
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಎಂ.ಕೆ ಅಯ್ಯಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಬಂದಿಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಅಯ್ಯಪ್ಪ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಡಿಸಿ ಅಯ್ಯಪ್ಪ ಅವರೊಂದಿಗೆ ಕಂದಾಯ ನೊಂದಣಾಧಿಕಾರಿ ರವಿಕುಮಾರ್, ವಿಶೇಷ ತಹಶೀಲ್ದಾರ್ ಗೋಪಾಲ ಸ್ವಾಮಿ ಮತ್ತು ಕಂದಾಯ ಇಲಾಖೆಯ ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಸರ್ಕಾರಿ ಭೂ ದಾಖಲೆಯನ್ನು ತಿದ್ದಿದ ಆರೋಪದ ಮೇಲೆ ಈ ನಾಲ್ವರನ್ನು ಬಂಧಿಸುವಲ್ಲಿ ಲೋಕಾಯುಕ್ತ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ಸದ್ಯ ಲೋಕಾಯುಕ್ತ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿ ಅಯ್ಯಪ್ಪ ಅವರನ್ನು ಹೊರತುಪಡಿಸಿ ಉಳಿದ ಮೂವರು ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ನೋಟಿಸ್ ಜಾರಿಮಾಡಿತ್ತು ಎಂದು ಮೂಲಗಳು ತಿಳಿಸಿವೆ.
ಯಲಹಂಕ ಬಳಿ ಮಾದಪ್ಪನ ಹಳ್ಳಿಯ ಸರ್ವೇ ನಂಬರ್ 62ರಲ್ಲಿನ 32 ಎಕರೆ ಸರ್ಕಾರಿ ಭೂಮಿಯನ್ನು ಶಾಸಕ ವಿಶ್ವನಾಥ್ ಅವರ ಸಂಬಂಧಿ ನರಸಿಂಹಯ್ಯ ಅವರಿಗೆ ಪರಭಾರೆ ಮಾಡಿಕೊಟ್ಟಿದ್ದಾರೆ ಎಂಬ ಆರೋಪವನ್ನು ಹೊರಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿಸಿ ಆಗಿರುವ ಎಂ.ಕೆ ಅಯ್ಯಪ್ಪ ಅವರು ತಮ್ಮ ಆದಾಯಕ್ಕೂ ಮೀರಿದ ಆಸ್ತಿಗಳಿಸಿದ್ದಾರೆ ಎಂದು ಈ ಹಿಂದೆ ಅನೇಕ ದೂರುಗಳು ಲೋಕಾಯುಕ್ತ ನ್ಯಾಯಾಲದಲ್ಲಿ ದಾಖಲಾಗಿದ್ದವು.
ಅಲ್ಲದೆ ಅಯ್ಯಪ್ಪ ಅವರು ತಮ್ಮ ಪ್ರಭಾವವನ್ನು ಬಳಸಿ ರೈತರ ಫಲವತ್ತು ಭೂಮಿಯನ್ನು ಅಕ್ರಮವಾಗಿ ಖರೀದಿಸಿದ್ದಾರೆ ಎಂದೂ ಕೂಡ ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರು ಡಿಸಿ ಅಯ್ಯಪ್ಪ ಅವರನ್ನು ಬಂಧಿಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ಈ ನಾಲ್ವರನ್ನು ಲೋಕಾಯುಕ್ತ ಕೋರ್ಟ್ ನಾಳೆ ಸಂಜೆಯವರೆಗೆ ಪೊಲೀಸ್ ವಸಕ್ಕೆ ಒಪ್ಪಿಸಿದೆ.
Advertisement