ಕೋವಿಡ್-19: ಈ ಸಮಯದಲ್ಲಿ ರಕ್ತ ದಾನ ಮಾಡಬಹುದೇ? ನಿಮ್ಮ ಸಂದೇಹಗಳಿಗೆ ಇಲ್ಲಿದೇ ಉತ್ತರ...

ರಕ್ತದಾನ ಮಾಡುವುದು ಜೀವ ಉಳಿಸುವ ಕಾರ್ಯವಾಗಿದೆ. ಅತ್ಯಂತ ಆರೋಗ್ಯಯುತರಾದ ವಯಸ್ಕರು ಯಾವುದೇ ಅಡ್ಡಪರಿಣಾಮಗಳನ್ನು ಅನುಭವಿಸದೆ ರಕ್ತದಾನ ಮಾಡಬಹುದು. ರಕ್ತ ದಾನ ಮಾಡಿ, ಜೀವಗಳನ್ನು ಉಳಿಸಿ.

Published: 05th August 2021 01:05 PM  |   Last Updated: 05th August 2021 01:08 PM   |  A+A-


ರಕ್ತ ದಾನ

By : prasad
Online Desk

ರಕ್ತದಾನ ಮಾಡುವುದು ಜೀವ ಉಳಿಸುವ ಕಾರ್ಯವಾಗಿದೆ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲವಾದ್ದರಿಂದ ಸೂಕ್ತ ಪ್ರಮಾಣದ ರಕ್ತ ಲಭ್ಯವಾಗುವುದರ ಖಾತ್ರಿ ಮಾಡಿಕೊಳ್ಳಲು ಜಗತ್ತಿನ ಎಲ್ಲೆಡೆಯ ಆರೋಗ್ಯ ಕೇಂದ್ರಗಳು ದಾನಿಗಳನ್ನು ಆಧರಿಸಿರುತ್ತವೆ. ಅತ್ಯಂತ ಆರೋಗ್ಯಯುತರಾದ ವಯಸ್ಕರು ಯಾವುದೇ ಅಡ್ಡಪರಿಣಾಮಗಳನ್ನು ಅನುಭವಿಸದೆ ರಕ್ತದಾನ ಮಾಡಬಹುದು. ವಾಸ್ತವವಾಗಿ ನಿಗದಿತ ಅವಧಿಗೊಮ್ಮೆ ರಕ್ತದಾನ ಮಾಡುವುದು ಉತ್ತಮ ಅಭ್ಯಾಸವಾಗಿರುತ್ತದೆ. ರಕ್ತದಾನದ ಲಾಭ ಕುರಿತು ಜಾಗೃತಿಯನ್ನು ಹರಡುವ ತುರ್ತು ಅಗತ್ಯವಿರುತ್ತದೆ. ರಕ್ತದಾನ ಕುರಿತ ಹಲವಾರು ವಿಷಯಗಳು ಹಾಗೂ ಕೋವಿಡ್-19ರ ಪರಿಣಾಮಗಳು ಮತ್ತು ನಂತರದಲ್ಲಿ ರಕ್ತ ಲಭ್ಯತೆ ಕುರಿತಂತೆ ಸ್ಪೆಷಲಿಸ್ಟ್ ಹಾಸ್ಪಿಟಲ್ಸ್‍ನ ರೋಗಶಾಸ್ತ್ರ ಸಲಹಾತಜ್ಞರಾದ ಡಾ. ಟ್ರಿಚಾ ಕುಲ್ಹಳ್ಳಿ ಅವರು ನೀಡಿದ ಮಾಹಿತಿ ಇಲ್ಲಿದೆ.

1. ಪ್ರಸಕ್ತ ಸನ್ನಿವೇಶದಲ್ಲಿ ರಕ್ತನಿಧಿ(ಬ್ಲಡ್ ಬ್ಯಾಂಕ್)ಗಳಲ್ಲಿ ರಕ್ತದ ಕೊರತೆ ಇದೆಯೇ?
ದೇಶಕ್ಕೆ ಅಗತ್ಯವಾಗುವ ಮೂಲ ರಕ್ತ ಪ್ರಮಾಣವನ್ನು ಪೂರೈಸಲು ಕನಿಷ್ಟ ಶೇ.1ರಷ್ಟು ಜನಸಂಖ್ಯೆಯಿಂದ ರಕ್ತದಾನ ನಡೆದರೆ ಸಾಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜು ಮಾಡಿದೆ. ಭಾರತದ ಪ್ರಕರಣದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿಯಮಗಳ ಪ್ರಕಾರ 1.9 ದಶಲಕ್ಷ ಯುನಿಟ್(ಅಥವಾ ಶೇ.15)ಗಳಷ್ಟು ಕೊರತೆ ಇದೆ. ಭಾರತಕ್ಕೆ ರಕ್ತದ ಕೊರತೆಯನ್ನು ನಿಭಾಯಿಸುವುದು ದೊಡ್ಡ ಸಮಸ್ಯೆಯಾಗಿದೆಯಲ್ಲದೆ, ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಇದು ಮತ್ತಷ್ಟು ಬಿಕ್ಕಟ್ಟಿನ ಪರಿಸ್ಥಿತಿಯಾಗಿದೆ.

