

ಬೆಂಗಳೂರು: ಪ್ರಯಾಣಿಕರೊಬ್ಬರು ಬಸ್‌ನಲ್ಲಿ ಮರೆತುಹೋಗಿದ್ದ, ತಮ್ಮ ಮಗಳಿಗೆ ನೀಡಲು ತಂದಿದ್ದ ವಿಶೇಷ ಉಡುಗೊರೆ ಇದ್ದ ಕೈಚೀಲವನ್ನು ಸುರಕ್ಷಿತವಾಗಿ ಹಿಂದಿರುಗಿಸಿದ ಬಿಎಂಟಿಸಿ ನಿರ್ವಾಹಕರೊಬ್ಬರ ಪ್ರಾಮಾಣಿಕತೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಮೊನ್ನೆ ಬುಧವಾರ ಮುಂಜಾನೆ ಈ ಘಟನೆ ನಡೆದಿದೆ. ಬೆಂಗಳೂರಿನ ನಿವಾಸಿಯೊಬ್ಬರು ರಾತ್ರಿ ಸುಮಾರು 1.30ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಹೆಬ್ಬಾಳಕ್ಕೆ ತೆರಳುವ ಬಿಎಂಟಿಸಿ ಬಸ್ ಹತ್ತಿದ್ದರು. ಮನೆಗೆ ತಲುಪಿದ ಬಳಿಕ ತಮ್ಮ ಬ್ಯಾಗ್ ನ್ನು ಬಸ್‌ನಲ್ಲೇ ಮರೆತುಬಂದಿರುವುದು ಅವರಿಗೆ ನೆನಪಿಗೆ ಬಂದಿದೆ.
ಬ್ಯಾಗ್ ಕಳೆದುಕೊಂಡಿದ್ದಕ್ಕೆ ಬೇಸರಗೊಂಡಿದ್ದ ಪ್ರಯಾಣಿಕರಿಗೆ ಅದಕ್ಕಿಂತಲೂ ಹೆಚ್ಚಿನ ನೋವು ತಂದಿದ್ದು, ಅದರಲ್ಲಿ ತಮ್ಮ ಮಗಳು ಮಹತಿಗೆ ಉಡುಗೊರೆಯಾಗಿ ನೀಡಲು ಖರೀದಿಸಿದ್ದ ಪುಸ್ತಕವಿತ್ತು ಎಂಬುದು. ಮನೆಗೆ ಹಿಂದಿರುಗಿದ ಬಳಿಕ ಮಗಳಿಗೆ ಆ ಉಡುಗೊರೆ ನೀಡಿ ಅಚ್ಚರಿ ಮೂಡಿಸಲು ಅವರು ಕಾತರರಾಗಿದ್ದರು.
ಬ್ಯಾಗ್ ನ್ನು ಮರಳಿ ಪಡೆಯುವ ನಿರೀಕ್ಷೆಯಲ್ಲಿ ಅವರು ಬಿಎಂಟಿಸಿ ಸಹಾಯವಾಣಿಯನ್ನು ಸಂಪರ್ಕಿಸಿದರು. ಅಧಿಕಾರಿಗಳು ಕೂಡಲೇ ಸ್ಪಂದಿಸಿ, ಕರ್ತವ್ಯದಲ್ಲಿದ್ದ ನಿರ್ವಾಹಕ ಮೊಹಮ್ಮದ್ ರಫಿ ಬಿರಾದಾರ್ ಅವರ ಸಂಪರ್ಕ ವಿವರಗಳನ್ನು ನೀಡಿದರು.
ಪ್ರಯಾಣಿಕರಿಗೆ ಸಮಾಧಾನವಾಗುವಂತೆ, ಬಿರಾದಾರ್ ಅವರು ಬಸ್‌ನಲ್ಲಿ ಬಿದ್ದಿದ್ದ ಬ್ಯಾಗ್ ನ್ನು ಗಮನಿಸಿ, ಅದನ್ನು ಸುರಕ್ಷಿತವಾಗಿ ತಮ್ಮ ಬಳಿ ಇಟ್ಟುಕೊಂಡಿದ್ದರು. ಅದರ ಮಾಲೀಕರನ್ನು ಪತ್ತೆಹಚ್ಚಿ ಸಂಪರ್ಕಿಸಲು ಅವರು ಪ್ರಯತ್ನಿಸುತ್ತಿದ್ದಾಗಲೇ ಪ್ರಯಾಣಿಕರು ಅವರನ್ನು ಸಂಪರ್ಕಿಸಿದ್ದರು. ಬ್ಯಾಗ್ ನಲ್ಲಿದ್ದ ಎಲ್ಲ ವಸ್ತುಗಳೂ ಸುರಕ್ಷಿತವಾಗಿವೆ ಎಂದು ಭರವಸೆ ನೀಡಿದ ಬಿರಾದಾರ್, ತಮ್ಮ ಮುಂದಿನ ಟ್ರಿಪ್ ವೇಳೆ ಬ್ಯಾಗ್ ನ್ನು ಹಿಂದಿರುಗಿಸುವುದಾಗಿ ತಿಳಿಸಿದ್ದರು.
ಅದರಂತೆ ನಿನ್ನೆ ಗುರುವಾರ ಮಧ್ಯಾಹ್ನ ಅವರು ತಮ್ಮ ಮಾತು ಉಳಿಸಿಕೊಂಡು, ಕೈಚೀಲವನ್ನು ಯಾವುದೇ ವಸ್ತು ಕಳೆದುಹೋಗದಂತೆ ಪ್ರಯಾಣಿಕರಿಗೆ ಹಸ್ತಾಂತರಿಸಿದರು.
ನಿರ್ವಾಹಕರಿಗೆ ಕೃತಜ್ಞತೆ ಸಲ್ಲಿಸಿದ ಪ್ರಯಾಣಿಕರು, ಅವರು ಕೇವಲ ಬ್ಯಾಗ್ ನ್ನು ಹಿಂದಿರುಗಿಸಿಲ್ಲ, ಒಬ್ಬ ತಂದೆಯ ಸಂತೋಷವನ್ನೇ ಮರಳಿಸಿದರು. ನನ್ನ ಮಗಳಿಗಾಗಿ ಪ್ರೀತಿಯಿಂದ ಮನೆಗೆ ತಂದಿದ್ದ ಸಣ್ಣ ಉಡುಗೊರೆ ಕೊನೆಗೂ ಅವಳ ಕೈ ಸೇರಲು ಅವರು ಕಾರಣರಾದರು ಎಂದು ಸಂತೋಷಪಟ್ಟರು.
ಕಳೆದುಹೋದ ವಸ್ತುವನ್ನು ಪತ್ತೆಹಚ್ಚಲು ತ್ವರಿತವಾಗಿ ಸ್ಪಂದಿಸಿ ನೆರವು ನೀಡಿದ ಬಿಎಂಟಿಸಿ ಸಹಾಯವಾಣಿ ತಂಡವನ್ನೂ ಪ್ರಯಾಣಿಕರು ಶ್ಲಾಘಿಸಿದರು.