ಮುಂಗಾರು ಮುಗಿಯುತ್ತಿದ್ದರೂ ಇನ್ನೂ ಕರುಣೆ ತೋರದ ವರುಣ: ಕಾವೇರಿ ಜಲಾಶಯಗಳಲ್ಲಿ ಅರ್ಧದಷ್ಟು ಮಾತ್ರ ನೀರು!

ಸೆಪ್ಟೆಂಬರ್ 28ರ ನೀರಿನ ಮಟ್ಟದ ಮಾಹಿತಿಯ ಪ್ರಕಾರ, ನಾಲ್ಕು ಜಲಾಶಯಗಳಲ್ಲಿ ಒಟ್ಟು 59.5 ಟಿಎಂಸಿ ಅಡಿ ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 107.4 ಟಿಎಂಸಿ ಅಡಿ ನೀರಿತ್ತು.
Water level at KRS reservior
ಕಾವೇರಿ ಜಲಾಶಯದಲ್ಲಿನ ನೀರಿನ ಮಟ್ಟ
Updated on: 

ಬೆಂಗಳೂರು: ನೈಋತ್ಯ ಮುಂಗಾರು ಮುಗಿಯುತ್ತಾ ಬಂದಿದ್ದರೂ ವರುಣದೇವ ಇನ್ನೂ ರಾಜ್ಯದ ಮೇಲೆ ಕರುಣೆ ತೋರಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಕಾವೇರಿ ಜಲಾಶಯಗಳಲ್ಲಿನ ನೀರಿನ ಮಟ್ಟ ಬಹಳ ಕಡಿಮೆಯಿದೆ. ಈ ಹಂಗಾಮಿನಲ್ಲಿ ಇನ್ನು ಹೆಚ್ಚಿನ ಮಳೆಯ ನಿರೀಕ್ಷೆಯಿಲ್ಲದಿರುವುದರಿಂದ, ಮುಂದಿನ ವರ್ಷದ ಜೂನ್‌ನಲ್ಲಿ ಮುಂಗಾರು ಮಳೆ ಬರುವವರೆಗೆ ರೈತರು ಮತ್ತು ಪಟ್ಟಣಗಳು ​​ಈಗ ಸಂಗ್ರಹವಾಗಿರುವ ನೀರಿನ ಮೇಲೆಯೇ ಅವಲಂಬಿತರಾಗಬೇಕಿದೆ.

ಸೆಪ್ಟೆಂಬರ್ 28ರ ನೀರಿನ ಮಟ್ಟದ ಮಾಹಿತಿಯ ಪ್ರಕಾರ, ನಾಲ್ಕು ಜಲಾಶಯಗಳಲ್ಲಿ ಒಟ್ಟು 59.5 ಟಿಎಂಸಿ ಅಡಿ ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 107.4 ಟಿಎಂಸಿ ಅಡಿ ನೀರಿತ್ತು. ಇದರಲ್ಲಿ, ಬಳಕೆಗೆ ಲಭ್ಯವಿರುವ ನೀರು (ಲೈವ್ ಸ್ಟೋರೇಜ್) ಕೇವಲ 36.2 ಟಿಎಂಸಿ ಅಡಿಯಷ್ಟಿದೆ. ಆದರೆ ಕಳೆದ ವರ್ಷ ಇದು 84.1 ಟಿಎಂಸಿ ಅಡಿಯಷ್ಟಿತ್ತು. ಪ್ರತಿಯೊಂದು ಜಲಾಶಯದಲ್ಲೂ ನೀರಿನ ಮಟ್ಟದಲ್ಲಿನ ಕುಸಿತ ಎದ್ದು ಕಾಣುತ್ತಿದೆ.

ಹೇಮಾವತಿ ಜಲಾಶಯದಲ್ಲಿ ನೀರಿನ ಮಟ್ಟವು ಕಳೆದ ವರ್ಷದ ಶೇ.91ಕ್ಕೆ ಹೋಲಿಸಿದರೆ ಈಗ ಶೇ. 41ರಷ್ಟಿದೆ. ಕೆಆರ್‌ಎಸ್ (KRS) ನಲ್ಲಿ ಶೇ.96ರ ಬದಲಿಗೆ ಶೇ.55 ಮತ್ತು ಕಬಿನಿಯಲ್ಲಿ ಶೇ.93ರ ಬದಲಿಗೆ ಶೇ.58ರಷ್ಟಿದೆ. ಹಾರಂಗಿ ಜಲಾಶಯವು ತುಸು ಉತ್ತಮ ಸ್ಥಿತಿಯಲ್ಲಿದ್ದು, ಶೇ.94 ಬದಲಿಗೆ ಶೇ.73 ರಷ್ಟು ನೀರನ್ನು ಹೊಂದಿದೆ.

