ಸಕೇಡಿಯನ್ ರಿದಂ: ಈ ಹೊಸ ಜೀವನಶೈಲಿ ನಿಮ್ಮ ಬದುಕು ಬದಲಿಸಬಲ್ಲುದು...

ನಾವು ಮನುಷ್ಯರು ಪ್ರಕೃತಿಗೇ ಸವಾಲು ಹಾಕಿದವರು. ಈ ದೇಹ ಸೃಷ್ಟಿಯ ಲಯಕ್ಕೆ ತಕ್ಕಂತೆಯೇ ಅಭಿವೃದ್ಧಿ ಹೊಂದಿದೆ. ಈ ಲಯವನ್ನು ಸಕೇಡಿಯನ್ ರಿದಂ ಎನ್ನುತ್ತಾರೆ. ನಮ್ಮ ಪೂರ್ವಜರು ಸಕೇಡಿಯನ್ ರಿದಂ ಅನುಸಾರವೇ ಬದುಕು ಕಟ್ಟಿಕೊಂಡಿದ್ದರು.
ಸಕೇಡಿಯನ್ ರಿದಂ: ಈ ಹೊಸ ಜೀವನಶೈಲಿ ನಿಮ್ಮ ಬದುಕು ಬದಲಿಸಬಲ್ಲುದು...

ಪ್ರಕೃತಿಗೇ ಸವಾಲು ಹಾಕುವ ಏಕೈಕ ಜೀವಿ ಮನುಷ್ಯ. ನಿದ್ರೆ ಮತ್ತು ಎಚ್ಚರದ ಸ್ಥಿತಿಯ ಚಕ್ರವನ್ನು ಸಕೇಡಿಯನ್ ಸೈಕಲ್ ಎಂದು ಕರೆಯಲಾಗುತ್ತದೆ. ಈ ನಿದ್ರಾ ಚಕ್ರವನ್ನೇ ತನಗೆ ಬೇಕಾದ ಹಾಗೆ ಮನುಷ್ಯ ಬದಲಾಯಿಸಿಕೊಂಡಿದ್ದಾನೆ. ಆರೋಗ್ಯಕರ ಹಾಗೂ ಸಂತಸದ ಜೀವನದ ರಹಸ್ಯ ಅಡಗಿರುವುದೇ ಸಕೇಡಿಯನ್ ಸೈಕಲ್ನಲ್ಲಿ. ಪ್ರಕೃತಿದತ್ತವಾಗಿ ಬಂದಿರುವ ಸಕೇಡಿಯನ್ ಪದ್ಧತಿಯನ್ನು ಅನುಸರಿಸುವುದರಿಂದ ನಮಗೆ ಒಳಿತಾಗುವುದು.

ನಾವು ಮನುಷ್ಯರು ಹಲವಾರು ಅಭ್ಯಾಸಗಳನ್ನು ರೂಢಿಸಿಕೊಂಡವರು. ನಮ್ಮಸುತ್ತಲಿನ ಪರಿಸರಕ್ಕೆ ತಕ್ಕಂತೆ ಬದುಕುತ್ತಲೇ ನಮಗೆ ಬೇಕಾದ ಮಾರ್ಗಗಳನ್ನು ಹುಟ್ಟು ಹಾಕಿದವರು. ಕಾಡುಮೇಡುಗಳಲ್ಲಿ ಅಲೆಯುತ್ತಿದ್ದವರು, ಗೆಡ್ಡೆ ಗೆಣಸುಗಳನ್ನು ತಿನ್ನುತ್ತಿದ್ದವರು ಇಂದು ಕಾರು, ಬೈಕು, ವಿಮಾನಗಳಲ್ಲಿ ಹಾರಾಡುತ್ತಿದ್ದೇವೆ. ಮನೆಗಳಲ್ಲಿ, ಹೋಟೆಲ್ ಗಳಲ್ಲಿ ನಮಗಿಷ್ಟದ ಆಹಾರ ತಯಾರಿಸಿ ತಿನ್ನುತ್ತಿದ್ದೇವೆ. ಆದರೆ ನಾವು ಮರೆಯಬಾರದ ಸಂಗತಿ ಎಂದರೆ ನಾವು ಯಾವತ್ತಿದ್ದರೂ ಪ್ರಕೃತಿಯ ಸೃಷ್ಟಿ.

ಈ ದಿನ ಎಂಥಾ ಪರಿಸ್ಥಿತಿ ಬಂದೊದಗಿದೆ ಎಂದರೆ ನಾವು ಪ್ರಕೃತಿಯ ಸೂಚನೆಯನ್ನೇ ಪಾಲಿಸುತ್ತಿಲ್ಲ. ಸಾಧನೆಯ ನೆಪವೊಡ್ಡಿ ಆರೋಗ್ಯ ಮತ್ತು ನಿದ್ದೆಯನ್ನು ತ್ಯಾಗ ಮಾಡುತ್ತಿರುವ ಏಕೈಕ ಜೀವಿ ಮನುಷ್ಯ. ತಿಂಗಳ ಸಂಬಳ, ಯಶಸ್ಸು, ಜನಪ್ರಿಯತೆ, ಹುದ್ದೆ, ಅಧಿಕಾರ, ಸ್ಟೇಟಸ್ ಮತ್ತಿತ್ಯಾದಿ ಆಮಿಷಗಳಿಗಾಗಿ ಅವೆಲ್ಲಕ್ಕಿಂತ ಅಮೂಲ್ಯವಾದ ಜೀವನವನ್ನೇ ಪಣಕ್ಕಿಡುತ್ತಿದ್ದೇವೆ.