2. ಹೌದು ಎಂದಾದರೆ, ಸಾಕಷ್ಟು ಪ್ರಮಾಣದ ರಕ್ತದ ದಾಸ್ತಾನು ಮತ್ತು ಪೂರೈಕೆ ಹೊಂದಲು ಬ್ಲಡ್ ಬ್ಯಾಂಕ್‍ಗಳಿಗೆ ನೀವು ಯಾವ ಸಲಹೆ ನೀಡುತ್ತೀರಿ?
ದೇಶದ ರಕ್ತದ ಪೂರೈಕೆಯ ಶೇ.80ರಷ್ಟಕ್ಕೂ ಹೆಚ್ಚಿನ ಪ್ರಮಾಣ ಸ್ವಯಂಸೇವಕರಾದ ಮತ್ತು ಹಣ ಪಡೆಯದ ರಕ್ತದಾನಿ(ವಿಎನ್‍ಆರ್‍ಡಿ)ಗಳಿಂದ ಬರುತ್ತದೆ. ಇವರು ತಮ್ಮ ಸ್ವಾರ್ಥರಹಿತ ಪರಹಿತರ ಚಿಂತನೆಯ ಕಾರ್ಯಗಳಿಂದಾಗಿ ರಕ್ತ ಕೇಂದ್ರಗಳಲ್ಲಿ ವರ್ಷಪೂರ್ತಿ ರಕ್ತ ಪೂರೈಕೆಯಾಗುವಂತೆ ಮಾಡುತ್ತಾರೆ. ದೇಶದಲ್ಲಿ ಲಾಕ್‍ಡೌನ್ ಘೋಷಣೆಯಾದಾಗಿನಿಂದ ನಾಗರಿಕರ ಸಂಚಾರ ಸ್ತಬ್ಧವಾಗಿದೆ. ಯಾವುದೇ ಪೂರ್ವ ಸಿದ್ಧತೆಗಳಿಲ್ಲದೆ, ಇದ್ದಕ್ಕಿದ್ದಂತೆ ರಕ್ತದಾನ ನಿಂತುಹೋಗಿದೆ. ಯಾವುದೇ ರಕ್ತದಾನ ಶಿಬಿರಗಳ ಆಯೋಜನೆಯಾಗುತ್ತಿಲ್ಲವಾದ್ದರಿಂದ ಅಲ್ಲದೆ, ಅನೇಕ ಆರೋಗ್ಯ ಸೇವಾ ಕಾರ್ಯಕರ್ತರನ್ನು ಕ್ವಾರಂಟೈನ್‍ಗೆ ಒಳಪಡಿಸಿರುವುದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಜನಸಂಖ್ಯೆಯ ಬಹಳಷ್ಟು ದೊಡ್ಡ ಸಂಖ್ಯೆಯ ಜನರು ಕೋವಿಡ್-19ನಿಂದ ಪೀಡಿತರಾಗಿರುವುದರ ಜೊತೆಗೆ ಅಲ್ಲದೆ, ಅವರಲ್ಲಿ ಅನೇಕ ಕುಟುಂಬ ಸದಸ್ಯರು ಮತ್ತು ಹತ್ತಿರದ ಸಂಪರ್ಕದವರು ಸಾಂಸ್ಥಿಕ ಅಥವಾ ಮನೆಯಲ್ಲಿಯೇ ಕ್ವಾರಂಟೈನ್‍ಗೆ ಒಳಗಾಗುವುದರಿಂದ ಅರ್ಹ ರಕ್ತದಾನಿಗಳ ಸಂಖ್ಯೆಯು ಕಡಿಮೆಯಾಗುತ್ತಿದೆ. ರಾಷ್ಟ್ರೀಯ ರಕ್ತ ಪೂರೈಕೆಗೆ ಇದು ದೊಡ್ಡ ಆತಂಕ ಮತ್ತು ಕಾಳಜಿಯ ವಿಷಯವಾಗಿದೆ.

