

ಪೌರಾಡಳಿತ ಸಚಿವ ಹೆಚ್ ಸಿ ಬಾಲಕೃಷ್ಣ ಇಂದು ಮುಂಜಾನೆ ಬೆಂಗಳೂರಿನ ಮಾದನಾಯಕನಹಳ್ಳಿ ನಗರಸಭೆಗೆ ದಿಢೀರ್ ಭೇಟಿ ನೀಡಿ, ಅಲ್ಲಿನ ವಾಸ್ತವ ಸ್ಥಿತಿಗತಿಗಳನ್ನು ಅರಿಯುವ ಪ್ರಯತ್ನ ಮಾಡಿದರು. ಈ ವೇಳೆ ಜನಪರವಾದ ಕೆಲಸ ಸರಿಯಾಗಿ ಮಾಡದಿದ್ದರೆ ನಿಮ್ಮನ್ನು ಗುಲ್ಬರ್ಗಕ್ಕೆ ವರ್ಗಾವಣೆ ಮಾಡಬೇಕಾಗುತ್ತದೆ ಹುಷಾರ್ ಎಂದು ವಾರ್ನಿಂಗ್ ಮಾಡಿದ ಪ್ರಸಂಗ ನಡೆಯಿತು.
ವಾರ್ಡ್‌ಗಳಲ್ಲಿ ಪ್ರತಿನಿತ್ಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರೊಂದಿಗೆ ಮಾತುಕತೆ ನಡೆಸಿ, ಅವರ ದಿನನಿತ್ಯದ ಕಾರ್ಯವೈಖರಿ, ಸಮಸ್ಯೆಗಳು ಹಾಗೂ ಅಗತ್ಯತೆಗಳ ಕುರಿತು ಮಾಹಿತಿ ಪಡೆದರು. ನಗರಗಳ ಸ್ವಚ್ಛತೆ, ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡುವ ಪೌರಕಾರ್ಮಿಕರ ಶ್ರೇಯೋಭಿವೃದ್ಧಿಗೆ ಹಾಗೂ ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಆತ್ಮಸ್ಥೈರ್ಯ ತುಂಬಲು ಸರ್ಕಾರ ಸದಾ ಬದ್ಧವಾಗಿದೆ ಎಂದು ಸಚಿವರು ಹೇಳಿದರು.
ಜನಸಾಮಾನ್ಯರಿಗೆ ಸ್ಪಂದಿಸುವ, ಪಾರದರ್ಶಕ ಹಾಗೂ ಜನಸ್ನೇಹಿ ಆಡಳಿತ ನೀಡುವುದು ನಮ್ಮ ಸರ್ಕಾರದ ಪ್ರಮುಖ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಕಚೇರಿಗಳಲ್ಲೇ ಕುಳಿತು ವರದಿ ಪಡೆಯುವುದಕ್ಕಿಂತ, ನೈಜ ಸ್ಥಿತಿಗತಿಗಳನ್ನು ಖುದ್ದಾಗಿ ಪರಿಶೀಲಿಸಿ, ಸಮಸ್ಯೆಗಳನ್ನು ಗುರುತಿಸಿ, ಸ್ಥಳದಲ್ಲಿಯೇ ಕ್ರಮ ಕೈಗೊಳ್ಳುವ ಉದ್ದೇಶದಿಂದ ರಾಜ್ಯಾದ್ಯಂತ ‘Reality Check’ ನಡೆಸಲು ಮುಂದಾಗಿದ್ದೇವೆ ಎಂದರು.
ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಪಟ್ಟಣ ಪಂಚಾಯಿತಿಗಳು, ಪುರಸಭೆಗಳು ಹಾಗೂ ನಗರಸಭೆಗಳಿಗೆ ಭೇಟಿ ನೀಡಿ, ಆಡಳಿತ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಪರಿಶೀಲಿಸಿ, ಅಗತ್ಯ ಸುಧಾರಣೆಗಳನ್ನು ಕೈಗೊಂಡು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಮೂಲಾಗ್ರ ಬದಲಾವಣೆ ತರಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಹೇಳಿದ್ದಾರೆ.
ಎಸಿ ರೂಂನಿಂದ ಹೊರಬಂದು ಕೆಲಸ ಮಾಡಿ
ರಸ್ತೆ ಬದಿ ಕಸ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ನೀವು ಇಲ್ಲೆಲ್ಲಾ ಓಡಾಡಿ ನೋಡಿದ್ದೀರಾ, ಓಡಾಡಿದ್ದರೆ ಗೊತ್ತಾಗೋದು, ತಮಾಷೆ ಆಡುತ್ತಿದ್ದೀರಾ, ಧಿಮಾಕು ಮಾಡುತ್ತಿದ್ದೀರಾ, ಬ್ಲಾಕ್ ಸ್ಪಾರ್ಟ್ಸ್ ಗಳನ್ನು ಕ್ಲಿಯರ್ ಮಾಡಬೇಕಲ್ಲವೇ ಎಂದು ಕೇಳಿದರು.
ಎನ್ವಿರಾನ್ ಮೆಂಟಲ್ ಎಂಜಿನಿಯರ್ ನೀವು, ಇವರಿಗೂ ಧೂಳು ತಾಗಲಿ, ಇವರನ್ನು ಗುಲ್ಬರ್ಗ ಕಡೆಗೆ ವರ್ಗಾವಣೆ ಮಾಡಲಿ, ಇಲ್ಲಿ ಬೆಂಗಳೂರಲ್ಲಿ ಆಫೀಸಲ್ಲಿ ಕುಳಿತು ಧಿಮಾಕು ಮಾಡ್ತಿದ್ದೀರಾ, ಫೀಲ್ಡ್ ಗೆ ಹೋಗಲ್ಲ ಎಂದು ಕಾಣುತ್ತದೆ, ಕಮಿಷನರ್, ಹೆಲ್ತ್ ಇನ್ಸ್ ಪೆಕ್ಟರ್, ಎನ್ವಿರಾನ್ ಮೆಂಟಲ್ ಎಂಜಿನಿಯರ್ ಎಲ್ಲರೂ ಜವಾಬ್ದಾರಿಯಾಗಿ ಕೆಲಸ ಮಾಡಬೇಕು ಎಂದರು.