ನಮ್ಮ ದೇಹ, ಅತ್ಯಂತ ಬುದ್ಧಿವಂತಿಕೆಯಿಂದ ಪರಿಸರ ಸಮತೋಲನವನ್ನು ಗಮನದಲ್ಲಿರಿಸಿಕೊಂಡು ರೂಪಿಸಲಾಗಿದೆ. ಈ ದೇಹ ಸೃಷ್ಟಿಯ ಲಯಕ್ಕೆ ತಕ್ಕಂತೆಯೇ ಅಭಿವೃದ್ಧಿ ಹೊಂದಿದೆ. ಈ ಲಯವನ್ನು ಸಕೇಡಿಯನ್ ರಿದಂ ಎನ್ನುತ್ತಾರೆ. ಸರಳವಾಗಿ ಹೇಳಬೇಕೆಂದರೆ ಸಕೇಡಿಯನ್ ರಿದಂ ಎಂದರೆ ನಿದ್ರಾ ಚಕ್ರ ಅಥವಾ ರಾತ್ರಿ ಹಗಲಿನ ಚಕ್ರ. 24 ಗಂಟೆಗಳ ಅವಧಿಯಲ್ಲಿ ನಿದ್ರಾ ಸ್ಥಿತಿ, ಜಾಗೃತ ಸ್ಥಿತಿ, ಹಸಿವು, ಬಾಯಾರಿಕೆ ಮತ್ತಿತರ ಕ್ರಿಯೆಗಳು ಸಹಜವಾಗಿ ಜರುಗುತ್ತಿರುತ್ತವೆ. ನಮ್ಮ ಪ್ರತಿಯೊಂದು ಕ್ರಿಯೆಯೂ ಸಕೇಡಿಯನ್ ರಿದಂ ಪ್ರಕಾರ ನಡೆಯುತ್ತಿರುತ್ತದೆ.

ಯಾವತ್ತೂ ನೈಟ್ ಶಿಫ್ಟ್ ಕೆಲಸ ಮಾಡದ ವ್ಯಕ್ತಿ ಒಂದು ದಿನ ಅಚಾನಕ್ ಆಗಿ ರಾತ್ರಿ ಪಾಳಿ ಕೆಲಸ ಮಾಡಿದಾಗ ಇಲ್ಲವೇ ಒಬ್ಬ ವ್ಯಕ್ತಿ ಒಂದು ದೇಶದಿಂದ ಬೇರೆಯದೇ ಟೈಂ ಝೋನ್ ವಲಯದ ದೇಶಕ್ಕೆ ವಿಮಾನಪ್ರಯಾಣ ಮಾಡಿದಾಗ ದೇಹದ ಜೈವಿಕ ಗಡಿಯಾರ (ಬಯೋಲಾಜಿಕಲ್ ಕ್ಲಾಕ್) ಏರುಪೇರಾಗುತ್ತದೆ. ಇದರಿಂದ ನಿದ್ರಾ ಚಕ್ರ ಹಾಳಾಗುತ್ತದೆ. ಅದು ಮುಂದಿನ ಇಡೀ ದಿನ ನಮ್ಮನ್ನು ಕಾಡುತ್ತದೆ. ಎಂದಿನಂತೆ ಹಸಿವು, ಬಾಯಾರಿಕೆ ಅಗುತ್ತಿದ್ದ ಸಮಯದಲ್ಲಿ ಆಗುತ್ತಿಲ್ಲ. ನಿದ್ದೆ ಬಾರದ ಸಮಯದಲ್ಲಿ ನಿದ್ದೆ ಬರುವುದು ಹೀಗೆ ಇಡೀ ವ್ಯವಸ್ಥೆಯೇ ಬದಲಾಗುತ್ತದೆ. ಪ್ರಕೃತಿಯ ಸಕೇಡಿಯನ್ ಲಯದ ವಿರುದ್ಧ ನಾವು ಹೋದಾಗ ಈ ಬಗೆಯ ಅಸಮತೋಲನ ಉಂಟಾಗುತ್ತದೆ. ಇದು ಮುಂದೆ ಅನಾರೋಗ್ಯಕ್ಕೂ ಕಾರಣವಾಗಬಹುದು.

ಒಂದೆರಡು ವರ್ಷಗಳ ಹಿಂದೆ ಓರ್ವ ಮಹಿಳೆ ತನ್ನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನನ್ನ ಬಳಿ ಬಂದಿದ್ದಳು. ಆಕೆಯ ಸಮಸ್ಯೆ ಎಂದರೆ ಆಕೆಯ ನಿದ್ರಾಚಕ್ರ ಅಸ್ತವ್ಯಸ್ತಗೊಂಡಿದ್ದು. ಆಕೆ ಪ್ರತಿದಿನ ರಾತ್ರಿ 12 ಗಂಟೆಗೆ ನಿದ್ದೆ ಮಾಡುತ್ತಿದ್ದಳು. ಸಂಜೆ 7 ಗಂಟೆಗೆ ವ್ಯಾಯಾಮ ಮಾಡುತ್ತಿದ್ದರು. ಇದರಿಂದಾಗಿ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು. ಹೀಗಾಗಿ ಈ ಏರುಪೇರನ್ನು ಹೋಗಲಾಡಿಸಲು ಪರಿಹಾರ  ಕೋರಿ ನನ್ನ ಬಳಿ ಬಂದಿದ್ದರು.

ಅವರಿಗೆ ಪ್ರತಿದಿನ ರಾತ್ರಿ 10 ಗಂಟೆಗೆ ಮಲಗಲು ಹಾಗೂ ಬೆಳಿಗ್ಗೆ 7 ಗಂಟೆಗೆ ಸಲಹೆ ನೀಡಿದೆ. ಅದಕ್ಕೆ ಹೊಂದಿಕೊಳ್ಳಲು ಅವರಿಗೆ ಕಷ್ಟವಾಯಿತು. ಆದರೆ ನಿಧಾನವಾಗಿ ಅದಕ್ಕೆ ಹೊಂದಿಕೊಂಡರು. ಕೇವಲ ಒಂದೇ ವಾರದಲ್ಲಿ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿತು.

ಈ ಸುಧಾರಣೆಗೆ ಕಾರಣವಾಗಿದ್ದು ಮತ್ಯಾರೂ ಅಲ್ಲ ಆಕೆಯ ದೇಹ. ಯಾವುದೇ ಬಗೆಯ ಮಾತ್ರೆ ತೆಗೆದುಕೊಳ್ಳದೆ, ವಿಶೇಷ ಆಹಾರ ಸೇವಿಸದೆ ಕೇವಲ ನಿದ್ದೆ ಸಮಯದಲ್ಲಿ ಬದಲಾವನೆ ಮಾಡುವ ಮೂಲಕ ದೇಹಕ್ಕೆ ಚೈತನ್ಯ ದೊರೆತಿತ್ತು. ಅದರಿಂದ ಅವರ ಸಮಸ್ಯೆ ಪರಿಹಾರವಾಗಿತ್ತು. ಅಂದರೆ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅವರು ಪ್ರಕೃತಿಗೆ ವಿರುದ್ಧವಾದ ನಿದ್ರಾ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದರು. ಆ ಮಹಿಳೆ ಮತ್ತೆ ಪ್ರಕೃತಿಯ ನಿಯಮಾನುಸಾರ ನಿದ್ದೆ ಮಾಡಿದಾಗ ಅವರ ಸಮಸ್ಯೆಗೆ ಪರಿಹಾರ ಸಿಕ್ಕಿತ್ತು.

