

ಬೆಂಗಳೂರು: ಮನೆ ಕೆಲಸದಾಕೆ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಜೈಲಿನಲ್ಲಿದ್ದರೂ ತನ್ನ ಹಳೆಯ ಚಾಳಿಯನ್ನು ಬಿಟ್ಟಿಲ್ಲ. ಮೊಬೈಲ್ ಬಳಸುತ್ತಿದ್ದ ಪ್ರಕರಣದಲ್ಲಿ ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿದ್ದು, ಅಲ್ಲಿಯೂ ಪನ್ ಡ್ರೈವ್ ಬಳಸಿ ಅಶ್ಲೀಲ ವಿಡಿಯೋ ವೀಕ್ಷಿಸಿರುವುದು ಕಂಡುಬಂದಿದೆ.
ಮೊಬೈಲ್ ಬಳಸುತ್ತಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಎಫ್‌ಎಸ್‌ಎಲ್ (FSL Report) (ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ) ವರದಿ ಸಿಕ್ಕಿದೆ. ಇದರಲ್ಲಿ ಮೊಬೈಲ್ ಡೇಟಾದ (Mobile Data) ಮಾಹಿತಿ ಲಭ್ಯವಾಗಿದೆ. ಮೊಬೈಲ್ ಡೇಟಾದಲ್ಲಿ ಹಲವು ವಿವರಗಳು ಪತ್ತೆಯಾಗಿದ್ದು, ಪೆನ್ ಡ್ರೈವ್ ನೋಡಿ ಸ್ವತಃ ಪೊಲೀಸರೇ ಶಾಕ್ ಆಗಿದ್ದಾರೆ.
ಪ್ರಜ್ವಲ್ ಪೆನ್ ಡ್ರೈವ್ ನಲ್ಲಿ ಬರೋಬ್ಬರಿ 173 ವೀಡಿಯೋ ಫೈಲ್ಸ್ ಪತ್ತೆಯಾಗಿದೆ. ಅದರಲ್ಲಿ ಆತನದ್ದೇ 3 ವೀಡಿಯೊಗಳು ಪತ್ತೆಯಾಗಿದೆ. ಸುಮಾರು ನೂರಕ್ಕೂ ಹೆಚ್ಚು ಅಶ್ಲೀಲ ವೀಡಿಯೋಗಳು ಪತ್ತೆಯಾಗಿದ್ದು, ತನ್ನದೇ ಆದ ವೀಡಿಯೊ ವೀಕ್ಷಿಸಿ ವಿಕೃತ ಆನಂದ ಪಡ್ತಿದ್ನಾ ಪ್ರಜ್ವಲ್? ಎಂಬ ಅನುಮಾನ ವ್ಯಕ್ತವಾಗಿದೆ. ಇದರ ಜೊತೆಗೆ ಕೆಲವು ಮಹಿಳೆಯ ಜೊತೆ ವೀಡಿಯೋ ಕಾಲ್ ಮಾಡಿರೋದು ಬೆಳಕಿಗೆ ಬಂದಿದೆ. ಪ್ರಜ್ವಲ್ ರೇವಣ್ಣಗೆ ಮೊಬೈಲ್ ತಲುಪಿಸಿದ್ದು ಜೈಲು ವಾರ್ಡನ್ ಎಂದು ತಿಳಿದುಬಂದಿದೆ.
ಅದೇ ಮೊಬೈಲ್ ಬಳಸಿ ಹಲವು ಯುವತಿಯರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ. ಮೊಬೈಲ್ ಪಡೆಯಲು ಒಂದು ಲಕ್ಷ ರೂಪಾಯಿ ನೀಡಿದ್ದು, ಸಿಮ್ ಕಾರ್ಡ್‌ಗೆ 50 ಸಾವಿರ ರೂಪಾಯಿ ಕೊಟ್ಟು ಖರೀದಿಸಿದ್ದಾರೆ ಎಂದು ಮಾಹಿತಿ ಇದೆ. ಸದ್ಯ ಕೆಲವು ವೀಡಿಯೋಗಳು ಮಾತ್ರ ಎಫ್‌ಎಸ್‌ಎಲ್‌ನಿಂದ ರಿಟ್ರೀವ್ ಆಗಿವೆ. ಈ ವೀಡಿಯೋಗಳ ಆಧಾರದಲ್ಲಿ ಪ್ರಜ್ವಲ್ ರೇವಣ್ಣ ರನ್ನು ಮತ್ತೊಮ್ಮೆ ವಿಚಾರಣೆ ನಡೆಸುವ ಸಾಧ್ಯತೆಯಿದೆ. ವೀಡಿಯೋ ಕಾಲ್ ಮಾಡಿದ ಮಹಿಳೆಯರನ್ನು ಸಹ ನೋಟಿಸ್ ನೀಡಿ ವಿಚಾರಣೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಈ ಹಿಂದೆ ಸಿಸಿಬಿ ದಾಳಿ ವೇಳೆ ಒಂದು ಮೊಬೈಲ್ ಮತ್ತು ಪೆನ್ ಡ್ರೈವ್ ಪತ್ತೆಯಾಗಿತ್ತು. ಮೊಬೈಲ್‌ನಲ್ಲಿ ಕೆಲವು ವೀಡಿಯೋಗಳು ರಿಟ್ರೀವ್ ಆಗಿದ್ದು, ಇನ್ನು ಕೆಲವು ವೀಡಿಯೋಗಳು ಪೆನ್ ಡ್ರೈವ್‌ನಲ್ಲಿ ಪತ್ತೆಯಾಗಿವೆ. ಪ್ರಜ್ವಲ್ ರೇವಣ್ಣ ವಿರುದ್ಧ ಈಗಾಗಲೇ ಹಲವು ಪ್ರಕರಣಗಳಿವೆ. ಈ ಹೊಸ ಮಾಹಿತಿಗಳು ತನಿಖೆಗೆ ಹೊಸ ತಿರುವು ನೀಡಿವೆ.
ವೀಡಿಯೋಗಳು ಮತ್ತು ಕಾಲ್ ವಿವರಗಳನ್ನು ಆಧರಿಸಿ ಮತ್ತಷ್ಟು ಜನರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಜೈಲು ಆಡಳಿತ ಮತ್ತು ಸಂಬಂಧಪಟ್ಟವರ ವಿರುದ್ಧವೂ ಕ್ರಮ ಕೈಗೊಳ್ಳಬಹುದು. ಮೊಬೈಲ್ ತಲುಪಿಸಿದ ವಾರ್ಡನ್ ಬಗ್ಗೆ ಸಹ ತನಿಖೆ ನಡೆಯಲಿದೆ.