

ಬೆಂಗಳೂರು: ಜೈಲಿನಲ್ಲಿರುವ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್ ನನ್ನು “ರಾಷ್ಟ್ರವಾದಿ” ಎಂದು ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಕರೆದಿದ್ದು ಅದಕ್ಕೆ ವಿರೋಧ ಪಕ್ಷ ಬಿಜೆಪಿ ನಾಯಕರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
2020ರ ಸೆಪ್ಟೆಂಬರ್‌ನಲ್ಲಿ ಬಂಧಿಸಲ್ಪಟ್ಟ ಉಮರ್ ಖಾಲಿದ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿ ಪ್ರಕರಣ ದಾಖಲಿಸಲಾಗಿದೆ. 2020ರ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ 53 ಮಂದಿ ಮೃತಪಟ್ಟಿದ್ದು, 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಗಲಭೆಯ ಪ್ರಮುಖ ಸಂಚುಕೋರರಲ್ಲಿ ಖಾಲಿದ್ ಕೂಡ ಒಬ್ಬರು ಎಂದು ಆರೋಪಿಸಲಾಗಿದೆ.
ಉಮರ್ ಖಾಲಿದ್ ರಾಷ್ಟ್ರವಾದಿ. ಖಾಲಿದ್ ಬಗ್ಗೆ ಮಾತನಾಡಲು ಎಬಿವಿಪಿಗೆ ಯಾವುದೇ ಹಕ್ಕಿಲ್ಲ. ಏಕೆಂದರೆ ಎಬಿವಿಪಿ ನಾಥೂರಾಮ್ ಗೋಡ್ಸೆಯನ್ನು ಆರಾಧಿಸುತ್ತದೆ. ಗೋಡ್ಸೆ ದೇಶವಿರೋಧಿ ಹಾಗೂ ಭಯೋತ್ಪಾದಕನಾಗಿದ್ದ, ದೇಶದ ಮೊದಲ ಭಯೋತ್ಪಾದಕ. ಹೀಗಾಗಿ ಖಾಲಿದ್ ಬಗ್ಗೆ ಮಾತನಾಡಲು ಅವರಿಗೆ ನೈತಿಕ ಹಕ್ಕು ಅಥವಾ ನೈತಿಕ ನೆಲೆ ಇಲ್ಲ” ಎಂದು ಎನ್‌ಎಲ್‌ಎಸ್‌ಐಯು ಆವರಣದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ಎಬಿವಿಪಿ ವಿರೋಧಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಹರಿಪ್ರಸಾದ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದರು.
ಹರಿಪ್ರಸಾದ್ ಅವರ ಹೇಳಿಕೆಯನ್ನು ಬಿಜೆಪಿ ಖಂಡಿಸಿದ್ದು, ಭಾರತವನ್ನು ವಿಭಜಿಸಲು ಬಯಸುವವರನ್ನು ರಾಷ್ಟ್ರವಾದಿಗಳು ಎಂದು ಕರೆಯುವ ಮೂಲಕ ಕಾಂಗ್ರೆಸ್ ದೇಶಭಕ್ತಿಯ ವ್ಯಾಖ್ಯಾನವನ್ನೇ ಬದಲಾಯಿಸುತ್ತಿದೆ ಎಂದು ಆರೋಪಿಸಿದೆ.
ಎಕ್ಸ್‌ನಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಉಮರ್ ಖಾಲಿದ್ ಅವರನ್ನು ರಾಷ್ಟ್ರವಾದಿ ಎಂದು ಕರೆಯುವುದು ದೇಶದ ಪ್ರತಿಯೊಬ್ಬ ದೇಶಭಕ್ತ ಭಾರತೀಯನಿಗೆ ಮಾಡಿರುವ ಅವಮಾನವಾಗಿದೆ ಎಂದು ಹೇಳಿದ್ದಾರೆ.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಪ್ರತಿಯೊಬ್ಬ ಹುತಾತ್ಮ ಹಾಗೂ ಕಷ್ಟ-ಅಪಾಯಗಳನ್ನು ಲೆಕ್ಕಿಸದೆ ಗಡಿಯಲ್ಲಿ ದೇಶವನ್ನು ರಕ್ಷಿಸುತ್ತಿರುವ ಪ್ರತಿಯೊಬ್ಬ ಸೈನಿಕನಿಗೂ ಇದು ಅವಮಾನ ಎಂದು ಅವರು ಹೇಳಿದ್ದಾರೆ.
