ವಿಶ್ವ ಮಾನಸಿಕ ಆರೋಗ್ಯ ದಿನ: ಕಾರ್ಯಸ್ಥಳದಲ್ಲಿ ಮಾನಸಿಕ ಆರೋಗ್ಯಕ್ಕಾಗಿ ಪರಿಹರಿಸಬೇಕಿದೆ ಈ ಸಮಸ್ಯೆಗಳನ್ನ

"ಬೇಕಾದಷ್ಟು ಸಂಪಾದನೆ ಉಂಟು ಸರ್, ಗೌರವಾನೂ ಇದೆ, ಅಧಿಕಾರನೂ ಇದೆ, ಆದರೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಎಲ್ಲಾದರೂ ಹೋಗಿ ಬಿಡೋಣ ಅಂತ ಅನ್ನಿಸುತ್ತೆ. ಆದರೆ ಏನು ಮಾಡೋದು, ಮನೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
"ಬೇಕಾದಷ್ಟು ಸಂಪಾದನೆ ಉಂಟು ಸರ್,  ಗೌರವಾನೂ ಇದೆ, ಅಧಿಕಾರನೂ ಇದೆ, ಆದರೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಎಲ್ಲಾದರೂ ಹೋಗಿ ಬಿಡೋಣ ಅಂತ ಅನ್ನಿಸುತ್ತೆ. ಆದರೆ ಏನು ಮಾಡೋದು, ಹೆಂಡತಿ, ಮಕ್ಕಳು, ಮನೆ - ಸಂಸಾರ ಅಂತ ಕಟ್ಟಿಕೊಂಡ ಮೇಲೆ, ಹಾಗೆ ಬಿಟ್ಟು ಹೋಗೋಕೂ ಆಗಲ್ಲ, ಇಲ್ಲಿ ಇರ‍್ಲಿಕ್ಕೂ ಆಗ್ತಿಲ್ಲ, ಏನೋ ಒಂದು ಪೇಚಾಟದ ಪರಿಸ್ಥಿತಿ ಸರ್" ಅಂತ ನನ್ನ ಬಳಿ ಆಪ್ತ ಸಲಹೆಗೆ ಬಂದ ವ್ಯಕ್ತಿಯೊಬ್ಬರು ಹೇಳಿದರು.
ಸುಮಾರು 8 ವರ್ಷಗಳ ಕಾಲ ಒಂದೇ ಕಂಪೆನಿಯಲ್ಲಿ ದುಡಿದು ಒಳ್ಳೆಯ ಹುದ್ದೆಗೇರಿದ ಮೇಲಿನ ಅವರ ಮನಸ್ಸಿನ ಪರಿಸ್ಥಿತಿ ಅನೇಕರಿಗೆ ಹುಚ್ಚುತನ ಅಂತ ಕಂಡರೂ ಇಂತಹ ಅನೇಕ ಮಂದಿ ಇಂದಿನ ದಿನಗಳಲ್ಲಿ ನಮಗೆ ಕಾಣಸಿಗುತ್ತಿರುವುದು ವಾಸ್ತವ. ಹಣ, ಆಸ್ತಿ, ಅಂತಸ್ತು ಇವೆಲ್ಲ ಇದ್ದರೂ ಏನೂ ಇಲ್ಲದ ಭಾವ ಬರುವುದಕ್ಕೆ ಕಾರಣ ಏನು ಎಂದು ಹುಡುಕುತ್ತಾ ಹೋದರೆ, ಅರಿವಾಗುವುದು ಮಾನಸಿಕ ನೆಮ್ಮದಿಯ ಕೊರತೆ. ಇಂತಹ ಪರಿಸ್ಥಿತಿಯೇ ಬಹಳ ಸಮಯ ಮುಂದುವರಿದರೆ ಇದು ಖಿನ್ನತೆಗೂ ಕಾರಣವಾಗಬಹುದು. ಆದರೆ ಅದೆಷ್ಟೋ ಬಾರಿ ದೊಡ್ಡ ಸಮಸ್ಯೆಯಾಗುವವರೆಗೂ ಗಮನಕ್ಕೇ ಬಂದಿರುವುದಿಲ್ಲ, ಅಥವಾ ಬಂದಿದ್ದರೂ ಅದರ ಬಗ್ಗೆ ಯಾವುದೇ ಕಾಳಜಿಯನ್ನು ವಹಿಸುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವದೆಲ್ಲೆಡೆ 3೦೦ ಮಿಲಿಯನ್ ಜನರಿಗಿಂತಲೂ ಹೆಚ್ಚು ಮಂದಿ ಖಿನ್ನತೆಯಿಂದ ಬಳಲುತ್ತಿದ್ದಾರೆ. ಇದರಿಂದ ಸುಮಾರು 1 ಟ್ರಿಲಿಯನ್ ಡಾಲರ್ ಗಳಷ್ಟು ನಷ್ಟವಾಗುತ್ತಿದೆ.
ಯಾಕೆ ಈ ರೀತಿ ಜನರು ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡು ಬಿಡುತ್ತಾರೆ ಎಂಬುದನ್ನು ಕೂಲಂಕುಷವಾಗಿ ಗಮನಿಸಿದಾಗ ಅನೇಕ ಕಾರಣಗಳು ಕಂಡುಬರುತ್ತವೆ. ಮೊದಲನೆಯದು, ವೃತ್ತಿಯ ಆಯ್ಕೆ. ಇತರರ ಒತ್ತಾಯದ ಮೇರೆಗೆ, ಅಥವಾ ಕೌಟುಂಬಿಕ ಪರಿಸ್ಥಿತಿಗಳ ಕಾರಣದಿಂದ ತಮಗಿಷ್ಟವಿಲ್ಲದ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಅದರ ಹಿಂದೆ, ತಮಗಿಷ್ಟವಿಲ್ಲದ ವಿಷಯವನ್ನೂ ಅಧ್ಯಯನ ಮಾಡಿರುತ್ತಾರೆ. ಆಮೇಲೆ ಹಿಡಿದ ದಾರಿ ಕಡುವಾಗುತ್ತದೆ.
ಎರಡನೆಯದು ಕಾರ್ಯಸ್ಥಳದಲ್ಲಿರುವ ಒತ್ತಡ. ಖಾಸಗಿ ಸಂಸ್ಥೆಗಳ ಮೂಲ ಉದ್ದೇಶವೇ ಕಡಮೆ ವೆಚ್ಚದಲ್ಲಿ ಗರಿಷ್ಟ ಉತ್ಪತ್ತಿ. ಇದು ಸಾಧ್ಯವಾಗಬೇಕಾದರೆ, ಉದ್ಯೋಗಿಗಳನ್ನು ಅವರ ಸಾಮಾನ್ಯ ಸಾಧ್ಯತೆಗಿಂತಲೂ ಹೆಚ್ಚಿನ ರೀತಿಯಲ್ಲಿ ದುಡಿಸಿಕೊಳ್ಳಬೇಕು. ಹಾಗಾದಾಗ ಉದ್ಯೋಗಿಗಳು ಮಾನಸಿಕ ಸಮಸ್ಯೆಗಳಿಗೆ ತುತ್ತಾಗುತ್ತಾರೆ.
ಮೂರನೆಯದು ಏಕತಾನತೆ. ಒಂದೇ ರೀತಿಯ ಕೆಲಸ, ಬದಲಾವಣೆ ಇಲ್ಲ, ಜಾಸ್ತಿ ಮನುಷ್ಯ ಸಂಪರ್ಕ ಇಲ್ಲ. ದಿನವೂ ಕಂಪ್ಯೂಟರಿನ ಮುಂದೆ ಕುಳಿತೋ ಅಥವಾ ಇನ್ಯಾವುದೋ ಮೆಷಿನ್ ನ ಮುಂದೆ ಕುಳಿತು ಕೆಲಸ. ಹೀಗಾಗಿ ಕೆಲಸದ ಕುರಿತು ಬೇಸರ ಉಂಟಾಗುತ್ತದೆ.
ನಾಲ್ಕನೆಯದು ಸಹೋದ್ಯೋಗಿಗಳ ಅಸಹಕಾರ. ಎಷ್ಟೋ ಬಾರಿ ಸಹೋದ್ಯೋಗಿಗಳು ತಮ್ಮದೇ ಆದ ಕಾರಣಗಳಿಂದಾಗಿ ಇತರರಿಗೆ ಸಹಾಯ ಮಾಡದೆ ಇರುವುದು ತುಂಬಾ ಸಮಯ ನಡೆದರೆ, ಅನೇಕರು ಬೇಸತ್ತು ಬಿಡುತ್ತಾರೆ.
ಐದನೆಯದು ಅರ್ಥಹೀನತೆ. ಬಾಲ್ಯದಲ್ಲಿ ಕಂಡ ಕನಸುಗಳು, ತಮ್ಮ ಪ್ರತಿಭೆ, ಕೌಶಲ್ಯ ಇದ್ಯಾವುದಕ್ಕೂ ತಾವು ಮಾಡುತ್ತಿರುವ ಕೆಲಸದಿಂದ ತೃಪ್ತಿ ಸಿಗದಾಗ, ಅನೇಕರು ಬದುಕಿನ ಅರ್ಥವನ್ನೇ ಕಳೆದುಕೊಂಡು ಬಿಡುತ್ತಾರೆ.
ಈ ರೀತಿ ಸಮಸ್ಯೆ ಜಟಿಲವಾಗುತ್ತಾ ಹೋದಂತೆಲ್ಲ ಮಾಡುತ್ತಿರುವ ವೃತ್ತಿಯಲ್ಲಿ ಆಸಕ್ತಿ ಕಳೆದುಕೊಂಡು ಇನ್ನೇನಾದರೂ ಮಾಡಬೇಕು ಎಂದು ಹೊರಡುತ್ತಾರೆ. ಆದರೆ ಮಧ್ಯವಯಸ್ಸು ದಾಟಿದ ಮೇಲೆ, ಇತರೆ ವೃತ್ತಿಗೆ ಬದಲಾವಣೆಯನ್ನು ತೆಗೆದುಕೊಳ್ಳುವುದು ಇನ್ನೊಂದಷ್ಟು ಸುಲಭವಾದ ಉತ್ತರಗಳಿಲ್ಲದ ಪ್ರಶ್ನೆಗಳನ್ನು ಅವರೆದುರು ತಂದಿಡುತ್ತದೆ. ಆ ಪ್ರಶ್ನೆಗಳು ಮತ್ತಷ್ಟು ಸಂಕೀರ್ಣವಾದಾಗ ಯಾವುದೂ ಬೇಡ, ಈ ಜೀವನವೇ ಸಾಕು ಎನ್ನುವ ನಿರ್ಧಾರಕ್ಕೂ ಅನೇಕರು ಬಂದುಬಿಡುತ್ತಾರೆ.