ಅಗತ್ಯ ರೋಗಿಗಳಿಗೆ ಬೇಕಾದ ರಕ್ತದ ಉತ್ಪನ್ನಗಳು ಲಭ್ಯವಾಗಲು ಆರೋಗ್ಯಕರ ಜನರು ರಕ್ತದಾನ ಮಾಡುವುದನ್ನು ಮುಂದುವರಿಸುವುದು ಮುಖ್ಯವಾಗಿರುತ್ತದೆ. ಅತ್ಯುತ್ತಮ ಬದಲಿ ವ್ಯವಸ್ಥೆ ಎಂದರೆ ಬ್ಲಡ್ ಮೊಬೈಲ್‍ಗಳ ಬಳಕೆಯಾಗಿದೆ. ಇದರಲ್ಲಿ ರಕ್ತ ಸಂಗ್ರಹಿಸುವ ವಾಹನಗಳು ಸ್ವಯಂಪ್ರೇರಿತ ರಕ್ತದಾನಿಗಳ ಮನೆ ಬಾಗಿಲಿಗೆ ಹೋಗಿ ರಕ್ತ ಸಂಗ್ರಹಿಸಬಹುದಾಗಿದೆ. ರಕ್ತ ಕೇಂದ್ರಗಳು ಎಲ್ಲಾ ಸಂಗ್ರಹಿಸಲಾದ ಯುನಿಟ್‍ಗಳನ್ನು ರಕ್ತದ ಬಿಡಿಭಾಗಗಳಾಗಿ ಸಂಸ್ಕರಿಸಬೇಕಾಗುತ್ತದೆ. ಇದರಿಂದ ರಕ್ತವನ್ನು ಸೂಕ್ತ ವೈದ್ಯಕೀಯ ರೀತಿಯಲ್ಲಿ ಬಳಸುವ ಖಾತ್ರಿ ಮಾಡಿಕೊಳ್ಳಬಹುದು. ರಕ್ತದಾನಿಗಳು ಬಂದಾಗ ಅವರಿಗೆ ಜ್ವರದಂತಹ ಲಕ್ಷಣಗಳು ಇಲ್ಲದಿರುವುದನ್ನು ದೃಢಪಡಿಸಿಕೊಳ್ಳಲು ಪರೀಕ್ಷೆ ನಡೆಸಬೇಕು. ರಕ್ತದಾನ ಮಾಡಲು ಬಂದಾಗ ರಕ್ತದಾನಿಗಳು ಕಡ್ಡಾಯವಾಗಿ ಫೇಸ್‍ಮಾಸ್ಕ್(ಮುಖಕವಚ)ಗಳನ್ನು ಧರಿಸಿರಬೇಕು. ರಕ್ತದಾನ ಮಾಡುವ ಸ್ಥಳದಲ್ಲಿ ಹಾಜರಿರುವ ಜನರ ಸಂಖ್ಯೆಯನ್ನು ಮಿತಿಗೊಳಿಸಲು ಕಟ್ಟುನಿಟ್ಟಿನ ನಿರ್ಬಂಧಗಳನ್ನು ಕೈಗೊಳ್ಳಬೇಕು. ಇದೇ ಸಮಯದಲ್ಲಿ ಆರೋಗ್ಯಕರ ಜನರು ಮಾತ್ರ ರಕ್ತದಾನ ಮಾಡುವುದು ಮುಂದುವರೆಯುವುದು ಅಗತ್ಯವಾಗಿರುತ್ತದೆ. 

3. ವ್ಯಾಕ್ಸಿನೇಷನ್‍ನ ಮೊದಲ ಡೋಸ್ ಪಡೆದ ನಂತರ ವ್ಯಕ್ತಿ ರಕ್ತದಾನ ಮಾಡಬಹುದೇ? ಹೌದು ಎಂದಾದಲ್ಲಿ ಯಾವಾಗ ಮಾಡಬಹುದು ಹಾಗೂ ಎರಡನೇ ಡೋಸ್‍ಗೂ ಕೂಡ ಇದು ಅನ್ವಯವಾಗುತ್ತದೆಯೇ?
ಆಸ್ಟ್ರಾಝೆನಿಕಾ, ಕೋವ್ಯಾಕ್ಸಿನ್, ಫೈಝೆರ್ ಮತ್ತು ಮೊರ್ಡೆನಾ ಮುಂತಾದ ಬೇರೆ ಬೇರೆ ಲಸಿಕೆಗಳನ್ನು ಪಡೆದವರಿಗೆ ಬೇರೆ ಬೇರೆ ಅವಧಿ ಇರುವುದಿಲ್ಲ. ಅವರು ಆರೋಗ್ಯವಂತರಾಗಿದ್ದರೆ ಅಷ್ಟೇ ಸಾಕು. ಲೈವ್ ಅಟೆನ್ಯೂಯೇಟೆಡ್ ವ್ಯಾಕ್ಸಿನ್‍ಗಳನ್ನು ಪಡೆದವರಿಗೆ ಎರಡು ವಾರಗಳ ನಂತರದ ಸಮಯವನ್ನು ಶಿಫಾರಸ್ಸು ಮಾಡಲಾಗುತ್ತದೆ.

