ಅಮೆರಿಕದಲ್ಲಿ ಸೀಸದ ಕಡ್ಡಿ

ಮೊಮ್ಮಕ್ಕಳು, ಸ್ನೇಹಿತರು, ಮಕ್ಕಳು ತುಂಬಾ ತುಂಬಾ ಪೀಡಿಸ್ತಾ ಇದಾರೆ. ಪೀಡಿಸೋದು ಏನು, ಒಂದು..
ಅಮೆರಿಕದಲ್ಲಿ ಸೀಸದ ಕಡ್ಡಿ

ಮೊಮ್ಮಕ್ಕಳು, ಸ್ನೇಹಿತರು, ಮಕ್ಕಳು ತುಂಬಾ ತುಂಬಾ ಪೀಡಿಸ್ತಾ ಇದಾರೆ. ಪೀಡಿಸೋದು ಏನು, ಒಂದು ರೀತಿಯ ಸವಾಲನ್ನೇ ಹಾಕ್ತಾ ಇದಾರೆ. ಭಾರತದಲ್ಲಿ ಸಿಗಲೇಬಾರದು ಅಂತ ಐಟೆಮ್ ಉಡುಗೊರೆಯಾಗಿ ಬೇಕೇ ಬೇಕು. ತಗೊಂಡು ಬನ್ನಿ. ತಗೊಂಡು ಬರಲೇಬೇಕು.
ಮುಂದಿನ ವಾರ ಕುಣಿಗಲ್‌ಗೆ ಹೋಗಬೇಕು. ಬಾಂಬೆ- ಬೆಂಗಳೂರು ಮೂಲಕ. ನನಗೂ ಮಾಲ್‌ಗಳನ್ನು, ಮಳಿಗೆಗಳನ್ನು, ಅವಿನ್ಯೂಗಳನ್ನು ಪ್ರದಕ್ಷಿಣೆ ಅಪ್ರದಕ್ಷಿಣೆ ಹೊಡೆದು ಹೊಡೆದು ಸುಸ್ತಾಯಿತು. ಎಲ್ಲವೂ ಅಲ್ಲಿಯ ಪದಾರ್ಥಗಳೇ. ಅಲ್ಲಿಯ ಜನರೇ ಇಲ್ಲಿಗೆ ಬಂದಿದ್ದಾರಲ್ಲ. ರೆಸ್ಟನ್‌ನಲ್ಲಿ ಒಂದು ಡಿಪಾರ್ಟ್‌ಮೆಂಟಲ್ ಸ್ಟೋರಿಗೆ ಹೋಗಿದ್ದೆ. ಭಾರತದಿಂದ ಬಂದ ಪುಸ್ತಕಗಳು ಮತ್ತು ಸಿಡಿಗಳನ್ನು ಒಟ್ಟಿಗೇ ಇಟ್ಟಿದ್ದರು. ನುಗ್ಗೇಕಾಯಿ ಆವತ್ತೇ ಫ್ರೆಶ್ ಆಗಿ ಬಂದದ್ದರಿಂದ ತರಕಾರಿ ವಿಭಾಗದಲ್ಲಿ ಸಂದಣಿಯೋ ಜನಸಂದಣಿ. ಹಾಗಾಗಿ ನಾನು ಪುಸ್ತಕ- ಸಿಡಿ ಮಳಿಗೆ ಹತ್ತಿರ ಹೋದೆ. ಶನಿಮಹಾತ್ಮರ ಚರಿತ್ರೆಯ ಹಿಂದಿ ಪುಸ್ತಕದ ಒಂದೇ ಒಂದು ಪ್ರತಿ ಉಳಿದಿತ್ತು. ಶನಿಮಹಾತ್ಮರು ಒಂದು ರೀತಿಯಲ್ಲಿ ನಮ್ಮ ಕುಲದೈವವಾದ್ದರಿಂದ ಪುಸ್ತಕ ಹಿಂದಿಯಲ್ಲಿದ್ದರು, ಮುಖಪುಟದ ಚಿತ್ರ, ಪುಸ್ತಕದೊಳಗಿನ ಚಿತ್ರ ಎಲ್ಲವೂ ಚಿರಪರಿಚಿತವಾದ್ದರಿಂದ ತಿರುವಿಹಾಕಿದ ಪುಟಗಳನ್ನೇ ಮತ್ತೆ ಮತ್ತೆ ತಿರುವಿಹಾಕುತ್ತಾ ಭಕ್ತಿಭಾವದಿಂದ ನಿಂತಿದ್ದೆ. ನೂರು ಕಾಪಿ ತರಿಸಿದೆ ಸಾರ್, ಇದೇ ಕೊನೆ ಕಾಪಿ. ದಯವಿಟ್ಟು ತಗೊಂಬಿಡಿ. ಇಲ್ಲದಿದ್ದರೆ ಮುಂದಿನ ಶಿಪ್‌ಮೆಂಟ್‌ಗೆ ಬಹಳ ದಿನ ಕಾಯಬೇಕಾಗುತ್ತೆ. ಹಿಂದಿ ನನ್ನ ಮಾತೃಭಾಷೆಯಲ್ಲವೆಂದೆ. ಕಥೆಗೆ ಯಾವ ಭಾಷೆ ಹೇಳಿ ಎಂದು ಪ್ರತಿಯನ್ನು ಗಂಟು ಹಾಕಿಯೇಬಿಟ್ಟ.
ಮಾಲ್, ಮಳಿಗೆಗಳ ಸಹವಾಸವೇ ಬೇಡ. ದರಿದ್ರ. ಏನಾದರೂ ಹೊಸ ಪದಾರ್ಥ ಹುಡುಕಲೇ ಬೇಕೆಂದು ರಸ್ತೆ ರಸ್ತೆಗಳಲ್ಲಿ, ಪಾರ್ಕು, ಪಾರ್ಕುಗಳಲ್ಲಿ ಹುಡುಕಾಡಲು ಪ್ರಾರಂಭಿಸಿದೆ. ರಸ್ತೆಗಳಲ್ಲಿ ಜನರೇ ಇರೋಲ್ಲ. ಇನ್ನು ಪದಾರ್ಥ ಎಲ್ಲಿ ಬಂತು? ಚಿಕ್ಕ ಸೋದರ ಮಾವ ಹೇಳುತ್ತಿದ್ರಲ್ಲ, ಮನುಷ್ಯನೇ ಒಂದು ಪದಾರ್ಥ. ಇರಲಿ ನಮ್ಮಲ್ಲಿ ಅಡುಗೆಮನೆ, ದೇವರ ಮನೆಗಳು ಕೂಡ ಇಲ್ಲಿನ ರಸ್ತೆಯಷ್ಟು ಕ್ಲೀನಾಗಿ ಇರೋಲ್ಲ. ಒಂದು ಕಸವೇ, ಕಡ್ಡಿಯೇ, ಕಾಗದದ ಚೂರೇ, ಮಣ್ಣಿನ ಹೆಂಟೆಯೇ, ಕಡ್ಲೆಕಾಯಿ ಸಿಪ್ಪೆಯೇ, ಎಲೆಯಡಕೆ ಎಂಜಲೇ?
ಬೆಳಗ್ಗೆ ಮಾತ್ರ ವಾಕಿಂಗ್ ಹೋಗುತ್ತಿದ್ದವನು ಈಗ ಮಧ್ಯಾಹ್ನ, ಆಮೇಲೆ ಸಂಜೆ, ಮತ್ತೆ ರಾತ್ರಿ ಅಂತ ದಿನವೆಲ್ಲ ಸುತ್ತುತ್ತಲೇ ಇದ್ದೆ. ಇದೇನಿದು ಇಲ್ಲಿ ಮರದಿಂದ ಎಲೆಗಳು ಕೂಡ ಉದುರೋಲ್ಲ. ಒಂದೇ ಒಂದು ಎಲೆ ಚೂರು ಕೂಡ ಎದುರಾಗೋಲ್ಲ. ಎಲೆಗಳಿಗೂ ಕಾರ್ಪೊರೇಷನ್‌ನವರ, ಅಮೆರಿಕನ್ ಪ್ರೆಸಿಡೆಂಟ್ ಭಯವೇ. ತಿರುಗಿದೆ, ಸುತ್ತುತ್ತಲೇ ಇದ್ದೆ. ಬೇಸ್‌ಮೆಂಟ್‌ನಲ್ಲಿ, ಬಾಲ್ಕನಿಯಲ್ಲಿ, ಟೆರೇಸಿನಲ್ಲಿ, ಫುಟ್‌ಪಾತಿನಲ್ಲಿ ಹುಡುಕಾಡಿದೆ, ತಡಕಾಡಿದೆ. ಏನೂ ಸಿಗಲಿಲ್ಲ, ಏನೂ ಕಾಣಲಿಲ್ಲ.