ಒಂದು ದಶಕಕ್ಕೂ ಮೀರಿದ ನನ್ನ ವೃತ್ತಿ ಬದುಕಿನಲ್ಲಿ ನಾನು ಮತ್ತು ನನ್ನ ತಂಡ ಅಸಂಖ್ಯ ಬಗೆಯ ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇವೆ. ಅವರಲ್ಲಿ ಪ್ರಾಣಾಂತಿಕ ಕಾಯಿಲೆಯಾದ ಕ್ಯಾನ್ಸರ್ ನಿಂದ ಬಳಲುತ್ತಿರುವವರೂ ಸೇರಿದ್ದಾರೆ. ಅತ್ಯಪರೂಪದ ಕಾಯಿಲೆಯಿಂದ ಬಳಲುತ್ತಿದ್ದವರೂ ಸೇರಿದ್ದಾರೆ. ಅವರಿಗೆ ಔಷಧೋಪಚಾರದ ಜೊತೆಗೇ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬೇಕಾದ ಅಗತ್ಯತೆಯೂ ಬೇಕಾಗುತ್ತದೆ. ಸಕೇಡಿಯನ್ ಜೀವನಶೈಲಿಯತ್ತ ಅವರಿಗೆ ಮಾರ್ಗವನ್ನು ತೋರಬೇಕಾಗುತ್ತದೆ.

ಸಕೇಡಿಯನ್ ಜೀವನಶೈಲಿಯನ್ನು ಅನುಸರಿಸುವುದು ಎಂದ ಮಾತ್ರಕ್ಕೆ ಎಲ್ಲಾ ಸುಖ ಸಂತೋಷಗಳನ್ನು ತ್ಯಜಿಸಬೇಕು ಎಂದು ತಿಳಿಯಬೇಕಿಲ್ಲ. ಸಾಮಾಜಿಕ ಬದುಕನ್ನು ಹೊಂದುವುದರ ಜೊತೆ ಜೊತೆಗೇ ಇದನ್ನು ಅಳವಡಿಸಿಕೊಳ್ಳಬಹುದು. ನಿಜ ಹೇಳಬೇಕೆಂದರೆ ಸಕೇಡಿಯನ್ ರಿದಂ ಎನ್ನುವುದು ಹೊಚ್ಚ ಹೊಸ ಪದ್ಧತಿಯೇನಲ್ಲ. ಪ್ರಕೃತಿ ನಮಗೋಸ್ಕರವೇ ರೂಪಿಸಿದ ಜೀವನ ಶೈಲಿ ಅದು.

ನಮ್ಮ ಪೂರ್ವಜರು ಸಕೇಡಿಯನ್ ರಿದಂ ಅನುಸಾರವೇ ಬದುಕು ಕಟ್ಟಿಕೊಂಡಿದ್ದರು. ಆದರೆ ನಾವಿಂದು ಆಧುನಿಕ ಜೀವನದ ಭರಾಟೆಯಲ್ಲಿ ಅದರಿಂದ ಬಹು ದೂರ ಸಾಗಿ ಬಂದುಬಿಟ್ಟಿದ್ದೇವೆ. ಹೀಗಾಗಿ ನಾವೆಲ್ಲರೂ ಮತ್ತೆ ಸಕೇಡಿಯನ್ ರಿದಂ ಜೀವನಶೈಲಿಯತ್ತ ಮರಳಬೇಕಿದೆ. ಅದಕ್ಕಾಗಿ ನಾವು ಮಾಡಬೇಕಿರುವುದಿಷ್ಟೇ. ಮೊದಲು ಅದರ ಕುರಿತು ಚೆನ್ನಾಗಿ ತಿಳಿದುಕೊಳ್ಳಬೇಕು ನಂತರ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಸಕೇಡಿಯನ್ ಜೀವನಪದ್ಧತಿ ಹೇಗೆ ಕೆಲಸ ಮಾಡುತ್ತದೆ?

ನಮ್ಮ ಮೆದುಳಿನಲ್ಲಿರುವ ಹೈಪೊಥಾಲ್ಮಸ್ ಭಾಗದಲ್ಲಿಯೇ ನಮ್ಮ ದೇಹದ ಮಾಸ್ಟರ್ ಗಡಿಯಾರ ಇರುವುದು. ನಮ್ಮ ದೇಹದ ಎಲ್ಲಾ ಕ್ರಿಯೆಗಳ ಗಡಿಯಾರಗಲನ್ನು ಅದುವೇ ನಿಯಂತ್ರಿಸುತ್ತದೆ. ಇದೇ ಭಾಗ ಸಕೇಡಿಯನ್ ರಿದಂ ಅನ್ನೂ ನಿಯಂತ್ರಿಸುತ್ತದೆ. ಅತ್ಯಂತ ಚಿಕ್ಕ ಸಂಗತಿಗಳಿಂದ ಮೊದಲಾಗಿ ಸಂಕೀರ್ಣ ಸಂಗತಿಗಳೂ ಇದರ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಒಳ್ಳೆಯ ನಿದ್ದೆ, ಶಕ್ತಿ, ಭಾವನೆಗಳು, ಹೃದಯ ಬಡಿತದ ನಿಯಂತ್ರಣ, ರಕ್ತದೊತ್ತಡ, ಸಕ್ಕರೆ ಅಂಶ, ಜೀರ್ಣ ವ್ಯವಸ್ಥೆ, ರೋಗನಿರೋಧಕ ಶಕ್ತಿ, ದೇಹದ ತಾಪಮಾನ ಹೀಗೆ ಹಲವನ್ನು ಹೈಪೊಥಾಲ್ಮಸ್ ನಿಯಂತ್ರಣ ಮಾಡುತ್ತದೆ. ಈ ಮಾಸ್ಟರ್ ಗಡಿಯಾರ ಕೆಲಸ ಮಾಡದೆ ನಿಂತುಹೋದರೆ ದೇಹದಲ್ಲಿ ಏರುಪೇರು ಉಂಟಾಗುತ್ತದೆ.