4. ರಕ್ತದಾನ ಮಾಡುವುದರ ಪ್ರಾಮುಖ್ಯತೆ ಏನು?
ಜೀವದಾನ – ಇದಕ್ಕೆ ಮಿಗಿಲಾದದ್ದು ಬೇರೆ ಇಲ್ಲ. ಇದಕ್ಕಿಂತಲೂ ರಕ್ತದಾನ ಮುಖ್ಯ ಎಂದು ಹೇಳಲು ಉತ್ತಮವಾದದ್ದು ಬೇರೆ ಯಾವುದಿದೆ. ರಕ್ತದಾನÀ ಒಂದಲ್ಲದೆ ಮೂರು ಜೀವಗಳನ್ನು ಉಳಿಸುವ ಸಾಮಥ್ರ್ಯ ಹೊಂದಿರುತ್ತದೆ. ತಾಯಿಯೊಬ್ಬಳು ತನ್ನ ಮಗುವಿಗೆ ಜನ್ಮ ನೀಡುವಾಗ ಚಿಕಿತ್ಸೆ ನೀಡಲು, ಮಾನವನಿರ್ಮಿತ ಮತ್ತು ನೈಸರ್ಗಿಕ ವಿಕೋಪಗಳಿಂದ ಬಳಲುತ್ತಿರುವ ಜನರಿಗೆ ಚಿಕಿತ್ಸೆ ನೀಡಲು ಮತ್ತು ಶಸ್ತ್ರಕ್ರಿಯೆಯ ತುರ್ತುಸ್ಥಿತಿಗಳಲ್ಲಿ ಚಿಕಿತ್ಸೆ ನೀಡಲು ರಕ್ತ ಮತ್ತು ಅದರ ಬಿಡಿಭಾಗಗಳನ್ನು ಬಳಸಲಾಗುತ್ತದೆ.

5. ಯಾರು ರಕ್ತದಾನ ಮಾಡಬಹುದು?
ಉತ್ತಮ ಆರೋಗ್ಯ ಹೊಂದಿರುವ ಬಹುತೇಕ ಜನರು ರಕ್ತದಾನ ಮಾಡಬಹುದು. ನೀವು 18ರಿಂದ 65 ವರ್ಷ ಒಳಗಿನವರಾಗಿರಬೇಕು ಮತ್ತು ಕನಿಷ್ಟ 50 ಕೆಜಿ ತೂಕ ಹೊಂದಿರಬೇಕು. ಮಹಿಳೆಯರಿಗೆ ಕನಿಷ್ಟ 12.5ಜಿ/ಡಿಎಲ್ ಮತ್ತು ಪುರುಷರಿಗೆ 13.0ಜಿ/ಡಿಎಲ್‍ಗಳಷ್ಟು ಕನಿಷ್ಟ ಪ್ರಮಾಣದ ಹಿಮೋಗ್ಲೋಬಿನ್ ಮಟ್ಟ ಇರಬೇಕು. ರಕ್ತದಾನ ಮಾಡುವ ದಾನಿಗಳ ಹಿಮೋಗ್ಲೋಬಿನ್ ಮಟ್ಟ 20.0ಜಿ/ಡಿಎಲ್‍ಗಿಂತಲೂ ಹೆಚ್ಚಾಗಿರಬಾರದು. ಈ ಮೂಲ ಅಂಶಗಳಲ್ಲದೆ, ಹಲವಾರು ಇತರೆ ನಿರ್ಬಂಧಗಳು ಇರುತ್ತವೆ. ಹಚ್ಚೆ ಹಾಕಿಸಿಕೊಂಡಿರುವುದು, ಬಾಡಿ ಪಿಯರ್ಸಿಂಗ್, ಗರ್ಭಾವಸ್ಥೆ ಮತ್ತು ಸ್ತನಪಾನ ಮಾಡಿಸುವುದು, ವೈದ್ಯಕೀಯ ಇತಿಹಾಸ, ಪ್ರವಾಸ ಇತಿಹಾಸ ಮುಂತಾದವುಗಳನ್ನು ಕುರಿತಂತೆ ನಿರ್ಬಂಧಗಳು ಇರುತ್ತವೆ.