ಇಂಡಿಯಾಕ್ಕೆ ಹೊರಡುವ ದಿವಸ ಹತ್ತಿರ ಹತ್ತಿರ ಬಂದಂತೆ, ಕಾಲಿಗೆ, ಕೈಗೆ, ಕಿವಿಗೆ, ತಲೆಗೆ ಎಲ್ಲದಕ್ಕೂ ಚಕ್ರ ಕಟ್ಟಿಕೊಂಡು ಸುತ್ತುತ್ತಲೇ ಇದ್ದೆ. ಭಯದಿಂದ ನಾಲಗೆ ಒಣಗಿತು. ತೊಳ್ಳೆ ಯಾವಾಗಲೂ ನಡುಗುತ್ತಲೇ ಇರೋದು. ಮನಸ್ಸಿನ ಮರ್ಮ ತಿಳಿದುಕೊಂಡಂತೆ, ಕಾಲುಗಳು ಒಂದು ಹೆಜ್ಜೆ ಇಡುವ ಸಮಯದಲ್ಲಿ ನಾಲ್ಕು ಹೆಜ್ಜೆ ಇಡುತ್ತಿದ್ದವು. ಹತ್ತು ಹತ್ತು ಹೆಜ್ಜೆಗೂ ನಿಂತು ಪ್ರಾರ್ಥಿಸಿದೆ. ಮತ್ತೆ ಪ್ರಾರ್ಥಿಸಿದೆ. ಪ್ರಾರ್ಥನೆ, ಪ್ರಾರ್ಥನೆ. ಕೊನೆಗೊಂದು ಕಪ್ಪು ಬಣ್ಣದ ಸೀಸದ ಕಡ್ಡಿ ಸಿಕ್ಕಿತು. ಅರ್ಧ ಮುಕ್ಕಾಲಿನಷ್ಟು ಮುಗಿದೇ ಹೋಗಿದೆ. ಉಳಕೊಂಡಿರೋ ಭಾಗದಲ್ಲಿ, ಸೀಸ ಕೂಡ ಹೊರಗೆ ಬಂದುಬಿಟ್ಟಿದೆ. ಸೀಸದ ಕಡ್ಡಿ ಸಿಕ್ಕಿದ ಜಾಗವನ್ನು ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳಬೇಕೆಂದು ಮನಸ್ಸು ಎದುರುಗಡೆ ನೋಡಿತು. ದೊಡ್ಡ ಕಂಟೈನರ್ ಯಾರ್ಡ್. ಬರೇ ಚೀನೀಯರೇ ಕಾಣುತ್ತಿದ್ದಾರೆ. ತದೇಕಚಿತ್ತನಾಗಿ ದೃಷ್ಟಿಸಿದೆ. ನಾನು ನೋಡುತ್ತಿರುವುದು ಸೀಸದ ಕಡ್ಡಿಯೇ, ನಾನೇ ನೋಡುತ್ತಿರುವುದು, ನಾನೇ ನೋಡುತ್ತಿರುವುದು ಎಂದು ಖಚಿತ ಮಾಡಿಕೊಳ್ಳಲು ಸೀಸದ ಕಡ್ಡಿಗೆ ಪ್ರದಕ್ಷಿಣೆ ಹಾಕಿದೆ. ಸೀಸದ ಕಡ್ಡಿಗೆ ನನ್ನ ಮನಸ್ಸು ಗೊತ್ತಾಗಿರಬೇಕು. ಇದುವರೆಗೆ ಸುಮ್ಮನೆ ಬಿದ್ದುಕೊಂಡಿದ್ದ ಸೀಸದ ಕಡ್ಡಿ ಮೊದಲು ಸ್ವಲ್ಪ ಮುಲುಕಾಡಿತು. ನಂತರ ಪಟಪಟನೆ ಒದರಾಡಿತು. ಎತ್ತಿಕೋ, ನನ್ನನ್ನು ಎತ್ತಿಕೋ ಎಂದು ಎಗರಾಡಿದ ಹಾಗಾಯಿತು. ಯಾತಕ್ಕೆ ಇಲ್ಲಿ ಇದು ಹೀಗೆ ಬಂದು ನನಗೆ ಎದುರಾಗುತ್ತಿದೆ ಸೀಸದ ಕಡ್ಡಿ ಈಗ ನಮ್ಮಲ್ಲೇ ಬಳಕೆಯಿಲ್ಲ. ಯಾವ ಅಂಗಡಿಗಳಲ್ಲೂ ಸಿಗೋಲ್ಲ. ಇಲ್ಲಿ ಯಾಕೆ ಬಂತು ಇಷ್ಟೆಲ್ಲಾ ಜಿಜ್ಞಾಸೆ ಯಾಕೆ ಇದನ್ನೇ ತಗೊಂಡು ಹೋಗ್ತೇನೆ. ಇದೇ ಉಡುಗೊರೆ. ಎದುರುಗಡೆ, ಹಿಂದುಗಡೆ, ಮುಂದುಗಡೆ ಯಾರೂ ಇಲ್ಲದೇ ಹೋದರೂ ಯಾರಿಗೂ ಗೊತ್ತಾಗದ ಹಾಗೆ ತಗೋಬೇಕು- ಬಗ್ಗಿದೆ. ಬಗ್ಗುವುದೇ ತಡ, ಸೀಸದ ಕಡ್ಡಿ ಚಂಗನೆ ನೆಗೆದು ನನ್ನ ಕೈ ಸೇರಿತು. ಪ್ಯಾಂಟ್ ಜೇಬಿಗೆ ಸೇರಿಸಿದೆ. ಬಲಗೈಯನ್ನು ಪ್ಯಾಂಟ್ ಜೇಬಿನಿಂದ ತೆಗೆಯದೆ ಸೀಸದ ಕಡ್ಡಿಯನ್ನು ಬಲವಾಗಿ ಒತ್ತಿ ಹಿಡಿದೆ. ಸೀಸದ ಕಡ್ಡಿಯೊಳಗಿಂದ ನೀರು ಬಂದು ಪ್ಯಾಂಟಿನ ಜೇಬೆಲ್ಲ ಒದ್ದೆಯಾಯಿತು.
ಇಳಕೊಂಡಿದ್ದ ಕಸಿನ್ ಪ್ರಭಾಕರನ ಫ್ಲಾಟಿನಲ್ಲೂ ಯಾರಿಗೂ ಹೇಳಲಿಲ್ಲ. ಒಂದು ತಂಡು ಸೀಸದ ಕಡ್ಡಿ ಸಿಕ್ಕಿದ್ದಕ್ಕೆ ಇನ್ನೂ ಒಂದು ಕೂಡ ಸಿಗಬಹುದೆಂದು ಥಾಮ್ಸನ್ ವಿಲ್ಲಾದ ಕಾಂಪೌಂಡಿನ ತುಂಬೆಲ್ಲ ಮತ್ತೆ ಮತ್ತೆ ಓಡಾಡಿದೆ. ಎಲ್ಲೂ ಏನೂ ಕಾಣಲಿಲ್ಲ. ಖಕಿಐಈ ಆಃಉ ಖಕಿಆಃ, ಖಕಿಐಈ ಆಃಉ ಖಕಿಆಃ.
