

ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ನಾಯಕರು ಭಾರತವನ್ನು ವಿಭಜಿಸಲು ಬಯಸುವವರನ್ನು ಬೆಂಬಲಿಸುತ್ತಿದ್ದು, ದೇಶಭಕ್ತರನ್ನು ಅವಮಾನಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಆರೋಪಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಉಮರ್ ಖಾಲಿದ್ ಅವರನ್ನು ಬೆಂಬಲಿಸಿ, ಅವರನ್ನು ‘ರಾಷ್ಟ್ರವಾದಿ’ ಎಂದು ಕರೆದಿರುವ ಬೆನ್ನಲ್ಲೇ ಸಿ.ಟಿ. ರವಿ ಈ ಹೇಳಿಕೆ ನೀಡಿದ್ದಾರೆ.
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ‘ಭಾರತ್ ಜೋಡೋ’ ಯಾತ್ರೆಯ ಉದ್ದೇಶವನ್ನು ಪ್ರಶ್ನಿಸಿದ ಅವರು, “ರಾಹುಲ್ ಗಾಂಧಿ ಅವರ ಮನಸ್ಸಿನಲ್ಲಿ ‘ಭಾರತ್ ಜೋಡೋ’ ಬದಲು ‘ಭಾರತ್ ತೋಡೋ’ ಇರಬಹುದು ಎಂದು ನನಗನಿಸುತ್ತದೆ” ಎಂದು ಹೇಳಿದರು.
ಕಾಂಗ್ರೆಸ್ ನವರದ್ದು ಬೌದ್ಧಿಕ ದಿವಾಳಿತನ ಮಾತ್ರ ಅಲ್ಲ, ರಾಷ್ಟ್ರ ಘಾತುಕ ಹೇಳಿಕೆ, ರಾಷ್ಟ್ರ ಭಕ್ತರನ್ನು ಅಪಮಾನಿಸುವ ಹೇಳಿಕೆಯಾಗಿದೆ. ಬಿ.ಕೆ. ಹರಿಪ್ರಸಾದ್ ಅವರು ರಾಜಕೀಯ ವಿರೋಧಿ ಅಂದುಕೊಂಡಿದ್ದೆ. ಅವರು ರಾಷ್ಟ್ರ ವಿರೋಧಿ ಅಂತ ತಿಳಿದುಕೊಂಡಿರಲಿಲ್ಲ. ದೇಶ್ ತೇರೇ ತುಕ್ಡೆ ಹೋಂಗೆ ಎಂದಂತವನನ್ನು ರಾಷ್ಟ್ರೀಯವಾದಿ ಅಂದಿದ್ದು ಅಚ್ಚರಿ ಮಾತ್ರ ತಂದಿಲ್ಲ, ಬಹಳ ಆಘಾತ ತಂದಿದೆ. ಅವನು ಯಾವ ರಾಷ್ಟ್ರಕ್ಕೆ ರಾಷ್ಟ್ರೀಯವಾದಿ? ಭಾರತವನ್ನು ವಿಭಜಿಸಿ, ತುಂಡು, ತುಂಡಾಗಿ ಮಾಡುವುದು ಕಾಂಗ್ರೆಸ್ನ ಅಜೆಂಡಾ ಅನ್ನೋದು ಇದರಿಂದ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ಕಸಬ್ನನ್ನೂ ಹುತಾತ್ಮ ಅಂತ ಕರೆದರೆ, ಜೈಶ್ ಎ ಮೊಹಮ್ಮದ್ ಸಂಘಟನೆಯವನನ್ನೂ ಹುತಾತ್ಮ ಅಂತ ಕರೆದರೆ ಹೇಗೆ ಅಪಹಾಸ್ಯಕ್ಕೆ ಒಳಗಾಗುತ್ತೀರೋ ಹಾಗೇ ನೀವು ಅಪಹಾಸ್ಯಕ್ಕೆ ಒಳಗಾಗುತ್ತೀರಿ. ಮೈ ಮರೆಯುವ ಪರಿಣಾಮವಾಗಿ, ಮತ ಬ್ಯಾಂಕ್ನ ಪರಿಣಾಮವಾಗಿ ಹೇಳಿಕೆ ಕೊಟ್ಟರೆ ನೀವು ಕಾಂಗ್ರೆಸ್ಗೇ ಮಾಡಿದ ಅಪಮಾನವಾಗುತ್ತದೆ. ನಿಮ್ಮ ಹೇಳಿಕೆ ದೇಶಕ್ಕಾಗಿ ಹೋರಾಡಿದವರಿಗೆ ಮಾಡಿದ ಅಪಮಾನವಾಗಿದೆ ಎಂದು ಸಿ ಟಿ ರವಿ ಕಿಡಿಕಾರಿದರು.
ನಿಮ್ಮ ಹೇಳಿಕೆ ರಾಹುಲ್ ಗಾಂಧಿ ಹೇಳಿಕೆನಾ? ಸೋನಿಯಾ ಗಾಂಧಿ ಹೇಳಿಕೆನಾ?, ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆನಾ? ಇದು ಕಾಂಗ್ರೆಸ್ನ ಹೇಳಿಕೆನಾ? ಎಂಬುದನ್ನು ಸ್ಪಷ್ಟಪಡಿಸಿ. ನಿಮ್ಮ ಹೇಳಿಕೆ ಭಾರತ್ ಜೋಡೋ ಅಲ್ಲ, ಭಾರತ ತೋಡೋ ಆಗಿದೆ. ಇಂಥ ಮನಸ್ಥಿತಿಯವರಿಗೆ ಅಜ್ಮಲ್ ಕಸಬ್ ಕೂಡಾ ದೇಶಭಕ್ತನಂತೆ ಕಾಣ್ತಾನೆ ಎಂದು ವಾಗ್ದಾಳಿ ನಡೆಸಿದರು.