6. ಕೋವಿಡ್‍ನಿಂದ ಚೇತರಿಸಿಕೊಂಡಿರುವ ರೋಗಿ ರಕ್ತದಾನ ಮಾಡಬಹುದೇ? ಯಾವಾಗ ಮಾಡಬಹುದು?
ಖಂಡಿತವಾಗಿ ಮಾಡಬಹುದು. ಕೋವಿಡ್-19ರ ರೋಗಿ ಸಂಪೂರ್ಣವಾಗಿ ಚೇತರಿಸಿಕೊಂಡ 28 ದಿನಗಳ ನಂತರ ಮಾತ್ರ ರಕ್ತದಾನ ಮಾಡಬಹುದು.

7. ದಾನ ಮಾಡಬಹುದಾದ ರಕ್ತವನ್ನು ಹೊಂದಲು ಕೋವಿಡ್ ರೋಗಿಗೆ ಎಷ್ಟು ಸಮಯ ಹಿಡಿಯುತ್ತದೆ?
ಕೋವಿಡ್-19ರ ವಿರುದ್ಧದ ಪ್ರತಿಕಾಯಗಳು ಅಂದರೆ ಆಂಟಿಬಾಡಿಗಳು 14 ದಿನಗಳ ಅಂತ್ಯಕ್ಕೆ ರಚನೆಯಾಗಲು ಆರಂಭವಾಗುತ್ತವೆ. ಆದರೆ, ಅವರು 28 ದಿನಗಳ ಅಥವಾ ಸಂಪೂರ್ಣ ಚೇತರಿಕೆಯ ನಂತರವೇ ರಕ್ತದಾನ ಮಾಡಬೇಕು. ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಾರ  ರಕ್ತದಾನ ಅಥವಾ ರಕ್ತ ವರ್ಗಾವಣೆಯ ಪ್ರಕ್ರಿಯೆಗಳು ನಿಮಗೆ ಕೋವಿಡ್-19 ಸಂಪರ್ಕ ಉಂಟಾಗುವ ಉನ್ನತ ಅಪಾಯ ಉಂಟುಮಾಡುವುದಿಲ್ಲ. ಏಕೆಂದರೆ ರಕ್ತದಾನ ಅಥವಾ ವರ್ಗಾವಣೆಯಿಂದ ಬಹುತೇಕ ಉಸಿರಾಟ ಸಂಬಂಧಿ ವೈರಸ್‍ಗಳು ಹರಡುವುದಿಲ್ಲ ಎಂದು ತಿಳಿದುಬಂದಿದೆ.  ಆದ್ದರಿಂದ ಅವರಿಗೆ ರಕ್ತದಾನ ಮಾಡಲು ಪ್ರೋತ್ಸಾಹಿಸಲಾಗುತ್ತದೆ.

8. ರಕ್ತದಾನ ಮಾಡುವುದರ ನಡುವೆ ಅವಧಿಯ ಅಂತರ ಎಷ್ಟಿರಬೇಕು?
ರಕ್ತದ ಬೇರೆ ಬೇರೆ ಭಾಗಗಳು ಚೇತರಿಸಿಕೊಂಡು ಮತ್ತೆ ರಚನೆಯಾಗಲು ಬೇರೆ ಬೇರೆ ಸಮಯ ಹಿಡಿಯುತ್ತದೆ. ಆದ್ದರಿಂದ, ಯಾವ ರೀತಿಯ ದಾನ ಮಾಡಲಾಗಿದೆ ಎಂಬುದನ್ನು ರಕ್ತದಾನಗಳ ನಡುವಿನ ಅವಧಿಯ ಅಂತರ ಆಧರಿಸಿರುತ್ತದೆ. ಸಂಪೂರ್ಣ ರಕ್ತದಾನ ಅತ್ಯಂತ ಸಾಮಾನ್ಯವಾಗಿದ್ದು, ಇದರಲ್ಲಿ ಎರಡು ದಾನಗಳ ನಡುವೆ 56 ದಿನಗಳ ಅಂತರ ಇರಬಹುದು. ಪ್ಲೇಟ್‍ಲೇಟ್‍ಗಳನ್ನು ಪ್ರತಿ 7 ದಿನಗಳಿಗೊಮ್ಮೆ ದಾನವಾಗಿ ನೀಡಬಹುದು. ವರ್ಷಕ್ಕೆ 24 ಬಾರಿ ದಾನವಾಗಿ ನೀಡಬಹುದು. ಕೆಂಪು ರಕ್ತಕಣಗಳು ಅಥವಾ ಆರ್‍ಬಿಸಿಗಳನ್ನು ಪ್ರತಿ 112 ದಿವಸಗಳಿಗೊಮ್ಮೆ ವರ್ಷಕ್ಕೆ 3 ಬಾರಿ ದಾನ ಮಾಡಬಹುದು.