ಇಂತಹ ಪರಿಸ್ಥಿತಿಯಲ್ಲಿದ್ದೂ ನಾವಿನ್ನೂ ಮಾನಸಿಕ ಸಮಸ್ಯೆಗಳ ಕುರಿತು ಗಂಭೀರವಾದ ಚಿಂತನೆಯನ್ನು ಆರಂಭಿಸಿಲ್ಲ. ಕಾರ್ಪೋರೇಟ್ ಕಂಪೆನಿಗಳಲ್ಲಿ ಉದ್ಯೋಗಿಗಳನ್ನು ಉತ್ತಮವಾಗಿ ಕೆಲಸ ಮಾಡಲು ಪ್ರೇರೇಪಿಸಲು ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಆದರೆ ಉದ್ಯೋಗಿಗಳು ವೈಯಕ್ತಿಕವಾಗಿ ಯಾವ ರೀತಿಯ ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ, ಮತ್ತು ಅವು ಅವರ ಕಾರ್ಯಕ್ಷಮತೆಯಲ್ಲಿ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಸಂಸ್ಥೆಗಳು ಜಾಸ್ತಿ ತಲೆಕೆಡಿಸಿಕೊಳ್ಳುವುದಿಲ್ಲ.
ಒಂದು ವೇಳೆ ಪ್ರತಿ ಸಂಸ್ಥೆಯೂ ಕೂಡಾ ತಮ್ಮ ಉದ್ಯೋಗಿಗಳ ಮಾನಸಿಕ ಆರೋಗ್ಯವನ್ನು ಉತ್ತಮವಾಗಿಡುವಲ್ಲಿ ಸ್ವಲ್ಪ ಗಮನ ಹರಿಸಿದಲ್ಲಿ ಅವರ ಪ್ರಗತಿಯಲ್ಲೂ ಬಹಳ ಉತ್ತಮ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಉದಾಹರಣೆಗೆ, ವಿಶ್ವ ಸಂಸ್ಥೆಯ ಅಧ್ಯಯನದ ಪ್ರಕಾರ, ಮಾನಸಿಕ ಆರೋಗ್ಯವನ್ನು ಉತ್ತಮವಾಗಿಸಲು ಖರ್ಚು ಮಾಡುವ ಪ್ರತಿ 1 ಡಾಲರ್, ಕನಿಷ್ಟ 4 ಡಾಲರ್ ನಷ್ಟು ಹೆಚ್ಚಿನ ಆದಾಯವನ್ನು ತಂದುಕೊಡುವಲ್ಲಿ ಸಹಾಯ ಮಾಡುತ್ತದೆ.
ಈ ನಿಟ್ಟಿನಲ್ಲಿಯೇ, ಪ್ರತಿ ವರ್ಷದಂತೆಯೇ ಅಕ್ಟೋಬರ್ 10 ರಂದು ಅಂದರೆ ಇಂದು ಆಚರಿಸುವ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ವಿಷಯವನ್ನು "ಕಾರ್ಯಸ್ಥಳದಲ್ಲಿ ಮಾನಸಿಕ ಆರೋಗ್ಯ" ಎಂದು ಆರಿಸಿದ್ದಾರೆ. ಯಾವುದೇ ರೀತಿಯ ಉದ್ಯೋಗದಲ್ಲಿರಲಿ, ಯಾವುದೇ ರೀತಿಯ ಸ್ಥಾನದಲ್ಲಿರಲಿ, ಮಾನಸಿಕ ಸಮಸ್ಯೆಗಳು ಯಾರಿಗೂ ಬರಬಹುದು. ಇವುಗಳನ್ನು ಆಯಾ ಸಂದರ್ಭದಲ್ಲೇ ಸರಿಪಡಿಸಿಕೊಂಡಲ್ಲಿ ದೊಡ್ಡ ಮಟ್ಟಿನ ಹಾನಿಯಾಗುವುದು ತಪ್ಪುತ್ತದೆ. ಉತ್ತಮ ಆರೋಗ್ಯಕರವಾದ ಸಮಾಜ ನಮ್ಮದಾಗುತ್ತದೆ.
-ಅಕ್ಷರ ದಾಮ್ಲೆ
ಮಾನಸಿಕ ತಜ್ಞರು ಮತ್ತು ಸ್ಥಾಪಕರು
ಮನೋ ಸಂವಾದ
aksharadamle@manosamvaada.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com