸಮಯಗಳಿಂದ ಗೊತ್ತು. ಅವರು ಉದ್ಯಮಿ, ಕರ್ನಾಟಕದಲ್ಲಿ ವಿದ್ಯುತ್, ಸಿಮೆಂಟ್ ಪ್ರಾಜೆಕ್ಟ್, ಮೂಲಭೂತ ಸೌಕರ್ಯ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ಇಂಧನ ಇಲಾಖೆಯಲ್ಲಿ ಕೆಲಸ ಮಾಡಿದ್ದೆ. ಅವರು ನನ್ನನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಇದೆ ಎಂದು ಹೇಳಿದಾಗ ಬೇಡ ಎನ್ನಲು ಆಗುತ್ತದೆಯೇ? ಕಾನೂನು ಪ್ರಕಾರ ಉದ್ಯಮ ಮಾಡುವವರನ್ನು ನಾನು ಬೇಡ ಎಂದು ನಿಲ್ಲಿಸಲು ಆಗುತ್ತದೆಯೇ ಎಂದು ಕೇಳಿದರು.
ಜಾಗತಿಕ ಮಟ್ಟದಲ್ಲಿ ಟೆಂಡರ್ ಕರೆದಾಗ ಉದ್ಯಮಿಯೊಬ್ಬರು ರಾಜ್ಯದ ಮುಖ್ಯಮಂತ್ರಿಯನ್ನು ಭೇಟಿ ಮಾಡಬೇಕೆಂದು ಬಂದಾಗ ನಾನು ಇಲ್ಲ ಅನ್ನಬಾರದು, ನನಗೆ ಇಲ್ಲಿ ರಾಜ್ಯದಲ್ಲಿ ಹೂಡಿಕೆ ಮುಖ್ಯ, ನನಗೆ ರಾಹುಲ್ ಗಾಂಧಿ ಸೇರಿದಂತೆ ಪಕ್ಷದವರು ಯಾರೂ ಪ್ರಶ್ನೆ ಮಾಡಲಿಲ್ಲ. ಸುಮ್ಮನೆ ಗುಲ್ಲೆಬ್ಬಿಸಿದರು, ನಾನು ಪ್ರತಿನಿತ್ಯ ಹಲವರನ್ನು ಭೇಟಿ ಮಾಡುತ್ತೇನೆ, ಬಿಜೆಪಿ ನಾಯಕರನ್ನು ಸಹ ಭೇಟಿ ಮಾಡುತ್ತೇನೆ, ಅದರಲ್ಲಿ ತಪ್ಪೇನಿದೆ ಎಂದು ಕೇಳಿದರು.
ಮೈಸೂರಿನಲ್ಲಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರ ಬಳಿ ರಾಜ್ಯದ ಬಗ್ಗೆ ದೇಶದ ಬಗ್ಗೆ, ಮಾನವೀಯತೆ ಬಗ್ಗೆ, ವಿವೇಕಾನಂದರ ಬಗ್ಗೆ ಮಾತನಾಡಿದೆ, ನನ್ನ ಪ್ರಸ್ತುತಪಡಿಸುವಿಕೆ ಬಗ್ಗೆ ಅವರಿಗೆ ಮನವರಿಕೆ ಆಗಿದೆ ಎಂದು ಕಾಣುತ್ತದೆ. ನನ್ನ ಮನವಿ ಕೂಡ ಅವರಿಗೆ ಅರ್ಥವಾಗಿದೆ ಎಂದು ಕಾಣುತ್ತದೆ. ನಮ್ಮ ಪಕ್ಷದಲ್ಲಿ ಯಾರೂ ಇಂಥವರು ಇಲ್ಲವಲ್ಲಾ, ಡಿ ಕೆಯಂಥವರು ಇಲ್ವಲ್ಲಾ ಎಂದು ಬೇಸರವಾಗಿರಬಹುದು ಅವರಿಗೆ. ಅವರಿಗೆ ನನ್ನನ್ನು ಇಷ್ಟವಾಗಿರಬಹುದು, ಅದು ಮಾನವೀಯ ಸಂಬಂಧ. ಮೋದಿಯವರು ಅವರ ಪಾರ್ಟಿಯವರನ್ನು ಕೈಹಿಡಿದು ಮಾತನಾಡಿದ್ದು ನೋಡಿಲ್ಲ, ಹೆಗಲ ಮೇಲೆ ಕೈಹಾಕಿ ಮಾತನಾಡಿದ್ದು ನೋಡಿಲ್ಲ ಎಂದರು.