9. ಬೇರೆ ಬೇರೆ ರಕ್ತದ ಗುಂಪುಗಳು ಮತ್ತು ಹೆಚ್ಚಿನ ದಾನ ಅಗತ್ಯವಿರುವ ಗುಂಪುಗಳು ಯಾವುವು?
`ಒ’ಪಾಸಿಟಿವ್ ಮತ್ತು `ಎ’ ಪಾಸಿಟಿವ್ ಇವು ಅತ್ಯಂತ ಸಾಮಾನ್ಯ ರಕ್ತದ ಗುಂಪುಗಳಾಗಿವೆ. ಇವುಗಳನ್ನು ದಾನ ಮಾಡುವ ಅಗತ್ಯ ಅತ್ಯಂತ ಹೆಚ್ಚಾಗಿರುತ್ತದೆ. ಈ ದಾನಿಗಳಲ್ಲಿ ಸಂಪೂರ್ಣ ರಕ್ತದಾನಗಳನ್ನು ಅತ್ಯಂತ ಹೆಚ್ಚಾಗಿ ಪ್ರೋತ್ಸಾಹಿಸಲಾಗುತ್ತದೆ. ಅವುಗಳನ್ನು ರಕ್ತದ ಮೂರು ಭಾಗಗಳಾಗಿ ಪ್ರತ್ಯೇಕಿಸಿ ಹೆಚ್ಚು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ.

10. ರಕ್ತದಾನಿಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಯಾವುವು?
ರಕ್ತದಾನ ಮಾಡಲು ಬಂದಾಗ ರಕ್ತದಾನಿಗಳಿಗೆ ಯಾವುದೇ ಜ್ವರದಂತಹ ಲಕ್ಷಣಗಳು ಇಲ್ಲದಿರುವುದನ್ನು ದೃಢಪಡಿಸಬೇಕು. ರಕ್ತದಾನಿಗಳು ಕಡ್ಡಾಯವಾಗಿ ಫೇಸ್ ಮಾಸ್ಕ್‍ಗಳನ್ನು(ಮುಖ ಕವಚ) ಧರಿಸಿರಬೇಕು. ರಕ್ತದಾನದ ಸ್ಥಳದಲ್ಲಿ ಹಾಜರಿರುವ ಜನರ ಸಂಖ್ಯೆಯನ್ನು ಸೀಮಿತಗೊಳಿಸಲು ಕಟ್ಟುನಿಟ್ಟಿನ ನಿರ್ಬಂಧಗಳನ್ನು ಅನುಸರಿಸಬೇಕು. ಕೇವಲ ಆರೋಗ್ಯಕರ ಜನರು ರಕ್ತದಾನ ಮಾಡುವುದನ್ನು ಮುಂದುವರಿಸುವಂತೆ ಮಾಡಲು ಇದು ಅಗತ್ಯವಾಗಿರುತ್ತದೆ.

11. ವರ್ಷಕ್ಕೊಮ್ಮೆ ರಕ್ತದಾನ ಮಾಡುವುದು ಆರೋಗ್ಯಕರವೇ?
ರಕ್ತದಾನ ಮಾಡುವುದು ನಿಮಗೆ ಒಳ್ಳೆಯದಾಗಿರುತ್ತದೆ. ಅಲ್ಲದೆ, ನೆರವಿನ ತೀವ್ರ ಅಗತ್ಯವಿರುವ ಎಲ್ಲಾ ಜನರಿಗೆ ಇದು ಒಳ್ಳೆಯದಾಗಿರುತ್ತದೆ. ರಕ್ತದಾನ ಮಾಡುವ ಮುನ್ನ ಸಣ್ಣ ವೈದ್ಯಕೀಯ ತಪಾಸಣೆಯನ್ನು ಮಾಡಿಸಿಕೊಳ್ಳಿ. ಇದರಿಂದ ನಿಮಗೆ ಇರುವ ಯಾವುದಾದರೂ ತೊಂದರೆಯನ್ನು ಗುರುತಿಸಬಹುದಾಗಿದೆ. ಐರನ್ ಸ್ಟೋರೇಜ್‍ನ ಅಪಾಯವನ್ನು ಇದು ಕಡಿಮೆ ಮಾಡುವ ಸಾಧ್ಯತೆ ಇರುತ್ತದೆ. ಅಲ್ಲದೆ, ಇದರಿಂದ ನಿಮ್ಮ ಹೃದಯ ಮತ್ತು ಪಿತ್ತಜನಕಾಂಗದ ಕಾರ್ಯ ಸುಧಾರಿಸಬಹುದಾಗಿದೆ. ನಿಮಗೆ ದೈಹಿಕ ನೆರವನ್ನು ನೀಡುವುದಲ್ಲದೆ, ಮತ್ತೊಬ್ಬರ ಜೀವವನ್ನು ಉಳಿಸಲು ನೀವು ದಾನ ಮಾಡಿರುವ ಮಾನಸಿಕ ತೃಪ್ತಿಯ ನೆರವನ್ನು ರಕ್ತದಾನವು ನಿಮಗೆ ನೀಡುತ್ತದೆ.