ಇವು ಒಟ್ಟು ನೀರಿನ ಸಂಗ್ರಹದ ಅಂಕಿಅಂಶಗಳಾದರೂ, ಮುಖ್ಯವಾಗಿ ಪರಿಗಣಿಸಬೇಕಾದದ್ದು ಬಳಕೆಗೆ ಲಭ್ಯವಿರುವ ನೀರು (ಲೈವ್ ಸ್ಟೋರೇಜ್). ಇದು 36 ಟಿಎಂಸಿ ಅಡಿ (ಸುಮಾರು ಶೇ.40 ರಷ್ಟಿದೆ. ಕಳೆದ ವರ್ಷದ 84 ಟಿಎಂಸಿ ಅಡಿಗೆ ಹೋಲಿಸಿದರೆ ಅರ್ಧಕ್ಕಿಂತಲೂ ಕಡಿಮೆಯಿದೆ. ಕಬಿನಿ ಜಲಾಶಯದಲ್ಲಿ ಒಟ್ಟು ನೀರಿನ ಮಟ್ಟ ಶೇ. 58ರಷ್ಟಿದ್ದರೂ, ಬಳಕೆಗೆ ಲಭ್ಯವಿರುವ ನೀರು ಕೇವಲ 1.5 ಟಿಎಂಸಿ ಅಡಿ (ಅಂದರೆ ಅದರ ಲೈವ್ ಸಾಮರ್ಥ್ಯದ ಸುಮಾರು ಶೇ.15 ರಷ್ಟು ಮಾತ್ರ ಇದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆಯಿದೆ ಮತ್ತು ಬಿದ್ದ ಮಳೆಯೂ ಅತ್ಯಲ್ಪ ಹಾಗೂ ತಡವಾಗಿ ಬಂದಿದೆ ಎಂದು ವಿಪತ್ತು ನಿರ್ವಹಣೆ ಮತ್ತು ಬರ ಪರಿಹಾರ ಇಲಾಖೆಯ ಕಾರ್ಯದರ್ಶಿ ಮನೋಜ್ ಮೀನಾ ತಿಳಿಸಿದ್ದಾರೆ. ಇದರಿಂದಾಗಿ ಕೃಷಿ ಉತ್ಪಾದನೆಯಲ್ಲಿ ತೀವ್ರ ಕುಸಿತವಾಗುವ ನಿರೀಕ್ಷೆಯಿದೆ. ಕಾವೇರಿ ಜಲಾನಯನ ಪ್ರದೇಶದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆಯ ಕೊರತೆಯಿದೆ. ರಾಜ್ಯದ 240 ತಾಲೂಕುಗಳ ಪೈಕಿ 220 ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಕಳೆದ 50 ವರ್ಷಗಳಲ್ಲಿನ ಮಳೆಯ ಕೊರತೆಯ ಪೈಕಿ ಇದು ಎರಡನೇ ಅತ್ಯಂತ ಕೆಟ್ಟ ಪರಿಸ್ಥಿತಿ ಎಂದು ಅವರು ಬಣ್ಣಿಸಿದ್ದಾರೆ.

'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ಜೊತೆಗೆ ಮಾತನಾಡಿದ ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ, ಪರಿಸ್ಥಿತಿ ಗಂಭೀರವಾಗಿದೆ ಮತ್ತು ನಾವು ಅದರ ಮೇಲೆ ದಿನದ 24 ಗಂಟೆಯೂ ನಿಗಾ ಇರಿಸಿದ್ದೇವೆ. ತಜ್ಞರೊಂದಿಗೆ ನಿರಂತರ ಸಭೆಗಳು ಮತ್ತು ಸಮಾಲೋಚನೆಗಳನ್ನು ನಡೆಸುತ್ತಿದ್ದೇನೆ. ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನಾವು ನೋಡಿಕೊಳ್ಳುತ್ತೇವೆ. ಇನ್ನು ರೈತರ ಅಗತ್ಯಗಳ ವಿಷಯಕ್ಕೆ ಬಂದರೆ, ಅವರ ಸಮಸ್ಯೆಗಳನ್ನು ಬಗೆಹರಿಸಲು ನಾವು ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದೇವೆ ಎಂದು ಹೇಳಿದರು.

Water level at KRS reservior
ಮುಂಗಾರು ಹಿಂತೆಗೆತ ಆರಂಭ; Arnab ಚಂಡಮಾರುತ ಭೀತಿ; ಈ ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆ!

ಮಂಡ್ಯ-ಮೈಸೂರು ಭಾಗದ ಜೀವನಾಡಿಯಾಗಿರುವ ಕೆಆರ್‌ಎಸ್ (KRS) ಅಣೆಕಟ್ಟಿನಲ್ಲಿ ಸುಮಾರು 18.6 ಟಿಎಂಸಿ ಅಡಿಗಳಷ್ಟು ಬಳಕೆಗೆ ಲಭ್ಯವಿರುವ ನೀರು (ಲೈವ್ ಸ್ಟೋರೇಜ್) ಇದೆ. ಇಲ್ಲಿಗೆ ಕೇವಲ 560 ಕ್ಯೂಸೆಕ್ ಒಳಹರಿವು ಬರುತ್ತಿದ್ದರೂ, ಕಾಲುವೆಗಳಿಗೆ ಬಿಡಲಾಗುವ ಸುಮಾರು 1,000 ಕ್ಯೂಸೆಕ್ ನೀರು ಸೇರಿದಂತೆ ಒಟ್ಟು 1,900 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಹೇಮಾವತಿ ಜಲಾಶಯದಲ್ಲಿ ನೀರಿನ ಮಟ್ಟವು ಸುಮಾರು ಶೇ. 40 ರಷ್ಟಿರುವುದರಿಂದ, ಹಾಸನ-ತುಮಕೂರು ಕಾಲುವೆ ವ್ಯವಸ್ಥೆಯ ಮೂಲಕ ಪೂರೈಸಬಹುದಾದ ನೀರಿನ ಪ್ರಮಾಣಕ್ಕೆ ಮಿತಿ ಉಂಟಾಗಿದೆ. ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಈಶಾನ್ಯ ಮಾನ್ಸೂನ್ ಸಾಮಾನ್ಯವಾಗಿ ಅಕ್ಟೋಬರ್‌ನಿಂದ ಮಳೆಯನ್ನು ತರುತ್ತದೆ. ಆದರೆ ಈ ಮಳೆಯು ಹೆಚ್ಚಾಗಿ ತಮಿಳುನಾಡಿನ ಮೇಲೆ ಸುರಿಯುವುದರಿಂದ, ನದಿಗೆ ನೀರುಣಿಸುವ ಕರ್ನಾಟಕದ ಜಲಾನಯನ ಪ್ರದೇಶಗಳಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com