

ಬೆಂಗಳೂರು: ವಿಧಾನ ಪರಿಷತ್ ಕಲಾಪದ ವೇಳೆ ‘ವಂದೇ ಮಾತರಂ’ ಗೀತೆಯ ಗಾಯನದ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಸೋಮವಾರ ತೀವ್ರ ವಾಕ್ಸಮರ ನಡೆದಿದೆ.
ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಬಿಜೆಪಿ ಸದಸ್ಯರು ಪ್ರಶ್ನಿಸಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಾಪ ಆರಂಭವಾಗುತ್ತಿದ್ದಂತೆ ‘ವಂದೇ ಮಾತರಂ’ ಗೀತೆ ಪ್ರಸ್ತುತಪಡಿಸಲಾಯಿತು. ಕಾಂಗ್ರೆಸ್ ಸದಸ್ಯರು ಎರಡು ಚರಣಗಳ ಬಳಿಕ ಗಾಯನವನ್ನು ನಿಲ್ಲಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಪೂರ್ಣ ಗೀತೆಯನ್ನು ಹಾಡಿದರು. ಬಳಿಕ ಸಭಾಪತಿ ಸಂವಿಧಾನದ ಪೀಠಿಕೆಯನ್ನು ಓದಿದರು.
ಸಚಿವ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂದು ಸರ್ಕಾರ ನಿರ್ಧರಿಸಿದೆ ಎಂದು ಸ್ಪಷ್ಟಪಡಿಸಿದರು.
ನಮ್ಮ ಸರ್ಕಾರದ ಕಾರ್ಯಕ್ರಮಗಳಲ್ಲಿ ಎರಡು ಚರಣ ಹಾಡುತ್ತೇವೆ. ಪ್ರಧಾನಿ ಅಥವಾ ರಾಷ್ಟ್ರಪತಿ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಪೂರ್ಣ ಗೀತೆ ಹಾಡಲಾಗುತ್ತದೆ. ನಮ್ಮ ಕಾರ್ಯಕ್ರಮಗಳಲ್ಲಿ ಪೂರ್ಣ ಗೀತೆ ಹಾಡುವುದಿಲ್ಲ ಎಂದು ಹೇಳಿದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು.
ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ಈ ಹಿಂದೆ ಸದನದಲ್ಲಿ ಪೂರ್ಣ ‘ವಂದೇ ಮಾತರಂ’ ಹಾಡಲಾಗುತ್ತಿತ್ತು. ಇದೀಗ ಎರಡು ಚರಣಗಳಿಗೆ ಸೀಮಿತಗೊಳಿಸಿರುವುದು ಏಕೆ ಎಂದು ಪ್ರಶ್ನಿಸಿದರು. ಈ ವಿಚಾರವಾಗಿ ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಗ್ವಾದ ತೀವ್ರಗೊಂಡಿತು.
ಈ ವೇಳೆ ಮಧ್ಯಪ್ರವೇಶಿಸಿದ ಬಿ.ಕೆ. ಹರಿಪ್ರಸಾದ್, ‘ಈ ಸದನದಲ್ಲಿ ಈ ಹಿಂದೆ ಎರಡು ಚರಣಗಳನ್ನು ಮಾತ್ರ ಹಾಡಲಾಗುತ್ತಿತ್ತು. ಬಿಜೆಪಿ ಸಭಾಪತಿ ಬಂದಾಗ ಪೂರ್ಣ ಗೀತೆ ಹಾಡಲು ಆರಂಭಿಸಿದೆ. ಈ ಕುರಿತು ಸದನದಲ್ಲಿ ಚರ್ಚೆಯಾಗಲಿ. ಎರಡು ಚರಣಗಳನ್ನು ಏಕೆ ಹಾಡಬೇಕು ಎಂಬುದರ ಬಗ್ಗೆಯೂ ಚರ್ಚೆಯಾಗಲಿ’ ಎಂದು ಹೇಳಿದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
‘ಇದು ಕಾಂಗ್ರೆಸ್ ಕಚೇರಿ ಅಲ್ಲ. ಪೂರ್ಣ ಗೀತೆಯನ್ನು ಏಕೆ ಹಾಡಬಾರದು?’ ಎಂದು ಬಿಜೆಪಿ ಸದಸ್ಯರು ಪ್ರಶ್ನಿಸಿದರು.
ಸಭಾಪತಿಗೆ ಈ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಸರ್ಕಾರದ ಆದೇಶದಂತೆ ನಡೆದುಕೊಳ್ಳಲಾಗುತ್ತಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ‘ಹಾಗಾದರೆ ಸಭಾಪತಿ ಅಸಹಾಯಕರೇ?’ ಎಂದು ಪ್ರಶ್ನಿಸಿದರು. ಛಲವಾದಿ ನಾರಾಯಣಸ್ವಾಮಿ ಕೂಡ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.
‘ಸಭಾ ನಾಯಕರಿಗೆ ಸದನದ ಬಗ್ಗೆ ಗೊತ್ತೇ ಇಲ್ಲ. ಸಭಾಪತಿಗಳಿಗೆ ಏನೂ ಮಾಡಲು ಸಾಧ್ಯವಿಲ್ಲ ಎಂದರೆ ಹೇಗೆ? ಸಭಾಪತಿಗಳ ಕೈಯಲ್ಲಿ ಏನೂ ಇಲ್ಲ ಎಂದು ಸಭಾ ನಾಯಕರು ಹೇಳುತ್ತಿದ್ದಾರೆ. ನೀವು ಕಾಂಗ್ರೆಸ್‌ನ ಸಭಾಪತಿಗಳೇ? ಕಾನೂನು ಗೊತ್ತಿಲ್ಲವೇ? ಈ ಬಗ್ಗೆ ಸಭಾಪತಿಗಳು ಸ್ಪಷ್ಟನೆ ನೀಡಬೇಕು’ ಎಂದು ಆಗ್ರಹಿಸಿದರು.
ಈ ವೇಳೆ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡುವುದಾಗಿ ಯತೀಂದ್ರ ಸಿದ್ದರಾಮಯ್ಯ ಹೇಳಿದಾಗ, ‘ನಿಮ್ಮ ಸ್ಪಷ್ಟನೆ ಬೇಡ, ಸಭಾಪತಿಗಳು ಮಾತನಾಡಲಿ’ ಎಂದು ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು. ಈ ವಿಚಾರವಾಗಿ ಅವರು ಸರ್ಕಾರದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಇದೇ ವೇಳೆ ಸಿ.ಟಿ. ರವಿ, ‘ಸಭಾಪತಿ ಪೀಠ ಸಂವಿಧಾನದ ಪೀಠವೋ ಅಥವಾ ಕಾಂಗ್ರೆಸ್‌ನ ಪೀಠವೋ?’ ಎಂದು ಪ್ರಶ್ನಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ನಡುವೆ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವಿನ ವಾಗ್ವಾದ ಮುಂದುವರಿಯಿತು.