12. ರಕ್ತದ ಬೇರೆ ಬೇರೆ ಉತ್ಪನ್ನಗಳು ಯಾವುವು? ಪ್ಲೇಟ್‍ಲೆಟ್‍ಗಳು ಇತ್ಯಾದಿ?
ರೋಗಿಗಳಲ್ಲಿ ಬಳಸಲಾಗುವ ಮೂರು ಪ್ರಮುಖವಾದ ರಕ್ತದ ಉತ್ಪನ್ನಗಳು ಎಂದರೆ ಫ್ರೆಶ್ ಫ್ರೋಜನ್‍ಪ್ಲಾಸ್ಮಾ, ಪ್ಲೇಟ್‍ಲೆಟ್‍ಗಳು(ಎರಡು ವಿಧಗಳು. ಎಸ್‍ಡಿಪಿ -ಸಿಂಗಲ್ ಡೋನರ್ ಪ್ಲೇಟ್‍ಲೆಟ್ ಮತ್ತು ಆರ್‍ಡಿಪಿ - ರ್ಯಾಂಡಮ್ ಡೋನರ್ ಪ್ಲೇಟ್‍ಲೆಟ್) ಮತ್ತು ಪ್ಯಾಕ್ಡ್ ರೆಡ್ ಬ್ಲಡ್ ಸೆಲ್ಸ್(ಕೆಂಪು ರಕ್ತ ಕಣಗಳು)ಗಳಾಗಿರುತ್ತವೆ.

ದಾನಿಯಿಂದ ರಕ್ತವನ್ನು ಸಂಗ್ರಹಿಸಿದಾಗ, ಆರಂಭದಲ್ಲಿ ಸೋಂಕು ರೋಗಗಳಿಗಾಗಿ ಪರೀಕ್ಷಿಸಲಾಗುತ್ತದೆ. ದಾನ ಮಾಡಲಾದ ರಕ್ತ ಸೂಕ್ತವಾಗಿದ್ದಲ್ಲಿ, ಅದನ್ನು ಪ್ರತ್ಯೇಕ ಪ್ಲಾಸ್ಮಾ, ಪ್ಲೇಟ್‍ಲೆಟ್ ಮತ್ತು ಆರ್‍ಬಿಸಿಗಳಾಗಿ ಸಂಸ್ಕರಿಸಲಾಗುತ್ತದೆ.
ಮತ್ತು ವಿವಿಧ ಉಪಯೋಗ ಹಾಗೂ ವರ್ಗಾವಣೆಗಾಗಿ ಬಳಸಲಾಗುತ್ತದೆ. ಹೀಗೆ ಒಂದು ರಕ್ತದಾನದಿಂದ ಮೂರು ಜೀವಗಳನ್ನು ಉಳಿಸಬಹುದಾಗಿದೆ.