ಯಾರಿಗೂ ಸಿಗದ, ಯಾರಿಗೂ ಗೊತ್ತಿರದ, ಯಾರಿಗೂ ಗೊತ್ತಾಗದ ವಸ್ತುವೊಂದು ನನ್ನ ಬಳಿ ಇದೆ ಎಂಬುದರಿಂದಾಗಿಯೇ ನನಗೆ ನಾನೇ ಒಬ್ಬ ವಿಚಿತ್ರ ವ್ಯಕ್ತಿ- ವಿಶೇಷ ವ್ಯಕ್ತಿ ಎನಿಸಿತು. ಮಕ್ಕಳು ಇಂಡಿಯಾದಲ್ಲಿ ಇದನ್ನು ಉಡುಗೊರೆಯಾಗಿ ಒಪ್ತಾರಾ? ಒಪ್ಪದೆ ಏನು? ಒಪ್ಪದಿದ್ದರು ಏನಂತೆ? ಈ ಮೂರು ಮೂರೂವರೆ ತಿಂಗಳಲ್ಲಿ ಎರಡು ಕೋಸ್ಟ್‌ಗಳಲ್ಲಿ ಸಾವಿರಾರು ಮೈಲು ಓಡಾಡಿದ್ದೇನೆ. ಸಮುದ್ರ ತೀರ, ಉದ್ಯಾನವನ, ಫುಟ್ಪಾತ್, ಯೂನಿವರ್ಸಿಟಿ ಕ್ಯಾಂಪಸ್ ಎಲ್ಲೂ ಏನೂ ಕಾಣಲಿಲ್ಲ, ವಿಶೇಷವಾದ್ದು. ಈಗೀಗ ಇದೀಗ ಕೊನೆಗೆ ಈ ಸೀಸದ ಕಡ್ಡಿ ಸಿಕ್ಕಿದೆ.
ಎಲ್ಲಿ ಇಟ್ಟಕೊ ಬೇಕು? ಹೇಗೆ ಇಟ್ಟಕೊ ಬೇಕು? ಇದನ್ನು ಹೀಗೆ ಪ್ಯಾಂಟಿನಲ್ಲೇ ಇಟ್ಟುಕೊಂಡರೆ ಅಯ್ಯೋ ಏರ್‌ಪೋರ್ಟ್‌ನಲ್ಲಿ ತಳ ಬುಡ ಸಮೇತ ಚೆಕ್ ಮಾಡ್ತಾರೆ. ಇದನ್ನೇ ಬಾಂಬ್‌ನ ಒಂದು ಭಾಗವೆಂದು ಅನುಮಾನ ಪಟ್ಟರೂ ಪಟ್ಟರೆ ಎಲ್ಲಿ ಸಿಗ್ತು, ಹೇಗೆ ಸಿಗ್ತು? ಯಾಕೆ ಈ ಸೀಸದ ಕಡ್ಡಿಗೆ ಖಂಡಾಂತರ ಪಯಣ ಎಂದರೆ ಏನು ಹೇಳುವುದು? ಸೂಟ್ ಕೇಸಿನೊಳಗಡೆ ಬಟ್ಟೆ ಮಧ್ಯ ಇಟ್ಟರೆ ಸರಿ ಹಾಗೆ ಮಾಡುವಾ. ಈಗಲೂ ಬಟ್ಟೆ ಮಧ್ಯದಲ್ಲಿ ಸೂಟ್‌ಕೇಸ್‌ನೊಳಗೆ ಇಡುವಾ. ಇಟ್ಟು ಮಲಗಿದೆ. ನಾಳೆ ಬೆಳಗ್ಗೆ ಎದ್ದು ಏರ್‌ಪೋರ್ಟ್‌ಗೆ ಹೊರಡಬೇಕು. ರಾತ್ರಿಯೆಲ್ಲ ನಿದ್ದೆ ಬರದೆ ಚಡಪಡಿಸಿದೆ. ಪಕ್ಕದಲ್ಲಿ ಮಲಗಿದ್ದವರೊಬ್ಬರು ರಾತ್ರಿಯುದ್ದಕ್ಕೂ ಹೊರಳಾಡುತ್ತಿದ್ದ ಹಾಗೆ, ಹಾಸಿಗೆಯಲ್ಲಿ ನನ್ನನ್ನು ಒತ್ತರಿಸಿ ಒತ್ತರಿಸಿ, ಪಕ್ಕಕ್ಕೆ ಪಕ್ಕಕ್ಕೆ ತಳ್ಳಿ ಮಂಚದ ತುದಿಗೆ ನೂಕಿದ ಹಾಗೆ. ಎದ್ದು ಕೂತಕೊಂಡರೆ ಸೂಟ್‌ಕೇಸ್ ವಿಲಿ ವಿಲಿ ಒದ್ದಾಡುತ್ತಿತ್ತು. ತನಗೆ ತಾನೇ ಮಗುಚಿ ಹಾಕಿಕೊಂಡಿತು. ತೆವಳಿಕೊಂಡು ಬಂದು ಮಂಚ ಏರಿ ನನ್ನ ಹೊಟ್ಟೆ ಹತ್ತಿರ ಕುಳಿತುಕೊಂಡಿತು. ನನ್ನ ಉಸಿರಾಟ ನಿಂತಂತಾಯಿತು. ಮೈ ಭಾರ ಹೆಚ್ಚಾಗುತ್ತಿದೆ ಎನಿಸಿತು. ಸೀಸದ ಕಡ್ಡಿ ತೆಗೆದು ಮತ್ತೆ ಜೇಬಿನೊಳಕ್ಕೆ ಇಟ್ಟಕೊಂಡೆ. ಮತ್ತೆ ಹೊರತೆಗೆದು ಅಂಗೈ ಮಧ್ಯದಲ್ಲಿ ಇಷ್ಟಲಿಂಗದಂತೆ ಕೂರಿಸಿಕೊಂಡು ಭದ್ರವಾಗಿ ಭದ್ರವಾಗಿ ಒತ್ತಿ ಹಿಡಿದುಕೊಂಡೆ. ಗಾಢವಾಗಿ ನಿದ್ದೆ ಬಂತು.
ಸರಿ, ಏನಾದರೂ ಆಗಲಿ, ನನ್ನ ಕೈಯಲ್ಲೇ ಇಟ್ಟಕೋ ಬೇಕು. ಪರ್ಸ್ ಒಳಗೇ ಇಟ್ಟಕೋಬೇಕು. ಸೆಕ್ಯೂರಿಟಿ ಚೆಕ್ ಮಾಡುವಾಗ ಹ್ಯಾಂಡ್ ಬ್ಯಾಗ್‌ಗೆ ಹಾಕಿಬಿಡಬೇಕು. ಒಟ್ಟಿನಲ್ಲಿ ಕಣ್ಣು ತಪ್ಪಿಸಬೇಕು.
ಪರ್ಸ್ ಒಳಗೆ ಇಟ್ಟುಕೊಂಡಿದ್ದ ಸೀಸದ ಕಡ್ಡಿಯನ್ನು ಸ್ಕ್ಯಾನರ್ ತೋರಿಸಿಯೇ ಬಿಟ್ಟಿತು. ಸರಸರನೆ ಈಚೆಗೆ ತೆಗೆಸಿ ನಾಲ್ಕಾರು ಸೆಕ್ಯುರಿಟಿ ಜನ ಒಟ್ಟಿಗೇ ಪರಿಶೀಲಿಸಿದರು. ಆ ಕೈಯಿಂದ ಈ ಕೈಗೆ ಓಡಾಡಿಸಿದರು. ಹಾಗೆ ಕೈ ಬದಲಾಯಿಸುವಾಗ ಬಿದ್ದು ಹೋದರೆ, ಮಾಯವಾದರೆ, ಮೊದಲೇ ಪುಟ್ಟ ಸೀಸದ ಕಡ್ಡಿ, ಬಿದ್ದಾಗ ಮತ್ತಷ್ಟು ಒಡೆದು ಹೋದರೆ ಎಂದು ನಾನು ನಡುಗುತ್ತಿದ್ದೆ. ಅವರವರೇ ಏನೇನೋ ಮಾತಾಡಿಕೊಂಡರು. ಸಮಾಲೋಚನೆ ನಡೆಸಿದರು. ಒಬ್ಬ ಒಳಗಡೆ ಹೋಗಿ ತೂಕದ ಮಶೀನ್ ತಂದ. ಸೀಸದ ಕಡ್ಡಿಯನ್ನು ತೂಕ ಮಾಡಲು ಹೋದರೆ ಅದು ಬೇಸಿನ್‌ನಲ್ಲಿ ಒಂದು ಕಡೆ ನಿಲ್ಲುತ್ತಲೇ ಇಲ್ಲ. ಪುಟ ಪುಟ ಹೊರಳಾಡುತ್ತಿತ್ತು. ಹತ್ತಾರು ಸಲ ಪ್ರಯತ್ನಿಸಿದರು. ಕೊನೆಗೂ ಒಂದುಕಡೆ ನಿಲ್ಲದೆ ಇದ್ದಾಗಲೇ, ಪುಟ ಪುಟ ಹೊರಳಾಡುತ್ತಿದ್ದಾಗಲೇ ಸೂಚಿಸಿದ ತೂಕವನ್ನು ಗುರುತು ಹಾಕಿಕೊಂಡು, ಯಾತ ಯಾತರಿಂದಲೋ ಕೂಡಿದರು. ಕಳೆದರು. ಹುಬ್ಬು ಗಂಟಿಕ್ಕಿದರು. ಭುಜ ಕುಣಿಸಿದರು. ಇದೀಗ ದೊಡ್ಡ ಚೀಫ್ ಸೆಕ್ಯುರಿಟಿ ಆಫೀಸರ್ ಬಂದರು. ಅವನ ಸುತ್ತ ಮುತ್ತ ನಾಲ್ಕು ಜನ ಬಂದೂಕುಧಾರಿಗಳು. ಸೀಸದ ಕಡ್ಡಿಯ ಬಗ್ಗೆ ಸಹಾಯಕರು ಬರೆದಿಟ್ಟುಕೊಂಡಿದ್ದ ಲೆಕ್ಕಾಚಾರಗಳನ್ನೆಲ್ಲ ಕಣ್‌ಸನ್ನೆಯಲ್ಲೆ ಪರಿಶೀಲಿಸಿ, ಸೀಸದ ಕಡ್ಡಿಯನ್ನು ಬಲಗೈಲಿ ಹಿಡಿದುಕೊಂಡು ಮೇಲಕ್ಕೆತ್ತಿ, ನಾನಾ ಕೋನಗಳಿಂದ ಪರಿಶೀಲಿಸಿದವರೆ ಒಂದು ರೀತಿಯ ಆವೇಗದಲ್ಲಿ ದಸ್ಕತ್ ಹಾಕಿದರು. ಉದಾಸೀನದ ಮುಖಭಾವದೊಡನೆ. ಸಹಾಯಕರು ಸೀಸದ ಕಡ್ಡಿಯನ್ನು ನನಗೆ ಮತ್ತೆ ವಾಪಸ್ ಕೊಟ್ಟರು. ಪಾಪ, ಸೀಸದಕಡ್ಡಿ ಮೈ ತುಂಬಾ ನಡುಗುತ್ತಿತ್ತು. ಮೃದುವಾಗಿ ಅದನ್ನು ನೇವರಿಸುತ್ತಾ ಪರ್ಸಿನೊಳಗೆ ಭದ್ರವಾಗಿ ಸೇರಿಸಿ ಪ್ಯಾಂಟ್ ಜೇಬಿನೊಳಗೆ ಇಟ್ಟುಕೊಂಡೆ.
ಸೀಸದ ಕಡ್ಡಿ- ಮೂರು ನಾಲ್ಕು ಖಂಡಗಳ ಖಂಡಾಂತರ ಪಯಣವನ್ನು ಬೆಳೆಸಿತು.



- ಕೆ. ಸತ್ಯನಾರಾಯಣ
kssatya600@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com