ಈ ಭಾಗದ ಪ್ರಮುಖ ಕೆಲಸ ಮಿಕ್ಕೆಲ್ಲಾ ಭಾಗಗಳಿಗೆ ಸಿಗ್ನಲ್ ಕಳುಹಿಸುವುದು. ಬೆಳಕನ್ನು ಅವಲಂಬಿಸಿ ಈ ಭಾಗ ಕಾರ್ಯ ನಿರ್ವಹಿಸುತ್ತದೆ ಎಂದರೆ ಅಚ್ಚರಿಯಾಗಬಹುದು. ಬೆಳಕು ಮತ್ತು ಕತ್ತಲು ಇದನ್ನು ಗ್ರಹಿಸಿ ಅದರ ಆಧಾರದಲ್ಲಿ ದೇಹದ ವಿವಿಧ ಅಂಗಗಳಿಗೆ ಹೈಪೊಥಾಲ್ಮಸ್ ಭಾಗದಿಂದ ಸೂಚನೆಗಳು ರವಾನಿಸಲ್ಪಡುತ್ತವೆ.

ವ್ಯಕ್ತಿಯೊಬ್ಬ ನಿದ್ದೆ ಮಾಡುವ ಸಮಯದಲ್ಲಿ ಕೆಲಸ ಮಾಡಿದಾಗ ಮತ್ತು ಬೇರೆ ಟೈಂ ಜೋನಿನ ದೇಶಕ್ಕೆ ವಿಮಾನ ಪ್ರಯಾಣ ಮಾಡಿದ ಸಂದರ್ಭದಲ್ಲಿ ಈ ಹೈಪೊಥಾಲ್ಮಸ್ ಭಾಗಕ್ಕೆ ಗೊಂದಲವಾಗುತ್ತದೆ. ರಾತ್ರಿ ಯಾವುದು ಹಗಲು ಯಾವುದು ಎಂಬುದು ಅದಕ್ಕೆ ತಿಳಿಯುವುದಿಲ್ಲ. ಬೇರೊಂದು ದೇಶಕ್ಕೆ ವಿಮಾನಪ್ರಯಾಣ ಮಾಡಿದ ಸಂದರ್ಭ ಈ ವಿದ್ಯಮಾನವನ್ನು ಸಾಮಾನ್ಯವಾಗಿ ಗಮನಿಸಬಹುದು. ಅದನ್ನೇ ಜೆಟ್ ಲ್ಯಾಗ್ ಎನ್ನುತ್ತಾರೆ. ಸ್ವಲ್ಪ ಸಮಯದ ನಂತರ ಪರಿಸ್ಥಿತಿ ತಹಬದಿಗೆ ಬಂದು ಸರಿಯಾಗುತ್ತದೆ. ಆದರೆ ಅದೇ ಅಭ್ಯಾಸ ಮಾಡಿಕೊಂಡಾಗ ಅನಾರೋಗ್ಯ ತಲೆದೋರುತ್ತದೆ.

ಅಪಾಯಕಾರಿಯಗಲೂ ಬಲ್ಲುದು. ಅಧಿಕ ರಕ್ತದೊತ್ತಡ, ರೋಗ ನಿರೋಧಕ ಶಕ್ತಿ ಕುಂದುವಿಕೆ, ಮಾನಸಿಕ ಆರೋಗ್ಯದಲ್ಲೂ ಏರುಪೇರು ಹೀಗೆ ಹಲವು ಸಮಸ್ಯೆಗಳು ಕಾಡಬಲ್ಲುದು. ಉತ್ತಮ ಆಹಾರ ಸೇವನೆ, ಯೋಗ, ಪ್ರಾಣಯಾಮ, ಪ್ರಾರ್ಥನೆ ಇವೆಲ್ಲಾ ಮಾಡಿದರೂ ಜೈವಿಕ ಗಡಿಯಾರದ ವ್ಯವಸ್ಥೆಗೆ ತಕ್ಕಂತೆ ಇರದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

ಯಾವೆಲ್ಲಾ ಅಂಶಗಳು ಜೈವಿಕ ಗಡಿಯಾರವನ್ನು ಹಾಳುಗೆಡವುತ್ತವೆ?

ಅಪಕ್ವ ಜೀವನಶೈಲಿಯಿಂದ ಜೈವಿಕ ಗಡಿಯಾರಕ್ಕೆ ಹಾನಿ ತಗುಲುತ್ತದೆ. ಇನ್ನೂ ಖಚಿತವಾಗಿ ಜೈವಿಕ ಗಡಿಯಾರ ಹಾಳುಗೆಡವುವ ಅಂಶಗಳನ್ನು ಈ ಕೆಳಗೆ ನೀಡಲಾಗಿದೆ.

  • ರಾತ್ರಿ ಪಾಳಿ ಕೆಲಸ

  • ಜೆಟ್ ಲ್ಯಾಗ್ (ಬೇರೆ ಟೈಮ್ ಜೋನ್ ದೇಶಕ್ಕೆ ವಿಮಾನ ಪ್ರಯಾಣ) 

  • ದೂರ ಪ್ರಯಾಣ ಮತ್ತು ನಿಯಮಿತ ಪ್ರಯಾಣ

  • ಕೆಫೀನ್, ತಂಬಾಕು, ಆಲ್ಕೊಹಾಲ್, ಮಾದಕವಸ್ತು ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ

  • ಮೆನೊಪಾಸ್ ಅಥವಾ ಪ್ರೆಗ್ನನ್ಸಿ ಸಮಯದ ಹಾರ್ಮೋನ್ ಬದಲಾವಣೆ

  • ರಾತ್ರಿ ಎಲೆಕ್ಟ್ರಾನಿಕ್ ಪರದೆಯ ನೀಲಿ ಬೆಳಕಿಗೆ ಹೆಚ್ಚಾಗಿ ತೆರೆದುಕೊಂಡಾಗ

  • ನಿದ್ದೆ, ಆಹಾರ ಸೇವನೆ ಮತ್ತು ವ್ಯಾಯಾಮದ ಸಮಯವನ್ನು ಆಗಾಗ ಬದಲಿಸುತ್ತಿರುವುದು

ಸಕೇಡಿಯನ್ ಜೀವನಪದ್ಧತಿಗೆ ಹೊಂದಿಕೊಳ್ಳುವ ಮಾರ್ಗಗಳು

ಈ ಪ್ರಯೋಜನಕಾರಿಯ ಸಕೇಡಿಯನ್ ಜೀವನಪದ್ಧತಿಯನ್ನು ಅಳವಡಿಸಿಕೊಳ್ಳಲು ಹಣ ತೆರಬೇಕೆ? ಅದಕ್ಕೆ ಉತ್ತರ ಇಲ್ಲಿದೆ. ಖಂಡಿತವಾಗಿಯೂ ಹಣ ತೆರಬೇಕಿಲ್ಲ. ಯಾರು ಬೇಕಾದರೂ ತಮ್ಮ ದಿನಚರಿಯನ್ನು ಸಕೇಡಿಯನ್ ಪದ್ಧತಿಯ ಅನುಸಾರ ರೂಪಿಸಿಕೊಳ್ಳುವುದರ ಮೂಲಕ ಅದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಅದರಿಂದ ಉಂಟಾಗುವ ಬದಲಾವಣೆಯನ್ನು ಬಹಳ ಬೇಗನೆ ಗುರುತಿಸಬಹುದಾಗಿದೆ. ಅಲ್ಲದೆ ದಿನವಿಡೀ ಮನಸ್ಸು ಮತ್ತು ದೇಹ ಉಲ್ಲಸಿತವಾಗಿರುತ್ತದೆ.

ಸಕೇಡಿಯನ್ ಜೀವನಶೈಲಿ ಅಳವಡಿಸಿಕೊಳ್ಳಲು 9 ಸರಳ ಸೂತ್ರಗಳು

1. ಉತ್ತಮ ಆಹಾರ ಸೇವನೆ ಮತ್ತು ಸಕೇಡಿಯನ್ ಉಪವಾಸ

  • ತಟ್ಟೆಯಲ್ಲಿ ಕಾಮನಬಿಲ್ಲಿನ ಬಣ್ಣಗಳನ್ನು ನೆನಪಿಸುವಂಥ ವಿವಿಧ ಬಗೆಯ ಆಹಾರ ಪದಾರ್ಥಗಳು ಇರುವಂತೆ ನೋಡಿಕೊಳ್ಳುವುದು. ತರಕಾರಿ, ಹಣ್ಣುಗಳು, ಪ್ರೋಟೀನ್ ಯುಕ್ತ ಆಹಾರ(ಸಸ್ಯಜನ್ಯ ಅಥವಾ ಮಾಂಸಾಹಾರ) ಮತ್ತು ಕಾರ್ಬೊಹೈಡ್ರೇಟ್ಸ್(ಧಾನ್ಯಗಳು ಮತ್ತು ಕಾಳುಗಳು) ಬ್ಯಾಲೆನ್ಸ್ಡ್ ಆಹಾರ ಸೇವಿಸಬೇಕು.
  • ದಿನದ ಕೊನೆಯ ಭೋಜನವನ್ನು ಸೂರ್ಯಾಸ್ತದ ಸಮಯ ಅಂದರೆ ಸಂಜೆ 7 ಗಂಟೆ ಆಸುಪಾಸಿನಲ್ಲಿ ಸೇವಿಸಬೇಕು.ನಂತರ ಸಕೇಡಿಯನ್ ಉಪವಾಸವನ್ನು ಕೈಗೊಳ್ಳಬಹುದು. ಸಕೇಡಿಯನ್ ಉಪವಾಸ ಎಂದರೆ, ಒಂದೋ ಪೂರ್ತಿಯಾಗಿ ಆಹಾರ ತ್ಯಜಿಸುವುದು. ಇಲ್ಲವೇ ಎಲ್ಲಾ ದಿನ ಉಪವಾಸ ಮಾಡಲು ಸಾಧ್ಯವಿಲ್ಲದಿದ್ದರೆ ದಿನ ಬಿಟ್ಟು ದಿನ ಉಪವಾಸ ಮಾಡಬಹುದು. ಬೆಳಿಗ್ಗೆ ಎದ್ದ ತಕ್ಷಣ ನೀರು ಅಥವಾ ನಿಂಬೆ ರಸ ಹಿಂಡಿದ ನೀರು ಕುಡಿಯಬೇಕು. ನಂತರ ಖರ್ಜೂರ ಅಥವಾ ಹಣ್ಣು ಸೇವಿಸಬೇಕು.
  • ರಾತ್ರಿ ಭೋಜನಕ್ಕೂ ನಿದ್ರೆಗೂ ನಡುವೆ 2- 3 ಗಂಟೆಯ ಅಂತರ ಇರಬೇಕು.
  • ಕಾಫಿ ಕುಡಿಯುವ ಅಭ್ಯಾಸವಿದ್ದವರು ಬೆಳಿಗ್ಗೆ ಎದ್ದ ಮೂರು ಗಂಟೆಯ ನಂತರ ಸೇವಿಸಬಹುದು. ಮಧ್ಯಾಹ್ನದ ನಂತರದ ಅವಧಿಗಳಲ್ಲಿ ಕಾಫಿ ಕುಡಿಯಬಾರದು. ಅದರಿಂದ ನಿದ್ರಾವಸ್ಥೆ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.
  • ಅತಿ ಹೆಚ್ಚಿನ ಕ್ಯಾಲೊರಿಯುಕ್ತ ಆಹಾರವನ್ನು ಬೆಳಗ್ಗಿನ ತಿಂಡಿ ಮತ್ತು ಮಧ್ಯಾಹ್ನದ ಭೋಜನದ ನಡುವೆ ಇಟ್ಟುಕೊಳ್ಳಿ. ಏಕೆಂದರೆ ಈ ಸಮಯದಲ್ಲಿ ಮನುಷ್ಯನ ಜೀರ್ಣಕ್ರಿಯೆ ಹೆಚ್ಚು ಕ್ರಿಯಾಶೀಲದಿಂದ ಇರುತ್ತದೆ. ಹೀಗಾಗಿ ಹೆಚ್ಚು ಕ್ಯಾಲೊರಿಯುಕ್ತ ಆಹಾರ ಸುಲಭವಾಗಿ ಜೀರ್ಣಗೊಳ್ಳುತ್ತದೆ. ರಾತ್ರಿಯ ಭೋಜನ ಲೈಟ್ ಆಗಿ ತೆಗೆದುಕೊಳ್ಳಿ.
  • ರಾತ್ರಿ ಭೋಜನದ ಸಮಯದಲ್ಲಿ ಹಸಿವಾಗುತ್ತಿಲ್ಲವೇ? ಅದಕ್ಕೂ ಮುಂಚೆಯೇ ತಿನ್ನಬೇಕು ಅನ್ನಿಸುತ್ತದೆಯೇ? ಹಾಗಾದರೆ ನಿಮ್ಮ ದೇಹ ಹೇಳಿದಂತೆ ಕೇಳಿ. ನಿಮಗೆ ಎಷ್ಟು ಬೇಕೋ ಅಷ್ಟೇ ತಿನ್ನಿ. ಹಸಿವಿನಿಂದ ಇರಬೇಡಿ ಮತ್ತು ಅಗತ್ಯ ಮೀರಿಯೂ ತಿನ್ನದಿರಿ. ಬೇಕಿದ್ದರೆ ಬೆಳಿಗ್ಗೆ ಎದ್ದಾಕ್ಷಣ ಬೆಳಿಗ್ಗೆ ತುಸು ಬೇಗನೆ ತಿನ್ನಬಹುದು.
  • ಪ್ರತಿದಿನವೂ ಒಂದೇ ಸಮಯದಲ್ಲಿ ಆಹಾರ ಸೇವನೆ ಮಾಡಿ. ಸಕೇಡಿಯನ್ ಜೀವನಶೈಲಿಗೆ ಅದುವೇ ರಹದಾರಿ.