13. ಅನೇಕ ಕೋವಿಡ್ ರೋಗಿಗಳಿಗೆ ಎಕೊಸ್ಪ್ರಿನ್ ನೀಡಲಾಗುತ್ತದೆ. ಇದು ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಔಷಧಿಯಾಗಿರುತ್ತದೆ. ಈ ಔಷಧಗಳನ್ನು ಚೇತರಿಕೆಯ ನಂತರ ರೋಗಿಗಳಿಗೆ ಎರಡು ತಿಂಗಳವರೆಗೆ ತೆಗೆದುಕೊಳ್ಳಲು ಸಲಹೆ ಮಾಡಲಾಗುತ್ತದೆ. ಹೃದಯ ಸ್ತಂಭನವನ್ನು ತಡೆಯಲು ಹೀಗೆ ಮಾಡಲಾಗುತ್ತದೆ. ರಕ್ತದಾನ ಮಾಡಿದಾಗ ಇದರಿಂದ ನಕರಾತ್ಮಕ ಪರಿಣಾಮ ಉಂಟಾಗುವುದೇ?
ಎಕೊಸ್ಪ್ರಿನ್ ಒಂದು ಅದ್ಭುತ ಔಷಧಿಯಾಗಿದೆ. ಪ್ಲೇಟ್‍ಲೆಟ್‍ಗಳ ಮೇಲೆ (ಇತರೆ ಜೀವಕೋಶಗಳಲ್ಲ) ಇದು ಕಾರ್ಯನಿರ್ವಹಿಸಿ ಅವು ಒಟ್ಟಾಗಿ ಸೇರಿ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ರಕ್ತ ಹೆಪ್ಪುಗಟ್ಟುವುದು(ಥ್ರಾಂಬಿ) ಉಂಟಾದಲ್ಲಿ ದೇಹದ ಮೇಲೆ ಅದು ಹಾನಿಕಾರಕ ಪರಿಣಾಮ ಉಂಟುಮಾಡುತ್ತದೆ. ಇದು ಹೃದಯಕ್ಕೆ ಮಾತ್ರವಲ್ಲದೆ, ಶ್ವಾಸಕೋಶಗಳು ಅಲ್ಲದೆ, ಈ ಹೆಪ್ಪುಗಟ್ಟಿದ ರಕ್ತ ಹೋಗುವ ಕಡೆಗಳೆಲ್ಲೆಲ್ಲಾ ಅನೇಕ ತೊಂದರೆಗಳನ್ನು ಉಂಟುಮಾಡುತ್ತದೆ. ಕೋವಿಡ್-19 ವಿರುದ್ಧ ಹೋರಾಡುವಲ್ಲಿ ದೇಹದ ಅಪಾರ ಪ್ರತಿಕ್ರಿಯೆ ಸಂದರ್ಭ ಬಿಡುಗಡೆಯಾಗುವ ಕೆಲ ರಾಸಾಯನಿಕಗಳು ಪ್ಲೇಟ್‍ಲೆಟ್‍ಗಳು ಸುಲಭವಾಗಿ ಹೆಪ್ಪುಗಟ್ಟುವಂತೆ ಮಾಡುತ್ತವೆ. ಆದ್ದರಿಂದ ಎಕೊಸ್ಪ್ರಿನ್ ಮತ್ತು ಇತರೆ ಔಷಧಗಳು ಜೀವವನ್ನು ಉಳಿಸುವಂತಹವುಗಳಾಗಿವೆ.

ಎಕೊಸ್ಪ್ರಿನ್ ಔಷಧ ತೆಗೆದುಕೊಳ್ಳುವಾಗ ಸಂಪೂರ್ಣ ರಕ್ತದಾನ ಮಾಡುವುದಕ್ಕೆ ಯಾವುದೇ ಕಾಯುವ ಅವಧಿ ಇರುವುದಿಲ್ಲ. ಆದರೆ, ಎಕೊಸ್ಪ್ರಿನ್ ಅಥವಾ ಆ್ಯಸ್ಪಿರಿನ್ ಇರುವ ಯಾವುದೇ ಔಷಧವನ್ನು ತೆಗೆದುಕೊಂಡ ನಂತರ ಪ್ಲೇಟ್‍ಲೆಟ್‍ಗಳ ದಾನ ಮಾಡಲು ನೀವು 48 ಗಂಟೆಗಳ ಕಾಲ ಕಾಯಬೇಕಾಗುತ್ತದೆ. ಆದ್ದರಿಂದ ಎಕೊಸ್ಪ್ರಿನ್ ಔಷಧಿ ಪಡೆದಿದ್ದರೂ ಇತರೆ ರಕ್ತದ ಉತ್ಪನ್ನಗಳನ್ನು ಬಳಸಬಹುದು. ಆದರೆ ಪ್ಲೇಟ್‍ಲೆಟ್‍ಗಳನ್ನು ಬಳಸಲಾಗದು.

- ಡಾ. ಟ್ರಿಚಾ ಕುಲ್ಹಳ್ಳಿ, ಕನ್ಸಲ್ಟೆಂಟ್ ಪೆಥಾಲಜಿಸ್ಟ್, ಸ್ಪೆಷಲಿಸ್ಟ್ ಹಾಸ್ಪಿಟಲ್


Stay up to date on all the latest ಜೀವನಶೈಲಿ news
Poll
mallikarjuna kharge

ರಾಜಸ್ತಾನದಲ್ಲಿ ಪೈಲಟ್-ಗೆಹ್ಲೋಟ್ ನಡುವೆ ಬಿಕ್ಕಟ್ಟು; ಕೇರಳದಲ್ಲಿ ಸ್ವಪಕ್ಷದವರ ವಿರುದ್ಧ ತರೂರ್ ಫೈಟು: ಕಾಂಗ್ರೆಸ ಒಳಜಗಳ ಬಿಡಿಸಲು ಮಲ್ಲಿಕಾರ್ಜುನ ಖರ್ಗೆ ಗೆ ಸಾಧ್ಯವಾಗುವುದೇ?


Result
ಹೌದು
ಆಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp