

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರು ತಮ್ಮ ವಿರುದ್ಧವೇ ತಿರುಗಿಬಿದ್ದು, ಮಾಫಿ ಸಾಕ್ಷಿ ಹೇಳಲು ನಿರ್ಧರಿಸಿರುವ ಪ್ರದೋಷ್ ರಾವ್ ನನ್ನು ತಡೆಯಲು ಹಲವು ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಒಂದಾದ ಮೇಲೊಂದರಂತೆ ಪ್ರಯತ್ನ ನಡೆಸುತ್ತಿದ್ದು, ಇದೀಗ ಮಾಫಿ ಸಾಕ್ಷಿ ಹೇಳಿಕೆ ದಾಖಲು ಒಂದು ವಾರ ಮುಂದೂಡುವಂತೆ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ.
ಪ್ರದೋಷ್ ಮಾಫಿ ಸಾಕ್ಷಿಯಾಲು ಒಪ್ಪಿಗೆ ನೀಡಿರುವ 59ನೇ ಸಿಸಿಹೆಚ್ ಕೋರ್ಟ್, ಇದೀಗ ಸಾಕ್ಷಿ ಹೇಳಿಕೆ ದಾಖಲಿಸುವ ಪ್ರಕ್ರಿಯೆಗೆ ಸೆಪ್ಟೆಂಬರ್ 28ರಂದು ದಿನಾಂಕ ನಿಗದಿ ಮಾಡಿದೆ. ಇದರಿಂದ ತೀವ್ರ ಆತಂಕಕ್ಕೆ ಒಳಗಾದ ದರ್ಶನ್, ಮಾಫಿ ಸಾಕ್ಷಿ ಅದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.
ಮಾಫಿ ಸಾಕ್ಷಿ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಕೋರಿದ್ದೇವೆ. ಹೀಗಾಗಿ ಮಾಫಿ ಸಾಕ್ಷಿ ಹೇಳಿಕೆ ದಾಖಲು ದಿನಾಂಕವನ್ನು ಒಂದು ವಾರ ಮುಂದೂಡಿಕೆ ಮಾಡುವಂತೆ ಕೋರಿ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ.
ಇದಕ್ಕೂ ಮುನ್ನ ಮಾಫಿ ಸಾಕ್ಷಿ ಹೇಳಿಕೆ ವಿಚಾರವಾಗಿ ಸೆಷನ್ಸ್ ಕೋರ್ಟ್‌ನ ಆದೇಶ ಪ್ರಶ್ನೆ ಮಾಡಿ, ದರ್ಶನ್ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ ಮಾಡಿದ್ದರು. ವಾದ, ಪ್ರತಿವಾದ ಆಲಿಸಿದ್ದ ಹೈಕೋರ್ಟ್ ಮಾಫಿ ಸಾಕ್ಷಿ ಹೇಳಿಕೆ ಪ್ರಶ್ನೆ ಮಾಡುವಂತಿಲ್ಲ, ಬದಲಾಗಿ ಆ ಪ್ರಕ್ರಿಯೆಯಲ್ಲಿ ಲೋಪ ಕಂಡು ಬಂದ್ರೆ ಮಾತ್ರ ಪ್ರಶ್ನೆ ಮಾಡಬಹುದು ಎಂದು ಹೇಳಿ ಅರ್ಜಿ ವಜಾ ಮಾಡಿತ್ತು.