2. ವ್ಯಾಯಾಮ ಮಾಡಿ

  • ಪ್ರತಿದಿನ ನಿಯಮಿತವಾಗಿ ವ್ಯಾಯಾಮದಲ್ಲಿ ತೊಡಗಿಕೊಳ್ಳಿ. ವ್ಯಾಯಾಮಕ್ಕೆ ಸಮಯ ನಿಗದಿಪಡಿಸಿ ಪ್ರತಿದಿನವೂ ಅದೇ ಸಮಯದಲ್ಲಿ ವ್ಯಾಯಾಮ ಮಾಡಿ.
  • ವ್ಯಾಯಾಮಕ್ಕಾಗಿ ನಿಮಗೆ ಅನುಕೂಲಕರ ಸಮಯವನ್ನು ನಿಗದಿ ಮಾಡಿ. ಕೆಲವರು ಬೆಳಿಗ್ಗೆ ವ್ಯಾಯಾಮ ಮಾಡಲು ಇಷ್ಟಪಟ್ಟರೆ, ಇನ್ನು ಕೆಲವರು ಸಂಜೆಯ ಹೊತ್ತಿನಲ್ಲಿ ವ್ಯಾಯಾಮ ಇಷ್ಟಪಡುತ್ತಾರೆ. ಹೀಗಾಗಿ ಅವರವರ ಅನುಕೂಲ ಹಾಗೂ ಇಷ್ಟ ಪ್ರಕಾರ ಸಮಯ ನಿಗದಿಗೊಳಿಸಬಹುದು.
  • ಮಲಗುವ ಹೊತ್ತಿನಲ್ಲಿ ತ್ರಾಸದಾಯಕ ವ್ಯಾಯಾಮಗಳನ್ನು ಮಾಡಬೇಡಿ.

3. ನಿದ್ರಾ ಸಮಯವನ್ನು ಫಿಕ್ಸ್ ಮಾಡಿ

  • ನಮ್ಮ ದೇಹ ಎಂಥ ಪರಿಸ್ಥಿತಿಗೂ ಹೊಂದಿಕೊಳ್ಳುತ್ತದೆ ನಿಜ. ಬೇಕೆಂದರೆ ನಾವು ನಿದ್ರೆಯನ್ನು ಹಲವು ದಿನಗಳ ಕಾಲ ಮುಂದೂಡಬಲ್ಲೆವು. ಆದರೆ ಅದನ್ನು ಅಭ್ಯಾಸ ಮಾಡಿಕೊಳ್ಳುವುದು ಸರಿಯಲ್ಲ.
  • ಸಕೇಡಿಯನ್ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕೆಂದಿದ್ದರೆ ಪ್ರತಿದಿನ ಒಂದೇ ಸಮಯಕ್ಕೆ ನಿದ್ರೆ ಮಾಡಿ. ರಾತ್ರಿ ಬೇಗ ನಿದ್ರೆ ಮಾಡಿದಷ್ಟೂ ಆರೋಗ್ಯಕ್ಕೆ ಒಳ್ಳೆಯದು.
  • ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಏಳುವುದನ್ನು ಅಭ್ಯಾಸ ಮಾಡಿ. ಸೋಮವಾರದಿಂದ ಶುಕ್ರವಾರದ ತನಕವಾದರೂ ಬೆಳಿಗ್ಗೆ ಒಂದೇ ಸಮಯಕ್ಕೇ ಏಳಲು ಪ್ರಯತ್ನಿಸಿ.