ಭಾರತ್ ತೇರೆ ತುಕ್ಡೆ ಹೊಂಗೆ’, ‘ತುಮ್ ಕಿತ್ನೇ ಅಫ್ಜಲ್ ಮಾರೋಗೇ, ಹರ್ ಘರ್ ಸೆ ಅಫ್ಜಲ್ ನಿಕ್ಲೇಗಾ’ ಎಷ್ಟು ಅಫ್ಜಲ್‌ಗಳನ್ನು ಕೊಲ್ಲುತ್ತೀರಿ, ಪ್ರತಿ ಮನೆಯಿಂದಲೂ ಅಫ್ಜಲ್ ಹೊರಬರುತ್ತಾನೆ ಮತ್ತು ‘ಕಾಶ್ಮೀರ ಭಾರತಕ್ಕೆ ಸೇರಿದ್ದಲ್ಲ’ ಎಂಬಂತಹ ಹೇಳಿಕೆಗಳನ್ನು ಉಮರ್ ಖಾಲಿದ್ ನೀಡಿದ್ದಾರೆ. ಆದರೂ ಕಾಂಗ್ರೆಸ್ ಅವರನ್ನು ‘ರಾಷ್ಟ್ರವಾದಿ’ ಎಂದು ಕರೆಯಲು ಬಯಸುತ್ತಾರೆ. ಇದು ಕಾಂಗ್ರೆಸ್‌ನ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಹರಿಪ್ರಸಾದ್ ಅವರು ತಮ್ಮ ಹೇಳಿಕೆಗೆ ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಎಬಿವಿಪಿ, ಕಾಂಗ್ರೆಸ್ ನಾಯಕನ ಬೌದ್ಧಿಕ ದಿವಾಳಿತನವನ್ನು ಬಹಿರಂಗಪಡಿಸಿದ್ದೇವೆ ಎಂದು ಹೇಳಿದೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವ ವಿಚಾರವಾಗಿ ಹರಿಪ್ರಸಾದ್, ಬಿಜೆಪಿ ಆಡಳಿತದ ಗೋವಾ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಅದನ್ನು ಜಾರಿಗೊಳಿಸಲಾಗಿದೆಯೇ ಎಂದು ಪ್ರಶ್ನಿಸಿದರು.
ಯುಸಿಸಿ ಜಾರಿಗೊಳಿಸುವುದರಿಂದ ಏನು ಪ್ರಯೋಜನ ಬಿಜೆಪಿ ಅದನ್ನು ಗೋವಾದಲ್ಲಿ ಜಾರಿಗೊಳಿಸಿದ್ದಾರೆಯೇ ಅಲ್ಲಿ ಅನುಷ್ಠಾನಗೊಳಿಸಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು.
2001ರಲ್ಲಿ ಸಂಸತ್ತಿನ ಮೇಲೆ ನಡೆದ ಭೀಕರ ದಾಳಿಯ ಪ್ರಮುಖ ಸಂಚುಕೋರ ಹಾಗೂ ಅಪರಾಧಿ ಎಂದು ಘೋಷಿಸಲ್ಪಟ್ಟ ಭಯೋತ್ಪಾದಕ ಅಫ್ಜಲ್ ಗುರು ಅವರನ್ನು ಬಹಿರಂಗವಾಗಿ ಬೆಂಬಲಿಸಿ, ಅವರ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಆಯೋಜಿಸಿದ್ದ ವ್ಯಕ್ತಿಯನ್ನು ರಾಷ್ಟ್ರವಾದಿ ಎಂದು ಕಾಂಗ್ರೆಸ್ ಪಕ್ಷ ಹೇಗೆ ಕರೆಯುತ್ತದೆ ಎಂದು ಪ್ರಶ್ನಿಸಿದೆ.
ಹರಿಪ್ರಸಾದ್ ಅವರ ದೃಷ್ಟಿಯಲ್ಲಿ ಖಾಲಿದ್ ರಾಷ್ಟ್ರವಾದಿಯಾಗಿದ್ದರೆ, ಅಫ್ಜಲ್ ಗುರು ಅವರನ್ನು ಗೌರವಿಸಿ, ವೈಭವೀಕರಿಸುವ ಕಾರ್ಯಕ್ರಮಗಳನ್ನು ಆಯೋಜಿಸಿದವರನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತದೆಯೇ ಎಂದು ಎಬಿವಿಪಿ ಪ್ರಶ್ನಿಸಿದೆ.