

ಬೆಂಗಳೂರು: ಯಾವಾಗಲೂ ಅಕ್ರಮ ಮತ್ತು ಹಗರಣಗಳಿಂದಲೇ ಸುದ್ದಿಯಾಗುವ KPSC ಯನ್ನ ರದ್ದು ಮಾಡಬೇಕು ಎಂದು ಅವಗಾವಾಗ ಸದ್ದು ಕೇಳಿಬರುತ್ತಲೇ ಇರುತ್ತದೆ. ಅದಕ್ಕೆ ಈಗ ಸಚಿವ ಈಶ್ವರ ಖಂಡ್ರೆ ಕೂಡ ತಮ್ಮ ಧ್ವನಿ ಸೇರಿಸಿದ್ದು, ಕರ್ನಾಟಕ ಲೋಕಸೇವಾ ಆಯೋಗದ ಮೇಲೆ ನಿರಂತರವಾಗಿ ಕೇಳಿಬರುತ್ತಿರುವ ಭ್ರಷ್ಟಾಚಾರ ಮತ್ತು ಹಗರಣಗಳ ಹಿನ್ನೆಲೆಯಲ್ಲಿ, ಆಯೋಗವನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ಪಾರದರ್ಶಕತೆ ಕೊರತೆ!
ಕರ್ನಾಟಕ ಲೋಕಸೇವಾ ಆಯೋಗವನ್ನು ರದ್ದುಪಡಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅವರು, "ಕೆಪಿಎಸ್‌ಸಿ ಸಂಸ್ಥೆಯ ಮೇಲೆ 1998 ರಿಂದಲೂ ನಿರಂತರವಾಗಿ ಭ್ರಷ್ಟಾಚಾರ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮಗಳು ನಡೆದಿರುವ ಗುರುತರ ಆರೋಪಗಳು ಕೇಳಿಬರುತ್ತಿವೆ. ಇತ್ತೀಚೆಗೆ ನಡೆದಿರುವ ಪಶುವೈದ್ಯರ ನೇಮಕಾತಿ ಹಗರಣದ ತನಿಖೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಈ ಸ್ವಾಯತ್ತ ಸಂಸ್ಥೆಯು ತನ್ನ ಪಾರದರ್ಶಕತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೊತೆಗೆ, ಕೆಪಿಎಸ್‌ಸಿ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ವಿವಿಧ ಸರ್ಕಾರಿ ಇಲಾಖೆಗಳ ನೇಮಕಾತಿಯನ್ನು ಪಾರದರ್ಶಕವಾಗಿ ನಡೆಸುವುದು ಅದರ ಜವಾಬ್ದಾರಿಯಾಗಿದೆ. ಆದರೆ ಆಯೋಗವು ಈ ನಿಟ್ಟಿನಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ತಿಳಿಸಿದ್ದಾರೆ.
ರದ್ದತಿಗೆ ಒತ್ತಾಯಿಸಲು ಪ್ರಮುಖ ಕಾರಣ:
ಕೆಪಿಎಸ್‌ಸಿ ಸಂಸ್ಥೆಯ ಮೇಲೆ 1998 ರಿಂದಲೂ ನಿರಂತರವಾಗಿ ಭ್ರಷ್ಟಾಚಾರ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮಗಳು ನಡೆದಿರುವ ಗುರುತರ ಆರೋಪಗಳು ಕೇಳಿಬರುತ್ತಿವೆ. ಇತ್ತೀಚೆಗೆ ನಡೆದಿರುವ ಪಶುವೈದ್ಯರ ನೇಮಕಾತಿ ಹಗರಣದ ತನಿಖೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಈ ಸ್ವಾಯತ್ತ ಸಂಸ್ಥೆಯು ತನ್ನ ಪಾರದರ್ಶಕತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾಗಾದ್ರೆ, ಪರ್ಯಾಯ ಪ್ರಸ್ತಾವನೆಗಳೇನು?
KPSC ಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದ ನಂತರ ಮುಂದಿನ ನೇಮಕಾತಿಗಳಿಗಾಗಿ ಸಚಿವ ಈಶ್ವರ ಖಂಡ್ರೆ ಅವರು ಎರಡು ಮುಖ್ಯ ಪರ್ಯಾಯ ಮಾರ್ಗಗಳನ್ನು ಸಿಎಂ ಮುಂದೆ ಇಟ್ಟಿದ್ದಾರೆ:
ಯುಪಿಎಸ್ಸಿ ಮಾದರಿ: ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲೇ ಕರ್ನಾಟಕದಲ್ಲೂ ಅತ್ಯಂತ ಕಟ್ಟುನಿಟ್ಟಿನ ಹೊಸ ಪಾರದರ್ಶಕ ವ್ಯವಸ್ಥೆಯನ್ನು ಪುನಾರಚನೆ ಮಾಡುವುದು.
ಕೆಇಎಗೆ ಜವಾಬ್ದಾರಿ: ಈಗಾಗಲೇ ರಾಜ್ಯದಲ್ಲಿ ಹಲವು ಪ್ರಮುಖ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಇನ್ಮುಂದೆ ಎಲ್ಲಾ ಸರ್ಕಾರಿ ಹುದ್ದೆಗಳ ನೇಮಕಾತಿಯ ಸಂಪೂರ್ಣ ಹೊಣೆಗಾರಿಕೆಯನ್ನು ವಹಿಸಿಕೊಡುವುದು.
ಮುಂದುವರೆದು, ಹಗರಣ ಮುಕ್ತ ಹಾಗೂ ಪಾರದರ್ಶಕವಾದ ಮೌಲ್ಯಮಾಪನ ಮತ್ತು ಸಂದರ್ಶನ ಪ್ರಕ್ರಿಯೆ ಜಾರಿಗೆ ಬಂದರೆ ಮಾತ್ರ ಕಷ್ಟಪಟ್ಟು ಓದುವ ಕರ್ನಾಟಕದ ಗ್ರಾಮೀಣ ಹಾಗೂ ಪ್ರತಿಭಾವಂತ ಅಭ್ಯರ್ಥಿಗಳಿಗೆ ನ್ಯಾಯ ಸಿಗುತ್ತದೆ ಎಂಬುದು ಸರ್ಕಾರದ ಒಮ್ಮತದ ನಿಲುವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.