4. ಎಲೆಕ್ಟ್ರಾನಿಕ್ ಪರದೆಯ ನೀಲಿ ಬೆಳಕಿನಿಂದ ದೂರವಿರಿ

  • ಸೂರ್ಯಾಸ್ತದ ಬಳಿಕ ಅಥವಾ ರಾತ್ರಿಯ ಹೊತ್ತು ಕಂಪ್ಯೂಟರ್ ಕೆಲಸ ಮಾಡುತ್ತೀರಾ? ಹಾಗಾದರೆ ನೀಲಿ ಬೆಳಕನ್ನು ತಡೆಯುವ ವಿಶೇಷ ಕನ್ನಡಕವನ್ನು ಧರಿಸಿ. ಇದರಿಂದ ಕಂಪ್ಯೂಟರ್ ಪರದೆ ಸೂಸುವ ನೀಲಿ ಬೆಳಕಿನಿಂದ ನಿದ್ರಾವಸ್ಥೆ ಹಾಳಾಗುವುದು ತಪ್ಪುತ್ತದೆ.
  • ಮೊಬೈಲ್ ಫೋನುಗಳು ಸಾಮಾನ್ಯವಾಗಿ ನೀಲಿ ಬೆಳಕನ್ನು ಹೊರಸೂಸುತ್ತದೆ. ಸಂಜೆಯ ಮೇಲೆ ಮೊಬೈಲ್ ಪರದೆ ನೀಲಿ ಬೆಳಕನ್ನು ಕಡಿಮೆ ಮಾಡಿ ತುಸು ಹಳದಿ ಬಣ್ಣ ಸೂಸುವಂತೆ ಮಾಡುವ ಆಪ್ ಗಳನ್ನು ಬಳಸಿ.

5. ಮಲಗುವ ಮುನ್ನ ಈ ಅಭ್ಯಾಸ ರೂಢಿಸಿಕೊಳ್ಳಿ

  • ಹಾಸಿಗೆ ಮೇಲೆ ಹೋಗುವುದಕ್ಕೆ 1-2 ಗಂಟೆ ಮೊದಲೇ ಕಂಪ್ಯೂಟರ್, ಮೊಬೈಲ್ ಹಾಗೂ ಟಿ.ವಿ ಪರದೆಯ ನೀಲಿ ಬೆಳಕಿನಿಂದ ದೂರ ಇರಿ. ಅದು ನಿದ್ರೆಗೆ ಕಾರಣವಾಗುವ ಹಾರ್ಮೋನಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಮೊಬೈಲ್ ಬಳಸಲೇಬೇಕು ಎನ್ನುವ ಹಾಗಿದ್ದರೆ ಆಡಿಯೊ ಫೈಲ್ ಬಳಸಿರಿ.
  • ಮಲಗುವ ಕೋಣೆಯನ್ನು ಆದಷ್ಟು ಕತ್ತಲಿನಿಂದ ಕೂಡಿರುವಂತೆ ನೋಡಿಕೊಳ್ಳಿ. ಕತ್ತಲು ನಿದ್ರೆಯ ಹಾರ್ಮೋನಾದ ಮೆಲಟೋನಿನ್ ಅನ್ನು ಪ್ರಚೋದಿಸುತ್ತದೆ. ಬೆಳಕು ಮೆಲಟೋನಿನ್ ಅನ್ನು ನಾಶಪಡಿಸುತ್ತದೆ.
  • ಮಲಗುವ ಮುನ್ನ ಪ್ರಾರ್ಥನೆ, ಧ್ಯಾನ, ಶ್ಲೋಕ ಪಠಣೆ ಮುಂತಾದ ಸಕಾರಾತ್ಮಕ ಅಭ್ಯಾಸಗಳ ಮೂಲಕ ಮನಸ್ಸನ್ನು ಶಾಂತಗೊಳಿಸಿ. ಅಲ್ಲದೆ ಇದರಿಂದ ನಕಾರಾತ್ಮಕ, ಕೆಟ್ಟ ಯೋಚನೆಗಳು ದೂರವಾಗುವವು.

6. ಏಳುವ ಸಮಯದಲ್ಲಿ ರೂಢಿಸಿಕೊಳ್ಳಬೇಕಾದ ಕ್ರಮಗಳು

  • ಬೆಳಿಗ್ಗೆ ಎದ್ದ ನಂತರ 1- 2 ಗಂಟೆ ತನಕ ಮೊಬೈಲ್ ಫೋನು ಮುಟ್ಟಬೇಡಿ. ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರೋಲ್ ಮಾಡುವುದನ್ನು ನಿರ್ಬಂಧಿಸಿ.
  • ನಿಮ್ಮ ವ್ಯಾಯಾಮ, ಧ್ಯಾನದ ವಿಡಿಯೋಗಳು ಅಥವಾ ದಿನಚರಿ ಮೊಬೈಲ್ ಫೋನಿನಲ್ಲಿ ಸಂಗ್ರಹವಾಗಿದ್ದರೆ, ಬೆಳಿಗ್ಗೆ ಎದ್ದ ಮೊದಲು ಒಂದು ಗಂಟೆಯ ಕಾಲ ಹಲ್ಲುಜ್ಜುವುದು, ನಿತ್ಯಕರ್ಮ ಪೂರೈಸಿಕೊಳ್ಳುವುದು ಮತ್ತಿತರ ಕೆಲಸಗಳಲ್ಲಿ ತೊಡಗಿಕೊಳ್ಳಿ.
  • ಸೂರ್ಯೋದಯಕ್ಕೂ ಮುನ್ನ ಆಹಾರ ಸೇವನೆ ಮಾಡದಿರಿ. ಸೂರ್ಯೋದಯದ ಹೊತ್ತಿನಲ್ಲಿ ನಮ್ಮೊಡನೆ ನಮ್ಮ ಜೀರ್ಣವ್ಯವಸ್ಥೆಯೂ ಆಗ ತಾನೇ ಎಚ್ಚರಗೊಳ್ಳುತ್ತಿರುತ್ತದೆ.

7. ಬೆಳಿಗ್ಗೆ ಬೇಗನೆ ನಿತ್ಯಕರ್ಮ ಮುಗಿಸಿಕೊಳ್ಳುವುದು

  • ರಾತ್ರಿ ಮಲಗಿದ ತಕ್ಷಣ, ನಮ್ಮ ದೇಹದಲ್ಲಿ ಕಲ್ಮಶಗಳನ್ನು ಹೊರಹಾಕುವ ಪ್ರಕ್ರಿಯೆ ಜಾಗೃತಗೊಳ್ಳುತ್ತದೆ. ಎಲ್ಲಾ ಕಲ್ಮಶಗಳನ್ನು ಒಟ್ಟುಗೂಡಿಸಿ ಹೊರಹಾಕಲು ಸಿದ್ಧವಾಗುತ್ತದೆ. ಸಕೇಡಿಯನ್ ಜೀವನಶೈಲಿಯಿಂದ ಜೀರ್ಣಕ್ರಿಯೆಯ ಮೇಲೆ ಸಕಾರಾತ್ಮಕ ಪ್ರಭಾವ ಉಂಟಾಗುತ್ತದೆ.
  • ಬೆಳಿಗ್ಗೆ ಎದ್ದ ತಕ್ಷಣ ಶುರುವಿಗೆ ನಿತ್ಯಕರ್ಮ ಮಾಡುವುದರಿಂದ ದೇಹ ಒಳಗಿನಿಂದ ಸ್ವಚ್ಛವಾಗುತ್ತದೆ. ಇದರಿಂದ ಇಡೀ ದಿನ ಕ್ರಿಯಾಶೀಲತೆಯಿಂದ ಕೂಡಿರುತ್ತದೆ.

