
ನವದೆಹಲಿ: ಭಾರತೀಯ ಕುಟುಂಬಗಳು ಕಳೆದ 12 ವರ್ಷಗಳಲ್ಲಿ ತಮ್ಮ ಖರ್ಚಿನ ಮಾದರಿಯನ್ನು ಗಣನೀಯವಾಗಿ ಬದಲಾಯಿಸಿಕೊಂಡಿದ್ದು, ಆಹಾರದಿಂದ ಆಹಾರೇತರ ವಸ್ತುಗಳತ್ತ ಗಮನ ಹರಿಸುತ್ತಿವೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ)ದ ವಿಶ್ಲೇಷಣಾ ವರದಿ ತಿಳಿಸಿದೆ.
ವರದಿಯು ಹಲವಾರು ಪ್ರಮುಖ ಪ್ರವೃತ್ತಿಗಳನ್ನು ಬಹಿರಂಗಪಡಿಸಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಧಾನ್ಯಗಳು ಮತ್ತು ಬೇಳೆಕಾಳುಗಳ ಬಳಕೆ ಗಣನೀಯವಾಗಿ ಕುಸಿದಿದ್ದು, ಶೇಕಡಾ 5ರಷ್ಟು ಕಡಿಮೆಯಾಗಿದೆ.
"ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ 'ಧಾನ್ಯ ಮತ್ತು ದ್ವಿದಳ ಧಾನ್ಯಗಳ' ಬಳಕೆಯಲ್ಲಿ ಗಮನಾರ್ಹ ಇಳಿಕೆ(ಶೇ. 5 ಕ್ಕಿಂತ ಹೆಚ್ಚು)ಯಾಗಿದೆ ಎಂದು ವರದಿ ಹೇಳಿದೆ.
ಈ ಬದಲಾವಣೆಯು ಆರ್ಥಿಕ ಬೆಳವಣಿಗೆ, ಸರ್ಕಾರದ ನೀತಿಗಳು ಮತ್ತು ಜೀವನಶೈಲಿಯ ಬದಲಾವಣೆಗಳಿಂದ ಪ್ರೇರಿತವಾಗಿದೆ ಎಂದು ವರದಿ ಗಮನಿಸಿದೆ.
"ಭಾರತೀಯರು ಆಹಾರದಿಂದ ಆಹಾರೇತರ ವಸ್ತುಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಕಳೆದ 12 ವರ್ಷಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಗ್ರಾಹಕರ ಆದ್ಯತೆಗಳಲ್ಲಿನ ಬದಲಾವಣೆಯು ಆಸಕ್ತಿದಾಯಕವಾಗಿದೆ. ಇದು ಆಹಾರ ಪದಾರ್ಥಗಳ ಮೇಲಿನ ವೆಚ್ಚದ ಪಾಲು ಗಣನೀಯ ಕುಸಿತವನ್ನು ಎತ್ತಿ ತೋರಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ, ಆಹಾರದ ಮೇಲಿನ ಖರ್ಚು 2011-12 ರಲ್ಲಿ ಶೇಕಡಾ 52.9 ರಿಂದ 2023-24 ರಲ್ಲಿ ಶೇಕಡಾ 47.04 ಕ್ಕೆ ಇಳಿದಿದೆ. ಇದು ಶೇಕಡಾ 5.86 ರಷ್ಟು ಕುಸಿತವನ್ನು ಸೂಚಿಸುತ್ತದೆ.
ಇನ್ನು ನಗರ ಪ್ರದೇಶಗಳು ಗಮನಾರ್ಹವಾದ ಇಳಿಕೆಗೆ ಸಾಕ್ಷಿಯಾಗಿದ್ದು, 2011-12 ರಲ್ಲಿ ಶೇ. 42.62 ರಿಂದ 2023-24 ರಲ್ಲಿ ಶೇ. 39.68 ಕ್ಕೆ ಕುಸಿದಿದೆ. ಇದು ಶೇ. 2.94 ರಷ್ಟು ಕುಸಿತವನ್ನು ಸೂಚಿಸುತ್ತದೆ.
ಇದಕ್ಕೆ ವ್ಯತಿರಿಕ್ತವಾಗಿ, ಮನೆಯ ಬಜೆಟ್‌ನಲ್ಲಿ ಆಹಾರೇತರ ವಸ್ತುಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿವೆ. ಗ್ರಾಮೀಣ ಪ್ರದೇಶಗಳಲ್ಲಿ ಆಹಾರೇತರ ವೆಚ್ಚದ ಪಾಲು 2011-12 ರಲ್ಲಿ ಶೇಕಡಾ 47.1 ರಿಂದ 2023-24 ರಲ್ಲಿ ಶೇಕಡಾ 52.96ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಶೇಕಡಾ 5.86 ರಷ್ಟು ಏರಿಕೆ ದಾಖಲಿಸಿದೆ.
ನಗರ ಪ್ರದೇಶಗಳು ಸಹ ಆಹಾರೇತರ ವೆಚ್ಚದಲ್ಲಿ ಬೆಳವಣಿಗೆ ಕಂಡಿದ್ದು, ಶೇ. 57.38 ರಿಂದ ಶೇ. 60.32ಕ್ಕೆ ಏರಿಕೆಯಾಗಿದೆ. ಇದು ಶೇ. 2.94 ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ.
Advertisement