8. ಸೂರ್ಯನ ಬೆಳಕಿಗೆ ತೆರೆದುಕೊಳ್ಳಿ

  • ಬೆಳಗಿನ ನಿತ್ಯಕರ್ಮ ಮುಗಿಸಿ ಹಲ್ಲುಜ್ಜಿ ಮುಖ ತೊಳೆದ ನಂತರ ಕಿಟಕಿಯ ಪರದೆಯನ್ನು ತೆರೆಯಿರಿ. ಬೆಳಗ್ಗಿನ ಸೂರ್ಯನ ಬೆಳಕು ನಮ್ಮ ಕಣ್ಣಿಗೆ ಬೀಳಬೇಕು. ಆಗಲೇ ನಿದ್ರೆಗೆ ಕಾರಣವಾಗುವ ಮೆಲಟೋನಿನ್ ಹಾರ್ಮೋನು ಇಳಿಕೆಯಾಗಿ ನಿದ್ರಾವಸ್ಥೆಯಿಂದ ನ್ಯಾಚುರಲ್ ಆಗಿ ನಮಗೆ ಮುಕ್ತಿ ಸಿಗುತ್ತದೆ.
  • ಮನೆ ಮುಂದೆ ಅಂಗಳ, ಹೂದೋಟ, ವರಾಂಡ ಅಥವಾ ಬಾಲ್ಕನಿ ಇದ್ದರೆ ಹೊರಗೆ ಬಂದು ನಿಂತುಕೊಳ್ಳಿ. ಕಣ್ಣುಗಳನ್ನು ತೆರೆದಿಟ್ಟುಕೊಳ್ಳಿ. ಸೂರ್ಯನ ಬೆಳಕು ಕಣ್ಣುಗಳನ್ನು ತುಂಬಿಕೊಳ್ಳಬೇಕು. ಪ್ರಕೃತಿಗೆ ತೆರೆದುಕೊಳ್ಳುವುದರಿಂದ ದೇಹಕ್ಕೆ ಚೈತನ್ಯ ಸಿಗುತ್ತದೆ.

9. ನಿಶ್ಯಕ್ತಿ ಮೂಡುತ್ತಿದೆಯೇ?

  • ಸಕೇಡಿಯನ್ ಜೀವನಶೈಲಿಯನ್ನು ಪಾಲನೆ ಮಾಡುತ್ತಿದ್ದರೂ ನಿಶ್ಯಕ್ತಿ, ನಿರಾಸಕ್ತಿ ಉಂಟಾಗುತ್ತಿದೆಯೇ? ಹಾಗಾದರೆ ರೆಸ್ಟ್ ತೆಗೆದುಕೊಳ್ಳಿ. ಅದುವೇ ಉತ್ತಮ ಪರಿಹಾರ.
  • ಕೆಲವೊಮ್ಮೆ ನಿಶ್ಯಕ್ತಿ, ನಿರಾಸಕ್ತಿ ಉಂಟಾಗುವುದು ಸಹಜ. ಏಕೆಂದರೆ ಮನುಷ್ಯನ ದೇಹ ಯಂತ್ರಗಳಂತೆ ಓಡುತ್ತಲೇ ಇರುವುದು ಸಾಧ್ಯವಿಲ್ಲ. ದೇಹಕ್ಕೂ ವಿರಾಮ ಬೇಕಾಗುತ್ತದೆ.  

ನೆನಪಿಡಿ, ಸಕೇಡಿಯನ್ ಜೀವನಶೈಲಿಯನ್ನು ಅಭಿವೃದ್ಧಿಪಡಿಸಿರುವುದು ಅತಿ ದೊಡ್ಡ ತಜ್ಞರು. ಅದು ಯಾರೆಂದು ತಿಳಿದುಕೊಳ್ಳಬೇಕೇ? ಇನ್ಯಾರೂ ಅಲ್ಲ ಪ್ರಕೃತಿ! ಸಕೇಡಿಯನ್ ಜೀವನಶೈಲಿಯನ್ನು ಪಾಲನೆ ಮಾಡಲು ಕಠಿಣವಾಗುತ್ತಿದೆಯೇ? ಹಾಗಾದರೆ ನಿಮಗೆ ಅನುಕೂಲವಾಗುವ ಹಾಗೆ ಮಾರ್ಪಾಡುಗಳನ್ನು ಮಾಡಿಕೊಳ್ಳಬಹುದು. ಆ ಮೂಲಕ ನಿಮಗೆ ಬೇಕಾದ ಮಾದರಿಯಲ್ಲೇ ಸಕೇಡಿಯನ್ ಜೀವನಶೈಲಿಯನ್ನು ರೂಢಿಸಿಕೊಳ್ಳಬಹುದು. ಕಾಲ ಬದಲಾದರೂ ನಮ್ಮ ದೇಹ ಮತ್ತು ಅದರ ಕಾರ್ಯವಿಧಾನ ಬದಲಾಗದು. ಪ್ರಕೃತಿ ಕೂಡಾ ಅದೇ ರೀತಿ.

(ಹೆಚ್ಚಿನ ಮಾಹಿತಿಗೆ ಲೇಖಕರ 'A New Way of Living - Circadian Rhythm' ಪುಸ್ತಕವನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು.)

ಮೂಲ ಲೇಖಕರು: ಲ್ಯೂಕ್ ಕುಟಿನ್ಹೊ
ಲೈಫ್ ಸ್ಟೈಲ್ ಕೋಚ್ ಮತ್ತು ಬರಹಗಾರರು

ಅನುವಾದ: ಹರ್ಷವರ್ಧನ್ ಸುಳ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com